spot_img
Monday, March 16, 2026
spot_img

ಸೋನಿಯಾ ಕಪಿಮುಷ್ಟಿಯಲ್ಲಿಯೂ ಸಿಂಗ್‌ ಕಿಂಗ್‌ ಆಗಿ ಮೆರೆದರು !

ಸಿಖ್ಖರ ದ್ವೇಷ ತಣಿಸಲು ಸೋನಿಯಾ ಮುಂದೆ ತಂದ ಮಾಸ್ಟರ್‌ ಪ್ಲ್ಯಾನ್ ಡಾ. ಸಿಂಗ್‌    

ದೇಶದ ಆರ್ಥಿಕ ಸುಧಾರಣೆಗೆ ಮಹತ್ತರ ಕೊಡುಗೆ ನೀಡಿದ ಸಿಂಗ್, ತಾವು ಎದುರಿಸಿದ ಟೀಕೆಗಳಿಗೆ ಮೌನದಿಂದಲೇ ಮತ್ತು ತಾವು ಜಾರಗೊಳಿಸಿದ ಯೋಜನೆಗಳಿಂದಲೇ ಉತ್ತರಿಸಿದ್ದರು. ಹಾಗಾಗಿ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವ ಕುವೆಂಪು ಅವರ ಮಾತು ಮನಮೋಹನ್‌ ಸಿಂಗ್‌ ಅವರಿಗೆ ಸಾರ್ಥಕವಾಗಿ ಒಪ್ಪುತ್ತದೆ.

ದೇಶ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆ ಎಂದು ಪದೆ ಪದೇ ಕ್ರೆಡಿಟ್‌ ತೆಗೆದುಕೊಳ್ಳುವ ಹಾಲಿ ಪ್ರಧಾನಿಯವರಿಗೆ ಸಿಂಗ್‌ ಪ್ರಧಾನಿಯಾಗಿ ಅಧಿಕಾರದಲ್ಲಿರುವಾಗಲೇ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ಪ್ರಗತಿ ಹೊಂದಿದ ದೇಶವೆಂದು ಭಾರತ ಕರೆಸಿಕೊಂಡಿರುವುದರ ಬಗ್ಗೆ ಅರಿವಿಲ್ಲವೇನೋ. ಬಹುಶಃ ಅದಕ್ಕೆ ಅವರನ್ನು ಹಾಲಿ ಪ್ರಧಾನಿಗಳು ʼಮೌನ ಮೋಹನʼ ಎಂದು ಸಂಬೋಧಿಸಿದ್ದು. ಸಿಂಗ್‌ ಪ್ರಧಾನಿಯಾಗಿದ್ದ ವೇಳೆ ದೇಶದ ಜಿಡಿಪಿ ಅತಿ ವೇಗದಲ್ಲಿ ಪ್ರಗತಿ ಕಂಡಿತ್ತು. 2006-2007ರಲ್ಲಿ ಜಿಡಿಪಿ ಶೇ.10.08ರ ದರದಲ್ಲಿ ಪ್ರಗತಿ ಸಾಧಿಸಿತ್ತು. 2009ರಲ್ಲಿ ಜಿಡಿಪಿ ದರ ಶೇ.9ಕ್ಕೆ ತಲುಪಿತ್ತು. ಆ ಮೂಲಕ ಭಾರತ ಅತಿ ಶೀಘ್ರದಲ್ಲಿ ಬೆಳೆಯುತ್ತಿರುವ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಎಂದೆನ್ನಿಸಿಕೊಂಡಿತ್ತು.

ಸಿಂಗ್‌ ನಿಧನರಾಗುವವರೆಗೆ ಈ ದೇಶದ ಪ್ರಗತಿಗಾಗಿ ಅವರು ಜಾರಿಗೆ ತಂದ ಯೋಜನೆಗಳ ಅರಿವು ಬಹುಶಃ ಬಹುತೇಕರಿಗೆ ಇರಲಿಲ್ಲ. ಕಾಂಗ್ರೆಸಿಗರಿಗೂ ತಿಳಿದಿರಲಿಲ್ಲ. ಬಿಡಿ, ತಮ್ಮದೇ ಸರ್ಕಾರದ ಪ್ರಧಾನಿ ಮಾಡಿದ ಯೋಜನೆಗಳ ಬಗ್ಗೆ ದೇಶಕ್ಕೆ ತಿಳಿ ಹೇಳುವುದಕ್ಕೆ ಸಾಧ್ಯವಾಗದೇ ಇರುವಷ್ಟು ಕಾಂಗ್ರೆಸ್‌ಗೆ ದಾರಿದ್ರ್ಯ. ಕಾಂಗ್ರೆಸ್‌ ಇಂದು ಸಾಲುಸಾಲಾಗಿ ಸೋಲು ಕಾಣುತ್ತಿರುವುದಕ್ಕೆ ಇದೇ ಮುಖ್ಯ ಕಾರಣ. ಆಡಳಿತಾವಧಿಯಲ್ಲಿ ʼದಡ್ಡ ಪ್ರಧಾನಿʼ ಎಂದು ವಿಮರ್ಶಕರ ತೀವ್ರ ಟೀಕೆಗೆ ಒಳಗಾಗಿದ್ದ ಸಿಂಗ್‌, ಎಂದೂ ಕೆರಳಲಿಲ್ಲ. ಸಭ್ಯತೆಯಲ್ಲೇ ನಡೆದುಕೊಂಡಿದ್ದರು. ಇನ್ನು, ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಎದುರಿಸದ ಪ್ರಧಾನಿಯೊಬ್ಬರು, ಇಂತಹ ಧೀಮಂತ ಪ್ರಧಾನಿಯನ್ನು ʼಮೌನ ಮೋಹನʼ ಎಂದು ಹಿಯಾಳಿಸಿರುವುದು ಹಾಸ್ಯಾಸ್ಪದವೇ ಸರಿ ಬಿಡಿ.

ಸಿಖ್‌ ಧರ್ಮದ ಸಮಾಧಾನಕ್ಕೆ ʼಸಿಂಗ್‌ʼ ಪ್ರಧಾನಿ !

ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ವಿಧ್ವಂಸಕ ಮಾರ್ಗ ಹಿಡಿದಿದ್ದ ಬಂಡುಕೋರರ ನಾಯಕ ಭಿಂದ್ರನ್‌ವಾಲೆ, ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಆಶ್ರಯವನ್ನಾಗಿಸಿಕೊಂಡಿದ್ದ. ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಬಂಡುಕೋರರನ್ನು ಹೊರದಬ್ಬಲು ಸೇನೆ ‘ಆಪರೇಷನ್‌ ಬ್ಲೂ ಸ್ಟಾರ್‌'(1984ರ ಜೂನ್‌ 3-8ರವರೆಗೆ) ತಂತ್ರವನ್ನು ಹೆಣೆದಿತ್ತು.

ಅದು ಇಂದಿರಾ ಗಾಂಧಿ ಎರಡನೆ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಹಿಡಿದ ಕಾಲಘಟ್ಟ. ಮೊರಾರ್ಜಿ ದೇಸಾಯಿ ಹಾಗೂ ಚೌಧರಿ ಚರಣ್‌ ಸಿಂಗ್‌ ಅವರು ಕೆಲವು ತಿಂಗಗಳುಗಳ ಕಾಲಕ್ಕೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಳಿಕ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೇರಿದ್ದರು. ಇಂದಿರಾ ಇಂಥದೊಂದು ಗಟ್ಟಿ ನಿರ್ಧಾರ ಮಾಡಿ, ಭಿಂದ್ರನ್‌ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚಿಸಿದ್ದರು. ಅಂದಿನ ಕಾಲಕ್ಕೆ ಇಂದಿರಾಗಾಂಧಿ ತೆಗೆದುಕೊಂಡಿದ್ದ ಈ ನಿರ್ಧಾರ ಇಂದೂ ಕೂಡ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ಆಪರೇಷನ್‌ ಬ್ಲೂಸ್ಟಾರ್‌ ಬಳಿಕ ನಡೆದ ರಾಜಕೀಯ ಬೆಳವಣಿಗೆ ಕಾಂಗ್ರೆಸ್‌ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಕೆಲವರು ಇಂದಿರಾ ಗಾಂಧಿ ಅಂದು ತೆಗದುಕೊಂಡಿದ್ದ ನಿರ್ಧಾರವನ್ನು ಟೀಕಿಸಿದರೇ, ಕೆಲವರು ಹೊಗಳಿ ಕೊಂಡಾಡಿದ್ದರು. ʼಆಪರೇಷನ್‌ ಬ್ಲೂ ಸ್ಟಾರ್‌ʼ ಕಾರ್ಯಾಚರಣೆಗೆ ಪ್ರತಿಕಾರವಾಗಿ ಇಂದಿರಾ ಗಾಂಧಿ ಹತ್ಯೆ ನಡೆಯಿತು. ಆಪರೇಷನ್‌ ನ ಸಂದರ್ಭದಲ್ಲಿ ಸೇನಾ ನಾಯಕರಾಗಿದ್ದ ಜನರಲ್‌(ನಿವೃತ್ತ) ಎ.ಎಸ್‌.ವೈದ್ಯ, ಲೆಫ್ಟಿನೆಂಟ್‌ ಕರ್ನಲ್‌ ಕುಲ್ದೀಪ್‌ ಸಿಂಗ್‌ ಬ್ರಾರ್‌ ಅವರ ಬರ್ಬರ ಹತ್ಯೆಯೂ ಆಯಿತು.

ಇಂದಿರಾ ಗಾಂಧಿ ಅಮೃತಸರರ ಸ್ವರ್ಣಮಂದಿರದೊಳಗೆ  ಸೇನೆಯನ್ನು ನುಗ್ಗಿಸಿ ಕಾರ್ಯಾಚರಣೆ ಮಾಡುವಂತೆ ಆದೇಶ ನೀಡಿರುವುದು ಸಿಖ್‌ ಧರ್ಮದವರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಖ್‌ ಧರ್ಮದವರ ನಂಬಿಕೆಯ ತಾಣವಾಗಿದ್ದ ಅಮೃತಸರದ ಸ್ವರ್ಣಮಂದಿರದ ಮೇಲೆ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಅಂದು ನಿಕೃಷ್ಟ ಕ್ರಮಕ್ಕೆ ಮುಂದಾಗಿದ್ದಕ್ಕೆ ಕಾಂಗ್ರೆಸ್ ಇಂದಿಗೂ ಅದರ ಪರಿಣಾಮ ಅನುಭವಿಸುತ್ತಿದೆ.

1984 ಅಕ್ಟೋಬರ್‌ 31ರಂದು ಇಂದಿರಾ ಗಾಂಧಿಯನ್ನು ಅವರ ಸಿಖ್‌ ಅಂಗರಕ್ಷಕರಾದ ಸತ್ವಂತ್‌ ಸಿಂಗ್‌ ಮತ್ತು ಬಿಯಾಂತ್‌ ಸಿಂಗ್‌ ಗುಂಡಿಟ್ಟು ಕೊಲೆ ಮಾಡಿದರು. ಇನ್ನು, ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ 1981ರ ನವೆಂಬರ್‌ ನಲ್ಲಿ ಮೂರ್ನಾಲ್ಕು ದಿನಗಳ ಕಾಲ ದೆಹಲಿ ಸೇರಿದಂತೆ ದೇಶಾದ್ಯಂತ ಸಿಖ್ಖರ ಮಾರಣಹೋಮ ನಡೆಯಿತು ಎನ್ನುವ ಕರಾಳ ಇತಿಹಾಸವನ್ನು ನಾವು ಕಾಣುತ್ತೇವೆ. ಬರೋಬ್ಬರಿ 3000ಕ್ಕೂ ಹೆಚ್ಚು ಸಿಖ್ಖರ ಹತ್ಯೆಯಾಯಿತು ಎಂದು ಇತಿಹಾಸ ಹೇಳುತ್ತದೆ. ಕಾಂಗ್ರೆಸ್‌ ನಾಯಕರ ಕೈವಾಡವಿತ್ತು ಎಂದು ಹೇಳಲಾಗುವ ಈ ಗಲಭೆಯಲ್ಲಿ ಕಂಡಕಂಡಲ್ಲಿ ಸಿಖ್ಖರನ್ನು ಜೀವಂತವಾಗಿ ಸುಡಲಾಯಿತು ಎಂದು ಹೇಳಲಾಗುತ್ತದೆ.

ಇಂದಿರಾ ಹತ್ಯೆಯ ನಂತರ ಕಾಂಗ್ರೆಸ್‌ ಅನುಕಂಪದ ಆಧಾರದ ಮೇಲೆ ಭರ್ಜರಿ ಜಯ ಸಾಧಿಸಿತ್ತು. ರಾಜೀವ್‌ ಗಾಂಧಿ ಪ್ರಧಾನಿಯಾದರು. 1985ರಲ್ಲಿ ರಾಜೀವ್‌ ಗಾಂಧಿ ಮತ್ತು ಮೃದು ಧೋರಣೆಯ ಅಕಾಲಿ ದಳದ ನಾಯಕ ಹರಿಚರಣ್ ಸಿಂಗ್‌ ಲೊಂಗ್ವೊಲಾ ಪಂಜಾಬ್‌ ಒಪ್ಪಂದಕ್ಕೆ ಸಹಿ ಹಾಕಿದರು.‌ ಈ ಒಪ್ಪಂದದ ಕಾರಣಕ್ಕಾಗಿಯೇ ಲೊಂಗ್ವೊಲಾ ಹತ್ಯೆ ನಡೆಯಿತು. 1995ರಲ್ಲಿ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಬಿಯಂತ್‌ ಸಿಂಗ್ ಹತ್ಯೆಯಾಯಿತು. ಕಾಂಗ್ರೆಸ್‌ನ ಮೇಲೆ ಸಿಖ್‌ ಧರ್ಮದವರಲ್ಲಿ ಆಕ್ರೋಶ ಎಂದೂ ಕಡಿಮೆಯಾಗದಂತೆ ಖಲಿಸ್ತಾನಿಗಳು ನೋಡಿಕೊಂಡರು. ಪ್ರತಿಪಕ್ಷಗಳು ಸಿಖ್ಖರಲ್ಲಿ ಕಾಂಗ್ರೆಸ್‌ ಮೇಲೆ ಹುಟ್ಟಿದ ದ್ವೇಷವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡರು. ಬೇರೆ ಬೇರೆ ಸಂಗತಿಗಳು ಇದರೊಂದಿಗೆ ಸೇರಿಕೊಂಡವು. ಉಳಿದದ್ದು ಇತಿಹಾಸ. ಕಾಂಗ್ರೆಸ್‌ ವರ್ಚಸ್ಸು ಕ್ಷೀಣಿಸಿತ್ತು. ಕಾಂಗ್ರೆಸ್‌ ಮರಳಿ ಬಲ ಕಂಡುಕೊಳ್ಳಲು ಕೆಲವು ವರ್ಷಗಳೇ ಬೇಕಾಯಿತು.

2004ರಲ್ಲಿ ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್‌ ಮರಳಿ ಚೇತರಿಸಿಕೊಂಡಿತ್ತು. ಮೈತ್ರಿಪಕ್ಷಗಳೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂತು. ಸೋನಿಯಾ ಪ್ರಧಾನಿಯಾಗುತ್ತಾರೆಂದು ನಿರೀಕ್ಷೆಯಲ್ಲಿದ್ದ ಕಾಂಗ್ರೆಸಿಗರಿಗೆ ಅಚ್ಚರಿ ಮೂಡಿದ್ದು, ಸೋನಿಯಾ ಮನಮೋಹನ್‌ ಸಿಂಗ್‌ ರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದಾಗ.

ಕಾಂಗ್ರೆಸ್‌ ಮೇಲೆ ಸಿಖ್‌ ಧರ್ಮ ಇರಿಸಿಕೊಂಡಿದ್ದ ಕೋಪ ತಣಿಸುವ ಉದ್ದೇಶದ ಜೊತೆಗೆ ಮೈತ್ರಿ ಪಕ್ಷಗಳನ್ನು ಸಮಧಾನದಲ್ಲಿಡುವುದಕ್ಕೆ ಮನಮೋಹನ್‌ ಸಿಂಗ್‌ ಅಂತಹ ನಾಯಕರು ಸಮರ್ಥರು ಎಂದು ಸೋನಿಯಾ ಭಾವಿಸಿದ್ದರು. 1970-80ರ ದಶಕದಲ್ಲಿ ಖಲಿಸ್ತಾನಿಗಳ ಚಳವಳಿ ಮುಂಪಂಕ್ತಿಗೆ ಬಂದಾಗ 1982 ರಲ್ಲಿ ಕೇಂದ್ರ ಗೃಹ ಸಚಿವ, ಸಿಖ್‌ ಜನಾಂಗದ ಪ್ರಮುಖ ನಾಯಕರಾಗಿದ್ದ ಗ್ಯಾನಿ ಜೈಲ್‌ ಸಿಂಗ್‌ರನ್ನು ರಾಷ್ಟ್ರಪತಿಯನ್ನಾಗಿ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಇನ್ನು, ʼಸೋನಿಯಾ ರಬ್ಬರ್‌ ಸ್ಟ್ಯಾಂಪ್‌ ಮನಮೋಹನ್‌ ಸಿಂಗ್‌ʼ ಎಂಬ ಟೀಕೆ ಕೇಳಿಬಂತು. ಆದರೂ, ಮನಮೋಹನ್‌ ಸಿಂಗ್‌ ರಂತಹ ಪ್ರಧಾನಿಯನ್ನು ಕೊಟ್ಟ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಸೋನಿಯಾ ಅವರ ಉದ್ದೇಶ ಏನೇ ಆಗಿದ್ದರೂ, ಉಳಿದ ಕಾಂಗ್ರೆಸ್‌ನ ಹಿರಿಯ ನಾಯಕರ ನಡುವೆ ಮನಮೋಹನ್‌ ಸಿಂಗ್‌ ಆರ್ಥಿಕವಾಗಿ ಬಳಲುತ್ತಿರುವ ಈ ದೇಶದ ಸ್ಥಿತಿಯನ್ನು ಸುಧಾರಿಸಿಯಾರು ಎಂಬ ನಂಬಿಕೆಯಿಟ್ಟಿದ್ದರು ಎನ್ನುವುದೇ ಇಲ್ಲಿ ಎದ್ದು ಕಾಣುವ ವಿಷಯ.

ಸಿಂಗ್‌ ಅವರನ್ನು ಸೋನಿಯಾ ತಮ್ಮ ಕೈಯೊಳಗೆ ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೂ ಕೂಡ ದೇಶದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಗಳನ್ನು ಪರಿಚಯಿಸುವ ಮೂಲಕ, ದೇಶದ ಅಭಿವೃದ್ಧಿಗೆ ಸಮರ್ಥ ಮುನ್ನುಡಿ ಬರೆದರು. ಮೌಲ್ಯ ವರ್ಧಿತ ತೆರಿಗೆ ವ್ಯವಸ್ಥೆ, ವಿಶೇಷ ಆರ್ಥಿಕ ವಲಯ ಕಾಯ್ದೆ, ನರೇಗಾ ಯೋಜನೆ, ಭಾರತ-ಅಮೇರಿಕಾ ಪರಮಾಣು ಒಪ್ಪಂದ, ಪೊಲೀಯೊ ಮುಕ್ತ ಭಾರತ, ಆರ್‌ಟಿಐ, ಆಧಾರ್‌ ಕಾರ್ಡ್‌, ಚಂದ್ರಯಾನ, ಮಂಗಳಯಾನ ಹೀಗೆ ಅನೇಕ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ಸೋನಿಯಾ ಕಪಿಮುಷ್ಟಿಯಲ್ಲಿಯೂ ʼಸಿಂಗ್‌ ಕಿಂಗ್‌ ಆಗಿʼ ಮೆರೆದರು. ಸಿಂಗ್‌ ಹಾಕಿಕೊಟ್ಟು ಮಾರ್ಗವನ್ನು ಮುರಿಯುವ ಉಪಕ್ರಮಗಳಿಂದ ರಚನೆಗೊಂಡ ಭಾರತದಲ್ಲಿ ನಾವೀಗ ಬದುಕುತ್ತಿದ್ದೇವೆ. ಸಿಂಗ್‌ ತಂದ ಯೋಜನೆಗಳನ್ನು ತಾವೇ ತಂದ ಯೋಜನೆಗಳು ಎಂಬಂತೆ ಹಾಲಿ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಇತ್ತ, ಕಾಂಗ್ರೆಸ್‌ ಬಲಹೀನವಾಗಿದೆ.

ಶ್ರೀರಾಜ್‌ ವಕ್ವಾಡಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!