spot_img
Monday, March 16, 2026
spot_img

ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಗೋಡ್ಸೆಯಾಗಲಿ, ಇನ್ಯಾರಿಂದಾಗಲಿ ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಮತಾಂಧ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದು, ಅವರು ಇಹಲೋಕ ತ್ಯಜಿಸಿರಬಹುದು. ಆದರೆ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಾಗಲಿ ಸಾಧ್ಯವಿಲ್ಲ. ಇಂದಿಗೂ ಅವರ ವಿಚಾರಧಾರೆಗಳು, ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಪ್ರಸ್ತುತವಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರೀಯ ಹುತಾತ್ಮ ದಿನದ ಅಂಗವಾಗಿ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಮಾಧ್ಯಮದವರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಜನವರಿ 30, 1948 ರಂದು ಮಹಾತ್ಮ ಗಾಂಧೀಜಿಯವರನ್ನು ಹಂತಕ ಗೋಡ್ಸೆ ಹತ್ಯೆ ಮಾಡಿದ ದಿನ. ಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದರು. ಅವರ ಹೋರಾಟದ ಬದುಕು, ಅಹಿಂಸೆ, ಸತ್ಯಾಗ್ರಹ ಇವು ನಮಗೆ ಪ್ರೇರಣೆ. ಜಗತ್ತಿನಲ್ಲಿ ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ದೇಶದಲ್ಲಿ ಬಹಳ ದೀರ್ಘ ಕಾಲ ನಡೆದ ಹೋರಾಟದ ನಾಯಕತ್ವವನ್ನು ಗಾಂಧೀಜಿ ವಹಿಸಿದ್ದರು. 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು ಮೊದಲು ದೇಶ, ದೇಶದ ಜನ, ಸಮಾಜ, ಬದುಕನ್ನು ಅರ್ಥಆಡಿಕೊಳ್ಳುವ ಪ್ರಯತ್ನ ಮಾಡಿ, ನಂತರ ಹೋರಾಟವನ್ನು  ಪ್ರಾರಂಭಿಸಿದರು. ಸತ್ಯ ಅಹಿಂಸೆಗಳಿಂದ ಕೂಡಿದ್ದ ಹೋರಾಟದಲ್ಲಿ ಸಾವಿರಾರು ಜನ ಪಾಲ್ಗೊಂಡರು. ಅವರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತು, ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾದೆವು ಎಂದವರು ಹೇಳಿದರು.

ಮಹಾತ್ಮಾ ಗಾಂಧಿ ಅವರು ಒಮ್ಮೆ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 25, 26, 27 ರಂದು 1924 ನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಅದರ ಸವಿನೆನಪಿಗಾಗಿ ಬೆಳಗಾವಿಯಲ್ಲಿ ಶತಮಾನೋತ್ಸವವನ್ನು ಆಚರಿಸಲಾಯಿತು. 26 ಮತ್ತು 27 ರಂದು ಕಾರ್ಯಕ್ರಮ ಜರುಗಿತು. 26 ರಂದು ನಡೆದ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಮುಖಂಡರು  ಭಾಗವಹಿಸಿದ್ದರು.

ಮೊದಲ ದಿನ ಮಹಾತ್ಮಾ ಗಾಂಧಿ ಅವರನ್ನು ನೆನಪುಮಾಡಿಕೊಳ್ಳಲಾಯಿತು. ಭಾರತದ ಮಾಜಿ ಪ್ರಧಾನಿ  ಮನ್ ಮೋಹನ್ ಸಿಂಗ್ ಅವರ ನಿಧನದಿಂದಾಗಿ  ಕಾರ್ಯಕ್ರಮ ಮುಂದೂಡಲ್ಪಟ್ಟಿತು.

27 ರಂದು ಗಾಂಧಿ ಭಾರತ ಹೆಸರಿನಲ್ಲಿ ನಡೆದು, ಇದರ ಘೋಷವಾಕ್ಯ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’  ಎಂದಾಗಿತ್ತು. ಅದೇ ದಿನ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಸುವರ್ಣ ಸೌಧದಲ್ಲಿ ಅನಾವರಣ ಮಾಡಲಾಯಿತು. ವಿಧಾನ ಸಭಾಧ್ಯಕ್ಷರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಲ್ಲಾ ಮಂತ್ರಿ ಮಂಡಲದ ಸದಸ್ಯರು ಭಾಗವಹಿಸಿದ್ದರು.

ಮಹಾತ್ಮಾ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಈ ದೇಶಕ್ಕೆ  ಸ್ವಾತಂತ್ರ್ಯ ದೊರೆತ ಮೇಲೆ ದೇಶ ಹೇಗಿರಬೇಕೆಂದು ಪರಿಹಾರಗಳನ್ನು ನೀಡಿದ್ದರು. ಭಾರತ ದೇಶ ಗ್ರಾಮಗಳ ದೇಶ. ಗ್ರಾಮಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದ್ದರು. ಅದಕ್ಕಾಗಿಯೇ ಗ್ರಾಮ ಸ್ವರಾಜ್ಯ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದರು. ಗ್ರಾಮಗಳು  ಸ್ವಾವಲಂಬಿಗಳಾಗಬೇಕು.ಆಗ ಮಾತ್ರ ಜನ, ದೇಶ ಸ್ವಾವಲಂಬಿಗಳಾಗಲು ಸಾಧ್ಯ. ಭಾರತದಲ್ಲಿ ಗುಡಿ ಕೈಗಾರಿಕೆಗಳು, ಅತಿ ಸಣ್ಣ ಕೈಗಾರಿಕೆಗಳು ಆರ್ಥಿಕತೆಯ ತಳಹದಿ. ಅದಕ್ಕೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದ್ದರು. ಗಾಂಧಿ ಭಾರತ ಕಟ್ಟುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು. ಅವರ ಮೌಲ್ಯಗಳನ್ನು ರೂಢಿಸಿಕೊಂಡು ಅದರಂತೆ ನಡೆಯುವ ಪ್ರಯತ್ನ ಮಾಡಬೇಕು ಎಂದವರು ತಿಳಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!