spot_img
Tuesday, February 18, 2025
spot_img

ನಾಯಕತ್ವವನ್ನು ಕಾಂಗ್ರೆಸ್‌ ತುರ್ತಾಗಿ ವೃದ್ಧಿಸಿಕೊಳ್ಳಬೇಕಿದೆ !

ಕಾಂಗ್ರೆಸ್‌ ರಾಜಕೀಯದ ಇಳಿಜಾರು | ಮುಗಿಯದ ʼಇಂಡಿಯಾʼ ಮೈತ್ರಿಕೂಟದ ಗೊಂದಲ

ಒಂದು ಕೂಟದಲ್ಲಿ  ಎಲ್ಲರೂ ದೊಡ್ಡವರಾದರೆ, ಅಲ್ಲಿ ಎಂದಿಗೂ ಭಿನ್ನಾಭಿಪ್ರಾಯ ಇರುವುದು ಸಹಜ. ಕೂಟದಲ್ಲಿ ಒಬ್ಬನೆ ದೊಡ್ಡವನಿರಬೇಕು, ಉಳಿದವರು ಸಣ್ಣವರಾಗಿರಬೇಕು. ಹೇಳುವ ಅಥವಾ ನಿರ್ದೇಶಿಸುವ ಸ್ಥಾನದಲ್ಲಿ ಒಬ್ಬನೆ ಇರಬೇಕು. ಉಳಿದವರೆಲ್ಲಾ ಕೇಳುವ ಸ್ಥಾನದಲ್ಲಿರಬೇಕು. ಹಾಗಿದ್ದಾಗ ಮಾತ್ರ ಆ ಕೂಟ ಭಿನ್ನಾಭಿಪ್ರಾಯವಿಲ್ಲದೆ ಸಾಗುತ್ತದೆ. ಒಂದೊಮ್ಮೆ ಭಿನ್ನಾಭಿಪ್ರಾಯಗಳಿದ್ದರೂ ಅದು ಎದ್ದು ಕಾಣಿಸುವುದಿಲ್ಲ.

ರಾಜಕೀಯ ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿರಬೇಕು ಎಂದರೆ ನೇತೃತ್ವ ಸರಿಯಾಗಿರಬೇಕು. ನೇತೃತ್ವವೆ ಗಟ್ಟಿಯಿಲ್ಲದಿದ್ದರೆ ಅಥವಾ ನೇತೃತ್ವಕ್ಕಾಗಿಯೇ ಎಲ್ಲರೂ ಕಣ್ಣಿಟ್ಟರೆ ಅಲ್ಲಿ ವಿಷಮ ಸ್ಥಿತಿ ಸಹಜವಾಗಿ ಉದ್ಭವಿಸುತ್ತದೆ. ಇದೇ ʼನೇತೃತ್ವʼ ಈಗ ʼಇಂಡಿಯಾʼ ಮೈತ್ರಿಕೂಟದ ಟೊಳ್ಳನ್ನು ಜಗಜ್ಜಾಹೀರು ಮಾಡಿದೆ. ʼಇಂಡಿಯಾʼ ಮೈತ್ರಿಕೂಟದಲ್ಲಿ ಸದಾ ಭಿನ್ನಾಭಿಪ್ರಾಯಗಳು ಏಳುವುದಕ್ಕೆ ಇಲ್ಲಿ ಎಲ್ಲರೂ ದೊಡ್ಡವರಾಗಿರುವುದೇ ಮೂಲ ಕಾರಣ. ಬಿಜೆಪಿ  ಹಾಗೂ ಅದರ ಅಂಗ ಪಕ್ಷಗಳ ವಿರುದ್ಧ ಒಂದು ಸಮರ್ಥ ವಿಪಕ್ಷವಾಗಿ ರೂಪುಗೊಳ್ಳುವುದಕ್ಕೆ ಕಾಂಗ್ರೆಸ್‌ ಹಾಗೂ ಅದರ ನೇತೃತ್ವದ ಇತರೆ ಅಂಗ ಪಕ್ಷಗಳಿಗೆ ಇನ್ನೂ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಒಂದು ಸ್ಪಷ್ಟ ಸೈದ್ಧಾಂತಿಕ ಬದ್ಧತೆಯ ಕೊರತೆಯೇ ಮೂಲ ಕಾರಣ.

ಹೇಗೆ ನೋಡಿದರೂ ದೇಶದಲ್ಲಿ ಈಗ ಮೈತ್ರಿಯದ್ದೇ ಚರ್ಚೆ. ಮೈತ್ರಿ ಆದರೆ ಒಂದು ಪರಿಣಾಮ, ಆಗದೆ ಉಳಿದರೆ ಇನ್ನೊಂದು ಪರಿಣಾಮ. ಬಿಜೆಪಿಯನ್ನು ಎದುರಿಸುವುದಕ್ಕೆ ಒಂದಾಗುವುದು ಬಹಳ ಮುಖ್ಯ ಎಂಬ ದೃಷ್ಟಿಯಿಂದ ಜೊತೆಗೂಡಿದ್ದ ʼಇಂಡಿಯಾʼ ಮೈತ್ರಿಕೂಟ ಇಷ್ಟು ಬೇಗ ತನ್ನ ಉದ್ದೇಶ ಹಾಗೂ ಉತ್ಸಾಹವನ್ನು ಈ ಮಟ್ಟಿಗೆ ಕಳೆದುಕೊಳ್ಳುತ್ತದೆ ಎಂಬ ಊಹೆಯೂ ಇರಲಿಲ್ಲ. ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ʼಇಂಡಿಯಾʼ ಮೈತ್ರಿಕೂಟವನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂಬ ನಿರೀಕ್ಷೆ ಇದ್ದಿತ್ತು. ಹಾಗಾಗಿಲ್ಲ. ʼಇಂಡಿಯಾʼ ಮೈತ್ರಿಕೂಟದಲ್ಲಿರುವ ʼಎಲ್ಲಾ ದೊಡ್ಡವರುʼ ಒಂದೊಂದು ಅಭಿಪ್ರಾಯ ಹೊಂದಿದ್ದಾರೆ. ಬಿಜೆಪಿ ವಿರುದ್ಧ ಅವರ ನಿಲುವು ಇದ್ದರೂ, ಕಾಂಗ್ರೆಸ್‌ ನೇತೃತ್ವವನ್ನು ಅವರು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ.

ʼಮೈತ್ರಿಕೂಟವನ್ನು ಕಟ್ಟುವ ಕೆಲಸ ಮಾಡಿದ್ದೇನೆ, ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡದೆ ಇದ್ದರೆ ತಾನೇನು ಮಾಡುವುದಕ್ಕೆ ಸಾಧ್ಯವಿದೆ ?ʼ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ದೀದಿ ಮಮತಾ ಬ್ಯಾನರ್ಜಿ, ಹಿರಿಯ ಸದಸ್ಯರಾಗಿ ತಪ್ಪುಗಳನ್ನು ಗುರುತಿಸಿ ಸರಿಪಡಿಸುವುದಕ್ಕೆ ಮುಂದಾಗದೇ ಪ್ರತಿಷ್ಠೆ ಮೆರೆದರು. ನಿತೀಶ್‌ ಕುಮಾರ್‌ ಅಧಿಕಾರದ ಹಪಾಹಪಿಗೆ ಕೂಟವನ್ನೇ ತೊರೆದರು. ಇಂತೆಲ್ಲಾ ಪ್ರಮುಖ ವಿಷಯಗಳು ಮೈತ್ರಿಕೂಟದ ಬಗ್ಗೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯೆ ಮೇಲೇಳುವುದಕ್ಕೆ ಕಾರಣವಾಯಿತು.

ಲೋಕಸಭೆಯ ಚಳಿಗಾಲದ ಅಧಿವೇಶನ ಆರಂಭಗೊಂಡ ದಿನದಿಂದಲೂ, ಕಲಾಪಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಪ್ರಮುಖವಾಗಿ, ಕಾಂಗ್ರೆಸ್ ಪಕ್ಷ ಉದ್ಯಮಿ ಗೌತಮ್ ಅದಾನಿ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸದನದ ಹೊರಗೆ ಪ್ರತಿಭಟನೆ ನಡೆಸಿತ್ತು. ಆದರೆ, ಕೆಲವು ದಿನಗಳಿಂದ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್, ಕಾಂಗ್ರೆಸ್ ವಿರುದ್ದ ಅಸಮಾಧಾನಗೊಂಡರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ʼಇಂಡಿಯಾʼ ಮೈತ್ರಿಕೂಟ ಮತ್ತು ಮಹಾ ವಿಕಾಸ್ ಅಘಾಡಿಗೆ ಸೋಲಾದ ನಂತರ ಅಲ್ಲಿನ ಮೈತ್ರಿಯಲ್ಲಿ ಅಪಸ್ವರ ಕೇಳಿಬಂತು. ʼಇಂಡಿಯಾʼ ಮೈತ್ರಿಕೂಟ ಅಸ್ತಿತ್ವದಲ್ಲಿಲ್ಲ ಎಂದು ಇತ್ತೀಚೆಗೆ ಓಮರ್‌ ಅಬ್ದುಲ್ಲಾ ಹೇಳಿಕೊಂಡಿರುವುದು ಬಿಜೆಪಿಗೆ ರಾಜಕೀಯ ಅಸ್ತ್ರವಾಗಿ ಸಿಕ್ಕಿತ್ತು. ಅವರು ಹೇಳಿಕೆ ನೀಡಿರುವ ಕೆಲವು ದಿನಗಳ ಬಳಿಕ ಅವರ ತಂದೆ ಫಾರೂಕ್‌ ಅಬ್ದುಲ್ಲಾ ಮೈತ್ರಿಕೂಟ ಶಾಶ್ವತ ಎಂದು ಹೇಳಿದರು. ಶರದ್‌ ಪವಾರ್‌ ಲೋಕಲ್‌ ಫೈಟ್‌ಗೆ ಮೈತ್ರಿಕೂಟ ಯಾಕೆ ? ಎಂದು ಹೇಳಿಕೆ ಕೊಟ್ಟರು. ಇವೆಲ್ಲಾ ಮೈತ್ರಿಯ ಭವಿಷ್ಯದ ಬಗ್ಗೆ ಪ್ರಶ್ನೆ ಹುಟ್ಟಿಸುತ್ತಿದೆ. ಭಿನ್ನಾಭಿಪ್ರಾಯಗಳಿದ್ದರೂ ಎನ್‌ಡಿಎ ಒಕ್ಕೂಟದಲ್ಲಿ ಹೀಗೆಲ್ಲಾ ಗೊಂದಲಗಳು ಬೀದಿಗೆ ಬರುವುದೇ ಇಲ್ಲ. ಇದೇ ಎನ್‌ಡಿಎ ಒಕ್ಕೂಟಕ್ಕೂ ಹಾಗೂ ʼಇಂಡಿಯಾʼ ಮೈತ್ರಿಕೂಟಕ್ಕೂ ಇರುವ ವ್ಯತ್ಯಾಸ.

ಇನ್ನು, ಇದು ಕಳೆದ ಹತ್ತು ಹದಿನೈದು ವರ್ಷಗಳಿಂದ ರಾಜಕೀಯವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕಾಂಗ್ರೆಸ್‌ ಪಾಲಿನ ದುರಂತವೇ ಸರಿ. ಲೋಕಸಭೆ ಚುನಾವಣೆಯಲ್ಲಿ ಈಗಿರುವ ʼಇಂಡಿಯಾʼ ಮೈತ್ರಿಕೂಟದ ಪಕ್ಷಗಳ ಪೈಕಿ ಅತಿ ಹೆಚ್ಚು ಕ್ಷೇತ್ರಗಳನ್ನು ಪಡೆದಿರುವ ಪಕ್ಷ ಕಾಂಗ್ರೆಸ್. ಆದಾಗ್ಯೂ, ಬೆರಳಂಕಿಯ ಕ್ಷೇತ್ರಗಳನ್ನು ಪಡೆದುಕೊಂಡಿರುವ ಇತರೆ ಅಂಗ ಪಕ್ಷಗಳು ಕಾಂಗ್ರೆಸ್‌ ವಿರುದ್ಧವೇ ಅಸಮಧಾನ ವ್ಯಕ್ತ ಪಡಿಸುತ್ತವೆ ಎಂದರೇ, ಇದು ಕಾಂಗ್ರೆಸ್‌ ರಾಜಕೀಯದಲ್ಲಿ ಕಂಡಂತಹ ಅತ್ಯಂತ ದಯನೀಯ ಸ್ಥಿತಿ. ಇವೆಲ್ಲಾ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿರುವ ಕಾಂಗ್ರೆಸ್‌, ತನ್ನೊಂದಿಗೆ ಕೈ ಜೋಡಿಸಿರುವ ಇತರೆ ಪಕ್ಷಗಳೊಂದಿಗೆ ನಡೆಸದೆ ಇರುವ ಸಮನ್ವಯ, ಸಂವಾದ, ಚರ್ಚೆಯ ಕೊರತೆಯನ್ನು ಎದ್ದು ತೋರಿಸುತ್ತಿದೆ. ತನ್ನ ಮೈತ್ರಿಕೂಟವನ್ನೇ ಸರಿಯಾಗಿ ನಡೆಸುವುದಕ್ಕೆ ಆಗದ ಕಾಂಗ್ರೆಸ್‌, ದೇಶದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸುತ್ತದೆಯೇ ಎನ್ನುವ ಪ್ರಶ್ನೆ ಸಹಜವಾಗಿ ಮುಂದೆ ಬರುತ್ತದೆ.

ಕಾಂಗ್ರೆಸ್‌ ತನ್ನ ಸೈದ್ದಾಂತಿಕ ಸ್ಪಷ್ಟತೆಯನ್ನು ಇನ್ನೂ ಕಂಡುಕೊಂಡಿಲ್ಲ ಎಂದೇ ಅನ್ನಿಸುತ್ತದೆ. ಅದೇ ಕಾರಣಕ್ಕೆ ಕಾಂಗ್ರೆಸ್‌ಗೆ ತನ್ನ ನೇತೃತ್ವದಲ್ಲಿರುವ ಮೈತ್ರಿಕೂಟವನ್ನೂ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ ಗೆ ಯಾವುದೇ ಒಂದು ಟೈಮ್‌ ಲೈನ್‌ ಇಲ್ಲವೇನೋ ಅಂತನ್ನಿಸುತ್ತದೆ. ಇನ್ನು, ಬಹುಶಃ ರಾಹುಲ್‌ ಗಾಂಧಿಯನ್ನು ಹೊರತಾಗಿ ಉಳಿದ ಯಾವೊಬ್ಬ ʼಇಂಡಿಯಾʼ ಮೈತ್ರಿಕೂಟದ ನಾಯಕರಿಗೂ ಅಖಿಲ ಭಾರತೀಯ ಮಟ್ಟದಲ್ಲಿ ಹೆಸರು, ಕೀರ್ತಿ ಇಲ್ಲ. ಆಯಾಯ ಪ್ರದೇಶಗಳಿಗಷ್ಟೇ ಅವರು ಸೀಮಿತವಾಗಿ ಬೆಳೆದಿದ್ದಾರೆ. ಆದಾಗ್ಯೂ, ಆಯಾಯ ಪ್ರದೇಶಗಳಲ್ಲಿದ್ದುಕೊಂಡೇ ಅವರು ದೇಶದ ಗಮನ ಸೆಳೆದ ನಾಯಕರು. ಹಾಗಾಗಿ ಇಲ್ಲಿ ಇರುವವರೆಲ್ಲರೂ ದೊಡ್ಡವರೇ ಎನ್ನಿಸಿಕೊಂಡಿದ್ದಾರೆ. ಈ ಸ್ಥಿತಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿಲ್ಲ. ಅದುವೆ ಬಿಜೆಪಿಗೆ ಪ್ಲಸ್‌ ಪಾಯಿಂಟ್.‌

ʼಇಂಡಿಯಾʼ ಮೈತ್ರಿಕೂಟ ಸರ್ವಸಮ್ಮತ ಒಬ್ಬ ನಾಯಕನನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೂ ತಯಾರಿಲ್ಲ. ರಾಹುಲ್‌ ಗಾಂಧಿ ಉಳಿದ ಎಲ್ಲಾ ನಾಯಕರಿಗಿಂತ ಜೂನಿಯರ್.‌ ಆದಾಗ್ಯೂ ರಾಹುಲ್‌ ದೇಶ ಮಟ್ಟದಲ್ಲಿ ಹೆಸರು, ಕೀರ್ತಿಯನ್ನು ಅವರದ್ದೇ ಶೈಲಿಯಲ್ಲಿ ಸಂಪಾದಿಸಿಕೊಂಡಿದ್ದಾರೆ. ಸೀನಿಯರ್‌ ಆಗಿ ತಮಗಿಲ್ಲದ ಈ ರಾಜಕೀಯ ವರ್ಚಸ್ಸು ರಾಹುಲ್‌ ಗಾಂಧಿಗೆ ಇದೆ ಎನ್ನುವುದೇ ಕಾಂಗ್ರೆಸ್‌ ಮತ್ತು ರಾಹುಲ್‌ ನೇತೃತ್ವವನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಮೂಲ ಕಾರಣ. ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್‌ನ ಅಧ್ಯಕ್ಷರಾದರೂ ಕೂಡ ಕಾಂಗ್ರೆಸ್‌ ನಡೆಯುವುದು ರಾಹುಲ್‌ ಗಾಂಧಿ ಹೇಳಿದಂತೆ ಎನ್ನುವ ಅಭಿಪ್ರಾಯ ಮೈತ್ರಿಕೂಟದ ನಾಯಕರಲ್ಲಿದೆ. ಇದೇ ಇವೆಲ್ಲಾ ಗೊಂದಲಕ್ಕೆ ಕಾರಣ. ರಾಹುಲ್‌ ಗಾಂಧಿ ಆಗಲಿ, ಮಲ್ಲಿಕಾರ್ಜುನ್‌ ಖರ್ಗೆಯಾಗಲಿ ಅಥವಾ ಇನ್ಯಾರೇ ಆಗಲಿ ʼಇಂಡಿಯಾʼ ಮೈತ್ರಿಕೂಟದಲ್ಲಿ ಪ್ರಶ್ನಾತೀತ ನಾಯಕ ಎಂದು ಯಾರೂ ಗುರುತಿಸಿಕೊಂಡಿಲ್ಲ. ಅದು ʼಇಂಡಿಯಾʼ ಪ್ರಭಾವಿ ನಾಯಕರ ʼನಾಯಕತ್ವʼದ ಕೊರತೆಯೂ ಹೌದು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತದರ ಎನ್‌ಡಿಎ ಒಕ್ಕೂಟದ ಶಕ್ತಿಶಾಲಿ ಸಿದ್ದಾಂತಕ್ಕೆ ಸರಿಸಮನಾದ ಶಕ್ತಿಶಾಲಿ ವಿಚಾರವನ್ನು ಪ್ರತಿನಿಧಿಸಬೇಕಿರುವ ಸಂದರ್ಭದಲ್ಲಿ ಆಂತರಿಕ ವೈಷಮ್ಯದಲ್ಲೇ ʼಇಂಡಿಯಾʼ ಮೈತ್ರಿಕೂಟ ಕಾಲ ಹರಣ ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವೃದ್ಧಿಸಿದೆಯಾದರೂ, ಜನರಲ್ಲಿ ಎಷ್ಟರ ಮಟ್ಟಿಗೆ ವಿಶ್ವಾಸ ಮರು ಗಳಿಸಿಕೊಳ್ಳುವಲ್ಲಿ ಸಫಲವಾಗಿದೆ ಎನ್ನುವುದು ಮುಖ್ಯ. ತನ್ನೊಂದಿಗೆ ಕೈಜೋಡಿಸಿದ ಪಕ್ಷಗಳ ಜೊತೆಗೆ ಹೇಗೆ ಸಮನ್ವಯ ಸಾಧಿಸಿದೆ ಎನ್ನುವುದು ಕೂಡ ಪ್ರಮುಖವಾಗುತ್ತದೆ.

ರಾಜಕಾರಣದಲ್ಲಿ ರಾಹುಲ್‌ ಮಾಗಿರಬಹುದು. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಉಳಿದವರು ಇಲ್ಲ. ಅದನ್ನು ಒಪ್ಪಿಕೊಳ್ಳುವಂತೆ ಮಾಡುವಲ್ಲಿಯೂ ರಾಹುಲ್‌ ಸೋತಿದ್ದಾರೆ ಎಂದೇ ಹೇಳಬೇಕು. ಇವೆಲ್ಲದಕ್ಕಿಂತಲೂ ಹೆಚ್ಚು ಎಂಬಂತೆ ಮೈತ್ರಿಕೂಟ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಈ ಸ್ಥಿತಿಯನ್ನು ಮೀರುವುದಕ್ಕೆ ಪ್ರಯತ್ನವೇ ಆಗುತ್ತಿಲ್ಲ. ಇವೆಲ್ಲದಕ್ಕೂ ಕಾಂಗ್ರೆಸ್‌ ರಾಜಕೀಯದಲ್ಲಿ ಕಾಣುತ್ತಿರುವ ಬಹುದೊಡ್ಡ ಇಳಿಜಾರು ಮುಖ್ಯ ಕಾರಣ.

ಹೇಳುವುದಕ್ಕಿರುವುದು ಇಷ್ಟೇ. ದೇಶದ ಬಹುತೇಕ ಭಾಗಗಳಲ್ಲಿ ಹೇಳಹೆಸರಿಲ್ಲದ ಪಕ್ಷಗಳು ಮತ್ತದರ ನಾಯಕರ ಬಾಯಿಯಿಂದ ಹೇಳಿಸಿಕೊಳ್ಳುವ ದಾರಿದ್ರ್ಯದಿಂದ ಕಾಂಗ್ರೆಸ್ ಹೊರಬರಬೇಕಿದೆ. ಇದಕ್ಕಾಗಿ ಅಗತ್ಯವಾಗಿ ಕಾಂಗ್ರೆಸ್ ತನ್ನ ನಾಯಕತ್ವವನ್ನು ವೃದ್ಧಿಸಿಕೊಳ್ಳಬೇಕಿದೆ. ಇದಾಗದೇ ಕಾಂಗ್ರೆಸ್‌ ಅಧಿಕಾರದ ಕನಸು ಕಾಣುವುದು ವ್ಯರ್ಥ.

ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!