spot_img
Sunday, February 15, 2026
spot_img

ಅಪ್ಪಣ್ಣ ಹೆಗ್ಡೆ-90 : ಅರ್ಥಪೂರ್ಣ ಆಚರಣೆಗೆ ಸಮಿತಿ ನಿರ್ಧಾರ : ಡಾ. ಎಂ. ಮೋಹನ್‌ ಆಳ್ವ

ಜನಪ್ರತಿನಿಧಿ (ಕುಂದಾಪುರ) : ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ಡಿ.24 ರಂದು 90 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಅವರು ಹುಟ್ಟು ಹಬ್ಬವನ್ನು ಸಾರ್ವಜನಿಕ ಭಾಗೀದಾರಿಕೆಯೊಂದಿಗೆ ಹೆಚ್ಚು ವೈಭವಕ್ಕೆ ಒತ್ತು ನೀಡದೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಚಿಂತನೆಯಲ್ಲಿ ಸಮಾನ ಮನಸ್ಕರು ಸೇರಿಕೊಂಡು ನಿರ್ಧರಿಸಿದ್ದೇವೆ ಎಂದು ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್‌ ಆಳ್ವ ಹೇಳಿದರು.

ಇಂದು(ಶುಕ್ರವಾರ) ಗುರುಕುಲ ಪಬ್ಲಿಕ್‌ ಸ್ಕೂಲ್‌ ವಕ್ವಾಡಿಯಲ್ಲಿರುವ ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ಕಾರ್ಯಾಲಯದಲ್ಲಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮೋಹನ್‌ ಆಳ್ವ ಮಾತನಾಡಿದರು.

ಬಿ.ಅಪ್ಪಣ್ಣ ಹೆಗ್ಡೆ ಅವರ 90 ರ ಹುಟ್ಟು ಹಬ್ಬವನ್ನು ಸಂಭ್ರಮವನ್ನಾಗಿಸುವ ಕಲ್ಪನೆಯೊಂದಿಗೆ, ಹೆಗ್ಡೆಯವರ ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ವಿಚಾರ ವಿನಿಮಯ ನಡೆಸಿ ಅವರ ಅಭಿಪ್ರಾಯವನ್ನೂ ಪಡೆದುಕೊಂಡು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮ ಹಿಂದಿನ ಯಾವುದೇ ಕಾರ್ಯಕ್ರಮಗಳಂತಾಗದೆ ವಿಭಿನ್ನವಾಗಿ ಮೂಡಿ ಬಂದು, ದಾಖಲೆಯಾಗಿ ಉಳಿಯಬೇಕು ಎನ್ನುವ ಸದುದ್ದೇಶದಿಂದ ಈಗಾಗಲೇ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

ಹುಟ್ಟು ಹಬ್ಬದ ಆಚರಣೆ ಕೇವಲ ಒಂದು ದಿನಕ್ಕೆ ಮುಗಿಯಬಾರದು ಎನ್ನುವ ನೆಲೆಯಲ್ಲಿ ಅಪ್ಪಣ್ಣ ಹೆಗ್ಡೆಯವರಿಗೆ ಆಸಕ್ತಿ ಇರುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಬೇಕು ಎನ್ನುವ ಉದ್ದೇಶವನ್ನು ಇರಿಸಿಕೊಂಡು ಬೈಂದೂರಿನ ಕುಡೂರಿನ ಎಲ್ಲೂರು ಕಂಬಳ ಹಾಗೂ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಮೂಡುಬಿದಿರೆ ಆಳ್ವಾಸ್ ಸಾಂಸ್ಕೃತಿಕ ಲೋಕ 2024 ಕಾರ್ಯಕ್ರಮಗಳನ್ನು ಸಾವಿರಾರು ಮಂದಿಯ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಅನಾವರಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ,ದೇವವ್ಯಕ್ತ ಅಭಿಯಾನ, ಗ್ರಾಮೀಣ ಪ್ರದೇಶದಲ್ಲಿ ರಂಗ ಮಂಟಪ ನಿರ್ಮಾಣ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮಗಳ ವಿವರ :

ಡಿಸೆಂಬರ್ 24 ರಂದು ಸಂಜೆ 5 ಗಂಟೆಯಿಂದ ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಬಯಲು ಅವರಣದಲ್ಲಿ ಬಿ.ಅಪ್ಪಣ್ಣ ಹೆಗ್ಡೆ ಅವರ 90 ರ ಹುಟ್ಟು ಹಬ್ಬವನ್ನು ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಸಂಜೆ 4 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 5 ರಿಂದ ಪ್ರಧಾನ ವೇದಿಕೆಯಲ್ಲಿ ಮಂಗಳೂರಿನ ಜರ್ನಿ ಥೇಟರ್ ತಂಡದವರಿಂದ ‘ಬೇಲಿ ಮುಳ್ಳಿನ ನೀಲಿ ಹೂಗಳು’ ರಂಗ ಗೀತೆ ಹಾಗೂ ಜಾನಪದ ಗೀತೆಗಳ ಪ್ರಸ್ತುತಿ ನಡೆಯಲಿದೆ ಎಂದು ಆಳ್ವ ತಿಳಿಸಿದರು.

ಇನ್ನು, ಸಂಜೆ 6.30 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ವರ್ಷಂಪ್ರತಿಯಂತೆ ಈ ಬಾರಿಯೂ ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಸ್ಮರಣೀಯ ಕೊಡುಗೆ ನೀಡಿದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಸಾಧಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಬಸ್ರೂರು ಅಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೀಡುವ ದತ್ತಿ ನಿಧಿ ವಿತರಣೆಯೂ ಅದೇ ವೇದಿಕೆಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಸಂಗಮ’ ಹಾಗೂ ʼಬಿಡುವನೆ ಬ್ರಹ್ಮಲಿಂಗʼ ಖ್ಯಾತಿಯ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರುಗಳಿಂದ ʼಕೊಲ್ಲೂರು ಶ್ರೀ ಮೂಕಾಂಬಿಕೆʼ ನೃತ್ಯಗಾಥೆ ಹಾಗೂ ನೃತ್ಯಗಳನ್ನು ಒಳಗೊಂಡಿರುವ ಸಾಂಸ್ಕೃತಿಕ ರಸೋಲ್ಲಾಸ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಭಾಶ್‌ ಚಂದ್ರ ಶೆಟ್ಟಿ ಬಾಂಡ್ಯ ಮಾತನಾಡಿ, ಪ್ರಧಾನ ವೇದಿಕೆಯಲ್ಲಿ ಯಾವುದೇ ಸಾರ್ವಜನಿಕ ಸನ್ಮಾನ, ಶುಭಾಶಯಗಳ ಅರ್ಪಣೆ ಹಾಗೂ ಅಭಿನಂದನ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಸಭಾ ಕಾರ್ಯಕ್ರಮ ಮುಗಿದ ಬಳಿಕ ಉಪ ವೇದಿಕೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷರಾದ ರಾಮ್‌ ಕಿಶನ್ ಹೆಗ್ಡೆ ಮಾತನಾಡಿ, ರಾತ್ರಿಯ ಚಂದ್ರನ ಹೊನಲು ಬೆಳಕಿನಲ್ಲಿ ಅಮಂತ್ರಿತರೊಂದಿಗೆ ಸಹ ಭೋಜನ ನಡೆಯಲಿದೆ. ಕಾರ್ಯಕ್ರಮಕ್ಕೆ ಅಂದಾಜು 10,000ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

(ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವ ಕಾರ್ಯಕ್ರಮ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು.)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!