spot_img
Sunday, February 15, 2026
spot_img

ಗಂಗೊಳ್ಳಿ ಗ್ರಾಮಸಭೆ| ಗ್ರಾಮಸಭೆ ನಿರ್ಣಯಗಳಿಗೆ ಇಲಾಖಾಧಿಕಾರಿಗಳ ಸ್ಪಂದನೆ ಇಲ್ಲದಿದ್ದರೆ ಗ್ರಾಮಸಭೆ ಏಕೆ? ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಗ್ರಾಮಸ್ಥರು

ಗಂಗೊಳ್ಳಿ : ಗ್ರಾಮ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳಿಗೆ ಯಾವುದೇ ಇಲಾಖೆ ಅಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಮಸಭೆ ಮಾಡುವ ಉದ್ದೇಶವಾದರೂ ಏನು?, ಗ್ರಾಮ ಪಂಚಾಯತ್ ಪತ್ರಗಳಿಗೆ ಉತ್ತರಿಸುವ ಕನಿಷ್ಠ ಸೌಜನ್ಯ ಕೂಡ ಅಧಿಕಾರಿಗಳಿಗೆ ಇಲ್ಲವಾಗಿದೆ. ಗ್ರಾಮಸಭೆಗಳಿಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಗ್ರಾಮಸಭೆ ನಿರ್ಣಯಗಳು ಅನುಷ್ಠಾನಗೊಳ್ಳುತ್ತಿಲ್ಲ. ಕಾಟಾಚರಕ್ಕೆ ಗ್ರಾಮಸಭೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಸ್ಥಳೀಯಾಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಮಂಗಳವಾರ ಜರಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ೨೦೨೪-೨೫ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸಭೆಯ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮಸಭೆ ಹಾಗೂ ವಾರ್ಡ್ ಸಭೆ ಬಗ್ಗೆ ಪ್ರಚಾರ ನಡೆಸಿಲ್ಲ. ಜಿಪಂ. ಇಂಜಿನಿಯರಿಂಗ್, ಲೋಕೋಪಯೋಗಿ, ಬಂದರು ಇಲಾಖೆ ಅಧಿಕಾರಿಗಳು ನಿರಂತರವಗಿ ಗ್ರಾಮಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಈ ಹಿಂದಿನ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯಗಳು ಕಡತದಲ್ಲೇ ಉಳಿದುಕೊಳ್ಳುತ್ತಿದ್ದು, ಯಾವುದೇ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ನವೀನ್ ಗಂಗೊಳ್ಳಿ, ಯಶವಂತ ಗಂಗೊಳ್ಳಿ, ರಾಘವೇಂದ್ರ ಗಾಣಿಗ, ಮೋಹನ ಖಾರ್ವಿ, ವೆಂಕಟೇಶ ಖಾರ್ವಿ ಆರೋಪಿಸಿದರು.

ಸಭೆಗೆ ಗೈರುಹಾಜರಾದ ಇಲಾಖೆ ಅಧಿಕಾರಿಗಳನ್ನು ಕರೆಸಿ ಸಾರ್ವಜನಿಕವಾಗಿ ಸಂಬಂಧಪಟ್ಟ ಇಲಾಖೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ವಿಶೇಷ ಸಭೆ ನಡೆಸಬೇಕು ಎಂದು ರಾಘವೇಂದ್ರ ಪೈ ಒತ್ತಾಯಿಸಿ, ಈ ಬಗ್ಗೆ ನಿರ್ಣಯಕೈಗೊಳ್ಳಬೇಕೆಂದರು. ಗಂಗೊಳ್ಳಿ ಬಂದರು ಜೆಟ್ಟಿ ಕುಸಿದು ಮೂರು ವರ್ಷ ಕಳೆದಿದ್ದು, ಪತ್ರಿಕೆಗಳಲ್ಲಿ ನಿರಂತರವಾಗಿ ಈ ಬಗ್ಗೆ ಸುದ್ಧಿಗಳು ಪ್ರಕಟಗೊಳ್ಳುತ್ತಿದೆ. ಗಂಗೊಳ್ಳಿ ಬಂದರನ್ನು ಸರಕಾರ ನಿರ್ಲಕ್ಷಿಸುತ್ತಿದೆ. ಎಲ್ಲಾ ಬಂದರುಗಳು ಅಭಿವೃದ್ಧಿ ಹೊಂದುತ್ತಿದ್ದರೂ ಗಂಗೊಳ್ಳಿ ಬಂದರು ಅಭಿವೃದ್ಧಿ ಶೂನ್ಯ. ಗಂಗೊಳ್ಳಿ ಬಂದರು ಜೆಟ್ಟಿ ದುರಸ್ಥಿ ಯಾವಾಗ ಎಂದು ಯಶವಂತ ಗಂಗೊಳ್ಳಿ, ವೆಂಕಟೇಶ ಖಾರ್ವಿ ಮತ್ತಿತರರು ಪ್ರಶ್ನಿಸಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿ ಕೊರತೆ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಸೆಳೆದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂಬ ಆಗ್ರಹ ಕೇಳಿ ಬಂದಿತು. ಗಂಗೊಳ್ಳಿ ಮೆಸ್ಕಾಂ ಕಛೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಸಮಸ್ಯೆಗಳಾಗುತ್ತಿದ್ದು, ಸಾಕಷ್ಟು ಸಿಬ್ಬಂದಿಗಳನ್ನು ನೇಮಿಸಬೇಕು ಮತ್ತು ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರವನ್ನು ೨೪*೭ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಕಳೆದ ಅನೇಕ ವರ್ಷಗಳಿಂದ ಗಂಗೊಳ್ಳಿ ಗ್ರಾಮದ ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸುತ್ತಾ ಬಂದಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಕೆರೆಗಳು ನಾಶವಾಗುತ್ತಿದೆ ಎಂದು ನವೀನ್ ಗಂಗೊಳ್ಳಿ ಆಪಾದಿಸಿದರೆ, ಗಂಗೊಳ್ಳಿ ಮಲ್ಯರಬೆಟ್ಟು ಪ್ರದೇಶದಲ್ಲಿ ಜೆಸಿಬಿಯಿಂದ ಕಸವನ್ನು ತೆಗೆದು ಸಮೀಪದಲ್ಲಿ ಹಾಕಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು. ಗಂಗೊಳ್ಳಿಯಲ್ಲಿರುವ ವಲಸೆ ಕಾರ್ಮಿಕರ ವಿವರಗಳನ್ನು ಸಂಗ್ರಹಿಸಬೇಕು, ಪಶ್ಚಿಮ ಬಂಗಾಲ, ಒರಿಸ್ಸಾ ಮೊದಲಾದ ಕಡೆಗಳಿಂದ ಬಂದಿರುವ ಕೂಲಿ ಕಾರ್ಮಿಕರಿದ್ದು, ಇವರ ಸಮಗ್ರ ವಿವರಗಳನ್ನು ಸಂಗ್ರಹಿಸಬೇಕು ಎಂದು ನವೀನ್ ಗಂಗೊಳ್ಳಿ, ಯಶವಂತ ಗಂಗೊಳ್ಳಿ, ರಾಘವೇಂದ್ರ ಗಾಣಿಗ ಆಗ್ರಹಿಸಿದರು.

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡುವಾಗ ಸಣ್ಣ ಮಕ್ಕಳ ಆದಾಯ ಪ್ರಮಾಣ ಪತ್ರ ಕೇಳುತ್ತಿರುವುದು ಸರಿಯಲ್ಲ. ಈ ನಿಯಮವನ್ನು ತೆಗೆದುಹಾಕಿ ಹೆಸರು ಸೇರ್ಪಡೆ ಪ್ರಕ್ರಿಯೆಯನ್ನು ಸರಳೀಕರಣ ಮಾಡಬೇಕು. ಆಧಾರ ಕಾರ್ಡ್ ನವೀಕರಣ ಸಂದರ್ಭ ಕೈಬರಹದ ಜನನ ಪ್ರಮಾಣ ಪತ್ರವನ್ನು ತಿರಸ್ಕರಿಸಲಾಗುತ್ತಿದ್ದು, ಹೊಸ ನಮೂನೆಯಲ್ಲಿ ಜನನ ಪ್ರಮಾಣ ಪತ್ರ ಪಡೆಯಲು ತಾಲೂಕು ಕಛೇರಿಗೆ ಅಲೆದಾಡಬೇಕಾಗಿದೆ. ಹೀಗಾಗಿ ಹೊಸ ನಮೂನೆಯಲ್ಲಿ ಜನನ ಪ್ರಮಾಣ ಪತ್ರವನ್ನು ಪಂಚಾಯತ್ ಮಟ್ಟದಲ್ಲಿ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಬಿ.ರಾಘವೇಂದ್ರ ಪೈ ಮನವಿ ಮಾಡಿದರು.

ಗಂಗೊಳ್ಳಿ ಪರಿಸರದಲ್ಲಿ ಜಾನುವಾರು ಕಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನವೀನ್ ಗಂಗೊಳ್ಳಿ ಮತ್ತು ಯಶವಂತ ಗಂಗೊಳ್ಳಿ ಆಗ್ರಹಿಸಿದರೆ, ಗಂಗೊಳ್ಳಿ ರಥಬೀದಿ ಪರಿಸರದಲ್ಲಿ ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಜಾನುವಾರು ಕಳ್ಳತನಕ್ಕೆ ವಿಫಲ ಸಂಚು ನಡೆದಿದೆ. ರಥಬೀದಿ ಪರಿಸರದಲ್ಲಿ ರಾತ್ರಿ ವೇಳೆ ಮತ್ತು ಬೆಳಿಗ್ಗೆ ಅನಧಿಕೃತವಾಗಿ ವಾಹನ ನಿಲುಗಡೆ ಮಾಡುತ್ತಿದ್ದು, ರಥಬೀದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಈ ಹಿಂದಿನ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಈ ನಿರ್ಣಯವನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿ ರಥಬೀದಿ ಪರಿಸರವನ್ನು ವಾಹನ ನಿಲುಗಡೆರಹಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಬಿ.ರಾಘವೇಂದ್ರ ಪೈ ಮನವಿ ಮಾಡಿದರು.

ದೇವಸ್ಥಾನ ಮತ್ತು ಧಾರ್ಮಿಕ ಕೇಂದ್ರದ ವಠಾರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಬಾರದು ಎಂದು ನವೀನ್ ಗಂಗೊಳ್ಳಿ ಮತ್ತು ರಾಘವೇಂದ್ರ ಗಾಣಿಗ ಒತ್ತಾಯಿಸಿದರು. ಗಂಗೊಳ್ಳಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ಮಾರ್ಜಿನ್ ಉಲ್ಲಂಘಿಸಿ ಅತಿಕ್ರಮಣ ನಡೆಯುತ್ತಿದ್ದರೂ ಪಿಡಬ್ಲ್ಯುಡಿ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ನವೀನ್ ಗಂಗೊಳ್ಳಿ ಆಗ್ರಹಿಸಿದರು.

ದಾಕುಹಿತ್ಲು ಚರಂಡಿಗೆ ಶೌಚಾಲಯದ ಪೈಪ್ ನೀಡಿ ತ್ಯಾಜ್ಯವನ್ನು ಚರಂಡಿಗೆ ಬಿಡಲಾಗುತ್ತಿದೆ ಎಂದು ಮೋಹನ ಖಾರ್ವಿ ಆರೋಪಿಸಿದರು. ಖಾರ್ವಿಕೇರಿಯಲ್ಲಿ ರಸ್ತೆ ಮೇಲೆ ಮಣ್ಣ ಹಾಕಿ ರಸ್ತೆಯನ್ನು ಮುಚ್ಚಿದ್ದು, ವಾಹನ ಸಂಚಾರಕ್ಕೆ ಬೇರೆ ವ್ಯವಸ್ಥೆ ಮಾಡಿಕೊಡಬೇಕೆಂಬ ಆಗ್ರಹ ಕೇಳಿ ಬಂದಿತು. ಕಳಪೆ ಕಾಮಗಾರಿಗಳಿಗೆ ಮತ್ತು ಆಕ್ಷೇಪ ಇದ್ದ ಕಾಮಗಾರಿಗಳಿಗೆ ಹಣ ಪಾವತಿ ಮಾಡಲಾಗಿದೆ ಜೆಜೆ‌ಎಂ ಕಾಮಗಾರಿ ಸಂದರ್ಭ ರಸ್ತೆ ಅಗೆದ ಕಡೆಗಳಲ್ಲಿ ಸರಿಯಾಗಿ ಹೊಂಡ ಮುಚ್ಚಿಲ್ಲ. ಹಲವು ಮನೆಗಳಿಗೆ ನಳ್ಳಿ ಹಾಗೂ ಮೀಟರ್ ಜೋಡಿಸಿದ್ದರೂ, ನೀರಿನ ಸಂಪರ್ಕ ನೀಡಿಲ್ಲ ಎಂದು ಎಂದು ರಾಘವೇಂದ್ರ ಪೈ ಆರೋಪಿಸಿದರು.

ಗಂಗೊಳ್ಳಿಯ ಎಚ್‌ಪಿ ಗ್ಯಾಸ್ ಏಜನ್ಸಿಯವರು ಪ್ರತಿಯೊಂದು ಮನೆ ಮನೆಗೆ ಹೋಗಿ ಇನ್ಸುರೆನ್ಸ್ ಹಾಗೂ ತಪಾಸಣೆ ನೆಪದಲ್ಲಿ ಸಾವಿರಾರು ರೂ. ಹಣ ವಸೂಲಿ ಮಾಡಿದ್ದಾರೆ ಅಲ್ಲದೆ ಸಿಲಿಂಡರ್ ವಿತರಿಸುವಾಗ ಹೆಚ್ಚುವರಿಯಾಗಿ ೩೦ ರೂ. ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ನವೀನ್ ಗಂಗೊಳ್ಳಿ, ರಾಘವೇಂದ್ರ ಗಾಣಿಗ, ಮೋಹನ ಖಾರ್ವಿ ಮತ್ತಿತರರು ಮನವಿ ಮಾಡಿದರು.

ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಇಲಾಖೆಯ ಮಹಾದೇವ ಎನ್.ಎಸ್. ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ, ಅಂಗನವಾಡಿ ಮೇಲ್ವಿಚಾರಕಿ ರೇಖಾ, ಗ್ರಾಮ ಆಡಳಿತ ಅಧಿಕಾರಿ ಶಿವರಾಯ, ಮೆಸ್ಕಾಂ ಗಂಗೊಳ್ಳಿ ಶಾಖಾಧಿಕಾರಿ ದಿನೇಶ ಶೆಟ್ಟಿ ಮಾಹಿತಿ ನೀಡಿದರು. ಗ್ರಾಪಂ. ಅಭಿವೃದ್ಧಿ ಅಧಿಕಾರಿ ಶೋಭಾ, ಕಾರ್ಯದರ್ಶಿ ಅನೂಪ್ ಶೇಟ್, ಉಪಾಧ್ಯಕ್ಷ ತಬ್ರೇಜ್, ಗ್ರಾಪಂ ಸದಸ್ಯರು, ಬಿ‌ಆರ್‌ಪಿ ಪ್ರದೀಪ ಕುಮಾರ್ ಶೆಟ್ಟಿ, ಸಿಡಬ್ಲ್ಯುಸಿ ಸಂಸ್ಥೆಯ ಗಣೇಶ ಶೆಟ್ಟಿ, ಕೃಷಿ ಇಲಾಖೆಯ ಗಜೇಂದ್ರ, ಎ‌ಎಸ್‌ಐ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ ಅನುಪಾಲನಾ ವರದಿ ವಾಚಿಸಿದರು. ಸಂದೀಪ್ ಖಾರ್ವಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!