spot_img
Tuesday, February 18, 2025
spot_img

ಸ್ನೇಹವೆಂಬ ಭಾವ ಬೆಸುಗೆಯ ʼಪ್ರೇಮ ಪಂಚಮಿʼ

ರಂಜನೆ ಭರಪೂರ, ಕುತೂಹಲ ಕೊಂಚ ನೀರಸ !

ಆಯಾ ವಸ್ತು ಪದಾರ್ಥಗಳ ಬಗ್ಗೆ, ಸನ್ನಿವೇಷ ನಡೆಗಳ ಬಗ್ಗೆ, ಪ್ರಯೋಗಶೀಲತೆಗಳ ಬಗ್ಗೆ, ಮೌಖಿಕ ಸಾಹಿತ್ಯದ ಬಗ್ಗೆ, ಕಥಾ ವಸ್ತುವಿನ ಆಳ ಅಗಲದ ಬಗ್ಗೆ ವಿಶಿಷ್ಟವಾಗಿ ಹೊಸ ಬೆಳಕು, ಹೊಸ ಸಾಧ್ಯತೆಯನ್ನು ಚೆಲ್ಲುವ ಹಾಗೆ ಮಾಡಿರುವುದೇ ಸಾಲಿಗ್ರಾಮ ಮೇಳದ ಈ ವರ್ಷದ ಎರಡನೇ ಪ್ರಸಂಗ, ಅಂಬಿಕಾ ವಕ್ವಾಡಿ ಕಥಾ ಸಾಂಗತ್ಯವಿರುವ ಹಾಗೂ ಬೇಳೂರು ವಿಷ್ಣುಮೂರ್ತಿ ನಾಯಕ್ ಅವರ ಪದ್ಯ ಸಾಹಿತ್ಯವಿರುವ ಯಕ್ಷಗಾನ ಪ್ರಸಂಗ ‘ಪ್ರೇಮ ಪಂಚಮಿ’.

ಮೊದಲ ನೋಟದಲ್ಲಿ ಪ್ರೀತಿ, ಪ್ರೇಮ, ಪ್ರಣಯ ಹುಟ್ಟಬಹುದು. ಆದರೆ ಮೊದಲ ನೋಟದಲ್ಲಿ ಸ್ನೇಹ ಹುಟ್ಟುವುದಿಲ್ಲ. ಅದು ಅಷ್ಟು ಸುಲಭದ ಸಂಬಂಧವೇ ಅಲ್ಲ. ಎರಡು ಸಮಾನ ಜೀವಗಳು, ಮನಸ್ಸುಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂದಿಸಿದಾಗ ಮಾತ್ರ ಸ್ನೇಹ ಅಂಕುರಿಸುತ್ತದೆ. ಒಮ್ಮೆ ಹುಟ್ಟಿದ ಸ್ನೇಹವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅದಕ್ಕಾಗಿ ಪರಸ್ಪರ ತ್ಯಾಗ ಬಲಿದಾನಕ್ಕೂ ಆ ಮನಸ್ಸುಗಳು ಸಿದ್ಧರಾಗಿರಬೇಕು. ಪ್ರೀತಿ ಪ್ರೀತಿಯನ್ನು ಕೊಲ್ಲಬಹುದು, ಸ್ನೇಹದಲ್ಲಿ ಸ್ನೇಹಿತರು ದೂರವಾಗಬಹುದು. ಆದರೆ ಎಂದಿಗೂ ಸ್ನೇಹ ಅಳಿಯುವುದಿಲ್ಲ. ಸ್ನೇಹ  ಶಾಶ್ವತ. ಅದಲ್ಲದೆ ಇದ್ದರೂ ಎರಡೂ ಜೀವಗಳ ಬಂಧ ಭೌತಿಕವಾಗಿ, ದ್ವೇಷದ ಕಾರಣದಿಂದ ಬೇರೆಯಾದರೂ, ಸಂಧಿಸಿದ  ಭಾವವೊಂದು ಶಾಶ್ವತವಾಗಿ ಉಳಿಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಪ್ರೇಮ ಮತ್ತು ಪ್ರಣತಿ ಎಂಬ ಇಬ್ಬರು ಅನುಗಾಲದ ಸ್ನೇಹಿತೆಯರ ಎಳೆಯ ಸುತ್ತ ಹೆಣೆದ ‘ಪ್ರೇಮ ಪಂಚಮಿ’ ಈ ವರ್ಷದ ಬಡಗು ತಿಟ್ಟಿನ ಯಕ್ಷಗಾನ ಕ್ಷೇತ್ರಕ್ಕೆ ಅರ್ಪಿತಗೊಂಡ ಸಾಮಾಜಿಕ ಪ್ರಸಂಗಳ ಪೈಕಿ ಅಗ್ರ ಸಾಲಿನಲ್ಲಿ ನಿಲ್ಲುವ ಪ್ರಸ್ತುತಿಗಳಲ್ಲೊಂದು ಎನ್ನುವುದರಲ್ಲಿ ಅನುಮಾನವಿಲ್ಲ.

ಪ್ರಸಂಗದ ಆರಂಭವೇ ಪ್ರೇಕ್ಷಕರನ್ನು ಕಟ್ಟಿ ಹಿಡಿದುಕೊಳ್ಳುತ್ತದೆ. ಯಕ್ಷಕಾಶಿ ಕುಂದಾಪುರದಲ್ಲಿ ಕಳೆದ ಶನಿವಾರ(11/01/2025)ದಂದು ಬಿಡುಗಡೆಗೊಂಡು ಮೊದಲ ಪ್ರದರ್ಶನಗೊಂಡ ‘ಪ್ರೇಮ ಪಂಚಮಿ’ ಕುಂದಗನ್ನಡಿಗರಿಗೆ ಅತ್ಯಾಪ್ತವೆನ್ನಿಸುವುದು ಆರಂಭದಲ್ಲೇ ಬರುವ ಕುಂದಾಪುರದ ರಾಜಮನೆತನ, ಕೊಲ್ಲೂರು, ಸೌಪರ್ಣಿಕೆಯ ತಟ, ಕುಂದಾಪ್ರ ಭಾಷೆ, ಕುಂದಾಪ್ರದ ಆಚಾರ, ವಿಚಾರ, ಬದುಕು, ಜೀವನ ಚಿತ್ರಣ, ಆಹಾರ, ಸಂಸ್ಕೃತಿ, ಪದ್ಧತಿಗಳ ಜೊತೆಗೆ  ‘ಕುಂದೋತ್ಸವ’ ಎಂಬ ಪ್ರಸಂಗದೊಳಗಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರ ಆಯೋಜನೆ.

ಕುಂದಾಪ್ರದ ಬದುಕು ಬವಣೆ, ಕೃಷಿ ಸಂಸ್ಕೃತಿ, ಕರಾವಳಿ, ಮೀನುಗಾರಿಕಾ ವೃತ್ತಿ, ಮೀನೂಟ ಹೀಗೆ ಇಲ್ಲಿನ ಎಲ್ಲಾ ವೈಶಿಷ್ಟ್ಯಗಳನ್ನು ಎತ್ತರಿಸುವ ಸಮೂಹ ಗೀತೆ ಗಾಯನ ನೃತ್ಯ ಪ್ರೇಕ್ಷಕರನ್ನು ಸೆಳೆಯುವ, ಹಿಡಿದಿಟ್ಟುಕೊಳ್ಳುವ ದೃಷ್ಟಿಯಿಂದ ಈ ಹೊಸ ಆಲೋಚನೆ ಪ್ರಸಂಗಕರ್ತರ ಒಂದು ಗಿಮಿಕ್ ಎಂದು ನೇರವಾಗಿ ಕಾಣಿಸಿದರೂ ಆ ಬಗೆಯ ಒಂದು ತುರ್ತು ಬಹುಶಃ ಪ್ರಸಂಗಕರ್ತರ ಮುಂದಿದೆ ಅನ್ನಿಸುತ್ತದೆ. ಇನ್ನದು ರಂಗದ ಮೇಲೆ ಪ್ರಸ್ತುತಗೊಂಡಿರುವ ಬಗೆಯೂ ಚೆಂದ.

ಪ್ರಸಂಗ ಮುಂದುವರಿದಂತೆ ಅಧಿಕಾರ, ವೈಷಮ್ಯ, ಕುತಂತ್ರ, ವಂಚನೆ, ಪ್ರೀತಿ, ಕಾಮ, ಕ್ರೋಧ, ದ್ವೇಷದ ಸುತ್ತ ಹೆಣೆದುಕೊಳ್ಳುವ ಕಥೆ ಚುರುಕು ಕಳೆದುಕೊಳ್ಳದೆ ಸಾಗುತ್ತದೆ. ತೀರಾ ಕುತೂಹಲಕಾರಿ ಅಥವಾ ಸಸ್ಪೆನ್ಸ್ ಎನ್ನುವಂತಹದ್ದೇನೂ ಕಥೆಯ ಭಾಗವಲ್ಲದೇ ಇದ್ದರೂ ಪ್ರತಿ ಸನ್ನಿವೇಶಗಳು ಚಿತ್ತ ಕದಲದಂತೆ ಮಾಡುತ್ತದೆ ಎನ್ನುವುದು ಈ ಪ್ರಸಂಗದ ಹೆಚ್ಚುಗಾರಿಕೆ ಎಂದೇ ಹೇಳಬಹುದು. ಸಸ್ಪೆನ್ಸ್‌ ಪ್ರಸಂಗದ ಮೂಲಕವೇ ಯಕ್ಷಗಾನ ಪ್ರಸಂಗಕರ್ತರಾಗಿ ಪಾದಾರ್ಪಣೆ ಮಾಡಿದ ಅಂಬಿಕಾ ವಕ್ವಾಡಿಯವರ ಈ ಪ್ರಸಂಗದಲ್ಲಿ ಅದು ಕೊರತೆಯಾಗಿ ಎದ್ದು ಕಾಣಿಸುತ್ತಿದೆ. ತೀರಾ ಸುಲಭವಾಗಿ ಕಥೆ ಸಾರವನ್ನು ಬಿಟ್ಟುಕೊಡುತ್ತದೆ ಎಂದನ್ನಿಸುತ್ತದೆ. ಕುತೂಹಲವನ್ನು ಕಾಯ್ದಿರಿಸಿಕೊಳ್ಳದೆ ಎರಡು ಮೂರು ಪ್ರಮುಖ ಸಂದರ್ಭ, ಸನ್ನಿವೇಶಗಳಲ್ಲೇ ನಿಸ್ಸಾರ ಅನ್ನಿಸುತ್ತದೆ. ಅವನ್ನು ಬಹುಶಃ ಬದಲಾಯಿಸಿದ್ದರೇ, ಇನ್ನೂ ಅದ್ಭುತವಾಗಿ ಕಥೆಗೆ ಜೀವಕಳೆ ಬರುತ್ತಿತ್ತು. ದೃಶ್ಯರೂಪ ಕಲಾ ಮಾಧ್ಯಮಗಳಲ್ಲಿ ಕುತೂಹಲವನ್ನು ಇರಿಸುವುದು ಬಹಳ ಮುಖ್ಯ. ಕಥೆ ಬಯಸುವುದು ಕುತೂಹಲವನ್ನೆ. ದೃಶ್ಯರೂಪ ಕುತೂಹಲವನ್ನು ಕಳೆದುಕೊಂಡರೆ ಅದು ಸೂಕ್ತವಲ್ಲ. ಆ ಕುತೂಹಲ ಗೋಜಲಾಗಿಯೂ ಇರಬಾರದು. ಈ ವಿಚಾರದಲ್ಲಿ ಸಣ್ಣ ಬದಲಾವಣೆಗಳು ಪ್ರಸಂಗದಲ್ಲಿ ಮಾಡಿಕೊಂಡಿದ್ದಿದ್ದರೇ ಪ್ರಸಂಗ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಬಹುಶಃ ಈ ಸಣ್ಣ ತಪ್ಪನ್ನು ಸರಿಪಡಿಸಿದ್ದರೆ, ಇಡೀ ಪ್ರಸಂಗದ ಮೂಲ ಸಾರವಾಗಿರುವ ಸ್ನೇಹವೂ ಗೆಲ್ಲುತ್ತಿತ್ತು. ಅಂಬಿಕಾ ವಕ್ವಾಡಿ ಅವರಿಗೆ ಬಹುಶಃ ಇದನ್ನು ಧನಾತ್ಮಕವಾಗಿ ಸ್ವೀಕರಿಸುವ ಗುಣವಿದೆ.

ಇನ್ನು, ಗುರು ಮಠವೊಂದರ ಸಹಪಾಠಿಗಳ ನಡುವೆ ಇರುವ ಸಂಬಂಧ, ಶಿಕ್ಷಣ ಮುಗಿಸಿ ಗುರುಮಠದಿಂದ ತೆರಳುವ ಕಾಲಕ್ಕೆ ಎದುರಾಗುವ ಅನಿರೀಕ್ಷಿತ ಸಂಗತಿಗಳು, ಮತ್ತೆ ಅದರಿಂದ ಬೆಳೆಯುವ ಹಿತಕರ, ಅಹಿತಕರ ಘಟನೆಗಳ ಒಟ್ಟು ಸಂಕಲನ ಚೆನ್ನಾಗಿ ಮೂಡಿಬಂದಿದೆ. ಅದಕ್ಕೆ ಕಲಾವಿದರ ಯೋಗದಾನವೂ ಮಹತ್ತರವಾದದ್ದು. ಪ್ರೀತಿ ಪುಳಕಗಳ ನಡುವೆ ಸ್ನೇಹವನ್ನು ಉಳಿಸಿಕೊಳ್ಳಬೇಕಾದರೆ ಮೊದಲು ನಾವು ನಾವಾಗಿರಬೇಕು. ಕೇವಲ ಕೆಲವು ಬದಲಾವಣೆಗಷ್ಟೇ ನಾವು ನಮ್ಮನ್ನು ಬದಲಾಯಿಸಿಕೊಂಡರೂ ಅಲ್ಲಿ ಸ್ನೇಹ ಸಂಬಂಧದ ತಾಳ ತಪ್ಪುತ್ತದೆ ಎನ್ನುವ ಸಂದೇಶದೊಂದಿಗೆ ಮೊಗೆದಷ್ಟೂ ಹೊಸತು ಎನ್ನುವ ಅನೇಕ ಮುತ್ತು ರತ್ನಗಳು ಇಲ್ಲಿ ದೊರಕುವುದರಲ್ಲಿ ಸಂದೇಹವಿಲ್ಲ.

ಹಾಸ್ಯದ ವಿಭಾಗದಲ್ಲೂ ಹೊಸತನದ ಸೃಷ್ಟಿಶೀಲತೆ, ಮುಖ್ಯ ಪಾತ್ರಗಳ ಕಲಾವಿದರ ಪ್ರತ್ಯುತ್ಪನ್ನತೆ ನಿಜಕ್ಕೂ ಸ್ತುತ್ಯಾರ್ಹ. ಇವೆಲ್ಲವೂ ಕಥೆಗೆ ಹಿರಿತನವನ್ನು ತುಂಬಿಸುತ್ತವೆ ಎನ್ನಬಹುದು. ಶಶಿಕಾಂತ ಶೆಟ್ಟಿ, ಮಂಕಿ ಈಶ್ವರ್‌ ನಾಯ್ಕ್‌, ಪ್ರಸನ್ನ ಶೆಟ್ಟಿಗಾರ್‌, ಕ್ಯಾದಗಿ ಮಹಾಬಲೇಶ್ವರ್‌ ಭಟ್‌, ದಿನಕರ ನಡೂರು, ಕಾರ್ತಿಕ್‌ ಪಾಂಡೇಶ್ವರ, ಸೌರಭ ಕೊಕ್ಕರ್ಣೆ, ಯುವರಾಜ್‌ ಸೇರಿ ಉಳಿದ ಎಲ್ಲರ ಪಾತ್ರ ಪೋಷಣೆ ನಿಜಕ್ಕೂ ಶ್ಲಾಘನೀಯ. ವಿಷ್ಣುಮೂರ್ತಿ ನಾಯಕ್‌ ಬೇಳೂರು ಅವರ ಪದ್ಯಗಳಿಗೆ ಭಾಗವತರಾದ ಚಂದ್ರಕಾಂತ್ ರಾವ್‌ ಮೂಡುಬೆಳ್ಳೆ, ಸೃಜನ್‌ ಹೆಗಡೆ ಮತ್ತಷ್ಟು ಚೈತನ್ಯ ತುಂಬಿಸಿದರು.

ಇನ್ನು ಕೊನೆಯದಾಗಿ, ಡೇರೆ ಮೇಳಗಳಲ್ಲಿ ಇತ್ತೀಚೆಗೆ ಬರುತ್ತಿರುವ ಹೊಸ ಸಾಮಾಜಿಕ ಪ್ರಸಂಗಗಳು ಜನರ ಮನಸ್ಸಲ್ಲಿ ಉಳಿಯುತ್ತಿಲ್ಲ ಎನ್ನುವ ಅಭಿಪ್ರಾಯಗಳ ನಡುವೆ ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರ ಈ ಹೊಸ ಆಯ್ಕೆ ಭರವಸೆ ಎಂದೇ ಹೇಳಬಹುದು. ಡೇರೆ ಮೇಳಗಳತ್ತ ಜನರ ಮನಸ್ಸನ್ನು ಆಕರ್ಷಿಸುವ ಪ್ರಸಂಗಗಳ ಆಯ್ಕೆ ಮಾಡಿಕೊಳ್ಳುವ ಯಜಮಾನರ ಔಚಿತ್ಯ ಪ್ರಜ್ಞೆಯೂ ಇಲ್ಲಿ ಮುಖ್ಯವಾಗುತ್ತದೆ. ಆ ಮಟ್ಟಿಗೆ ಕಿಶನ್ ಹೆಗ್ಡೆಯವರು ಎಂದಿನಂತೆ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎನ್ನಬಹುದು. ಉಳಿದ ಎಲ್ಲವೂ ಇಲ್ಲಿಯೇ ಹೇಳಿದರೆ ಹೇಗೆ ? ಪ್ರಸಂಗ ಖುಷಿಯನ್ನಂತೂ ನೀಡುತ್ತದೆ. ಖಂಡಿತ ನೋಡಬಹುದು.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!