spot_img
Sunday, February 15, 2026
spot_img

ಕುಂದಾಪುರ ಕೆಡಿಪಿ ಸಭೆ : ಉಪ ನೊಂದಾವಣಾಧಿಕಾರಿ ಕಚೇರಿ ಅವ್ಯವಸ್ಥೆ : ಮಧ್ಯವರ್ತಿಗಳ ಹಾವಳಿ

ಅಣೆಕಟ್ಟುಗಳ ಅಸಮರ್ಪಕ ನಿರ್ವಹಣೆ : ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಖಡಕ್ ಎಚ್ಚರಿಕೆ


(ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಮತ್ತು ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ)

 ಜನಪ್ರತಿನಿಧಿ (ಕುಂದಾಪುರ) : ಇದು ವಾರ್ಷಿಕ ಕೆಡಿಪಿ ಸಭೆಯೋ ಅಥವಾ ತ್ರೈಮಾಸಿಕ ಕೆಡಿಪಿ ಸಭೆಯೋ ಎಂದು ತಾಲೂಕು ಕೆಡಿಪಿ ಸಭೆಯಲ್ಲಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಿನ್ನೆ(ಸೋಮವಾರ) ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ ಕೆಡಿಪಿ ಸಭೆಯಲ್ಲಿ ನಡೆಯಿತು. ಸಭೆ ಆರಂಭದಲ್ಲೇ ಕೆಡಿಪಿ ಅಧ್ಯಕ್ಷ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರನ್ನು ತಾಲೂಕು ಕೆಡಿಪಿ ಸದಸ್ಯ ರಮೇಶ್‌ ಶೆಟ್ಟಿ ವಕ್ವಾಡಿ ತರಾಟೆಗೆ ತೆಗೆದುಕೊಂಡರು. ಮರು ಉತ್ತರಿಸಿದ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ನಮಗೆ ಮೇಲಿನರು ಹೀಗೆಯೇ ಹೇಳಿಕೊಟ್ಟಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕೆಡಿಪಿ ಸಭೆ ಒಂಬತ್ತು ತಿಂಗಳಿಗೊಮ್ಮೆಯೂ ನಡೆಯುವುದಿಲ್ಲ ಎಂದು ಅವರು ಸಿಟ್ಟಾದರು. ನಿಮ್ಮ ಕಾಳಜಿಯನ್ನು ಪರಿಗಣಿಸುತ್ತೇವೆ. ಮುಂದೆ ಸರಿಯಾಗಿ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಅವರು ಸೂಚಿಸಿದರು.

ಉಪ ನೊಂದಾವಣಾಧಿಕಾರಿ ಕಚೇರಿ ಅವ್ಯವಸ್ಥೆ

ಉಪ ನೋಂದಾವಣಾಧಿಕಾರಿ ಕಚೇರಿಯಲ್ಲಿನ ಅವ್ಯವಸ್ಥೆಯಿಂದಾಗಿ ಜನರಿಗೆ ಸೂಕ್ತ ಸಮಯಕ್ಕೆ ಕೆಲಸವಾಗದೆ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ. ಮನೆ, ನಿವೇಶನ, ಕೃಷಿಭೂಮಿ ಮತ್ತಿತರೆ ನೋಂದಣಿಗಾಗಿ ಜನ ಪರದಾಡುವಂತಾಗಿದೆ. ಕಚೇರಿಯಲ್ಲಿ ಸಿಬ್ಬಂದಿಗಳು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಮಧ್ಯವರ್ತಿಗಳ ಮುಖೇನ ಹೋದರೆ ಕೂಡಲೇ ಕೆಲಸ ಆಗುತ್ತದೆ. ಇಲ್ಲದಿದ್ದರೆ ನೊಂದಣಿಗಾಗಿ ಬಂದವರನ್ನು ಮಾತಾಡಿಸುವವರಿಲ್ಲ. ಮಧ್ಯವರ್ತಿಗಳ ಕಾನೂನು ಬಾಹೀರ ಚಟುವಟಿಕೆಗಳನ್ನು ನಿಲ್ಲಿಸಿದರೆ ಉಪ ನೊಂದಾವಣಾಧಿಕಾರಿಗಳ ಕಚೇರಿ ಮುಚ್ಚಬೇಕು ಎನ್ನುವಷ್ಟರ ಮಟ್ಟಿಗೆ ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂದು ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಲಾಭ ತಂದುಕೊಡುವ ಆಸ್ತಿ ನೋಂದಾವಣಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಲ್ಲದೆ, ಅವ್ಯವಹಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ವಜಾಗೊಳಿಸುವಂತೆ ಅವರು ಒತ್ತಾಯಿಸಿದರು.

ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅವ್ಯವಹಾರ

ಕೆಡಿಪಿ ಸದಸ್ಯ ಶರತ್ ಶೆಟ್ಟಿ ಬಾಳಿಕೆರೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ(50 ಕೋಟಿಗೂ ಮಿಕ್ಕಿ) ಅವ್ಯವಹಾರ ಹಾಗೂ ಸಂಸ್ಥೆಯ ಸಿಇಓ ಹಾಗೂ ನಿರ್ದೇಶಕರ ಮೇಲಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿ ಸಭೆಯ ಗಮನ ಸೆಳೆದರು. ನಂಬಿಕೆ ದ್ರೋಹ ಮತ್ತು ಮೋಸ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಸಹಕಾರಿ ಕಾಯ್ದೆಯ ಉಲ್ಲಂಘನೆ ಮಾಡಿ ವಂಚನೆ ನಡೆಸಿದ್ದರೂ ಸಹಕಾರಿ ಇಲಾಖೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಸಹಕಾರಿ ಇಲಾಖೆಯ ಅಧಿಕಾರಿಗಳೂ ಕೂಡ ಇದರೊಂದಿಗೆ ಶಾಮೀಲಾಗಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತವಾಗುತ್ತದೆ ಎಂದು ಅವರು ಕಿಡಿ ಕಾರಿದರು.

ಸಹಕಾರಿ ಅಭಿವೃದ್ಧಿ ಯೋಜನಾಧಿಕಾರಿ ವಿಜಯ್‌ ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕುಂದಾಪುರ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸಂಘದ ಇಬ್ಬರು ನಿರ್ದೇಶಕರ ಆಸ್ತಿಯನ್ನು ಈಗಾಗಲೇ ಮುಟ್ಟುಗೋಲು ಮಾಡಿಕೊಳ್ಳಲಾಗಿದೆ. ಉಳಿದವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳುವುದಕ್ಕೆ ಕ್ರಮ ವಹಿಸಲಾಗಿದೆ. ಸಹಕಾರಿ ಇಲಾಖೆಯ ನಿಯಮದಡಿ ಏನೆಲ್ಲಾ ಕ್ರಮ ಜರುಗಿಸಬೇಕೋ ಅವೆಲ್ಲವನ್ನೂ ನಿಯಮಾನುಸಾರವಾಗಿಯೇ ನಡೆಸುತ್ತಿದ್ದೇವೆ ಎಂದು ಹೇಳಿದರು.

ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಲ್ಲಿ ದಲಿತರಿಗೆ ಎ ದರ್ಜೆ ಸದಸ್ಯತ್ವ ನೀಡಿಲ್ಲ ಎನ್ನುವುದರ ಬಗ್ಗೆ ತಾಲೂಕು ಪಂಚಾಯತ್‌ ಆವರಣದ ಮುಂಭಾಗದಲ್ಲೇ ಇತ್ತೀಚೆಗೆ ಧರಣಿ ನಡೆದಿತ್ತು. ಈ ಸಂಬಂಧಿಸಿದಂತೆ ಸಹಕಾರಿ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಕೆಡಿಪಿ ಸದಸ್ಯ ವಿಯಾಧರ ಬಸ್ರೂರು, ಸಹಕಾರಿ ಸಂಘಗಳಲ್ಲಿ ನಡೆಯುತ್ತಿರುವ ಅವ್ಯವಹಾರ, ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಇಲಾಖೆ ಸೂಕ್ತ ಕ್ರಮ ವಹಿಸುವಂತೆ ಅವರು ಆಗ್ರಹಿಸಿದರು.

ಅಣೆಕಟ್ಟುಗಳ ಅಸಮರ್ಪಕ ನಿರ್ವಹಣೆ

ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟುಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಕಣ್ಣುಕೆರೆಯಲ್ಲಿ ಸತತ ಪ್ರಯತ್ನದ ಫಲದಿಂದ ಅನುದಾನ ತಂದಿದ್ದರೂ ಯಾರಿಗೂ ಮಾಹಿತಿ ನೀಡದೇ ಒಂದು ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಪಂಚಾಯತ್ ಗೂ ತಿಳಿಸದೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದಾರೆ. ಕಿಂಡಿ ಅಣೆಕಟ್ಟುಗಳನ್ನು ಅಸಮರ್ಪಕ ನಿರ್ವಹಣೆ ಮತ್ತು ಕಳಪೆ ಕಾಮಗಾರಿಯಿಂದ ಸರ್ಕಾರಿ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಪ್ರತಿಕ್ರಿಯೆ ನೀಡಿ, ನೀರು ಪೋಲಾಗದಂತೆ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಲ್ಲದೇ, ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಿ ಶೀಘ್ರದಲ್ಲೇ ವರದಿ ಒಪ್ಪಿಸುವಂತೆಯೂ ಖಡಕ್‌ ಎಚ್ಚರಿಕೆ ನೀಡಿದರು.

ಜನಪ್ರತಿನಿಧಿ ಪತ್ರಿಕೆ ವರದಿ ಪ್ರಸ್ತಾಪ

ನಗರ ಯೋಜನಾ ಪ್ರಾಧಿಕಾರದಿಂದ ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ವಿಳಂಬವಾಗುತ್ತಿರುವುದರ ಬಗ್ಗೆ ಜನಪ್ರತಿನಿಧಿ ಪತ್ರಿಕೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್‌ ಕ್ರಾಸ್ಟೋ ಅವರನ್ನು ಸಂದರ್ಶಿಸಿ ಕಳೆದ ಗುರುವಾರ(13/02/2025)ದ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಈ ವರದಿಯನ್ನು ಪ್ರಸ್ತಾಪಿಸಿದ ರಮೇಶ್ ಶೆಟ್ಟಿ ವಕ್ವಾಡಿ, ಕುಂದಾಪುರ ತಾಲೂಕಿನ 45 ಗ್ರಾಮ ಪಂಚಾಯತ್ ಹಾಗೂ ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತ್ ಗಳ ಏಕ ವಿನ್ಯಾಸ ನಕ್ಷಗೆ ಅನುಮೋದನೆ ನೀಡುವುದಕ್ಕೆ ನಗರ ಯೋಜನಾ ಪ್ರಾಧಿಕಾರದದಲ್ಲಿ ಒಬ್ಬರೇ ಕಾರ್ಯದರ್ಶಿಗಳಿದ್ದಾರೆ. ಸಿಬ್ಬಂದಿಗಳ ಕೊರತೆ ಇದೆ. 0.25 ಎಕರೆ ಜಾಗಕ್ಕೆ ಅನುಮೋದನೆಯನ್ನು ಮೊದಲು ಗ್ರಾಮ ಪಂಚಾಯತ್ ಮಟ್ಟದಲ್ಲೇ ನೀಡಲಾಗುತ್ತಿತ್ತು. ಈಗ ಯೋಜನಾ ಪ್ರಾಧಿಕಾರದಿಂದ ನೀಡುವಂತೆ ಸರ್ಕಾರ ಆದೇಶಿಸಿದೆ. ಇದು ಜನರಿಗೆ ಕಷ್ಟವಾಗುತ್ತಿದೆ. ವಿಳಂಬವಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಇದು ಸರ್ಕಾರ ಮಟ್ಟದಲ್ಲೇ ಆಗಬೇಕಿದೆ. ನಗರಾಭಿವೃದ್ಧಿ ಇಲಾಖೆಯ ಸಚಿವರೊಂದಿಗೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. 

ನೆಂಪು ಶಾಲೆಯಿಂದ ಅಕ್ರಮ ಮಣ್ಣು ಸಾಗಾಟ

ನೆಂಪು ಕಾಲೇಜು ವಠಾರದಿಂದ ಸಾವಿರಾರು ಲಾರಿ ಲೋಡು ಮಣ್ಣನ್ನು ಅಕ್ರಮವಾಗಿ ಸಾಗಿಸಿದರೂ ಸಂಬಂಧಪಟ್ಟ ಇಲಾಖೆ ಮೌನ ವಹಿಸಿರುವುದರ ಬಗ್ಗೆ ಕೆಡಿಪಿ ಸದಸ್ಯ ಶರತ್‌ ಶೆಟ್ಟಿ ಕಿಡಿ ಕಾರಿದರು. ಬೈಂದೂರು ಬಿಇಒ ನಾಗೇಶ್‌ ನಾಯ್ಕ್‌ ಪ್ರತಿಕ್ರಿಯಿಸಿ, ಅದು ಪದವಿಪೂರ್ವ ಕಾಲೇಜು. ನಮ್ಮ ಇಲಾಖೆಗೆ ಸೇರುವುದಿಲ್ಲ ಎಂದು ಹೇಳಿದರು. ವಕ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕಾರ ಮಾಡಿಕೊಳ್ಳುವಾಗ ದತ್ತು ಸ್ವೀಕರಿಸುವವರು ಹಾಗೂ ಬಿಇಒ ಅವರೊಂದಿಗೆ ಒಪ್ಪಂದವಾಗಿದೆ. ದತ್ತು ಸ್ವೀಕರಿಸಿದಾಗಲಿಂದ ಶಾಲೆಯಲ್ಲಿ ಅನೇಕ ಸಮಸ್ಯೆಗಳಿವೆ ಎಂದು ರಮೇಶ್‌ ಶೆಟ್ಟಿ ಪ್ರಸ್ತಾಪಿಸಿದರು. ಪ್ರತ್ಯುತ್ತರಿಸಿದ ಬಿಇಒ ಶೋಭಾ ಶೆಟ್ಟಿ ಎರಡು ವರ್ಷಗಳ ನಿರ್ವಹಣೆಗಾಗಿ 5.25 ಲಕ್ಷ. ರೂ. ಗಳನ್ನು ದತ್ತು ಪಡೆದವರು ನೀಡಿದ್ದಾರೆಂದು ತಿಳಿಸಿದ್ದಲ್ಲದೇ, ಹೆಚ್ಚಿನ ಅನುದಾನಕ್ಕಾಗಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಪಂಚಾಯತ್‌ ಅಭಿವೃದ್ಧಿ ಕಾರ್ಯ ಕುಂಠಿತ

ಪಂಚಾಯತ್‌ ನಲ್ಲಿ 15 ನೇ ಹಣಕಾಸು ಮತ್ತು ಪಂಚಾಯತ್‌ ಸ್ವಂತ ಅನುಧಾನದಡಿ ಕೆಲಸಗಳನ್ನು ನಿಗದಿ ಪಡಿಸಿದ್ದರೂ, ಇಂಜಿನೀಯರ್‌ ವಿಭಾಗದಿಂದ ಯಾವುದೇ ಅಂದಾಜು ಪಟ್ಟಿ ತ್ವರಿತಯ ಗತಿಯಲ್ಲಿ ನಡೆಯುತ್ತಿಲ್ಲ. ಇದರಿಂದ ಪಂಚಾಯತ್‌ಗಳ ಅಭಿವೃದ್ಧಿ ಕುಠಿತಗೊಳ್ಳುತ್ತಿದೆ. ಸಮಯಕ್ಕೆ ಸರಿಯಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ರಮೇಶ್‌ ಶೆಟ್ಟಿ ವಕ್ವಾಡಿ ಪ್ರಸ್ತಾಪಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಕೊಡ್ಗಿ ನಮ್ಮಲ್ಲಿ ಇಂಜಿನೀಯರ್‌ಗಳ ಕೊರತೆ ಇದೆ. ಗುತ್ತಿಗೆ ಆಧಾರದ ಮೇಲೆ ಇಂಜಿನೀಯರ್ ಗಳನ್ನು ನೇಮಿಸಿಕೊಂಡು ಪಂಚಾಯತ್‌ ನ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಳ್ಳುವಂತೆ ಸೂಚಿಸಿದರು.

ಆಯುಷ್ಮಾನ್‌ ಮುಗಿಯದ ಸಮಸ್ಯೆ

ಆಯುಷ್ಮಾನ್ ಆರೋಗ್ಯ ವಿಮೆಯ ಮಾಹಿತಿ ಕೊರತೆಯಿಂದ ಸಮಸ್ಯೆಯಾಗುತ್ತಿರುವುದನ್ನು ಪ್ರಸ್ತಾಪಿಸಿದ ರಮೇಶ್‌ ಶೆಟ್ಟಿ ವಕ್ವಾಡಿ, ಮಣಿಪಾಲದಲ್ಲಿ ಬೆಡ್ ಸಿಗುವುದಿಲ್ಲ. ಬಡವರಿಗೆ ಸಮಸ್ಯೆಯಾದ ಪ್ರಕರಣಗಳು ಸಾಕಷ್ಟಿದೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಕಿರಣ್ ಕೊಡ್ಗಿ ಸರಕಾರಿ ಆಸ್ಪತ್ರೆಯ ರೆಫರಲ್ ಲೆಟರ್ ಇದ್ದು, ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ತುರ್ತು ಕೆಲವೇ ಕೆಲವು ಕೋಡ್‍ಗಳನ್ನು ಮಾತ್ರ ನೀಡಿದ್ದಾರೆ ಆಯುಷ್ಮಾನ್ ಸಮಸ್ಯೆ, ಇತ್ಯಾದಿ ವಿಚಾರಗಳನ್ನು ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡಿದ್ದೇವೆ ಎಂದರು. ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಈ ಬಗ್ಗೆ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಇದೆ ಎಂದರು. ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಎಲ್ಲರೂ ಮಣಿಪಾಲ ಆಸ್ಪತ್ರೆಗೆ ಹೋಗುವ ಬದಲು ಮಂಗಳೂರಿಗೆ ಹೋದರೆ ಅಲ್ಲಿ ಹಲವು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿವೆ. ಇಷ್ಟು ರೋಗಿಗಳ ಒತ್ತಡ ಅಲ್ಲಿ ಇಲ್ಲ. ಅಲ್ಲಿ ಆಯುಷ್ಮಾನ್ ಸೌಲಭ್ಯ ದೊರೆಯುತ್ತದೆ. ಹಾಗಾಗಿ ಮಂಗಳೂರಿಲ್ಲಿಯೂ ಒಳ್ಳೆಯ ಆಸ್ಪತ್ರೆಗಳಿವೆ ಸಾಧ್ಯವಾದಷ್ಟು ಜನ ಅಲ್ಲಿಗೆ ಹೋದರೆ ಅನುಕೂಲ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕ ಉದಯ್‌ ಕುಮಾರ್‌ ಶೆಟ್ಟಿ, ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಡಾ. ರವಿಕುಮಾರ್‌ ಹುಕ್ಕೇರಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ಕೆಡಿಪಿ ಸದಸ್ಯರಾದ ಜ್ಯೋತಿ ಪುತ್ರನ್‌ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!