spot_img
Friday, January 30, 2026
spot_img

ವರ್ಷ ಎರಡು : ತಾನಾಡಿದ ಮಾತನ್ನು ಕಾಂಗ್ರೆಸ್‌ ಸರ್ಕಾರ ಉಳಿಸಿಕೊಳ್ಳಲಿ

ಕಾಂಗ್ರೆಸ್‌ ತನ್ನ ಆತ್ಮ ವಿಮರ್ಶೆ ಮಾಡಿಕೊಳ್ಳಲಿ | ಇನ್ನಾದರೂ ಸುಧಾರಿಸಲಿ   

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬಿದೆ. ಎರಡು ವರ್ಷಗಳ ಕಾಲವೂ ಬರೀ ರಾಜಕೀಯ ಬಿಕ್ಕಟ್ಟಿನಿಂದಲೇ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಿದೆ. ಬರ, ವಾಲ್ಮೀಕಿ ನಿಗಮದ ಹಗರಣ ಆರೋಪ, ಮುಡಾ ಹಗರಣ, ಅಕ್ರಮ ಹಣ ವರ್ಗಾವಣೆಯ ವಿಚಾರದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ, ಯಾದಗಿರಿ ಪಿಎಸ್‌ಐ ಪರಶುರಾಮ್‌ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ, ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಲೋಪ, ನೇಮಕಾತಿ ವಿಳಂಬ, ವರ್ಗಾವಣೆ ದಂಧೆ, ಒಳ ಮೀಸಲಾತಿ ಗೊಂದಲ, ನೇಮಕಾತಿ ತಡೆ, ವಕ್ಫ್ ಆಸ್ತಿ ವಿವಾದ, ಗ್ರೇಟರ್‌ ಬೆಂಗಳೂರು ವೈಫಲ್ಯಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಳುಗಿ ಹೋಯಿತು. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಪ್ರಮುಖ ಹಗರಣಗಳ ತನಿಖೆಯಲ್ಲಿ ವಿಳಂಬ, ಒಳ ರಾಜಕಾರಣದಲ್ಲಿ ತೊಡಗಿ ಅಸಮಾಧಾನ ಮೂಡಿಸಿತು.

ʼಕಾಂಗ್ರೆಸ್‌ ಪಂಚ ಗ್ಯಾರಂಟಿʼಗಳಿಂದ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿದೆ ಎನ್ನುವ ಆರೋಪ ವಿಪಕ್ಷಗಳಿಂದ ಕೇಳಿಬಂತು. ರಾಜ್ಯ ಸರ್ಕಾರ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಆರೋಪ ಮೇಲಿಂದ ಮೇಲೆ ಬಿಜೆಪಿ, ಜೆಡಿಎಸ್‌ ಪಕ್ಷಗಳು ಸರ್ಕಾರದ ಮೇಲೆ ಹೊರಿಸುತ್ತಲೇ ಬಂದವು. ಕಾಂಗ್ರೆಸ್‌ ಶಾಸಕರೇ ಗ್ಯಾರಂಟಿ ಯೋಜನೆಗಳನ್ನು ಪುನರ್‌ ಪರಿಶೀಲಿಸುವಂತೆ ಒತ್ತಾಯಿಸಿದ್ದು, ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ ಎಂದು ಹೇಳಿಕೆ ನೀಡಿದ್ದು ವಿಪಕ್ಷಗಳಿಗೆ ಸುಲಭ ಗ್ರಾಸವಾಗಿ ದೊರಕಿತು.

ಈ ಎಲ್ಲಾ ವಿವಾದಗಳ ನಡುವೆಯೇ ಕಾಂಗ್ರೆಸ್‌ ಸರ್ಕಾರ, ತಾನು ನೀಡಿದ ಗ್ಯಾರಂಟಿಗಳನ್ನು ತಾಂತ್ರಿಕ ದೋಷಗಳ ಹೊರತಾಗಿಯೂ ಫಲಾನುಭವಿಗಳಿಗೆ ನೀಡಿತ್ತು ವಿನಃ ಜನಸ್ನೇಹಿ ಆಡಳಿತ ನೀಡಿಲ್ಲ ಎನ್ನುವುದನ್ನು ಕಾಂಗ್ರೆಸ್‌ ಪಕ್ಷದವರೇ ಒಳಗಿಂದೊಳಗೆ ಒಪ್ಪಿಕೊಳ್ಳುವ ಸ್ಥಿತಿ ಕಳೆದ ಎರಡು ವರ್ಷಗಳಿಂದೀಚೆಗೆ ಬಂದೊದಗಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಮುಂದುವರಿಯುವುದಿಲ್ಲ ಎನ್ನುವುದರ ಕುರಿತು ರಾಜ್ಯದ ಜನರಿಗೆ ಅನುಮಾನ ಮೂಡಿಸುವ ರೀತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಅಪಪ್ರಚಾರ ಮಾಡುವಷ್ಟರ ಮಟ್ಟಿಗೆ ಕಾಂಗ್ರೆಸ್‌ ಸರ್ಕಾರ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ವಿಫಲವಾಯಿತು. ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿರುವುದಕ್ಕೂ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಕೆಲಸ ಮಾಡುತ್ತಿದೆ. ಆದರೆ, ತಾಲೂಕು, ಜಿಲ್ಲಾ ಮಟ್ಟದ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಕೂಡ ಜನರಿಗೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮುಟ್ಟಿಸುವಂತೆ ಮಾಡುವಲ್ಲಿಯೂ ಸಂಪೂರ್ಣ ವಿಫಲವಾಯಿತೆನ್ನುವುದು ಸತ್ಯ. ಪ್ರತಿಪಕ್ಷಗಳ ಅಪಪ್ರಚಾರಗಳನ್ನು ಹಿಮ್ಮೆಟ್ಟಿಸುವಂತೆ ಸರ್ಕಾರವೂ ಪ್ರಯತ್ನಿಸಿಲ್ಲ, ಅನುಷ್ಠಾನ ಸಮಿತಿಯೂ ಕಾರ್ಯನಿರ್ವಹಿಸಲಿಲ್ಲ.

ಗೆಲುವಿನಲ್ಲಿ ಮೈಮರೆತಂತೆ ಕಾಂಗ್ರೆಸ್‌ ಸರ್ಕಾರ ನಡೆದುಕೊಳ್ಳುತ್ತಿದೆ. ಜನರ ಮಧ್ಯ ಹೋಗಿ ಅವರ ದುಃಖ ದುಮ್ಮಾನಗಳನ್ನು ಆಲಿಸುವ, ಅಭಿವೃದ್ಧಿಗೆ ವೇಗ ತುಂಬಿಸುವ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದವರು ಒತ್ತು ನೀಡಬೇಕಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿರುವುದು ಆಡಳಿತ ವೈಫಲ್ಯವಲ್ಲದೇ ಮತ್ತಿನ್ನೇನು ?

ಇನ್ನು, ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವುದೇ ಪ್ರಮುಖ ನೇಮಕಾತಿಗಳನ್ನು ಮಾಡಿಕೊಂಡಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪದೇ ಪದೇ ಲೋಪಗಳು ಕಂಡು ಬಂದಿದ್ದು, ನೇಮಕಾತಿ ಪ್ರಕ್ರಿಯೆಗೆ ತಡೆ, ಎರಡು ಮೂರು ಬಾರಿ ಪರೀಕ್ಷೆ ಮುಂದೂಡಿದ್ದಲ್ಲದೇ ಪ್ರತಿ ಸಲ ನಡೆದ ಪರೀಕ್ಷೆಗಳಲ್ಲಿ ಮತ್ತದೆ ತಪ್ಪು ಮರುಕಳಿಸಿದೆ. ಉಳಿದ ನೇಮಕಾತಿ ಪರೀಕ್ಷೆಗಳು, ಫಲಿತಾಂಶ ನೀಡುವಲ್ಲಿಯೂ ವಿಳಂಬ, ನೇಮಕಾತಿಗಳಲ್ಲಿ ಭ್ರಷ್ಠಾಚಾರ, ವಿಧಾನಸಭೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ನೇಮಕಾತಿಗಳಲ್ಲಿ ಭ್ರಷ್ಟಾಚಾರ ಆರೋಪಗಳನ್ನೆಲ್ಲಾ ಗಮನಿಸಿದರೇ, ಆಡಳಿತಾರೂಢ ಕಾಂಗ್ರೆಸ್, 2023ರ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ಮರೆತಂತಿದೆ.

ಅಧಿಕಾರಕ್ಕೆ ಬಂದರೆ ಒಂದು ವರ್ಷದೊಳಗೆ ಎಲ್ಲಾ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್‌, ಈಗ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿಯೇ ಮಾಡಿಕೊಂಡಿದೆ. ಆದಾಗ್ಯೂ ಪ್ರಮುಖ ನೇಮಕಾತಿಗಳನ್ನು ರಾಜ್ಯ ಸರ್ಕಾರ ಈವರೆಗೆ ಮಾಡಿಕೊಂಡಿಲ್ಲ. ರಾಜ್ಯ ಕಾಂಗ್ರೆಸ್‌ ನ ಸ್ಥಿತಿ ಅಕ್ಷರಶಃ ಹೇಳಿದ್ದೊಂದು, ಮಾಡಿದ್ದು ಮತ್ತೊಂದು ಎಂಬಂತಾಗಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಅಂಕಿಅಂಶಗಳು ಹೇಳುತ್ತವೆ. ಸರ್ಕಾರದ 72 ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ 5.2 ಲಕ್ಷ ಉದ್ಯೋಗಿಗಳಿದ್ದಾರೆ. 2.5 ಲಕ್ಷ ಖಾಲಿ ಹುದ್ದೆಗಳಲ್ಲಿ, ಕೆಲವು ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಹೀಗಾದರೇ, ಕಾಂಗ್ರೆಸ್ ವಚನ ಭ್ರಷ್ಠ ಸರ್ಕಾರವೆಂದರೇ ತಪ್ಪೆ ?

ಸರ್ಕಾರ ಅಧಿಕಾರಕ್ಕೆ ಬಂದ ವರ್ಷದೊಳಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, ಕಾಲೇಜುಗಳ ಬೋಧಕ, ಬೋಧಕೇತರ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಭರವಸೆ ಭರವಸೆಯಾಗಿಯೇ ಇದೆ. ಡಿಪಿಎಆರ್(ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ) ಹೇಳುವ ಪ್ರಕಾರ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡರೇ, ಸಂಬಳ ಹಾಗೂ ಇತರ ಸೌಲಭ್ಯಗಳಿಗಾಗಿ ವಾರ್ಷಿಕವಾಗಿ ಕನಿಷ್ಠ 25,000 ಕೋಟಿ ರೂ.ಗಳಷ್ಟು ವ್ಯಯಿಸಬೇಕಾಗುತ್ತದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ತಾನು ನೀಡಿರುವ ಪಂಚ ಗ್ಯಾರಂಟಿ ಯೋಜನಗಳಿಗಾಗಿ 89,428 ಕೋಟಿ ರೂ.ಗಳನ್ನು ಎರಡು ವರ್ಷಗಳಲ್ಲಿ ವ್ಯಯಿಸಿದೆ ಎಂದು ಹೇಳುತ್ತಿದೆ. ಸರ್ಕಾರದ ಬೊಕ್ಕಸದಲ್ಲಿರುವ ಬಹುಪಾಲು ಈ ಗ್ಯಾರಂಟಿ ಯೋಜನೆಗಳಿಗಷ್ಟೇ ಮೀಸಲಿಟ್ಟಿದೆ. ಹೀಗಾಗಿ ಹೊಸ ನೇಮಕಾತಿ ಮಾಡಿಕೊಳ್ಳುವಲ್ಲಿ, ಅಭಿವೃದ್ಧಿ ಕಾರ್ಯಗಳಿಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದೇ ಕಾಣಿಸುತ್ತಿದೆ.

ಬಹುಶಃ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿರಬಹುದು. ರಾಜ್ಯದ ಆರ್ಥಿಕ ಪ್ರಗತಿಗೆ ಪಂಚ ಗ್ಯಾರಂಟಿ ಯೋಜನೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿರಬಹುದು. ಆದರೇ, ಈಗಾಗಲೇ ಬೌದ್ಧಿಕ ಬಡತನದಿಂದ ಬಳಲುತ್ತಿರುವ ರಾಜ್ಯ ಬಿಜೆಪಿ ಪಕ್ಷದಿಂದಲೂ ಇದೇ ವಿಚಾರಕ್ಕೆ ಕಾಂಗ್ರೆಸ್‌ ಸರ್ಕಾರ ಟೀಕೆ ಎದುರಿಸುವಂತಾಗಿದೆ ಎಂದರೇ, ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸಿಲ್ಲವೆಂದೇ ಅರ್ಥ.

ಇನ್ನು, ಸರ್ಕಾರದಲ್ಲಿ ಯೋಗ್ಯತೆ ಇರುವ ಹಲವು ನಾಯಕರಿದ್ದಾರೆ. ಅಂತವರನ್ನು ಸರ್ಕಾರದ ಮೇಲಿನ ಹಂತಕ್ಕೆ ತರುವ ಯಾವ ಯೋಚನೆಯಲ್ಲಿಯೂ ಕಾಂಗ್ರೆಸ್‌ ಇದ್ದಂತೆ ಕಾಣಿಸುತ್ತಿಲ್ಲ. ತನ್ನ ಸಂಪ್ರದಾಯದ ಛಾಳಿಯನ್ನೇ ಎಂದಿನಂತೆ ಕಾಂಗ್ರೆಸ್‌ ಇಂದೂ ಮುಂದುವರಿಸಿಕೊಂಡು ಬಂದಿದೆ. ಸರ್ಕಾರ ನಡೆಸುವುದಕ್ಕೆ ಬೇಕಾಗಿ ಒಂದು ಸ್ಪಷ್ಟ ಗೊತ್ತು ಗುರಿ ಇಲ್ಲದಂತೆ ಕಾಣಿಸುತ್ತಿದೆ. ಕೆಲವು ಕಿರಿಯ ಮತ್ತು ಹಿರಿಯ ಉತ್ಸಾಹಿ ಸಚಿವರ ಪ್ರಾಮಾಣಿಕತೆಯಿಂದ ಕೆಲವು ಇಲಾಖೆಗಳಲ್ಲಿ ಕೆಲವು ಮಹತ್ತರ ಬದಲಾವಣೆ ಆಗಿರಬಹುದು. ಆದರೇ, ಈವರೆಗೆ ರಾಜ್ಯದ ಸಮಷ್ಠಿ ಪ್ರಗತಿಯ ರೂಪುರೇಷೆಯೇ ಸರ್ಕಾರದ ಬಳಿ ಇಲ್ಲ ಎಂದೇ ಕಾಣಿಸುತ್ತಿದೆ.

ಒಟ್ಟಿನಲ್ಲಿ, ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ಎರಡು ವರ್ಷಗಳಲ್ಲಿ ಆಗದೇ ಇರುವುದನ್ನು ಇನ್ನು ಉಳಿದ ಮೂರು ವರ್ಷಗಳಲ್ಲಾದರೂ ಮಾಡಲಿ. ತಾನಾಡಿದ ಮಾತನ್ನು ಕಾಂಗ್ರೆಸ್‌ ಸರ್ಕಾರ ಉಳಿಸಿಕೊಳ್ಳಲಿ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!