spot_img
Thursday, May 28, 2026
spot_img

ಮೇ 31 : ಗಿಳಿಯಾರು ಕುಶಲ ಹೆಗ್ಡೆ ಜನ್ಮಶತಮಾನೋತ್ಸವ | “ಕಾಳಿಂಗ-ಕಾಳಿಂಗ” ಪದ-ಪದ್ಯಗಳ ವಿನೂತನ ಜುಗಲ್ ಬಂದಿ

kushal hegde

ಕುಂದಾಪುರ, ಮೇ.28: ಧಾರ್ಮಿಕ, ಶೈಕ್ಷಣಿಕ, ಸಹಕಾರ, ಸಾಮಾಜಿಕ ಸೇವಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನಪ್ರಿಯರಾಗಿದ್ದ, ಖ್ಯಾತ ನ್ಯಾಯವಾದಿ ದಿ. ಗಿಳಿಯಾರು ಕುಶಲ ಹೆಗ್ಡೆಯವರ ಜನ್ಮಶತಮಾನೋತ್ಸವ ಮೇ 31 ರಂದು ಆದಿತ್ಯವಾರ ಕೋಟೇಶ್ವರದ ಸಹನಾ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಲಿದೆ. ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ಆಶ್ರಯದಲ್ಲಿ ನಡೆಯಲಿರುವ ಸಮಾರಂಭ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದ್ದು, ಸಾಧಕರಿಗೆ ಸನ್ಮಾನ, ಬ್ಯಾಂಕ್ ವಿಜೇತರಿಗೆ ಗೌರವ, ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆಯೊಂದಿಗೆ ಅರ್ಥಪೂರ್ಣವಾಗಿ ನಡೆಯಲಿದೆ. ಸಂಜೆ 6ಕ್ಕೆ ಕುಂದಾಪುರದಲ್ಲಿ ಮೊದಲ ಪ್ರಯೋಗ “ಕಾಳಿಂಗ-ಕಾಳಿಂಗ” ಪ್ರದರ್ಶನಗೊಳ್ಳಲಿದೆ ಎಂದು ಜನ್ಮಶತಮಾನೋತ್ಸವ ಸಂಯೋಜಕರಾದ ಬಿ.ಉದಯ ಕುಮಾರ್ ಹೆಗ್ಡೆ ಹೇಳಿದರು.

ಅವರು ಕುಂದಾಪುರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಸಮಾರಂಭವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈಲಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಧಕರನ್ನು ಸಮ್ಮಾನಿಸಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಲಾವಿದರನ್ನು ಗೌರವಿಸಲಿದ್ದಾರೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುವರು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅಭಿನಂದನಾ ನುಡಿ ಆಡಲಿದ್ದಾರೆ. ಕಾನ್ಫಿಡೆಂಟ್ ಡೆಂಟಲ್ ಇಕ್ಯೂಪ್ಮೆಂಟ್ ಪ್ರೈ. ಲಿ. ಬೆಂಗಳೂರು, ಆಡಳಿತ ನಿರ್ದೇಶಕ, ಡಾ| ಸುಭಾಶ್ಚಂದ್ರ ಶೆಟ್ಟಿ ಶಾಲೆಗೆ ನೆರವು ಹಸ್ತಾಂತರಿಸಲಿದ್ದಾರೆ. ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್ “ಕುಶಲೋಪರಿ” ನಡೆಸಲಿದ್ದಾರೆ. ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ವೈದ್ಯಕೀಯ ನೆರವು ಹಸ್ತಾಂತರ ಮಾಡಲಿದ್ದಾರೆ ಎಂದರು.

ಈ ಸಮಾರಂಭದಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯರನ್ನು, ಸಂಘ ಸಂಸ್ಥೆಗಳನ್ನು ಸಮ್ಮಾನಿಸಿ ಗೌರವಿಸಲಾಗುವುದು. ವಕೀಲ ವೃತ್ತಿಯಲ್ಲಿ ೫೦ ವರ್ಷ ಪೂರೈಸಿ ವೃತ್ತಿ ಸೇವೆಯಲ್ಲಿ ಮೆಚ್ಚುಗೆ ಪಡೆದ ಮಟ್ಟ ಮಾಧವ ರಾವ್, ಶಿಕ್ಷಕರಾಗಿ ಸಾಲಿಗ್ರಾಮ ಮಕ್ಕಳ ಮೇಳ ಕೋಟ ಸ್ಥಾಪಿಸಿದ ಎಚ್. ಶ್ರೀಧರ ಹಂದೆ, ಕ್ರೀಡಾಪಟುವಾಗಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ ಎನ್. ವಸಂತ ರಾವ್, ರಂಗ ಕಲಾವಿದರಾಗಿ, ನಿರ್ದೇಶಕರಾಗಿ ಕ್ರಿಯಾಶೀಲರಾಗಿರುವ ಸತೀಶ ಪೈ (ಕುಳ್ಳಪ್ಪು), ನೃತ್ಯ ಪ್ರತಿಭೆ ಹಾಗೂ ತರಬೇತಿ ಮೂಲಕ ಭರತನಾಟ್ಯ ಜನಪ್ರಿಯರಾಗಿಸಿದ ವಿದುಷಿ ಭಾಗೀರಥಿ ಎಂ. ರಾವ್, ಕುಂದಾಪ್ರ ಕನ್ನಡವನ್ನು ಜನಪ್ರಿಯಗೊಳಿಸಿದ ಚೇತನ್ ನೈಲಾಡಿ, ನಾಟಕ ರಂಗದಲ್ಲಿ ನಿರಂತರ ಐದು ದಶಕಗಳಿಂದ ಸಾಧನೆ ಮಾಡುತ್ತಿರುವ ಲಾವಣ್ಯ ಬೈಂದೂರು, ಶಾಸ್ತ್ರೀಯ ಸಂಗೀತದಲ್ಲಿ ಮೂರು ದಶಕಗಳ ಕಾಲ ಯಶಸ್ವಿ ಪಯಣ ನಡೆಸುತ್ತಿರುವ ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ, ಕುಂದಾಪುರದಲ್ಲಿ ಪ್ರಥಮ ಸಮುದಾಯ ಬಾನುಲಿ ಕೇಂದ್ರ ಭಂಡಾರ್ ಕಾರ್ ಕಾಲೇಜಿನ ರೇಡಿಯೋ ಕುಂದಾಪ್ರ ೮೯.೬ ಎಫ್.ಎಂ.. ಕುಂದಾಪ್ರ ನೆಲದ ಜನಪದ ಸಂಸ್ಕೃತಿ ಉಳಿಸಲು ಶ್ರಮಿಸುತ್ತಿರುವ ಶ್ರೀ ಗುರುಮಾರುತಿ ಹೌಂದೇರಾಯನ ಜನಪದ ತಂಡ ಪಾರಂಪಳ್ಳಿ-ಸಾಲಿಗ್ರಾಮ ಇವರನ್ನು ಸನ್ಮಾನಿಸಲಾಗುವುದು ಎಂದರು.

ರಾಘವೇಂದ್ರ ಕಾಂಚನ್ ಮಾತನಾಡಿ, ಸಭಾ ಕಾರ್ಯಕ್ರಮದ ನಂತರ ವಿಶೇಷ ಕಾರ್ಯಕ್ರಮ ಕುಂದಾಪುರದಲ್ಲಿ ಮೊದಲ ಪ್ರಯೋಗ “ಕಾಳಿಂಗ-ಕಾಳಿಂಗ” ಪ್ರದರ್ಶನಗೊಳ್ಳಲಿದೆ. ಯಕ್ಷಗಾನದ ಯುಗ ಪ್ರವರ್ತಕ, ಜಿ. ಆರ್. ಕಾಳಿಂಗ ನಾವಡ ಹಾಗೂ ಸುಗಮ ಸಂಗೀತದ ಪಿತಾಮಹ, ಪಿ. ಕಾಳಿಂಗ ರಾವ್ ಇವರ ಪದ ಪದ್ಯಗಳ ಅಪೂರ್ವ ಜುಗಲ್‌ಬಂಧಿ ನಡೆಯಲಿದೆ. ಪ್ರಸಿದ್ಧ ಹಾಡುಗಾರ, ಸುಗಮ ಸಂಗೀತದ ಪಿತಾಮಹ ಪಾಂಡೇಶ್ವರ ಕಾಳಿಂಗ ರಾವ್ ಬಹಳ ಖ್ಯಾತರಾದವರು. ಆಕಾಶವಾಣಿಯಲ್ಲಿ ನಿರಂತರ ಅವರ ಹಾಡುಗಳು ಪ್ರಸಾರವಾಗುತ್ತಿದ್ದವು. ಕಾಳಿಂಗ ನಾವಡರು ಕರಾವಳಿಯ ಇನ್ನೊಂದು ಅದ್ಭುತ ಪ್ರತಿಭೆ, ಯಕ್ಷಗಾನಕ್ಕೆ ಹೊಸತನ ನೀಡಿದ ಯುಗ ಪ್ರವರ್ತಕ. ಈ ಇಬ್ಬರ ಭಾವಗೀತೆ ಹಾಗೂ ಭಾಗವತಿಕೆ ಎರಡನ್ನು ಸೇರಿಸಿ ಒಂದು ಕಾರ್ಯಕ್ರಮ ನಡೆಯಲಿದೆ ಎಂದರು.

ಬೆಂಗಳೂರಲ್ಲಿ “ಕಾಳಿಂಗ-ಕಾಳಿಂಗ” ಬಹಳ ಪ್ರಸಿದ್ದಿಯಾಯಿತು. ಈ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಪ್ರದರ್ಶನ ಮಾಡಬೇಕು ಎಂಬ ಆಶಯದಂತೆ ಮೇ ೩೧ ರಂದು ಗಿಳಿಯಾರು ಕುಶಲ ಹೆಗ್ಡೆಯವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ “ಕಾಳಿಂಗ-ಕಾಳಿಂಗ” ಕಾರ್ಯಕ್ರಮ ಆಕರ್ಷಣೆಯಾಗಲಿದೆ. ಡಾ| ದೀಪಕ್ ಶೆಟ್ಟಿ ಬಾರ್ಕೂರು ಕಾಳಿಂಗ ನಾವಡರ ಬಗ್ಗೆ ನಿರೂಪಣೆ ಮಾಡಲಿದ್ದು, ಭಾಗವತರಾದ ಸುರೇಶ ಶೆಟ್ಟಿ ಎಸ್., ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು ಭಾಗವತರಾಗಿ ಸಹಕರಿಸಲಿದ್ದಾರೆ. ಚಂಡೆಯಲ್ಲಿ ಸುಜನ್ ಹಾಲಾಡಿ, ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ ಸಹಕರಿಸಲಿದ್ದಾರೆ. ರಾಘವೇಂದ್ರ ಕಾಂಚನ್, ಪಿ. ಕಾಳಿಂಗ ರಾವ್ ಬಗ್ಗೆ ನಿರೂಪಣೆ ಮಾಡಲಿದ್ದು, ಗಾಯನದಲ್ಲಿ ವಿನಯ್ ನಾಡಿಗ್, ಮೇಘನಾ ಕುಂದಾಪುರ, ಕೀಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ಕೊಳಲಿನಲ್ಲಿ ಸಂದೀಪ್ ವಶಿಷ್ಟ, ತಬಲಾದಲ್ಲಿ ರಘುನಾಥ್, ರೀದಮ್‌ನಲ್ಲಿ ಪ್ರವೀಣ್ ಷಣ್ಮುಖ ಸಹಕರಿಸಲಿದ್ದಾರೆ ಎಂದರು.

ಟ್ರಸ್ಟ್ ವಿಶ್ವಸ್ಥರಾದ ಜಿ.ಸಂತೋಷ ಕುಮಾರ್ ಶೆಟ್ಟಿ ಮಾತನಾಡಿ ಗಿಳಿಯಾರು ಕುಶಲ ಹೆಗ್ಡೆ ಬದುಕಿದ್ದರೆ ಜೂನ್ 1ಕ್ಕೆ ನೂರು ವರ್ಷ ಆಗುತ್ತಿತ್ತು. ಖ್ಯಾತ ನ್ಯಾಯವಾದಿಯಾಗಿ ಹತ್ತು ಹಲವು ಸಂಘ ಸಂಸ್ಥೆಗಳ ನೇತಾರರಾಗಿ ಸೇವೆ ಸಲ್ಲಿಸಿದವರು. ನೂರಾರು ವಿದ್ಯಾಕಾಂಕ್ಷಿಗಳಿಗೆ ಆಸರೆಯಾದವರು. ಅವರ 60ರ ಸಂದರ್ಭದಲ್ಲಿ ಕುಂದಾಪುರದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಅದ್ದೂರಿಯ ಕಾರ್ಯಕ್ರಮ ನಡೆಸಲಾಗಿತ್ತು. ಅವರ ಉದಾತ್ತ ಚಿಂತನೆಗಳು, ಸಮಾಜಮುಖಿ ಧೋರಣೆಗಳನ್ನು ಅವರ ಹೆಸರಿನ ಚಾರಿಟೆಬಲ್ ಟ್ರಸ್ಟ್ ಇಂದಿಗೂ ಜೀವಂತವಾಗಿರಿಸಿದೆ ಎಂದರು.

ಟ್ರಸ್ಟ್ ಕಾರ್ಯದರ್ಶಿ ಯು.ಎಸ್ ಶೆಣೈ ಮಾತನಾಡಿ, ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ 2002ರಲ್ಲಿ ಪ್ರಾರಂಭಗೊಂಡಿತು. ಅರ್ಹ ಬಡ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯ ಆರ್ಥಿಕವಾಗಿ ಹಿಂದುಳಿದು ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ತುರ್ತು ಅವಶ್ಯಕತೆಗಳಿಗೆ ನೆರವು ಸಮಾಜದ ಉಪಯುಕ್ತ ಯೋಜನೆಗಳಿಗೆ ಸಹಕಾರ ಮುಂತಾದ ಉನ್ನತ ಉದ್ದೇಶಗಳೊಂದಿಗೆ ಆರಂಭಗೊಂಡ ಈ ಸಂಸ್ಥೆ ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ. ಮಾನವೀಯತೆಯ ಸೇವೆಗೆ ಈ ಸಂಸ್ಥೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರತೀ ವರ್ಷ 500ಕ್ಕೂ ಹೆಚ್ಚು ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿವೆ. ಪ್ರತೀ ವರ್ಷ ಜೂನ್ ೧೯ ರಂದು ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಮಾಡುವುದರೊಂದಿಗೆ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರು ಹಾಗೂ ಸಂಸ್ಥೆಗಳಿಗೆ ಗೌರವಿಸುತ್ತಾ ಬಂದಿದೆ ಎಂದರು.

ಇಡೀ ವರ್ಷ ಬೇರೆ ಬೇರೆ ಸಾಮಾಜಿಕ ಉದ್ದೇಶಗಳಿಗೆ ನೆರವು ನೀಡುತ್ತಿದೆ. ಕೊರೋನಾ ಸಮಸ್ಯೆಯ ಕಾಲದಲ್ಲಿ ಜಿಲ್ಲಾಡಳಿತದ ಆಶಯದಂತೆ ವಲಸೆ ಕಾರ್ಮಿಕರಿಗೆ ಹಾಗೂ ತಾಲೂಕಿನಲ್ಲಿರುವ ಅಸಹಾಯಕ ಕುಟುಂಬಗಳಿಗೆ ಆಹಾರ ವಸ್ತು, ಬಟ್ಟೆ, ಹಾಸಿಗೆ ಮತ್ತಿತರ ಸೌಲಭ್ಯಗಳನ್ನು ನೀಡಿದೆ. ಕೊರೋನಾ ಪೀಡಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿದೆ.ಆರೋಗ್ಯ ಇಲಾಖೆಯ ಆಶಯದಂತೆ ಮಾರುತಿ ಓಮ್ಮಿ ವಾಹನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ನೀಡಿದೆ. ಕುಂದಾಪುರದಲ್ಲಿ ರೋಟರಿ ಸಮುದಾಯ ಭವನ ಹಾಗೂ ಬಂಟರ ಸಂಘದ ಸಂಕೀರ್ಣದಲ್ಲಿ ಸಮುದಾಯ ಭವನ ನಿರ್ಮಾಣ ಪ್ರಾಯೋಜಿಸಿದೆ ಎಂದರು.

ಕಳೆದ ೨೫ ವರ್ಷಗಳಿಂದ ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ ನಿರಂತರವಾಗಿ ಸಾಮಾಜಿಕ ಸೇವೆ ಮಾಡುತ್ತಿದ್ದು, 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. 75 ವಿದ್ಯಾರ್ಥಿಗಳ ದತ್ತು ಪಡೆಯಲಾಗಿದೆ. 350ಕ್ಕೂ ಹೆಚ್ಚು ಮಂದಿಗೆ ವೈದ್ಯಕೀಯ ನೆರವು ನೀಡಲಾಗಿದೆ. 150ಕ್ಕೂ ಹೆಚ್ಚು ಕುಟುಂಬಗಳ ಅಪೂರ್ಣ ಮನೆ ಪೂರ್ಣಗೊಳಿಸಲು ನೆರವು ನೀಡಲಾಗಿದೆ. ಈ ಸಂಸ್ಥೆಗೆ ಸಹಕಾರ ನೀಡುತ್ತಿರುವ ಬೆಂಗಳೂರಿನ ಕಾನ್ಫಿಡೆಂಟ್ ಡೆಂಟಲ್ ಇಕ್ಯೂಪ್ ಮೆಂಟ್ ಲಿಮಿಟೆಡ್ ಸಂಸ್ಥೆಗೆ ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ ಆಭಾರಿಯಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಗೋವಿಂದರಾಜ ಹೆಗ್ಡೆ, ಕೆ.ಕೆ ರಾಮನ್, ನಾರಾಯಣ, ಬಿ.ಕಿಶೋರ್ ಹೆಗ್ಡೆ, ಸ್ನೇಹಾ ಪಿ.ರೈ, ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಕೆ.ಎಸ್ ಮಂಜುನಾಥ, ಉದಯ ಶೆಟ್ಟಿ ಪಡುಕೆರೆ, ಸುಜಾತ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!