spot_img
Wednesday, November 19, 2025
spot_img

ಗೆಜ್ಜೆ ಕಟ್ಟಿದ ಶಿಕ್ಷಕ-ಶಿಕ್ಷಕಿಯರು |ಪ್ರಬುದ್ಧ ಪ್ರಸ್ತುತಿಯ ’ಮೋಕ್ಷ ಸಂಗ್ರಾಮ’

ಲಲಿತಾಕಲೆ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಶಿಕ್ಷಕರಲ್ಲಿ ಕಾಣುತ್ತೇವೆ. ಶಿಕ್ಷಕರ ಸಾಂಸ್ಕೃತಿಕ ಪ್ರಜ್ಞೆ ವಿದ್ಯಾರ್ಥಿಯಲ್ಲಿ ವಿಕಸನಗೊಳ್ಳುತ್ತದೆ. ಆದರೆ ಇವತ್ತಿನ ಸ್ಪರ್ಧಾತ್ಮಕ, ಅಂಕ ಪ್ರಧಾನ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ಅಭಿರುಚಿ ಪೋಷಕರಿಗೆ ಅಪ್ರಸ್ತುತವಾಗಿದೆ. ಹಾಗಾಗಿ ಶಿಕ್ಷಕರು ಕೂಡಾ ಅಸಹಾಯಕರಾಗಿ ಇರುತ್ತಾರೆ. ಶಿಕ್ಷಕರಲ್ಲಿನ ಪ್ರತಿಭಾಸಂಪನ್ನತೆಗೆ ಆಗಾಗ ಅವಕಾಶಗಳು ಸೃಷ್ಟಿಯಾಗುವುದುಂಟು. ಆಗ ಅಬ್ಬಾ ಇವರು ನಮ್ಮ ಮೇಷ್ಟ್ರಾ ಎಂದು ಚಕಿತರಾಗುತ್ತೇವೆ.

ಸೆ.5ರಂದು ಉಡುಪಿ ಜಿಲ್ಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಉಡುಪಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರ ಸುಪ್ತ ಪ್ರತಿಭೆಯ ಅನಾವರಣವೂ ಆಯಿತು. ಇದೊಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ವೇದಿಕೆಯಾಯಿತು. ಕೇವಲ ಪಾಠ ಮಾಡುವುದು, ಮಾರ್ಗದರ್ಶನ ಮಾಡಿ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದಲ್ಲಿ ಗುರುತರ ಜವಬ್ದಾರಿ ನಿರ್ವಹಿಸುವ ಶಿಕ್ಷಕರಲ್ಲಿ ಅಪಾರವಾದ ಪ್ರತಿಭಾ ಸಂಪತ್ತು ಇರುತ್ತದೆ. ಅಂತಹ ಪ್ರತಿಭಾ ಐಸಿರಿ ಪ್ರದರ್ಶನಕ್ಕೆ ಅವಕಾಶಗಳು ಬೇಕು. ಅದನ್ನು ಅಸ್ವಾದಿಸುವ ಮನಸುಗಳು ಬೇಕು, ಆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಶಿಕ್ಷಕರ ಸಂಘ ತಮ್ಮದೇ ಸದಸ್ಯರ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ನೀಡಿದ್ದು ಸ್ತುತ್ಯರ್ಹವಾದುದು.

ಯಕ್ಷಗಾನ ಕಲೆಯಲ್ಲಿ ಇಲ್ಲಿನ ಶಿಕ್ಷಕ, ಶಿಕ್ಷಕಿಯರು ಕೇವಲ ಆಸಕ್ತರು ಮಾತ್ರವಲ್ಲ ಆರಾಧಕರು ಕೂಡಾ. ಗೆಜ್ಜೆ ಕಟ್ಟಿ ಕುಣಿಯಬಲ್ಲರು, ಕೂಟದಲ್ಲಿ ಸಮರ್ಥವಾಗಿ ಅರ್ಥ ಹೇಳಬಲ್ಲರು, ಹಿಮ್ಮೇಳದಲ್ಲಿ ಭಾಗವತಿಕೆ ಮಾಡಬಲ್ಲರು. ಎಲ್ಲ ವಿಧದಲ್ಲೂ ಪಳಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಈ ಬಾರಿ ಶಿಕ್ಷಕರು ’ಮೋಕ್ಷ ಸಂಗ್ರಾಮ’ ಎನ್ನುವ ಯಕ್ಷಗಾನ ಪ್ರದರ್ಶನವನ್ನು ನೀಡಿ ಭೇಷ್ ಎನಿಸಿಕೊಂಡಿದ್ದಾರೆ.

ಮೂಲಿಕೆ ರಾಮಕೃಷ್ಣಯ್ಯ ವಿರಚಿತ ‘ಮೋಕ್ಷ ಸಂಗ್ರಾಮ’ವನ್ನು ಅದ್ಭುತವಾಗಿ ಮೂಲ ಕಥೆಗೆ ಎಲ್ಲೂ ಚ್ಯುತಿ ಬಾರದಂತೆ ಅಭಿನಯಿಸಿ ತೋರಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿ ’ಸುಧನ್ವ ಕಾಳಗ’ ಎಂದಾಗ ಪೂರ್ವಾರ್ಧ ಕೊಂಚ ನಿರಸವೆನಿಸುತ್ತದೆ ಎನ್ನುವವರಿದ್ದಾರೆ. ಪ್ರಭಾವತಿ-ಸುಧನ್ವರ ಸನ್ನಿವೇಶ ಹೆಚ್ಚುವರಿ ಕುಣಿತ ಅದಕ್ಕೆ ಕಾರಣವಿರಬಹುದು. ಆದರೆ ಇಲ್ಲಿ ಹಂಸದ್ವಜನ ಒಡ್ಡೋಲಗದಿಂದ ಸುಧನ್ವ ಮೋಕ್ಷದ ತನಕ ಎಲ್ಲೂ ನಿರಸ ವೆನಿಸಲಿಲ್ಲ. ಪ್ರಬುದ್ಧ ಕಲಾವಿದರಂತೆ ಅಭಿನಯಿಸಿ ಪಾತ್ರಕ್ಕೆ ಗರಿಷ್ಠ ನ್ಯಾಯ ಒದಗಿಸಿದರು. ಸುಧನ್ವ, ಅರ್ಜುನ, ಕೃಷ್ಣ ಮೂರು ಪಾತ್ರಗಳು ಸ್ಪರ್ಧಾತ್ಮಕ ಅಭಿನಯಕ್ಕೆ ಸಾಕ್ಷಿಯಾದರೆ, ಉಳಿದೆಲ್ಲಾ ಪಾತ್ರಗಳು ಗಟ್ಟಿ ತಳಹದಿಯ ಮೇಲೆ ನಿರೂಪಿತವಾದವು.

ರಣಭೂಮಿಯ ಸನ್ನಿವೇಶ ಅತ್ಯಂತ ಅರ್ಥಪೂರ್ಣವಾಗಿ ಮೂಡಿ ಬಂತು. ಸುಧನ್ವ-ಅರ್ಜುನ ಯುದ್ಧ, ಕೃಷ್ಣನ ಪ್ರವೇಶ, ಸಂಗ್ರಾಮದ ದೃಶ್ಯಗಳು ಕಣ್ಣವಲಿಗಳನ್ನು ಮುಚ್ಚದೆ ನೋಡುವಷ್ಟು ನಿರೀಕ್ಷೆ ಸೃಷ್ಟಿಸಿದವು. ’ಆಗ ಸುಧನ್ವನು ಬೇಗದಿ ರಣಕನು | ವಾಗುತ ಮುದದಿಂದ’ ಸುಧನ್ವನ ಪ್ರವೇಶದಿಂದ ಅಂತ್ಯದ ತನಕವೂ ಅದೇ ಲವಲವಿಕೆ ಅತ್ಯುತ್ಸಾಹ, ವೇಗದಿಂದ ಪಾತ್ರ ಗೌರವವನ್ನು ಎತ್ತಿ ಹಿಡಿದಿದ್ದು ಬಸ್ರೂರು ಸ.ಹಿ.ಪ್ರಾಶಾಲೆ ಉರ್ದು ಇಲ್ಲಿನ ಶಿಕ್ಷಕಿ ಸಂಧ್ಯಾ ಶೆಟ್ಟಿ ಅವರು. ಎಲ್ಲ ಪದ್ಯಗಳು ಕೂಡಾ ಅವರಿಗೆ ಸಾಕಷ್ಟು ಅಭಿನಯ, ನೃತ್ಯಕ್ಕೆ ಅವಕಾಶವಿದ್ದರಿಂದ ಬತ್ತದ ಉತ್ಸಾಹ ಮತ್ತು ರಂಗದ ಶ್ರದ್ಧೆಯನ್ನು ಎತ್ತಿ ಹಿಡಿದರು. ಯಕ್ಷಗಾನದ ಸಿದ್ಧಿ ಅವರಿಗೆ ಚೆನ್ನಾಗಿಯೇ ಲಭಿಸಿದೆ. ’ಸೃಷ್ಟಿಗರ್ಜುನನೆಂಬವನೆ ನೀನು’ ಪದ್ಯಕ್ಕೆ ಅದ್ಭುತ ಅಭಿನಯದೊಂದಿಗೆ ಏಳು ನಿಮಿಷ ಕುಣಿದಿದ್ದಾರೆ. ಶ್ರತಿಬದ್ದವಾದ ಮಾತುಗಾರಿಕೆಲ್ಲೂ ಮಿಂಚಿದ್ದಾರೆ.

ನಡುತಿಟ್ಟಿನ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ಅಬ್ದುಲ್ ರವೂಪ್ ಅವರು ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡರು. ವೃತ್ತಿಯಲ್ಲಿ ಹೆಸಕುತ್ತೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು. ಬಡಗುತಿಟ್ಟಿನಲ್ಲಿ ಹವ್ಯಾಸಿ ರಂಗದಲ್ಲಿ ಸಕ್ರಿಯ ಕಲಾವಿದರು. ಪುಂಡುವೇಷ, ರಾಜವೇಷ, ಬಣ್ಣ ಎಲ್ಲದ್ದಕ್ಕೂ ಸೈ ಎನಿಸಿಕೊಂಡವರು. ಇಲ್ಲಿ ಅವರ ಅರ್ಜುನ ಪಾತ್ರ ಗೆದ್ದಿದೆ ಎನ್ನುವುದು ಅವರ ವೀರೋಚಿತ ಗಾಂಭೀರ್ಯದ ಪ್ರವೇಶದಿಂದಲೇ ಭಾವಿಸಿಕೊಳ್ಳಬಹುದಾಗಿತ್ತು. ವೇಷಗಾರಿಕೆ, ನಿಲುವು, ರಂಗವನ್ನು ತುಂಬುವ, ಕಲೆಯ ಹಸಿವು ಅವರಲ್ಲಿ ಅಡಕವಾಗಿರುವುದು ಗಮನೀಯ. ಸುಧನ್ವನಿಗೆ ಪ್ರತಿಸ್ಪರ್ಧಿಯಾಗಿ ’ಹುಡುಗ ನೀನು’ ಪದ್ಯಕ್ಕೆ ಸುಮಾರು ಆರು ನಿಮಿಷ ಪರಂಪರೆಯ ಕುಣಿತದ ಮೂಲಕ ರಂಗದ ಕಾವು ಹೆಚ್ಚಿಸಿದ್ದಾರೆ. ಹಿತಮಿತವಾದ ಸಾಹಿತ್ಯಬದ್ದ, ತೂಕದ ಮಾತು, ಪುರಾಣದ ಅರಿವು, ಮುಖ್ಯವಾಗಿ ಅಭಿವ್ಯಕ್ತಿ, ರಸಗಳ ವೈವಿಧ್ಯತೆಯನ್ನು ಅನುಭವಿಸಿ ಅಭಿನಯಿಸಿದಂತೆ ಕಂಡು ಬಂದರು.

ಕೃಷ್ಣನ ಪಾತ್ರವೂ ಇಲ್ಲಿ ಪ್ರಾಮುಖ್ಯವಾದುದೆ. ಉಡುಪಿ ಬಿ.ಆರ್.ಪಿ ಸುನೀತಾ ಆಕರ್ಷಣೀಯ ಹೆಜ್ಜೆಗಾರಿಕೆಯೊಂದಿಗೆ ನೃತ್ಯ, ಭಾವಾಭಿವ್ಯಕ್ತಿಯಿಂದ ಗಮನ ಸಳೆದಿದ್ದಾರೆ. ರಂಗದಲ್ಲಿ ಅವರಿಗೂ ಅನುಭವವಿದೆ. ಅದು ಇಲ್ಲಿ ಉಲ್ಲೇಖನೀಯ. ಅರ್ಜುನನೊಂದಿಗೆ ಸಂಭಾಷಣೆಯಾಗಲಿ, ಅದಕ್ಕೆ ಪೂರಕ ನೃತ್ಯವಾಗಲಿ, ಭಕ್ತ ಸುಧನ್ವನ ಅಂತರ್ಯ, ಸಾಹಸಿ ಪ್ರೌಢಿಮೆಯನ್ನು ಅರ್ಜುನನಲ್ಲಿ ಪ್ರಸ್ತಾಪಿಸುವ ಬಗೆಯಾಗಲಿ, ಎಲ್ಲವೂ ಕೂಡಾ ಅರ್ಥಪೂರ್ಣವಾಗಿ ಮೂಡಿ ಬಂದಿದೆ.

’ಸತಿಶಿರೊಮಣಿ ಪ್ರಭಾವತಿ|’ ಪದ್ಯದ ಮೂಲಕ ಸ.ಹಿ.ಪ್ರಾ.ಶಾಲೆ ಬೀಜಾಡಿ ಪಡು ಇಲ್ಲಿನ ಶಿಕ್ಷಕಿ ಯಶೋಧ ಕೆ ಉತ್ತಮ ಪಾತ್ರ ಚಿತ್ರಣ ನೀಡಿದ್ದಾರೆ. ಮದ್ದಳೆಯ ನುಡಿತಕ್ಕೆ ತಾಳಬದ್ದ ಹೆಜ್ಜೆ ಒನಪು ಒಯ್ಯಾರ ಎಲ್ಲವೂ ಕೂಡಾ ಚೆನ್ನಾಗಿತ್ತು. ಆತಂಕ, ತಳಮಳ, ಅಕಾಂಕ್ಷೆ, ಭಯ ರಸಗಳನ್ನು ತತಕ್ಷಣ ಹೊರಹೊಮ್ಮಿಸುವಲ್ಲಿ ಅವರು ಯಶಸ್ಸು ಕಂಡಿದ್ದಾರೆ. ’ಪಯಣವೆಲ್ಲಿಗೆ ಪ್ರಾಣಕಾಂತ’, ಸಂತತಿ ಇಲ್ಲದೆ ಕೌವಲ್ಯವೆಂತು ಮಾತುಗಳು ಮಿತವಿದ್ದರೂ ಭಾವನೆಯಲ್ಲಿ ಅರ್ಥ ಮಾಡಿಕೊಳ್ಳಬಹುದಾದ ಬಗೆ ಚೆನ್ನಾಗಿದೆ. ಇಲ್ಲಿ ಸುಧನ್ವ ಮತ್ತು ಪ್ರಭಾವತಿಯ ಸನ್ನಿವೇಶವನ್ನು ಸಂಕ್ಷಿಪ್ತವಾಗಿ ಬಳಸಿಕೊಂಡಿರುವುದು ಯೋಗ್ಯವೆನಿಸಿತು.

ಹಂಸದ್ವಜನ ಪಾತ್ರದಲ್ಲಿ ತೆಕ್ಕಟ್ಟೆಯ ಕುವೆಂಪು ಮಾ,ಹಿ.ಪ್ರಾ ಶಾಲೆಯ ಶಿಕ್ಷಕಿ ಶ್ಯಾಮಲ, ಮಂತ್ರಿಯಾಗಿ ಕುಂದಾಪುರ ಟಿ.ಟಿ ರಸ್ತೆ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಲೀಲಾ, ಪ್ರದ್ಯುಮ್ನನಾಗಿ ಚಿತ್ರಪಾಡಿ ಸ.ಹಿಪ್ರಾ.ಶಾಲೆಯ ಶಿಕ್ಷಕಿ ಗಾಯತ್ರಿ,ವೃಷಕೇತುವಾಗಿ ಕುಂಭಾಶಿ ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಮಣಿಯಮ್ಮ, ನೀಲದ್ವಜನಾಗಿ ಬಸ್ರೂರು ಕೋಳ್ಕೆರೆ ಸ,ಹಿ.ಪ್ರಾ.ಶಾಲೆಯ ಶಿಕ್ಷಕಿ ಅಂಬಿಕಾ ಸಮರ್ಥ ಪಾತ್ರ ನಿರ್ವಹಣೆಯಿಂದ ಆಟವನ್ನು ಗೆಲ್ಲಿಸಿದ್ದಾರೆ.

ಇಡೀ ಕಾರ್ಯಕ್ರಮದ ಮುಕುಟಪ್ರಾಯವಾಗಿದ್ದು ಬಡಗುತಿಟ್ಟಿನ ಬೇಡಿಕೆಯ ಭಾಗವತ ನಾಗೇಶ ಕುಲಾಲ್ ನಾಗರಕೊಡಿಗೆ ಅವರ ಭಾಗವತಿಕೆ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಪದ್ಯಕ್ಕೆ ಅವರು ನೀಡಿದ ಜೀವ ಅದ್ಭುತ. ಮದ್ದಳೆಯಲ್ಲಿ ಚಂದ್ರ ಆಚಾರ್ ಹಾಲಾಡಿ, ಚಂಡೆಯಲ್ಲಿ ಶ್ರೀರಾಮ ಬಾಯರಿ ಕೂರಾಡಿ ಉತ್ತಮ ಸಾಥ್ ನೀಡಿದರು. ರಾಜು ಪೂಜಾರಿ ಹೆಮ್ಮಾಡಿ ಅವರ ದಕ್ಷ ನಿರ್ದೇಶನ, ಪ್ರದರ್ಶನದ ಯಶಸ್ಸಿನ ಅವರ ಕಾಳಜಿ ಮರೆಯುವಂತಿಲ್ಲ. ಒಟ್ಟಂದದಲ್ಲಿ ಉತ್ತಮ ಪ್ರಸ್ತುತಿ. ಶಿಕ್ಷಕ, ಶಿಕ್ಷಕಿಯರ ಕಲಾಪ್ರೇಮ, ಶ್ರದ್ಧೆಯನ್ನು ಅಭಿನಂದಿಸಲೇಬೇಕು.

(-ನಾಗರಾಜ್ ವಂಡ್ಸೆ)

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!