spot_img
Friday, January 30, 2026
spot_img

ರಾಜ್ಯ ಬಿಜೆಪಿಯ ನಾಯಕತ್ವದ ಬಗ್ಗೆ ಅಸಮಧಾನ ಶಮನ ಮರೀಚಿಕೆ

ಕಾಲು ಹಿಡಿದರಷ್ಟೇ ಉಳಿಗಾಲವೆಂಬ ಧೋರಣೆ ರಾಜ್ಯ ಬಿಜೆಪಿಯನ್ನು ಎತ್ತ ಕೊಂಡೊಯ್ಯುತ್ತಿದೆ ?

ರಾಜ್ಯದ ತನ್ನ ಎಲ್ಲಾ 39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಬಿಜೆಪಿ ಮುಗಿಸಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ನಿಷ್ಠರಾಗಿರುವವರನ್ನೇ ಎಲ್ಲಾ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ರಾಜ್ಯ ಬಿಜೆಪಿಯ ಅಧ್ಯಕ್ಷಗಿರಿ ಬುಡಸಮೇತ ಅಲ್ಲಾಡುತ್ತಿತ್ತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತವನ್ನು ಬುಡಮೇಲು ಮಾಡಬೇಕೆಂದು ಕನಸು ಕಾಣುತ್ತಿದ್ದ ರಾಜ್ಯ ಬಿಜೆಪಿಯೊಳಗೆ ಸೃಷ್ಟಿಯಾದ ಮೂರು ಮೂರು ಬಣ ರಾಜಕಾರಣ ಬಿಜೆಪಿಗೆ ತೀವ್ರ ಮುಖಭಂಗವನ್ನು0ಟು ಮಾಡಿತ್ತು. ಅಧ್ಯಕ್ಷರ ಬದಲಾವಣೆ ವಿಚಾರ ಅಕ್ಷರಶಃ ಬೀದಿ ಜಗಳವಾಯಿತು. ಜಿಲ್ಲಾ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲೂ ಲಾಬಿ ಜೋರಾಗಿ ನಡೆಯುತ್ತಿದೆ ಎನ್ನುವುದರ ಬಗ್ಗೆ ಸ್ವತಃ ಬಿಜೆಪಿಯ ಕೆಲವು ನಾಯಕರು ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದರು. ಇತ್ತೀಚೆಗೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆಯ ವಿಚಾರವೂ ರಾಜ್ಯ ಮಟ್ಟದಲ್ಲಿ ಸುದ್ದಿಯಾಯಿತು. ಬಿಜೆಪಿಯ ಉಡುಪಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಅಧಿಕಾರ ಹಸ್ತಾಂತರದ ಕಾರ್ಯಕ್ರಮದಲ್ಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು, ಎಂದಿನAತೆ ಮೇಲ್ವರ್ಗಕ್ಕೆ ಹೆಚ್ಚಿನ ಮಹತ್ವ ಮತ್ತು ಆಯಾಯ ರಾಜ್ಯಗಳಲ್ಲಿ ಹೆಚ್ಚು ಮತ ತಂದುಕೊಡುವ ಸಮುದಾಯದ ಪ್ರಭಾವಿ ನಾಯಕರಿಗೇ ಪಕ್ಷದ ಪ್ರಮುಖ ಹುದ್ದೆಗಳಿಗೆ ಮಣೆ ಹಾಕುವ ಬಿಜೆಪಿ, ಕರ್ನಾಟಕದಲ್ಲಿ ಸದಾ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನೇ ಆಧಾರವನ್ನಾಗಿಟ್ಟುಕೊಂಡಿದೆ. ವಯಸ್ಸಿನ ನೆಪ ಹೇಳಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿ ಚುನಾವಣಾ ರಾಜಕಾರಣದಿಂದ ಬದಿಗಿರಿಸಿದ್ದರೂ, ಅವರ ಮಾತನ್ನು ಮೀರಿ ಹೋಗುವುದಕ್ಕೆ ಸದ್ಯಕ್ಕಂತೂ ಕರ್ನಾಟಕದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಗೆ ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರು ಇರುವ ಕಾಲದವರೆಗೂ ಅವರ ಬೇಡಿಕೆಗಳಿಗೆ ಅಸ್ತು ಅನ್ನಲೇಬೇಕಿರುವ ಅನಿವಾರ್ಯವಿದೆ. ಮಗನನ್ನು ರಾಜ್ಯ ಬಿಜೆಪಿಯಲ್ಲಿ ಪ್ರಮುಖ ಹುದ್ದೆಯಲ್ಲಿ ಗಟ್ಟಿಯಾಗಿ ಕೂರಿಸಬೇಕು ಎನ್ನುವ ದೃಷ್ಟಿಯಲ್ಲಿ ಹೈಕಮಾಂಡ್‌ನ ಪ್ರಮುಖರಿಗೆ ತಲುಪಿಸಬೇಕಾದ ಕಪ್ಪವನ್ನು ತಲುಪಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಬಲಿಷ್ಠವಾಗಿರುವುದು ಕರ್ನಾಟಕದಲ್ಲಷ್ಟೆ. ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗಿರುವ ಹಿಡಿತವನ್ನು ಕಳೆದುಕೊಳ್ಳಲು ಹೈಕಮಾಂಡ್ ಎಂದಿಗೂ ಸಿದ್ಧವಿಲ್ಲ. ಯಡಿಯೂರಪ್ಪ ಅವರ ಮಾತಿಗೆ ವಿರುದ್ಧವಾಗಿ ನಡೆದುಕೊಂಡರೇ ಖಂಡಿತ ಬಹಳ ದೊಡ್ಡ ಪರಿಣಾಮವನ್ನು ಸದ್ಯದ ಪರಿಸ್ಥಿತಿಯಲ್ಲಂತೂ ಎದುರಿಸಬೇಕಾಗುತ್ತದೆ ಎನ್ನುವುದು ಹೈಕಮಾಂಡ್ ಗೆ ತಿಳಿದಿದೆ. ಅಮಿತ್ ಶಾ ಅವರು ಮುರುಗೇಶ್ ನಿರಾಣಿ ಅಥವಾ ವಿ.ಸೋಮಣ್ಣ ಅವರನ್ನು ಅಧ್ಯಕ್ಷರ ಸ್ಥಾನದಲ್ಲಿ ಕೂರಿಸುವುದಕ್ಕೆ ಒಂದು ಹಂತದಲ್ಲಿ ಒಪ್ಪಿದ್ದರು ಎನ್ನಲಾಗಿತ್ತು. ಆ ಬಳಿಕ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪರ ಪ್ರಭಾವ ಮತ್ತು ಲಿಂಗಾಯತ ಸಮುದಾಯದ ಮತಗಳ ವಿಚಾರ ಬಂದ ಕಾರಣಕ್ಕೆ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ವಿಜಯೇಂದ್ರ ಮೇಲುಗೈ ಸಾಧಿಸುವಂತೆಯೇ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿದೆ.

ಶಾಸಕ ಯತ್ನಾಳ್ ಸೇರಿ ಕೆಲವು ಅತೃಪ್ತ ಬಿಜೆಪಿ ನಾಯಕರು ಬಿ.ಎಸ್ ಯಡಿಯೂರಪ್ಪ ಅವರ ನಾಯಕತ್ವವನ್ನು ನೇರವಾಗಿ ವಿರೋಧಿಸಿದ್ದಾರೆ. ಅಂತೆಯೇ ಅವರ ಮಗ, ಈಗಿನ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಾಯಕತ್ವವನ್ನು ಬಲವಾಗಿ ಈ ಬಣ ವಿರೋಧಿಸಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ವಿರೋಧಿಸಿದ ಕೆಲವರನ್ನು ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಛಾಟನೆ ಮಾಡಿದೆ, ಕೆಲವರಿಗೆ ಕಾರಣ ಕೇಳಿ ನೋಟೀಸ್ ನೀಡಿ ದೆಹಲಿಗೆ ಬುಲಾವ್ ಕೊಟ್ಟು ಬಾಯಿ ಮುಚ್ಚಿಸಿದೆ. ಚುನಾವಣಾ ರಾಜಕಾರಣದಿಂದ ಹೊರಗಿದ್ದೂ, ರಾಜ್ಯದ ಬಿಜೆಪಿಯ ವಿಚಾರಕ್ಕೆ ತಾನೇ ಸುಪ್ರೀಂ ಎನ್ನುವುದನ್ನು ಯಡಿಯೂರಪ್ಪ ಈ ಮೂಲಕ ಪರೋಕ್ಷವಾಗಿ ತೋರಿಸಿದ್ದಾರೆ. ಯಡಿಯೂರಪ್ಪ ಅವರಿಗೆ ತಾನಿರುವವರೆಗೆ ರಾಜ್ಯದಲ್ಲಿ ಬಿಜೆಪಿ ತನ್ನನ್ನು ಮೀರಿ ಹೋಗಬಾರದು ಎನ್ನುವುದಿದೆ. ಹಾಗಾಗಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ ತನ್ನ ಮಗನಲ್ಲೇ ಉಳಿಯಬೇಕು ಎನ್ನುವ ದೃಷ್ಟಿಯಿಂದ ಅದಕ್ಕೆ ಬೇಕಾದ ಎಲ್ಲಾ ಥರದ ಪ್ರಭಾವವನ್ನೂ ಹೈಕಮಾಂಡ್ ಮುಂದೆ ಬೀರಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

ಇನ್ನು, ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಕ್ಕೆ ಬಹಳ ಮುಖ್ಯವಾದ ಪ್ರಕ್ರಿಯೆಗಳಲ್ಲಿ ಒಂದಾದ, ತನ್ನ ಎಲ್ಲಾ ಸಂಘಟನಾತ್ಮಕ ಜಿಲ್ಲೆಗಳಿಗೂ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಚುನಾವಣೆ ನಡೆದರೂ, ಚುನಾವಣೆ ನಡೆಯದೇ ಪಕ್ಷದ ಹೈಕಮಾಂಡ್ ನೇರವಾಗಿ ನೂತನ ರಾಜ್ಯ ಬಿಜೆಪಿಯ ಅಧ್ಯಕ್ಷರನ್ನು ನೇಮಕ ಮಾಡುವುದಾದರೂ, ಅದಕ್ಕೆ ಅನುಕೂಲ ಆಗುವ ರೀತಿಯಲ್ಲೇ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಯಾರು ನಿಷ್ಠೆ ತೋರಿ ನಡೆದುಕೊಂಡಿದ್ದಾರೋ ಅಂತವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಯಾರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ‘ಸುಪ್ರೀಂ ವರ್ತನೆ’ಯನ್ನು ಒಪ್ಪುವುದಿಲ್ಲವೋ ಅವರ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ. ಮೇಲೆ ಹೇಳಿದಂತೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ನೋಟೀಸ್ ಕೊಟ್ಟು ಬಾಯಿ ಮುಚ್ಚಿಸಲಾಗಿದೆ.

ನಾಯಕತ್ವಕ್ಕೆ ಬಡಿದಾಟ ಎನ್ನುವುದಕ್ಕಿಂತ ಬಿಜೆಪಿಯಲ್ಲಿ ಸಮರ್ಥ ನಾಯಕತ್ವದ ಕೊರತೆ ಇದೆ ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ. ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡುವ ಸಂಕಲ್ಪ ಇಟ್ಟುಕೊಂಡು ತಮಗೆ ನಿಷ್ಠರಾದವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೇ, ನಾಯಕರ ನಿಷ್ಠಾವಂತ ಅಧ್ಯಕ್ಷರಾಗಿಯೇ ಕಾಲ ಕಳೆಯುತ್ತಾರೆ ಹೊರತು ಸಂಘಟನೆಯನ್ನು ಕಟ್ಟುವ ಅಧ್ಯಕ್ಷರಾಗಿ ಬೆಳೆಯುವುದಿಲ್ಲ. ಉಡುಪಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರೇ ಸ್ವತಃ ಹೇಳಿಕೊಂಡAತೆ, ‘ತಾನು ನಾಯಕರ ಹಿಂದೆ ಹೋದವನಲ್ಲ. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಸಂಘಟನೆ ಮಾಡಿದ್ದೇನೆ. ಸುಳ್ಳು ವರದಿ ಕೊಟ್ಟಿಲ’್ಲ ಎಂದಿದ್ದರು. ಆದರೇ, ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುವುದಕ್ಕಿಂತ ಹೆಚ್ಚಾಗಿ, ಸಂಘಟನೆ ಮಾಡುವುದಕ್ಕಿಂತ ಹೆಚ್ಚಾಗಿ ತನಗೆ ನಿಷ್ಠರಾಗಿ ಇರಬೇಕು ಎನ್ನುವ ಧೋರಣೆ ರಾಜ್ಯ ಬಿಜೆಪಿಯ ಅಧ್ಯಕ್ಷರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಅದೇ ಧೋರಣೆ ಹೈಕಮಾಂಡ್ ಮಟ್ಟದವರೆಗೂ ಹೆಣೆದುಕೊಂಡಿದೆ. ಕಿಶೋರ್ ಕುಮಾರ್ ಕುಂದಾಪುರ ಅವರು ಜಿಲ್ಲೆಯ ಯಾವ ಶಾಸಕರಿಗಾಗಲಿ, ಸಂಸದರಿಗಾಗಲಿ ತಗ್ಗಿಬಗ್ಗಿದವರಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಮಾಡಿದ್ದಾರೆ. ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್, ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯೂ ಹೌದು. ‘ಅಧಿಕಾರ ನನ್ನಿಂದ ಕಿತ್ತುಕೊಳ್ಳಲಾಗಿದೆ. ಅಧಿಕಾರ ಹಸ್ತಾಂತರವನ್ನು ಪ್ರಧಾನ ಕಾರ್ಯರ್ಶಿಗಳು ಮಾಡುತ್ತಾರೆ’ ಎಂದು ಸಭೆಯಲ್ಲೇ ಕಿಶೋರ್ ಕುಮಾರ್ ಕುಂದಾಪುರ ಹೇಳಿರುವುದನ್ನು ಗಮನಿಸಿದರೇ, ಉಡುಪಿ ವಿಚಾರದಲ್ಲಿ ಇದರ ಹಿಂದೆ ಸುನೀಲ್ ಕುಮಾರ್ ಕಾರ್ಕಳ ಅವರೆ ಇದ್ದಾರೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಬಿಜೆಪಿಯಲ್ಲಿ ನಾಯಕನ ಕಾಲು ಹಿಡಿಯದವನ ಪರಿಸ್ಥಿತಿ ಉಚ್ಛಾಟನೆ ಅಥವಾ ಪದಚ್ಯುತಿ ಎನ್ನುವುದಕ್ಕೆ ಕಿಶೋರ್ ಕುಮಾರ್ ಕುಂದಾಪುರ ಅವರಿಗೆ ಆದ ಪರಿಸ್ಥಿತಿಯೇ ಬಹಳದ ದೊಡ್ಡ ಸಾಕ್ಷಿ. ಈಗೀಗ ಬಿಜೆಪಿಯಲ್ಲಿ ಹಿಂದುತ್ವ ಕಾರ್ಡ್ ಬಳಸುತ್ತ ಹೈಕಮಾಂಡ್ ನಾಯಕರ ಮನವೊಲಿಸಲು ಪ್ರಯತ್ನಿಸಿದರೂ ಅದೂ ವಿಫಲವಾಗುತ್ತಿದೆ. ಇವೆಲ್ಲಾ ನೋಡಿದರೇ, ಹಿಂದುತ್ವದ ಬಗ್ಗೆ ಮಾತಾಡು ಬಿಡು, ನೀನು ನಮ್ಮ ಕಾಲು ಹಿಡಿದರಷ್ಟೇ ಉಳಿಗಾಲ ಎಂಬ ನೇರ ಸಂದೇಶ ಬಿಜೆಪಿಯ ಪ್ರಭಾವಿ ನಾಯಕರಿಂದ ಕೆಳಹಂತದ ನಾಯಕರಿಗೆ ರವಾನೆ ಆದಂತಿದೆ.

ಬಿಜೆಪಿಯೊಳಗೆ ನಿಷ್ಠಾವಂತ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಬೆಲೆ ಇಲ್ಲ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಈ ಆರೋಪ ಈಗ ಹೆಚ್ಚಾಗಿ ಅಸಮಾಧಾನದ ಮೂಲಕ ಹೊರ ಬರುತ್ತಿದೆ. ವಿಜಯೇಂದ್ರ ವಿರುದ್ಧ ಅತೃಪ್ತರು ಸಮರ ಸಾರಿರುವಾಗಲೇ ಎಲ್ಲಾ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ವಿಜಯೇಂದ್ರ ಬಣದ ಕೈ ಮೇಲಾಗಿದೆ. ಬಿಜೆಪಿಯ ಸಿದ್ಧಾಂತವನ್ನು ಮೀರಿ ಬಹುಶಃ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಯಾವೊಬ್ಬ ನಾಯಕನೂ ನಡೆದುಕೊಳ್ಳದಿರಬಹುದು. ಆದರೇ, ನಾಯಕತ್ವದ ಬಗ್ಗೆ ಅಸಮಾಧಾನ ಮುಂದುವರಿದಿದೆ ಎನ್ನುವುದಂತೂ ಸತ್ಯ. ಅದಿನ್ನೂ ಬೂದಿ ಮುಚ್ಚಿದ ಕೆಂಡದ0ತೆಯೇ ಇದೆ.
-ಶ್ರೀರಾಜ್ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!