16.1 C
New York
Friday, October 22, 2021

Buy now

spot_img

ಶಿಲಾಮಯವಾಗಿ ಜೀರ್ಣೋದ್ದಾರಗೊಳ್ಳುತ್ತಿದೆ ಬ್ರಹ್ಮೇರಿಯ ಶ್ರೀ ನರಸಿಂಹ ದೇವಸ್ಥಾನ

ನೂತನ ದೇವಳದ ನೀಲನಕಾಸೆ
ಹಿಂದೆ ಇದ್ದ ದೇವಸ್ಥಾನದ ನೋಟ


ಕುಂದಾಪುರ ತಾಲೂಕು ಹಕ್ಲಾಡಿ ಗ್ರಾ.ಪಂ. ವ್ಯಾಪ್ತಿಯ ನೂಜಾಡಿ ಗ್ರಾಮದ ಬ್ರಹ್ಮೇರಿಯಲ್ಲಿರುವ ಶ್ರೀ ನರಸಿಂಹ ದೇವಸ್ಥಾನ ಪ್ರಾಚೀನ ಇತಿಹಾಸವನ್ನು ಹೊಂದಿರುವ ದೇವಸ್ಥಾನವಾಗಿದೆ. ಸುಮಾರು 300 ವರ್ಷಗಳಿಗೂ ಪುರಾತನವಾದ ಈ ದೇವಸ್ಥಾನ ಇತ್ತೀಚೆಗಿನ ವರ್ಷಗಳಲ್ಲಿ ಸಂಪೂರ್ಣ ಜೀರ್ಣಗೊಂಡಿದ್ದು, ಭಕ್ತರ ಸಂಕಲ್ಪದಂತೆ ಇದೀಗ ಜೀರ್ಣೋದ್ದಾರದ ಹಾದಿಯಲ್ಲಿದೆ.


ಬ್ರಹ್ಮೇರಿಯ ಶ್ರೀ ನರಸಿಂಹ ದೇವಸ್ಥಾನ ಅನಾದಿ ಕಾಲದ ದೇವಸ್ಥಾನವಾಗಿದೆ. ಸರ್ಕಾರದ ಕಡತಗಳಲ್ಲಿ 1892ರ ಉಲ್ಲೇಖಗಳಿವೆ. ತಸ್ತಿಕು ಪಟ್ಟಿಯಲ್ಲಿ 247 ಸ್ಥಾಪನೆ ಎಂದು ಕಾಣಿಸಲಾಗಿದೆ. ಸರ್ಕಾರ ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನವಾಗಿರುವ ಈ ದೇವಸ್ಥಾನ ನೂಜಾಡಿ ಹೃದಯ ಭಾಗದಲ್ಲಿದೆ.


ಅತ್ಯಂತ ಕಮನೀಯವಾದ ಪರಿಸರ, ಪ್ರಶಾಂತವಾದ ವಾತಾವರಣ, ನಿತ್ಯನಿರ್ಮಲ ಎನಿಸುವಂತಹ ಪ್ರಕೃತಿಯ ಮಡಿಲಲ್ಲಿ ಇರುವ ಶ್ರೀ ನರಸಿಂಹ ಸ್ವಾಮಿಯ ಸನ್ನಿಧಾನ ಭಕ್ತರ ಕಷ್ಟಕೊಟಲೆಗಳ ನಿವಾರಿಸುವ ಪರಮ ಪಾವನ ಧಾಮ. ಎದುರಿಗೆ ಅಶ್ವತ್ಥ ವೃಕ್ಷ, ಅತ್ತಿ ಮರ, ಬಕುಳ ವೃಕ್ಷಗಳ ಸಮೂಹ ಧಾರ್ಮಿಕ ವಲಯವನ್ನಾಗಿದೆ. ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೆ ಅವತಾರವಾದ ಶ್ರೀ ನರಸಿಂಹ ಅವತಾರದಲ್ಲಿ ಶ್ರೀಹರಿ ಶರಣ ಪ್ರಹ್ಲಾದನಿಗೊಲಿದು, ದುಷ್ಟ ಹಿರಣ್ಯಕಶಿಪುವನ್ನು ಮರ್ಧಿಸಿ ಶಿಷ್ಟರನ್ನು ಪರಿಪಾಲಿಸುತ್ತಾನೆ. ಅದೆಷ್ಟೋ ನರಸಿಂಹ ದೇವಸ್ಥಾನಗಳನ್ನು ಆ ಹಿನ್ನೆಲೆಯಲ್ಲಿ ಕಾಣಬಹುದು. ಅವುಗಳಲ್ಲಿ ವಿಶಿಷ್ಠತೆ, ವಿಭಿನ್ನತೆ ಹಾಗೂ ಪ್ರಾದೇಶಿಕವಾದ ನಂಬಿಕೆಯನ್ನು ಗಮನಿಸಬಹುದಾಗಿದೆ.


ಬ್ರಹ್ಮೇರಿಯ ನರಸಿಂಹ ಸ್ವಾಮಿ ಕರುಣಾಸಮುದ್ರ ಭಕ್ತರಿಷ್ಟಪ್ರಧಾಯಕ. ಭಕ್ತರ ನೋವು ಸಂಕಷ್ಟಗಳ ದೂರೀಕರಿಸಿ ಬೇಡಿದ ಇಷ್ಟಾರ್ಥಗಳನ್ನು ಅನುಗ್ರಹಿಸುವ ಪುಣ್ಯನಿಲಯವಿದು. ವಿದ್ಯೆ, ಉದ್ಯೋಗ, ಲಗ್ನ, ಸಂತಾನ ಹೀಗೆ ಭಕ್ತರ ಮನೋಕಾಂಕ್ಷೆಯನ್ನು ಇಡೇರಿಸುವ ಕ್ಷೇತ್ರವಾಗಿ ಜನಮನದಲ್ಲಿ ಖ್ಯಾತಿಗಳಿಸಿದೆ. ನಿತ್ಯಾನುಷ್ಟಾದಿ ಉತ್ಸವಗಳು, ವಿವಿಧ ವಿಶೇಷ ಸೇವೆಗಳು, ನೃಸಿಂಹ ಜಯಂತಿಯಂತಹ ಆರಾಧನೆಗಳು ಇಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.


ದೇವಸ್ಥಾನ ಜೀರ್ಣಾವಸ್ಥೆಯಲ್ಲಿರುವುದು ಊರಿಗೆ ಶೋಭೆಯಲ್ಲ ಎಂದು ಮನಗಂಡ ಗ್ರಾಮಸ್ಥರು ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಬಿ.ಲಕ್ಷ್ಮೀನಾರಾಯಣ ಭಟ್ ಅವರನ್ನು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಸುಮಾರು 90 ಲಕ್ಷ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಯಿತು. ಇದಕ್ಕೆ ಪೂರ್ವದಲ್ಲಿ ವಿದ್ವಾನ್ ವೇ.ಮೂ.ವಿಷ್ಣು ನಂಬೂದರಿ ಕೇರಳ ಇವರ ಮಾರ್ಗದರ್ಶನದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇರಿಸಿ, ದೇವಸಾನಿಧ್ಯ ಮತ್ತು ಅದರ ಸುತ್ತಲಿನ ಪ್ರಾಕಾರದಲ್ಲಿರುವ ಸರ್ವದೋಷಗಳನ್ನು ನಿವಾರಣೆ ಮಾಡಿಕೊಂಡು ಶ್ರೀ ದೇವರ ಆಲಯ ನಿರ್ಮಾಣ ಸಂಕಲ್ಪದೊಂದಿಗೆ ಮುಂದಡಿ ಇಡಲಾಯಿತು.


2020 ಮಾರ್ಚ್ 1ರಂದು ಕಲಾಸಂಕೋಚ ಮೊದಲಾದ ಪ್ರಕ್ರಿಯೆ, ಬಾಲಾಲಯ ನಿರ್ಮಾಣ ಮಾಡಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಕೆಂಪು ಕಲ್ಲಿನಲ್ಲಿ ಗರ್ಭಗುಡಿ ನಿರ್ಮಾಣ, ಹೆಬ್ಬಾಗಿಲು, ನೈವೇದ್ಯ ಕೋಣೆ, ಕಚೇರಿಯನ್ನು ಒಳಗೊಂಡಂತೆ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಈಗಾಗಲೇ ಗರ್ಭಗುಡಿ ಕಾಮಗಾರಿ ಭಾಗಶಃ ಆಗಿದ್ದ ಕೆಂಪು ಕಲ್ಲಿನಲ್ಲಿ ಅತ್ಯಂತ ಆಕರ್ಷಣೀಯವಾಗಿ ಗೋಡೆಗಳು ನಿರ್ಮಾಣವಾಗಿದೆ. ಗರ್ಭಗುಡಿಯ ಪ್ರಧಾನ ಹಂತ ಮುಗಿದಿದ್ದು ಇನ್ನೂ ಮೇಲ್ಛಾವಣಿ, ತಾಮ್ರದ ಹೊದಿಕೆ ಕಾರ್ಯ ಬಾಕಿಯಿದೆ.


ಕೆಂಪುಕಲ್ಲಿನ ಶಿಲ್ಪಕಲೆ, ಪ್ರಧಾನ ಧ್ವಾರಕ್ಕೆ ಶಿಲೆಯ ದಾರಂದ, ಕೆಂಪು ಕಲ್ಲಿನ ನವಿರಾದ ಕೆತ್ತನೆಯ ವೈಶಿಷ್ಟ್ಯ, ಧಾರ್ಮಿಕ ವಾಸ್ತುಶೈಲಿಯನ್ನು ಬಿಂಬಿಸುವ ಭಿತ್ತಿಯ ಸುಂದರ ಕೆತ್ತನೆ ಹೀಗೆ ಒಟ್ಟಂದದಲ್ಲಿ ಬ್ರಹ್ಮೇರಿಯಲ್ಲಿ ಸುಂದರವಾದ ದೇವಸ್ಥಾನವೊಂದು ಮೈದಳೆದು ನಿಲ್ಲಲಿದೆ.


ಗ್ರಾಮೀಣ ಪ್ರದೇಶದ ದೇವಸ್ಥಾನ ಆದ್ದರಿಂದ ಯಾವುದೇ ಆದಾಯಗಳಿಲ್ಲ. ನಿತ್ಯನೈಮಿತ್ತಿಕೆಗಳನ್ನು ಶೃದ್ದಾನಿಷ್ಠೆಯಿಂದ ಮಾಡಿಕೊಂಡು ಬರಲಾಗುತ್ತದೆ. ದೇವಸ್ಥಾನಕ್ಕೆ 2 ಸೆಂಟ್ಸ್ ಜಾಗ ಪರಂಬೊಕು ಎಂದಿದೆ. ಹಾಗಾಗಿ ದೇವಸ್ಥಾನದ ಪುನನಿರ್ಮಾಣ ಪ್ರಕ್ರಿಯೆಯಲ್ಲಿ ಭಕ್ತದಾನಿಗಳ ನೆರವು ಪ್ರಧಾನಪಾತ್ರ ವಹಿಸುತ್ತದೆ. ಸರ್ಕಾರ, ಸಂಘ ಸಂಸ್ಥೆಗಳು, ಭಕ್ತಾದಿಗಳ ತನುಮನಧನದ ಅಗತ್ಯತೆ ಇದ್ದು ಗ್ರಾಮಾಂತರ ಪ್ರದೇಶದ ಪುರಾತನ ದೇವಸ್ಥಾನದ ಪುನಶ್ಚೇತನದ ಪವಿತ್ರ ಕಾರ್ಯದಲ್ಲಿ ಭಾಗಿಗಳಾಗಬಹುದಾಗಿದೆ.

ಬೇಕಿದೆ ಆರ್ಥಿಕ ನೆರವು
ಪ್ರಾಚೀನ ದೇವಸ್ಥಾನ ಜೀರ್ಣೋದ್ದಾರದಲ್ಲಿ ಭಕ್ತಾದಿಗಳ ಸಹಕಾರ ಈ ಸಂದರ್ಭದಲ್ಲಿ ಅವಶ್ಯಕವಾಗಿದ್ದು, ಧನ ಸಹಾಯ ನೀಡುವ ಭಕ್ತಾದಿಗಳು ಜೀರ್ಣೋದ್ದಾರ ಸಮಿತಿ ಶ್ರೀ ನರಸಿಂಹ ದೇವಸ್ಥಾನ, ಬ್ರಹ್ಮೇರಿ. ಕರ್ನಾಟಕ ಬ್ಯಾಂಕ್ ಚಿತ್ತೂರು, ಖಾತೆ ಸಂಖ್ಯೆ 1682500100323401, IFSC Code KARB0000168 ಇಲ್ಲಿಗೆ ಕಳುಹಿಸಬಹುದಾಗಿದೆ. ಮಾಹಿತಿ ದೂರವಾಣಿ ಸಂಖ್ಯೆ 9980246691, 9945575271, 9483918115 ಸಂಪರ್ಕಿಸಬಹುದಾಗಿದೆ.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!