spot_img
Tuesday, January 14, 2025
spot_img

ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ: ಆರ್‌.ಅಶೋಕ್‌ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಸೂಕ್ತ ತನಿಖೆಗಾಗಿ ಆಗ್ರಹಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಿದೆ. ಈ ಘಟನೆಯಿಂದ ಹಿಂದೂಗಳನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದು, ರಕ್ತ ಸುರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ಇದು ಒಬ್ಬರೇ ಮಾಡಿದ ಕೃತ್ಯವಲ್ಲ. ಇದರಲ್ಲಿ ಹಲವರು ಭಾಗಿಯಾಗಿದ್ದಾರೆ. ಈ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡಬೇಕಿತ್ತು. ಈಗ ಸಂಕ್ರಾಂತಿ ಹಬ್ಬ ನಡೆಯುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಇಂತಹ ಸಮಯದಲ್ಲೇ ಈ ಕೃತ್ಯ ಮಾಡುವುದರ ಜೊತೆಗೆ ಹಸು ಮಾಲೀಕ ಕರ್ಣ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹಸುವನ್ನು ಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ದೂರಿದರು.

1 ಲಕ್ಷ ರೂ. ಪರಿಹಾರವನ್ನು ಹಸು ಮಾಲೀಕ ಕರ್ಣ ಅವರಿಗೆ ಬಿಜೆಪಿ ವತಿಯಿಂದ ನೀಡಲಾಗಿದೆ. ಹಿಂದೂಗಳು ಬೇಡುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‌ನವರು ಒಂದು ಕೈಯಲ್ಲಿ ಹಸುವನ್ನು ನೀಡುತ್ತಾರೆ. ಮತ್ತೊಂದು ಕಡೆ ಅವರ ಕಡೆಯವರೇ ನೀಡುವ ಹಸುವನ್ನು ಕತ್ತರಿಸುತ್ತಾರೆ. ನನಗೀಗ ಪೊಲೀಸರು ಹಾಗೂ ಸರ್ಕಾರದ ಮೇಲೆಯೇ ಅನುಮಾನ ಬಂದಿದೆ. ಆರೋಪಿ ಜೇಬಿನಲ್ಲಿ ಬ್ಲೇಡ್‌ ಇಟ್ಟುಕೊಂಡು ಓಡಾಡುತ್ತಿದ್ದ, ಆತನಿಗೆ ಮತಿಭ್ರಮಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂತಹ ವ್ಯಕ್ತಿ 10 ವರ್ಷ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ? ಮುಂಜಾನೆ 3-4 ಗಂಟೆಗೆ ಆತ ಇಲ್ಲಿಗೆ ಬರಲು ಹೇಗೆ ಸಾಧ್ಯ? ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರ್ಣ ಅವರ ಹಸುವಿನ ಕೆಚ್ಚಲನ್ನೇ ಕೊಯ್ದಿದ್ದೇಕೆ? ಎಂದು ಪ್ರಶ್ನೆ ಮಾಡಿದರು.

ಇಲ್ಲಿ ಪಶು ಆಸ್ಪತ್ರೆ ಬಹಳ ಕಡಿಮೆ ಸಂಖ್ಯೆಯಲ್ಲಿದೆ. ಅದರ ಜಾಗ ಲೂಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾತೆ ತಿದ್ದುಪಡಿ ಮಾಡಿ ವಕ್ಫ್‌ ಮಂಡಳಿಗೆ ನೀಡಿದ್ದಾರೆ. ಹಸು ಮಾಲೀಕ ಕರ್ಣನ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಆದರೆ ಹಸುವಿನ ಮೇಲೆ ದಾಳಿ ಮಾಡಿ ಕರ್ಣನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯನವರ ಬಾಯಲ್ಲಿ ಯಾವುದೇ ವಿರೋಧದ ಮಾತು ಬಂದಿಲ್ಲ. ಮುಸಲ್ಮಾನರಿಗೆ ಏನಾದರೂ ಆಗಿದ್ದರೆ ಅವರೇ ಮುಂದೆ ಬಂದು ಮಾತಾಡುತ್ತಿದ್ದರು. ಆದರೆ ಈ ಮತಬ್ಯಾಂಕ್‌ ರಾಜಕಾರಣಕ್ಕೆ ನಾವ್ಯಾರೂ ಹೆದರುವುದಿಲ್ಲ. ಇದು ಧರ್ಮಯುದ್ಧವಾಗಿದ್ದು, ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮಾಡಲಿದೆ. ಗೋವುಗಳ ಹತ್ಯೆ, ಹಿಂದೂಗಳ ಮೇಲಿನ ದಾಳಿ ಖಂಡಿಸಿ ಹೋರಾಡುತ್ತೇವೆ ಎಂದರು.

ತನಿಖೆ ಯಾಕಾಗಿಲ್ಲ?

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿ ಕಬ್ಬಿನ ಗದ್ದೆಯಲ್ಲಿ ಇರಿಸಲಾಗಿತ್ತು. ಆದರೆ ಈ ಪ್ರಕರಣದ ಆರೋಪಿಯನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ತನಿಖೆ ಮಾಡಲು ಆರೋಪಿಯನ್ನು ಕಸ್ಟಡಿಗೆ ಪಡೆಯಬೇಕಿತ್ತು. ಅದನ್ನು ಮಾಡದೆ ತನಿಖೆ ಸ್ಥಗಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯನವರು ಔಟ್‌ ಗೋಯಿಂಗ್‌ ಸಿಎಂ. ಇಂತಹ ಸಮಯದಲ್ಲಿ ಹಾಲು ನೀಡುವ ಹಸುವಿಗೆ ನ್ಯಾಯ ನೀಡುವ ಕೆಲಸ ಮಾಡಲಿ. ಗೋಮಾತೆಗೆ ಮೋಸ ಮಾಡಬೇಡಿ ಎಂದರು.

ಕಾಂಗ್ರೆಸ್‌ ಒಡೆದ ಮನೆಯಾಗಿದ್ದು, ಇನ್ನು ಈ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ಸಿಎಂ ಕುರ್ಚಿಗಾಗಿ ಜಗಳ ನಡೆಯುತ್ತಿದೆ ಎಂದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!