spot_img
Friday, January 30, 2026
spot_img

ಕಾಶ್ಮೀರ ಘನ ಘೋರ : ಆತ್ಮಾವಲೋಕನಕ್ಕೆ ಇದು ಸೂಕ್ತ ಸಮಯ

ಧಾರ್ಮಿಕ ಸಂಘರ್ಷವನ್ನು ಪ್ರಚೋದಿಸುವ ಬೇರು ನಿರ್ಮೂಲನೆಯಾಗಲಿ !

ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ನರಮೇಧ ಅತ್ಯಂತ ಆಘಾತಕಾರಿ. ಇದೊಂದು ಹೃದಯ ವಿದ್ರಾವಕ ಘಟನೆ. ಪ್ರಕ್ಷುಬ್ಧ ರಾಜ್ಯದಲ್ಲಿ ಇದುವರೆಗೆ ನಡೆದ ಎಲ್ಲಾ ದಾಳಿಗಳಲ್ಲಿ ಇದು ಅತ್ಯಂತ ಭೀಕರವಾಗಿದೆ. ಇದು ಆತ್ಮಾವಲೋಕನಕ್ಕೆ ಅತ್ಯಂತ ಸೂಕ್ತ ಸಮಯವಾಗಿದೆ. ಈ ಬರ್ಬರ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಕ್ಕಷ್ಟೇ ಅಲ್ಲ, ನಮಗೆ ನಾವೇ ಸಂತಾಪ ಸೂಚಿಸಿಕೊಳ್ಳುವಂತ ಸ್ಥಿತಿ ಇದು. ನಮ್ಮ ಮೌನ ಮತ್ತು ಸೌಜನ್ಯ ಉಗ್ರರ ದರ್ಪಕ್ಕೆ ಅನುವು ಮಾಡಿಕೊಡಬಹುದು ಎಂಬುವುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿ ಎಂದರೇ ತಪ್ಪಿಲ್ಲ.

ಈ ಭಯೋತ್ಪಾದಕ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ. ʼಹೇಯ ಕೃತ್ಯ ಎಸಗಿದವರನ್ನು ಬಿಡದೆ ಸಾಯಿಸಬೇಕು ಎಂಬ ಮನಸ್ಥಿತಿ ದೇಶದ ನಾಗರಿಕರಲ್ಲಿ ಹುಟ್ಟಿದೆʼ. ಇಂತಹದ್ದೊಂದು ಭಯೋತ್ಪಾದಕ ದಾಳಿಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯಲ್ಲಿ ಅಭಿಪ್ರಾಯಗಳು ಮೇಲೆದ್ದಿವೆ. ಆದಾಗ್ಯೂ, ಪ್ರಬುದ್ಧ ಭಾರತೀಯರಾಗಿ ನಾವು ದ್ವೇಷ ಪ್ರಚೋದಕರ ಬಲೆಗೆ ಬೀಳುವ ಮೊದಲು ಆಳ-ಅಗಲ ಅರ್ಥೈಸಿಕೊಳ್ಳಬೇಕಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ದೇಶದದಲ್ಲಿ ಧಾರ್ಮಿಕ ಸಂಘರ್ಷಕ್ಕೆ ಕಾರಣಾಗದಂತೆ ನೋಡಿಕೊಳ್ಳುವುದು ಕೂಡ ಸರ್ಕಾರದ ಜವಾಬ್ದಾರಿ. ಉಗ್ರರು ಯಾರೇ ಆದರೂ ಉಗ್ರರೇ ಹೊರತು ಬೇರೆ ಏನಲ್ಲ. ಒಂದು ಧರ್ಮ ಮತ್ತು ಸಿದ್ಧಾಂತದ ಉಳಿವಿಗಾಗಿ ಇನ್ನೊಂದು ಧರ್ಮ ಮತ್ತು ಸಿದ್ಧಾಂತದವರ ವಿರುದ್ಧ ದ್ವೇಷ ಬೆಳೆಸಿಕೊಳ್ಳುವಂತೆ ಮಾಡುವ ಮನಸ್ಥಿತಿಯೇ ಇಂತಹ ದಾಳಿಗೆ ಮೂಲ ಕಾರಣವಾಗುತ್ತಿದೆ. ಭಾರತೀಯರ ಮೇಲೆ ಉಗ್ರರಲ್ಲಿ ಇಂತಹ ದ್ವೇಷ ಹುಟ್ಟುವುದಕ್ಕೆ ಏನು ಕಾರಣ ಎನ್ನುವ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಂಡಾಗ ಬಹುಶಃ ಉತ್ತರ ಸಿಗುತ್ತದೆ ಅನ್ನಿಸುತ್ತದೆ !

ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವುದೇ ಈ ಘಟನೆಯ ಬಳಿಕ ನಮ್ಮ ಮುಂದೆ ಇರುವ ಮೊದಲ ಆಲೋಚನೆ. ಯುದ್ಧ ನಾವು ಸಿದ್ಧವಿಲ್ಲದೆ ಸಾರಲು ಸಾಧ್ಯವಾಗುವಂತಹ ಪಿಕ್ನಿಕ್ ಅಲ್ಲ. ಅದು ಅಂದುಕೊಂಡಷ್ಟು ಸುಲಭವಲ್ಲ. ಅದರ ಮುಂದಿನ ಪರಿಣಾಮವೂ ಬಹಳ ಗಂಭೀರ. 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆದಿತ್ತು. ಡಿಸೆಂಬರ್‌ ೧೩, ೨೦೦೧ರಂದು ಲಷ್ಕರ್‌ ಎ ತೊಯ್ಬಾ ಮತ್ತು ಜೈಶ್‌ ಎ ಮೊಹಮ್ಮದ್‌ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ದೆಹಲಿ ಪೊಲೀಸ್‌ ಸಿಬ್ಬಂದಿ, ಕೇಂದ್ರ ಮೀಸಲು ಪೊಲೀಸ್‌ ಪಡೆಯ ಮಹಿಳಾ ಉದ್ಯೋಗಿ ಹಾಗೂ ಇಬ್ಬರು ಸಂಸತ್‌ ಸಿಬ್ಬಂದಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ಓರ್ವ ನೌಕರ ಹಾಗೂ ಫೋಟೋ ಜರ್ನಲಿಸ್ಟ್‌ ಕೂಡ ಸಾವನ್ನಪ್ಪಿದ್ದರು. ಪ್ರತಿಕಾರದ ಭಾಗವಾಗಿ ಭಾರತ ‘ಪ್ರಕರ್ಮ್’ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪಾಕಿಸ್ತಾನದ ಉಗ್ರರ ಮೇಲೆ ಸಂಪೂರ್ಣ ಯುದ್ಧ ಸಾರುವ ಸಂಕಲ್ಪದೊಂದಿಗೆ ಭಾರತೀಯ ಸೇನೆ ಹಲವು ದಿನಗಳವರೆಗೆ ಹೋರಾಡಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕ ದಾಳಿ ಹೆಚ್ಚಾಗಿದೆ ಎಂಬ ವರದಿಗಳಿವೆ. ಆದಾಗ್ಯೂ ಉಗ್ರರ ಭಯೋತ್ಪಾದಕ ದಾಳಿ ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಕೇಂದ್ರ ಸರ್ಕಾರ ಸುಖಾಸುಮ್ಮನೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ೩೭೦ನೇ ವಿಧಿ ರದ್ದು ಹಾಗೂ ಪುಲ್ವಾಮ ದಾಳಿ ನಂತರ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರವಾದ ಭಯೋತ್ಪಾದಕ ದಾಳಿ ಇದು. ಇದರ  ಹಿಂದೆ ʼಭದ್ರತಾ ಲೋಪʼ ಎಂಬ ವಿಚಾರ ಇದ್ದೇ ಇದೆ. ಇದು ಮುಗಿಯದ ಸಮಸ್ಯೆಯಂತೆಯೇ ನಮ್ಮ ನಡುವೆ ಉಳಿದು ಹೋಗುತ್ತಿದೆ ಎಂದು ಅನ್ನಿಸುತ್ತಿದೆ.

ಹೀಗೆ ಭದ್ರತಾ ಲೋಪದ ಕಾರಣದಿಂದ ಅನೇಕ ನೋವನ್ನು ಈಗಾಗಲೇ ಭಾರತ ಕಂಡಿದೆ. ಇವೆಲ್ಲದಕ್ಕೂ ಸರ್ಕಾರವೇ ಮೂಲ ಕಾರಣ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವತಃ ಭದ್ರತಾ ಲೋಪಕ್ಕೆ ಬಲಿಯಾದರು. ನರಸಿಂಹ ರಾವ್‌ ಪ್ರಧಾನಿಯಾಗಿದ್ದ ಆಡಳಿತಾವಧಿಯಲ್ಲಿ ಭದ್ರತಾ ವೈಫಲ್ಯದಿಂದ ಬಾಬರಿ ಮಸೀದಿ ಧ್ವಂಸವಾಯಿತು, ವಾಜಪೇಯಿ ಅವರು ಪ್ರಧಾನಿಯಾಗಿದ್ದ ಆಡಳಿತಾವಧಿಯಲ್ಲಿ ಭದ್ರತಾ ವೈಫಲ್ಯದಿಂದ ಲಷ್ಕರ್‌ ಎ ತೊಯ್ಬಾ ಮತ್ತು ಜೈಶ್‌ ಎ ಮೊಹಮ್ಮದ್‌ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು, ಮನಮೋಹನ್‌ ಸಿಂಗ್‌  ಪ್ರಧಾನಿಯಾಗಿದ್ದ ಆಡಳಿತಾವಧಿಯಲ್ಲಿ ಮುಂಬಯಿ ಮೇಲೆ ಉಗ್ರರ ದಾಳಿ ಆಯಿತು(ತಾಜ್‌ ಹೋಟೇಲ್‌ ಮೇಲೆ ದಾಳಿ), ಪ್ರಸ್ತುತ ನರೇಂದ್ರ ಮೋದಿ ಪ್ರಧಾನಿಯಾಗಿರುವಾಗ ಪುಲ್ವಾಮ ದಾಳಿ, ಈಗ ಮತ್ತೆ ಪ್ರವಾಸಿಗರ ಸ್ವರ್ಗ ಪಹಲ್ಗಾಮ್‌ ಜಿಲ್ಲೆಯ ಬೈಸರನ್‌ ಎಂಬಲ್ಲಿ ʼಪ್ರವಾಸಿಗರ ಮೇಲೆ ದಾಳಿʼ ನಡೆದಿದೆ. ಹೀಗೆ ಇನ್ನು ಎಷ್ಟೋ ಉಗ್ರರ ದಾಳಿ ಪ್ರಕರಣಗಳು ನಿರಂತರ ನಡೆಯುತ್ತಲೇ ಬಂದಿವೆ. ಭಯೋತ್ಪಾದಕ ಉಗ್ರರ ನೆಲೆಯನ್ನು ಬುಡ ಸಮೇತ ಕಿತ್ತೆಸುವುದಕ್ಕೆ ಸಾಧ್ಯವಾಗದೇ ಇದ್ದರೇ ಇನ್ನು ಮುಂದೆಯೂ ಭದ್ರತಾ ವೈಫಲ್ಯದಿಂದ ಸಾವು ನೋವು ನಡೆಯುತ್ತಲೇ ಸಾಗುತ್ತದೆ ಅನ್ನಿಸುತ್ತದೆ. ಎಲ್ಲಿಯವರೆಗೆ ಧಾರ್ಮಿಕ ಅಸಹಿಷ್ಣತೆ, ಸಾಮಾಜಿಕ ಅಸಮಾನತೆ ಇರಲಿದೆಯೋ ಅಲ್ಲಿಯವರೆಗೆ ಭದ್ರತಾ ವೈಫಲ್ಯ ಒಂದಲ್ಲಾ ಒಂದು ರೀತಿಯಲ್ಲಿ ದೇಶವನ್ನು ಕಾಡುತ್ತಲೇ ಇರುತ್ತದೆ.

ʼಹಿಂದೂ ವರ್ಸಸ್ ಮುಸ್ಲಿಂ ಕಾರ್ಡ್ʼ. ಕಾಶ್ಮೀರದಲ್ಲಿ ಇಂತಹ ಭಯೋತ್ಪಾದಕ ದಾಳಿಗೆ ಹಿಂದೂ ಸಮುದಾಯದ ಮೇಲೆ ಮುಸ್ಲೀಂ ಯುವಕರಲ್ಲಿ ದ್ವೇಷ ಹುಟ್ಟಿಸಿ ಪ್ರಚೋದಿಸಲಾಗುತ್ತಿದೆ. ಪಾಕ್‌ ಉಗ್ರರಿಂದ ಇಂತಹ ದಾಳಿ ನಡೆದಾಗ ಮುಸ್ಲಿಂ ಸಮುದಾಯವನ್ನು ದೂಷಿಸಲು ಹಿಂದೂ ಸಮುದಾಯವನ್ನೂ ಪ್ರಚೋದಿಸಲಾಗುತ್ತಿದೆ. ಪರಸ್ಪರ ಧಾರ್ಮಿಕ ಸಂಘರ್ಷ ಚಾಲ್ತಿಯಲ್ಲಿಡುವುದಕ್ಕೆ ಒಂದು ವ್ಯವಸ್ಥೆಯೇ ಬೃಹದಾಕಾರವಾಗಿ ಬೆಳೆದು ನಿಂತಿದೆ. ಮೊದಲು ಹೀಗೆ ಧಾರ್ಮಿಕವಾಗಿ ಪ್ರಚೋದಿಸುವ ಕೇಂದ್ರಗಳನ್ನು, ಮೂಲ ಸ್ಥಾನಗಳನ್ನು ನಿರ್ಮೂಲನೆ ಮಾಡುವುದಕ್ಕೆ ಸರ್ಕಾರ ಮುಂದಾಗಬೇಕಿದೆ.

ಪ್ರಚೋದನೆ ಮಾಡುವಂತಹ ಹೇಯವಾದ ಕಲ್ಪನೆಯಲ್ಲಿ ವಾದಿಸುವವರು ವಾಸ್ತವವಾಗಿ ದೇಶದ್ರೋಹಿಗಳು. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಎರಡೂ ಅಂತಹ ಹೇಯವಾದ ಕಲ್ಪನೆಯನ್ನು ಪೋಷಿಸುವ ಮೂಲಭೂತವಾದವನ್ನು ತಿರಸ್ಕರಿಸಬೇಕಿದೆ. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಎನ್ನುವ ಪ್ರಬುದ್ಧತೆಯನ್ನು ತೋರಿಸಬೇಕಿದೆ. ಮುಖ್ಯವಾಗಿ ಬೈಸರನ್‌ ನಲ್ಲಿ ನಡೆದ ಹಿಂದೂಗಳನ್ನು ಗುರಿಯಾಗಿಸಿಟ್ಟುಕೊಂಡು ದಾಳಿ ಮಾಡಲಾಗಿದೆ ಎಂದಾದರೇ ಅದಕ್ಕೆ ಮೂಲ ಕಾರಣ ಏನೆನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಉಗ್ರರು ಕೆಲವರನ್ನು ಕೊಲೆ ಮಾಡಿ, ಕೆಲವರನ್ನು ಉಳಿಸಿ ʼಮೋದಿಗೆ ಹೋಗಿ ಹೇಳಿʼ ಎಂದಿದ್ದರೇ ಅದಕ್ಕೆ ಏನು ಕಾರಣ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಜಮ್ಮು ಮತ್ತು ಕಾಶ್ಮೀರದಂತಹ ಪ್ರಕ್ಷುಬ್ದ ರಾಜ್ಯದಲ್ಲಿ ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಸುಖಾಸುಮ್ಮನೆ ಹೇಳುವುದಕ್ಕೆ ಮೊದಲು ಸರ್ಕಾರ ತನ್ನ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡು ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿ. ಪಕ್ಷಾತೀತವಾಗಿ ಈ ಹೇಯ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿಯೂ ರಾಜಕೀಯ ಮಾಡುವ ಅಗತ್ಯವಿಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಸಲ್ಲದು. ಗಡಿಯ ಕಾರಣಕ್ಕೆ, ಸೈದ್ಧಾಂತಿಕ ಕಾರಣಕ್ಕೆ, ಅಂತರಾಷ್ಟ್ರೀಯ ನೀತಿಯ ಕಾರಣಕ್ಕೆ, ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಈವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ನೀತಿಯ ಕಾರಣಕ್ಕೆ ಭಾರತದ ಮೇಲೆ ಈಗಾಗಲೇ ಅನೇಕ ಬಾರಿ ಪಾಕ್ ಉಗ್ರರು ದಾಳಿ ಮಾಡಿದ್ದಾರೆ. ಈಗ ಮತ್ತೊಂದು ದಾಳಿ. ಈಗ ಆತ್ಮಾವಲೋಕನ ಅಗತ್ಯವಾಗಿ ಮಾಡಿಕೊಳ್ಳಬೇಕಿದೆ.

ಇಷ್ಟು ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗೆ ಕಾರಣವಾದ ಭದ್ರತಾ ಲೋಪಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಜವಾಬ್ದಾರಿಯುತ ಸರ್ಕಾರ ತನ್ನ ಲೋಪಗಳನ್ನು ಒಪ್ಪಿಕೊಳ್ಳಬೇಕಿದೆ. ಇನ್ನು ಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿದೆ. ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳು ಮತ್ತು ಚಿಂತಕರ ಚಾವಡಿಗಳು ಒಟ್ಟಾಗಿ ಇಂತಹ ಗಂಭೀರ ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ವಿಧಾನಗಳನ್ನು ಸರ್ಕಾರಕ್ಕೆ ಸೂಚಿಸಬೇಕಿದೆ. ಧರ್ಮ, ಜಾತಿ ಲೆಕ್ಕಿಸದೆ ಇಂತಹ ಹೇಯ ಕೃತ್ಯವನ್ನು ಖಂಡಿಸಬೇಕಿದೆ. ಬಹುಶಃ ಇದರಿಂದಲೇ ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಗಳು ಎದುರಾಗುವುದನ್ನು ತಡೆಗಟ್ಟಬಹುದಾಗಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!