spot_img
Friday, April 25, 2025
spot_img

ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ : ಏಪ್ರಿಲ್‌ನಲ್ಲಿ AAIನಿಂದ ಸ್ಥಳ ಪರಿಶೀಲನೆ : ಎಂ ಬಿ ಪಾಟೀಲ್

ಜನಪ್ರತಿನಿಧಿ (ಬೆಂಗಳೂರು) : ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಚುರುಕುಗೊಂಡಿದ್ದು, ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಬಹುಶಿಸ್ತೀಯ ತಂಡ ಏಪ್ರಿಲ್‌ನಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರು ಶನಿವಾರ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳ ಕಾರ್ಯಸಾಧ್ಯತಾ ಅಧ್ಯಯನ ಮಾಡಲು ಎಎಐ ತಂಡ ಏಪ್ರಿಲ್ 7 ರಿಂದ 9 ರ ನಡುವೆ ಬೆಂಗಳೂರಿಗೆ ಭೇಟಿ ನೀಡಲಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಎಸ್‌ಐಐಡಿಸಿ) ಈ ಅಧ್ಯಯನಕ್ಕಾಗಿ ಈಗಾಗಲೇ ಎಎಐಗೆ 1.21 ಕೋಟಿ ರೂ. ಶುಲ್ಕ ಪಾವತಿಸಿದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.

ಕನಕಪುರ ರಸ್ತೆಯಲ್ಲಿ ಎರಡು ಸ್ಥಳ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಸ್ಥಳವನ್ನು ಪ್ರಸ್ತಾವಿತ ವಿಮಾನ ನಿಲ್ದಾಣಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

“ನಾವು ಈ ತಿಂಗಳ 5 ರಂದು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ. ಉದ್ದೇಶಿತ ವಿಮಾನ ನಿಲ್ದಾಣಕ್ಕಾಗಿ ಅಂತಿಮ ಶಾರ್ಟ್‌ಲಿಸ್ಟ್ ಮಾಡಿದ ಸ್ಥಳಗಳ ಪರಿಶೀಲನೆಗೆ ವಿನಂತಿಸಿದ್ದೇವೆ. ಹೀಗಾಗಿ ಎಎಐ ತಂಡ ಬೆಂಗಳೂರಿಗೆ ಭೇಟಿ ನೀಡುತ್ತದೆ” ಎಂದು ಅವರು ಹೇಳಿದರು.

ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

“ಗುರುತಿಸಲಾದ ಸ್ಥಳಗಳ ಕಂದಾಯ ನಕ್ಷೆಗಳು, 10 ವರ್ಷಗಳ ಹವಾಮಾನ ವರದಿಗಳು, ಸ್ಥಳಗಳ ಭೌಗೋಳಿಕ ವೈಶಿಷ್ಟ್ಯಗಳ ವಿವರವಾದ ಚಿತ್ರಗಳು, ಭಾರತ ಸರ್ವೇಕ್ಷಣಾ ಇಲಾಖೆಯ ನಕ್ಷೆಗಳು ಮತ್ತು ಪ್ರಸ್ತಾವಿತ ವಿಮಾನ ನಿಲ್ದಾಣದ ಕಾರ್ಯಾಚರಣೆಯ ವಿವರಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ನಾವು ಈಗಾಗಲೇ ಸಿದ್ಧಪಡಿಸಿದ್ದೇವೆ” ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈಗ ಇರುವ ವಿಮಾನ ನಿಲ್ದಾಣದ ಮೇಲೆ ಅತೀವ ಒತ್ತಡವಿದೆ. ಇನ್ನೊಂದೆಡೆಯಲ್ಲಿ, 2033ಕ್ಕೆ 150 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಹೊಂದುವಂತಿಲ್ಲ ಎನ್ನುವ ಷರತ್ತು ಕೊನೆಗೊಳ್ಳಲಿದೆ. ಇವೆಲ್ಲವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಎರಡನೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಿನಿಂದಲೇ ಮುಂದಡಿ ಇಡಲಾಗುತ್ತಿದೆ. ಹೀಗೆಯೇ ಮುಂದುವರಿದರೆ 2033ರ ಹೊತ್ತಿಗೆ ಅದು ಬಳಕೆಗೆ ಸಿದ್ಧವಾಗಬಹುದು ಎಂದು ಸಚಿವರು ಹೇಳಿದ್ದಾರೆ.

ಕೆಲವರು ತುಮಕೂರಿನ ಶಿರಾ ಸಮೀಪ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಈ ಕಾರ್ಯಬೇಡಿಕೆ ಸಾಧುವಲ್ಲ. ಶಿರಾದಲ್ಲಿ ವಿಮಾನ ನಿಲ್ದಾಣ ಮಾಡಿದರೆ ಶಿವಮೊಗ್ಗ, ವಿಜಯಪುರದಲ್ಲಿ ಇರುವಂತೆ ಅದೇನಿದ್ದರೂ ಜಿಲ್ಲಾ ಮಟ್ಟದ್ದಾಗುತ್ತದೆ ಅಷ್ಟೆ. ಬೆಂಗಳೂರಿನ ಜನರಿಗೆ‌ ಅನುಕೂಲ ಆಗಬೇಕಾದರೆ ಅದು ಬೆಂಗಳೂರಿಗೆ ಸನಿಹದಲ್ಲೇ ಇರಬೇಕು. ಆಗ ಮಾತ್ರ ಹೂಡಿಕೆದಾರ ಸಂಸ್ಥೆಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬರುತ್ತಾರೆ. ಇಲ್ಲದಿದ್ಧರೆ ಯೋಜನೆಯೇ ಕಾರ್ಯಸಾಧುವಾಗುವುದಿಲ್ಲ’ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!