spot_img
Monday, March 16, 2026
spot_img

ಜೀವ – ಜೀವನ ನೀಡಿದ ಓ ಹೆಣ್ಣೇ ನಿನಗ್ಯಾರು ಸಾಟಿ?

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಎಲ್ಲಿ ಹೆಣ್ಣನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸಹನೆ, ಕರುಣೆ, ತ್ಯಾಗ, ಮಮತೆ, ವಾತ್ಸಲ್ಯ, ಆರೈಕೆ, ಸತ್ಕಾರ, ಸಾಂತ್ವನ, ಸ್ನೇಹ ಮತ್ತು ಪ್ರೀತಿಗೆ ಮತ್ತೊಂದು ಹೆಸರೇ ಹೆಣ್ಣು.

ಮಗಳಾಗಿ, ಸೊಸೆಯಾಗಿ, ತಾಯಿಯಾಗಿ, ಅತ್ತೆಯಾಗಿ, ಮನೆ ಒಡತಿಯಾಗಿ ಎಲ್ಲರ ಬೇಕು ಬೇಡಗಳಿಗೆ ದಿನದ 24 ಗಂಟೆ ತನ್ನನ್ನು ತಾನು ಸಮರ್ಪಿಸಿಕೊಂಡವಳು. ಬದುಕಿನ ಕೊನೆಯ ಗಳಿಗೆವರೆಗೂ ದಣಿವರಿಯದೆ ನೋವುಗಳನ್ನು ನಲಿವಾಗಿಸುವ ಕ್ಷಮಯಾಧರಿತ್ರಿ ಈ ಹೆಣ್ಣು.

ಅವಳ ಬಾಲ್ಯ ಉತ್ಸಾಹದಿಂದ ತುಂಬಿತ್ತು. ಏನನ್ನೋ ಸಾಧಿಸಬೇಕೆಂಬ ಕನಸುಗಳು ಕಣ್ಣಲ್ಲಿ ಹೊಳೆಯುತ್ತಿತ್ತು; ಗಂಡು ಹೆಣ್ಣು ಎಂಬ ಯಾವುದೇ ಭೇದ ಭಾವ ಇರಲಿಲ್ಲ. ಆದರೆ ಕಾಲ ಸರಿದಂತೆ ಆ ಸುಖಮಯ ಜೀವನ ಮಾಯವಾಯಿತು. ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆ ಲಿಂಗ ಭೇದವಿಲ್ಲದ ಸ್ನೇಹ ದೂರವಾಯಿತು. ಒಬ್ಬಂಟಿಯಾಗಿ ಹೊರ ಹೋಗುವ ಸ್ವಾತಂತ್ರ್ಯ ಇಲ್ಲದಂತಾಯಿತು. ಸಮಾಜದ ಸಂಪ್ರದಾಯದ ಸಂಕೋಲೆಗಳು ಒಂದೊಂದಾಗಿ ಅವಳ ಕೈಗಳನ್ನು ಬಿಗಿಯುತ್ತಾ ಹೋದವು. ಯೌವ್ವನಕ್ಕೆ ಬಂದಾಗ ಅವಳ ಮಾನಸಿಕ ದೈಹಿಕ ಸ್ಥಿತಿಗತಿಗಳು ಬದಲಾದವು. ಜೊತೆಗೆ ಅವಳ ಮನೆಯ ಮನೆತನದ ಮರ್ಯಾದೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಯಿತು. 18 ವರ್ಷ ತುಂಬುತ್ತಿದ್ದ ಹಾಗೆ ಮಗಳ ಮದುವೆ ಯಾವಾಗ? ಎಂಬ ಸಮಾಜದ ಪ್ರಶ್ನೆಗಳು ಪೋಷಕರನ್ನು ಕಾಡುತ್ತವೆ. ಒಳ್ಳೆಯ ಶ್ರೀಮಂತ ಹುಡುಗ ಸಿಕ್ಕ ತಕ್ಷಣ ಮದುವೆ ಮಾಡುವ ಯೋಚನೆ ಅವರದು. ಕುಟುಂಬದ ಸಂತೋಷಕ್ಕೋಸ್ಕರ ಭಾವನಾತ್ಮಕವಾಗಿ ಅವಳು ಒಪ್ಪಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ವಿದ್ಯಾಭ್ಯಾಸ, ಉದ್ಯೋಗದ ಕುರಿತು ಅವಳು ಕಂಡ ಕನಸೆಲ್ಲ ನುಚ್ಚುನೂರಾಗುತ್ತದೆ. ನಂತರ ಗಂಡ, ಮನೆ – ಮಕ್ಕಳು ಎಂದು ಅವರ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಾ ಅದರಲ್ಲಿಯೇ ಖುಷಿ ಕಾಣುತ್ತಾ ತನ್ನ ಇಡೀ ಜೀವನವನ್ನು ಅವರಿಗಾಗಿಯೇ ಮುಡಿಪಾಗಿಡುತ್ತಾಳೆ. ಒಂದು ಹುಡುಗಿಗೆ ನೀನು ಮುಂದೆ ಏನಾಗುತ್ತೀಯಾ? ಎಂದು ಕೇಳಿದರೆ ಅವಳು ಶಿಕ್ಷಕಿ, ಡಾಕ್ಟರ್, ಇಂಜಿನಿಯರ್, ಅಕೌಂಟೆಂಟ್, ಸಿಎ ಹೀಗೆ ಹೇಳುತ್ತಾಳೆಯೇ ಹೊರತು ಶ್ರೀಮಂತ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಹೇಳುವುದಿಲ್ಲ. ದುಡಿಯುವ ವಯಸ್ಸಿಗೆ ಬಂದ ಗಂಡು ದುಡ್ಡಿಗಾಗಿ ತಂದೆಯಲ್ಲಿ ಕೈ ಚಾಚಲು ಹಿಂದೇಟು ಹಾಕುತ್ತಾನೆ. ಆದರೆ ಹೆಣ್ಣು ಮೊದಲು ತಂದೆ, ನಂತರ ಗಂಡ, ವೃದ್ಧಾಪ್ಯದಲ್ಲಿ ಮಕ್ಕಳು- ಹೀಗೆ ಹಣಕ್ಕಾಗಿ ಜೀವನವಿಡೀ ಕೈಚಾಚಿ ಬದುಕುವಂತೆ ಮಾಡುವುದು ಎಷ್ಟು ಸರಿ? ಒಮ್ಮೆ ಯೋಚಿಸಿ…

ತನ್ನ ಇಡೀ ಜೀವನವನ್ನು ಇತರರಿಗಾಗಿ ಸಮರ್ಪಿಸುವ ಈ ಹೆಣ್ಣಿಗೆ ಸಮಾಜದಲ್ಲಿ ದೊರೆಯುತ್ತಿರುವುದಾದರೂ ಏನು? ಸಮಾಜ ಎಷ್ಟೇ ಮುಂದುವರಿದಿದೆ ಎಂದು ಹೇಳಿದರೂ ಸಹ ಈಗಲೂ ವರದಕ್ಷಿಣೆ, ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ, ಅಸಮಾನತೆ, ಅನ್ಯಾಯ, ನಿಂದನೆ, ಅವಮಾನ, ಅತ್ಯಾಚಾರಗಳು ಅವಳನ್ನು ಬೆಂಬಿಡದೆ ಕಾಡುತ್ತಲಿದೆ. ಇದೇನಾ ನಮ್ಮ ಸಮಾಜ?

ಹೆಣ್ಣೆಂದಾಗ ಮೊದಲಿಗೆ ನೆನಪಾಗುವುದು ತಾಯಿ. ಅಮ್ಮನೆಂದು ಕರೆಸಿಕೊಳ್ಳಲು ಹಾತೊರೆಯುವ ಅವಳು ಜಗತ್ತನ್ನೇ ತೊಟ್ಟಿಲಲ್ಲಿಟ್ಟು ತೂಗುವ ಸಾಮರ್ಥ್ಯ ಉಳ್ಳವಳು. ಭೂಮಿಯೇನು ಮೌಂಟ್ ಎವರೆಸ್ಟ್, ಬಾಹ್ಯಾಕಾಶ, ಚಂದ್ರಯಾನಕ್ಕೂ ಸೈ ಎನ್ನುವವಳು. ಹೇಳಿ ಮುಗಿಸುವಂತಹ ಸಾಧನೆಯೇನು ಅಲ್ಲ ಅವಳದ್ದು, ಬರೆದರೆ ಪುಟಗಳ ಲೆಕ್ಕ ತಪ್ಪುವುದು, ಹೇಳಿದರೆ ಮಾತುಗಳು ಖಾಲಿಯಾಗುವುದು.

ಸುರಿವ ಮಳೆಗೆ ತಂಪಾಗಿ, ಉರಿಯುವ ಬಿಸಿಲಿಗೆ ಕೆಂಪಾಗಿ, ಸುಳಿಗಾಳಿಗೆ ಧೂಳಾಗಿ, ಎಲ್ಲದರಲ್ಲಿಯೂ ಮೌನಿಯಾಗಿ ಸಹನಾಮೂರ್ತಿಯಾಗಿ ಇರುವ ವಸುಂಧರೆಯಂತೆ ಅವಳು. ಎಲ್ಲಿಲ್ಲ ಅವಳು? ಎಲ್ಲ ಕ್ಷೇತ್ರದಲ್ಲಿಯೂ ಗಂಡಿಗೆ ಸಮನಾಗಿ ನಿಂತ ಸದೃಢ ಸಬಲೆ, ವಿದ್ಯಾವಂತೆಯಾಗಿ ಸರ್ಕಾರಿ ನೌಕರಿಗೂ ಸೈ, ರಾಜಕಾರಣಕ್ಕೂ ಸೈ, ವಿದ್ಯೆ ಇಲ್ಲದೆಯೂ ಬದುಕಿನ ಕೌಶಲ ತಿಳಿದು ಮಾದರಿಯಾಗಿ ಬದುಕಲು ಸೈ. ಆಧುನಿಕತೆಯ ಎಲ್ಲಾ ಕ್ಷೇತ್ರದಲ್ಲಿ ಸವಾಲಾಗಿ ಇರುವವಳು, ಅವಳ ಬೆನ್ನು ತಟ್ಟುವ ಒಂದು ಕೈ ಇದ್ದರೆ ಚಪ್ಪಾಳೆ ಹೊಡೆಯುವ ಸಾವಿರ ಕೈಗಳನ್ನು ಸಂಪಾದಿಸಬಲ್ಲವಳು.

ಸಮಾಜಕ್ಕೆ ಅಂಜಿ ನಾಚಿಕೆ, ಮಾನ – ಮರ್ಯಾದೆ ಎಂದು ಅಂಜುತ್ತಿದ್ದ ಅವಳು ಇಂದು ಯಾವುದನ್ನು ಲೆಕ್ಕಿಸದೆ ಅನ್ಯಾಯದ ವಿರುದ್ಧ ನಿಲ್ಲುತ್ತಿದ್ದಾಳೆ. ಆದರೆ ಎಲ್ಲಾ ಕಡೆ ಅಲ್ಲ. ಸಮಾಜದಲ್ಲಿ ಹೆಣ್ಣಿನ ಸಬಲೀಕರಣವಾಗಬೇಕು. ಎಲ್ಲರಂತೆ ನಿರ್ಭಯವಾಗಿ ತಿರುಗಾಡುವಂತಹ ಸ್ವಾತಂತ್ರ್ಯ ಸಿಗಬೇಕು. ಶೋಷಣೆ, ದೌರ್ಜನ್ಯ, ಅತ್ಯಾಚಾರಗಳು ಇಲ್ಲದಂತಾಗಬೇಕು. ಕಾಮುಕ ಕಣ್ಣುಗಳಿಂದ ನೋಡುವ ವಿಕೃತ ಮನಸ್ಸುಗಳಿಗೆ ಅರಿವಾಗಬೇಕು. ಹೆತ್ತ ತಾಯಿ ಹೆಣ್ಣು, ಜೀವ – ಜೀವನ ನೀಡಿದವಳು ಹೆಣ್ಣು, ಅವಳನ್ನು ಗೌರವದಿಂದ ಕಾಣಬೇಕು.

ಹೆಣ್ಣೆಂದರೆ ಅವಳೆದೆಯ ನೋವ ಬಚ್ಚಿಟ್ಟು, ನಗುವ ಒಡವೆಯ ಧರಿಸಿ, ಸುತ್ತ ಇರುವವರ ನಗಿಸುವವಳು. ಉಸಿರು ಕೊಟ್ಟು ಜೀವ ಕೊಡುವ ಅಮೃತಬಳ್ಳಿ ಹೆಣ್ಣು. ನಿಮ್ಮ ಮನೆ ಮಗಳಂತೆ ಅವಳ ರಕ್ಷಣೆಯ ಹೊಣೆ ಹೊತ್ತು ಕಾಪಾಡಿ ಎಂದಷ್ಟೇ ಬೇಡುವವಳು ಹೆಣ್ಣು.


-ರಶ್ಮಿ ಉಡುಪ ಮೊಳಹಳ್ಳಿ
SKVMS GFGC Kundapura Koteshwara

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!