spot_img
Friday, January 30, 2026
spot_img

ಭಾರತ ಟೆಸ್ಟ್‌ ತಂಡದ ಸಾರಥ್ಯ ಯಾರಿಗೆ ?

[ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ]

ಐಪಿಎಲ್ ಟ್ವೆಂಟಿ -20 ಕ್ರಿಕೆಟ್ ಪಂದ್ಯಾಟ ಇನ್ನೇನು ಮುಕ್ತಾಯ ಹಂತದಲ್ಲಿದ್ದು ಇದೀಗ ಭಾರತ ಟೆಸ್ಟ್ ತಂಡದ ನಾಯಕ ಯಾರು ಆಗುತ್ತಾರೆ ಎನ್ನುವ ಚರ್ಚೆ ಕೂಡ ಈ ಮಧ್ಯೆ ನಡೆಯುತ್ತಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರಿಂದ  ಮುಂದಿನ ಟೆಸ್ಟ್ ನಾಯಕ ಯಾರು ಆಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ. ರೋಹಿತ್ ಶರ್ಮ ನಾಯಕತ್ವದ ಜೊತೆಗೆ ಒಬ್ಬ ಪ್ರಬುದ್ಧ ಓಪನಿಂಗ್ ಬ್ಯಾಟರ್ ಆಗಿದ್ದರು. ಅವರ ಸ್ಥಾನವನ್ನು ತುಂಬುವುದು ಕೂಡ ಈಗ ಕಷ್ಟ ಸಾಧ್ಯವಾಗಿದೆ. ಹಾಗಾಗಿ ಭಾರತ ತಂಡದ ಆಯ್ಕೆ ಸಮಿತಿಗೆ ಟೆಸ್ಟ್ ನಾಯಕನ ಆಯ್ಕೆ ಸವಾಲಿನದಾಗಿದೆ. ಟೆಸ್ಟ್ ನಾಯಕತ್ವ ಎನ್ನುವುದು ಅಷ್ಟು ಸುಲಭದ ಕೆಲಸವಲ್ಲ. ಬರೋಬ್ಬರಿ ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಳ್ಳುವ ಆಟಗಾರನಲ್ಲಿ ಮುಖ್ಯವಾಗಿ ಸಂಯಮ ಅತೀ ಅಗತ್ಯ. ಎಷ್ಟೇ ಪ್ರಬುದ್ದ ಆಟಗಾರನಾದರೂ ಸಂಯಮತೆ ಇರದಿದ್ದರೆ ನಾಯಕತ್ವ ಪರಿಪಕ್ವತೆ ಕಾಣದು. ಇದರಿಂದ ಆಯ್ಕೆಗಾರರರು ಇಂತಹ ಸೂಕ್ಮತೆಯನ್ನು ಗಮನಿಸಿ ನಾಯಕನ ಆಯ್ಕೆಗೆ ಮಂದಾಗಿದ್ದಾರೆ.

ವಿರಾಟ್‌ ಕೊಹ್ಲಿ 2022ರ ಆರಂಭದಲ್ಲಿ ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ ರೋಹಿತ್‌ ಶರ್ಮ ಭಾರತ ಟೆಸ್ಟ್‌ ತಂಡಕ್ಕೆ ನಾಯಕನಾಗಿ ನೇಮಕಗೊಂಡಿದ್ದು ಮಾತ್ರವಲ್ಲ , ಎರಡನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವನ್ನು ಮುನ್ನಡೆಸಿದ್ದರು. ರೋಹಿತ್‌ ಶರ್ಮ ನಾಯಕತ್ವದಲ್ಲಿ ಭಾರತ ತಂಡ ಹಲವು ಟೆಸ್ಟ್‌ ಸರಣಿಗಳನ್ನು ಗೆದ್ದಿದೆ. ಆದರೆ, ಕಳೆದ ವರ್ಷ ಇವರ ನಾಯಕತ್ವದಲ್ಲಿ ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ದ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಸೋತಿತು. ಬಳಿಕ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿಯೂ ಸೋಲು ಅನುಭವಿಸಿ, ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯತೆಯ ನಡುವೆ ನಾಯಕನಾಗಿಯೂ ಸಕ್ಸಸ್‌ ಆಗಿರಲಿಲ್ಲ.

ರೋಹಿತ್ ಶರ್ಮ ಟೆಸ್ಟ್​​ನಿಂದ ನಿವೃತ್ತಿ ಪಡೆಯುತ್ತಿದ್ದಂತೆ ಮುಂದಿನ ಟೆಸ್ಟ್ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ಶುಭಮನ್ ಗಿಲ್​, ಕೆ.ಎಲ್. ರಾಹುಲ್, ರಿಷಭ್ ಪಂತ್ ಮತ್ತು ಜಸ್ಪ್ರಿತ್ ಬುಮ್ರಾ ಹೆಸರು ಮುನ್ನೆಲೆಗೆ ಬಂದಿದೆ. ಜೂನ್ 20ರಿಂದ ಇಂಗ್ಲೆಂಡ್‌ ಟೆಸ್ಟ್‌ ಆರಂಭ ಆಗುವುದರಿಂದ ಭಾರತ ತಂಡದ ನಾಯಕನ ಘೋಷಣೆ ತುರ್ತಾಗಿ ನಡೆಯಬೇಕಾಗಿದೆ. ಈ ವಿಷಯದಲ್ಲಿ ಆಯ್ಕೆಗಾರರು ಕೂಡ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಕಾರಣ ಇಂಗ್ಲೆಂಡ್‌ ಪ್ರವಾಸ ಕಬ್ಬಿಣದ ಕಡಲೆ ಇದ್ದಂತೆ. ಇಲ್ಲಿನ ಪರಿಸ್ಥಿತಿಯಲ್ಲಿ ಆಡುವುದೇ ಒಂದು ರೀತಿಯಲ್ಲಿ ಸಾಹಸವೇ. ಹಾಗಾಗಿ ನಾಯಕನ ಆಯ್ಕೆಯೂ ಕೂಡ ಜಟಿಲವಾಗಿದೆ. ಶುಭ್​ಮನ್ ಗಿಲ್, ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಜಸ್​ಪ್ರೀತ್ ಬುಮ್ರಾ ಅವರ ಹೆಸರನ್ನು ಮುಂದಿನ ಟೆಸ್ಟ್‌ ನಾಯಕತ್ವಕ್ಕೆ ಪರಿಗಣಿಸಲಾಗಿದೆ. ಇವರಲ್ಲಿ ಒಬ್ಬರು ನಾಯಕನಾಗಿ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತ.

ಮುಂಚೂಣಿಯಲ್ಲಿ ಗಿಲ್ : ನಾಯಕತ್ವದ ಆಯ್ಕೆ ರೇಸ್ ನಲ್ಲಿರುವ ನಾಲ್ಕು ಹೆಸರುಗಳಲ್ಲಿ ಮುಂಚೂಣಿಯಲ್ಲಿರುವುದು ಶುಭ್​ಮನ್ ಗಿಲ್. ಭಾರತ ತಂಡದ ಭವಿಷ್ಯದ ನಾಯಕನೆಂದು ಬಿಂಬಿತರಾಗಿರುವ ಶುಭ್​ಮನ್ ಗಿಲ್ ಇಂಗ್ಲೆಂಡ್‌ ಪ್ರವಾಸಕ್ಕೆ ನಾಯಕನಾಗಬಲ್ಲ ಎಲ್ಲ ಅರ್ಹತೆಯನ್ನು ಹೊಂದಿರುವ ಆಟಗಾರ. 25ರ ಹರೆಯದ ಶುಭ್​ಮನ್ ಗಿಲ್ ಪಂಜಾಬ್ ರಾಜ್ಯ ತಂಡದ ನಾಯಕರಾಗಿದ್ದು, ಅಲ್ಲದೆ ಭಾರತ ಟ್ವೆಂಟಿ-20 ಹಾಗೂ ಏಕದಿನ ಪಂದ್ಯಗಳ  ತಂಡದಲ್ಲಿ  ಉಪನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಶುಭ್​ಮನ್ ಗಿಲ್​ಗೆ ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿಕೊಡುವ ಸಾಧ್ಯತೆಯೂ ಹೆಚ್ಚಾಗಿದೆ.

ಇನ್ನೂ , 31ರ ವಯಸ್ಸಿನ ಅನುಭವಿ ಆಟಗಾರ ಜಸ್‌ಪ್ರೀತ್‌ ಬುಮ್ರಾ ಅವರಿಗೆ ನಾಯಕತ್ವ ನೀಡುವ ಪ್ರಸ್ತಾಪವೂ ಇದೆ. ಬುಮ್ರಾ ಈ ಹಿಂದೆ ಹಲವು ಬಾರಿ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದಾರೆ ಹಾಗೂ ಉಪನಾಯಕನಾಗಿ ರೋಹಿತ್‌ ಶರ್ಮಗೆ ನೆರವು ನೀಡಿದ್ದಾರೆ.ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ, ಕಳೆದ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ 295 ರನ್‌ಗಳ ಅಂತರದಲ್ಲಿ ಜಯ ಕಂಡಿತ್ತು.ಇದು ಆಸೀಸ್‌ ನೆಲದಲ್ಲಿ ಭಾರತ ತಂಡಕ್ಕೆ ದೊರೆತ ದೊಡ್ಡ ಅಂತರದ ಜಯವಾಗಿದೆ. ಹಾಗಾಗಿ ಬುಮ್ರಾ ಅವರೂ ಕೂಡ ನಾಯಕತ್ವದ ರೇಸ್ ನಲ್ಲಿದ್ದಾರೆ. ಆದರೆ, ಫಿಟ್‌ ನೆಟ್ ಸಮಸ್ಯೆ ಅವರಿಗೆ ತೊಡಕಾಗಿದೆ.

ನಾಯಕತ್ವದ ರೇಸ್‌ನಲ್ಲಿ ಕನ್ನಡಿಗ : ರೋಹಿತ್ ಶರ್ಮ ಅವರನ್ನು ನಾಯಕನನ್ನಾಗಿ ನೇಮಿಸಿದಾಗ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಭಾರತ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಅದು ಅಲ್ಲದೆ ಅವರು  ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು.ಇವರು ಈಗಾಗಲೇ 3 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಈ ವೇಳೆ ಭಾರತ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯ ಸೋತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಬುದ್ಧ ಆಟಗಾರನಾಗಿ ರೂಪುಗೊಳ್ಳುತ್ತಿರುವ ರಾಹುಲ್‌ ಕಳೆದ ಬಾರ್ಡರ್‌ ಗಾವಸ್ಕರ್‌ ಸರಣಿಯಲ್ಲಿ ಇತರರ ವೈಫಲ್ಯದ ನಡುವೆಯೂ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ತಂಡದಲ್ಲಿ ಆಪದ್ಬಾಂಧವ ಎಂದೇ ಕರೆಯಲ್ಪಡುವ ರಾಹುಲ್ ಟೆಸ್ಟ್ ನಾಯಕನ ಪಾತ್ರವನ್ನು ಸುಲಭವಾಗಿ ನಿರ್ವಹಿಸಬಲ್ಲರು.

ಇನ್ನೂ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಕೂಡ ನಾಯಕತ್ವದ ರೇಸ್ ನಲ್ಲಿದ್ದಾರೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನ ವೃತ್ತಿ ಜೀವನದುದ್ದಕ್ಕೂ ನಾಯಕತ್ವದ ಗುಣವನ್ನು ಪ್ರದರ್ಶಿಸಿರುವ ಪಂತ್‌ ಭಾರತ ತಂಡವನ್ನು 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟ್ವೆಂಟಿ -20 ಕ್ರಿಕೆಟ್‌ ಸರಣಿಗಳಲ್ಲಿ ಮುನ್ನಡೆಸಿದ್ದರು. ಹೀಗೆ ನಾಲ್ವರು ಪ್ರಮುಖ ಆಟಗಾರರು ಟೆಸ್ಟ್ ತಂಡದ ನಾಯಕತ್ವದ ರೇಸ್ ನಲ್ಲಿದ್ದಾರೆ. ಆದರೆ, ನಾಯಕ ಪಟ್ಟ ಯಾರಿಗೆ ಒಲಿಯುವುದು ಎಂದು ಕಾದು ನೋಡಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!