spot_img
Friday, January 30, 2026
spot_img

ಡ್ರಗ್ಸ್ ದಂಧೆ ಸಕ್ರಿಯ : ಸುಲಭದಲ್ಲಿ ಕೈ ಸೇರುತ್ತಿವೆ ಮಾದಕ ಪದಾರ್ಥ

ಮಾದಕ ವಸ್ತು ಸಾಗಾಟದ ಮೂಲ ಪತ್ತೆ ಕಷ್ಟವೇಕೆ!? 

ಜನಪ್ರತಿನಿಧಿ (ವರದಿ) : ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟ ಜಾಲ ಸಕ್ರಿಯವಾಗಿಯೇ ಮುಂದುವರಿ ಯುತ್ತಿರುವುದು ಪ್ರತಿ ನಿತ್ಯ ಗಾಂಜಾ ಸೇವನೆಯ ಪ್ರಕರಣಗಳು ವರದಿಯಾಗುತ್ತಿರುವುದೇ ಸಾಕ್ಷಿ. ಉಡುಪಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವ್ಯಾಪಕವಾಗಿ ಗಾಂಜಾ ಮತ್ತಿತ್ತರ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲವೇ ಇದ್ದು, ಪ್ರಭಾವಿ ವ್ಯಕ್ತಿಗಳು ಈ ಅಕ್ರಮ ಚಟುವಟಿಕೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿರುವುದು ಸ್ಪಷ್ಟ. ಕಳೆದ ಒಂದು ದಶಕದಿಂದ ಕುಂದಾಪುರ ತಾಲೂಕಿನಲ್ಲಿಯೂ ವ್ಯಾಪಕವಾಗಿ ಮಾದಕ ವಸ್ತುಗಳ ಜಾಲ ಇರುವುದು ಪತ್ತೆಯಾಗಿತ್ತು. ಅದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹಲವಾರು ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿತ್ತು. ಆದರೆ ಈ ಅಭಿಯಾನಗಳು ಒಂದಿಷ್ಟು ಜಾಗೃತಿ ಮೂಡಿಸಿದವೆಯೇ ಹೊರತು ಯಾವುದೇ ಪ್ರಯೋಜವಾಗಿಲ್ಲ. ಪ್ರಮುಖವಾಗಿ ಗಾಂಜಾ ಮೊದಲಾದ ಮಾದಕ ಪದಾರ್ಥಗಳು ಯುವ ಸಮುದಾಯದ ಕೈಗೆ ಸಿಗುವಲ್ಲಿ ಪ್ರಮುಖ ಕೊಂಡಿಯಾಗಿರುವ ವ್ಯಕ್ತಿಗಳನ್ನು ಬಂಧಿಸುವ ಕಾರ್ಯ ಇನ್ನೂ ಕೂಡಾ ಆಗಿಲ್ಲ.

ಹಳ್ಳಿಹಳ್ಳಿಗೂ ಗಾಂಜಾ:
ಗಾಂಜಾ ಮೊದಲಾದ ಮಾದಕ ವಸ್ತುಗಳು ಇವತ್ತು ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಸುಲಭವಾಗಿ ಮಾದಕ ವಸ್ತುಗಳು ವ್ಯಸನಿಗಳ ಕೈಸೇರುತ್ತಿದೆ. ಮಾದಕ ವಸ್ತುಗಳ ಸಾಗಾಟ, ಮಾರಾಟ ನಿರಾಂತಕವಾಗಿ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಮಾದಕ ವಸ್ತುಗಳ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಮ್ಮೆ ಇಂತಹ ಮಾಧಕ ಪದಾರ್ಥಗಳಿಗೆ ಬಲಿ ಬಿದ್ದರೆ ಮತ್ತೆ ಅದರಿಂದ ಹೊರಬರಲು ಸಾದ್ಯವೇ ಇಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಆತಂಕ ವಾತಾವರಣ ಇವತ್ತು ನೆಲೆಯಾಗಿದೆ.

ಸೀಸನ್‌ನಲ್ಲಿ ಹೆಚ್ಚು:
ಇದು ಹಬ್ಬಹರಿದಿನ, ಶುಭ ಕಾರ್ಯಗಳ ಋತು. ಕಾರ್ಯಕ್ರಮಗಳ ಸೀಸನ್, ಇಂತಹ ಸಂದರ್ಭದಲ್ಲಿಯೇ ಹೊಸತಾಗಿ ಮಧ್ಯ, ಮಾದಕ ಪದಾರ್ಥಗಳಿಗೆ ಯುವಜನಾಂಗ ಒಳಗಾಗುತ್ತಾರೆ. ಪಾರ್ಟಿ ಮತ್ತಿತ್ತರ ಕಾರ್ಯಕ್ರಮಗಳು ಯುವಸಮುದಾಯವನ್ನು ಬಹುಬೇಗವಾಗಿ ಆಕರ್ಷಿಸಿ ಬಲಿ ಪಡೆಯುತ್ತದೆ. ಮೋಜು ಮಸ್ತಿ ಕುಟುಂಬವನ್ನೆ ನಾಶ ಮಾಡುತ್ತದೆ. ಆದರೂ ಕೂಡಾ ಕ್ಷಣಿಕ ಸುಖ, ಆಕರ್ಷಣೆ, ಕುತೂಹಲ ಯುವ ಸಮುದಾಯವನ್ನು ಹಿಸುಕಿ ಹಾಕುತ್ತಿದೆ. ಇದಕ್ಕೆಲ್ಲ ಕಾರಣ ಸುಲಭವಾಗಿ ನಿಷೇಧಿತ ಪದಾರ್ಥಗಳು ವಾಮಮಾರ್ಗದ ಮೂಲಕ ಸರಬರಾಜು ಆಗುತ್ತಿರುವುದು. ಮಾದಕ ವಸ್ತುಗಳ ಕಳ್ಳಸಾಗಾಣಿಕೆ, ಮಾರಾಟ ದಂಧೆ ಲಗಾಮು ಇಲ್ಲದೆ ನಡೆಯುತ್ತಿರುವುದೇ ಕಾರಣವಾಗಿದೆ. ಕಾನೂನು ವ್ಯವಸ್ಥೆ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಇಂತಹ ಚಟುವಟಿಕೆಗಳು ನಿರಂತರವಾಗಿ ನೆಡೆಯುವಂತಾಗಿದೆ.

ಸ್ವಾಸ್ಥ್ಯ ಕಳೆದುಕೊಳ್ಳುತ್ತಿರುವ ವ್ಯಸನಿಗಳು:
ಗಾಂಜಾ ಮತ್ತಿತ್ತರ ಮಾದಕ ವಸ್ತುಗಳಿಗೆ ಬಲಿಯಾದವರ ಸ್ಥಿತಿ ನಿತ್ಯವೂ ನೋಡಬಹುದಾಗಿದೆ. ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡವರಂತೆ ವರ್ತಿಸುವ ಮಾದಕ ವ್ಯಸನಿಗಳು ಏನೇ ಹೇಯ, ಅಮಾನವೀಯ ಕೃತ್ಯ ಮಾಡಲೂ ಕೂಡಾ ಹಿಂಜರಿಯುವುದಿಲ್ಲ. ಕುಂದಾಪುರ ಪೇಟೆಯಲ್ಲಿಯೇ ಕೂಡಾ ಮಾಧಕ ವ್ಯಸನಿಗಳ ದಾಂಧಲೆ ಕಾಣಬಹುದಾಗಿದೆ. ಇತ್ತೀಚೆಗೆ ವಕ್ವಾಡಿಯಲ್ಲಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಹೀಗೆ ಮಾದಕ ವ್ಯಸನದಿಂದ ನಿರಂತರವಾಗಿ ಸಮಾಜದ ಸ್ವಾಸಥ್ಯ ಹದಗೆಡುತ್ತಿದ್ದರೂ ಕೂಡಾ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳದೆ ಇರುವುದು, ರಾಜಕೀಯ ಒತ್ತಡಗಳು ಬರುವುದು ಇಂಥಹ ಸಮಾಜಘಾತುಕ ಕೃತ್ಯಗಳು ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಗಾಂಜಾದಂತಹ ಮಾದಕ ವಸ್ತುಗಳಿಗೆ ದಾಸರಾದವರು ಯಾವ ಸ್ಥಿತಿಯಲ್ಲಿ ಇರುತ್ತಾರೆ ಎನ್ನುವುದು ಕಷ್ಟ. ಹುಚ್ಚು ನಾಯಿಗಿಂತಲೂ ಕಡೆಯಾಗಿರುವ ಅವರ ಮನಸ್ಥೈರ್ಯ ಆತಂಕಕಾರಿ. ಆಯಕಟ್ಟಿನ ಪ್ರದೇಶಗಳು, ನಿರ್ಜನ ಪ್ರದೇಶಗಳಲ್ಲಿ ಮಾದಕ ವ್ಯಸನಿಗಳು ಇರುವಾಗ ಮಕ್ಕಳು, ಮಹಿಳೆಯರು ಸಂಚರಿಸುವುದು ಕೂಡಾ ಅಪಾಯಕಾರಿ.

ಮಾದಕ ವ್ಯಸನಿಗಳಿಗೆ ಭಯವಿಲ್ಲ:
ಮಾದಕ ವಸ್ತುಗಳು ಸುಲಭವಾಗಿ ವ್ಯಸನಿಗಳ ಕೈಗೆ ಸಿಗುವುದರಿಂದ ಮಾದಕವಸ್ತುಗಳ ವ್ಯಸನಕ್ಕೆ ಒಳಗಾದವರಿಗೆ ಭಯ ನಿರ್ಲಜ್ಜರಾಗಿ ತಿರಗಾಡುತ್ತಿದ್ದಾರೆ. ಅಲ್ಲಲ್ಲಿ ಪೊಲೀಸರು ಮಾಧಕ ವ್ಯಸನಿಗಳನ್ನು ಬಂಧಿಸಿ ಮಾದಕ ವ್ಯಸನ ಸೇವಿಸಿರುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ. ತಜ್ಞ ವೈದ್ಯರು ಪರೀಕ್ಷೆ ಮೂಲಕ ಮಾದಕ ವಸ್ತು ಸೇವಿಸಿರುವುದು ದೃಢ ಪಡಿಸಿರುವುದ ಬಳಿಕವೂ ಅವರ ಮೇಲೆ ಸೂಕ್ತ ಕ್ರಮವಾಗದೆ ಇರುವುದು ಆ ವ್ಯಸನಿಗಳು ಮರಳಿ ಮಾದಕ ವಸ್ತುಗಳ ಸೇವನೆ ಮುಂದುವರಿಸುತ್ತಿದ್ದಾರೆ. ಮಾದಕ ವ್ಯಸನಿಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಆದರೆ ಅದು ಅಷ್ಟೊಂದು ಪರಿಣಾಮ ಬೀರುವಂತೆ ಕಂಡು ಬರುತ್ತಿಲ್ಲ.

ಬೇರುಗಳನ್ನೇ ಕೀಳಬೇಕು :
ಮಾದಕ ವಸ್ತುಗಳ ಸರಬರಾಜು ಮಾಡುವ ಮೂಲ ಕೊಂಡಿಗಳನ್ನೇ ಕಂಡು ಹಿಡಿದು ಕಾನೂನು ಪ್ರಕಾರ ಶಿಕ್ಷೆ ವಿಧಿಸುವ ಕೆಲಸ ಪೊಲೀಸರು ಮಾಡಬೇಕು. ಜಿಲ್ಲೆಯೊಳಗೆ ಪ್ರವೇಶವಾಗುವ ಮಾದಕ ಪದಾರ್ಥಗಳ ಮೂಲವನ್ನು ನಿರ್ದಾಕ್ಷಿಣ್ಯವಾಗಿ ಪತ್ತೆ ಹಚ್ಚಬೇಕು. ಅದರಲ್ಲಿ ಎಷ್ಟೇ ಪ್ರಭಾವಿಗಳು ಇದ್ದರೂ ಕೂಡಾ ಸಮಾಜದ ಹಿತದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಲೇ ಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರು ಧ್ವನಿ ಎತ್ತಬೇಕಾಗಿದೆ.

-ನಾಗರಾಜ್‌ ವಂಡ್ಸೆ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!