spot_img
Sunday, December 22, 2024
spot_img

ದಲಿತ ವಿರೋಧಿ ಕಾಂಗ್ರೆಸ್ ಪಕ್ಷದ ಆಷಾಢಭೂತಿತನವನ್ನ ಮರೆಮಾಚಲು ಸಾಧ್ಯವೇ ಇಲ್ಲ : ಆರ್.‌ ಅಶೋಕ್‌

ಜನಪ್ರತಿನಿಧಿ (ಬೆಂಗಳೂರು) : ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷವಿದ್ದವರು… ಎಂಬ ಕನಕದಾಸರ ವಾಣಿಯಂತೆ, ಬಾಯಿ ಚಪಲಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಮೇಲೆ ತೋರಿಕೆಯ ಪ್ರೀತಿ, ಗೌರವ ಪ್ರದರ್ಶನ ಮಾಡುವ ನಿಮ್ಮ ಮನಸ್ಥಿತಿಯನ್ನು ಬದಿಗಿರಿಸಿ ಸಿಎಂ ಸಿದ್ದರಾಮಯ್ಯನವರೇ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

ಅಮಿತ್‌ ಶಾ ರಾಜ್ಯಸಭೆ ಅಧಿವೇಶನದಲ್ಲಿ ಅಂಬೇಡ್ಕರ್‌ ಬಗ್ಗೆ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬಹಿರಂಗ ಪತ್ರ ಬರೆದಿರುವುದನ್ನು ಉಲ್ಲೇಖಿಸಿ ಆರ್.‌ ಅಶೋಕ್‌ ಟೀಕಿಸಿದ್ದಾರೆ.

ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅಂಬೇಡ್ಕರ್‌ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದ, ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೀಚ ಮನಸ್ಥಿತಿ ನಿಮ್ಮ ಕಾಂಗ್ರೆಸ್ ಪಕ್ಷದ್ದು‌. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣವನ್ನ ತಿರುಚಿ ಮತ್ತೊಮ್ಮೆ ಬಾಬಾ ಸಾಹೇಬರನ್ನು ಅವಮಾನಿಸುತ್ತಿದ್ದೀರಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮಾಡಿದ ಮಹಾ ಮೋಸವನ್ನು, ಮಹಾ ಅಪಮಾನಗಳನ್ನ ಎಳೆ ಎಳೆಯಾಗಿ ದೇಶದ ಜನತೆಯ ಮುಂದೆ ಬಿಚ್ಚಿಟ್ಟ ಅಮಿತ್ ಶಾ ಅವರ ಭಾಷಣದಿಂದ ತಮಗೆ ಮುಜುಗರ, ಹತಾಶೆ ಆಗಿರುವುದು ಆಶ್ಚರ್ಯವೇನಲ್ಲ. ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡು ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ದೇಹದ ಜನ ತಿರಸ್ಕಾರ ಮಾಡದಿದ್ದರೆ ಇವತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೂಡಾ ಭಾರತ ರತ್ನ ಸಿಗುತ್ತಿತ್ತೇನೋ ಆದರೆ ಅಂಬೇಡ್ಕರ್ ಅವರಿಗೆ ಸಿಗುತ್ತಿರಲಿಲ್ಲ. ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಎಂಬ ಪರಮೋಚ್ಛ ಗೌರವ ಲಭಿಸಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ಬರಬೇಕಾಯಿತು ಎಂದರು.

ಬಾಬಾ ಸಾಹೇಬರ ಶವಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡದಿದ್ದರೆ, ಅಂಬೇಡ್ಕರ್‌ ಜನಿಸಿದ, ವಿದ್ಯಾಭ್ಯಾಸ ಮಾಡಿದ, ಗತಿಸಿದ ಸ್ಥಳ ಸೇರಿದಂತೆ ಅವರಿಗೆ ಸಂಬಂಧಪಟ್ಟ ಐದು ಪ್ರಮುಖ ಸ್ಥಳಗಳು ಇಂದು ಪಂಚತೀರ್ಥಗಳಾಗುತ್ತಿರಲಿಲ್ಲ. ಹತ್ತಾರು ಕೋಟಿ ಖರ್ಚು ಮಾಡಿ ‘ಸಿದ್ದರಾಮೋತ್ಸವ’ ಮಾಡಿಸಿಕೊಳ್ಳುವ ತಮಗೆ ‘ಅಂಬೇಡ್ಕರ್ ಉತ್ಸವ’ ಮಾಡಬೇಕು ಅನ್ನಿಸೋದೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ನೆನಪಾಗೋದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಕುರ್ಚಿಗಾಗಿ, ಅಧಿಕಾರಕ್ಕಾಗಿ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ದುಂಬಾಲು ಬೀಳುವ ತಮಗೆ, ಇಂದಿರಾ ಕ್ಯಾಂಟೀನ್ ಬದಲು ಅಂಬೇಡ್ಕರ್ ಕ್ಯಾಂಟೀನ್ ಎಂದು ಹೆಸರಿಡಬಹುದಾಗಿತ್ತು ಎಂದು ಅನ್ನಿಸಲೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ಅವರ ಬಗ್ಗೆ ಬದ್ಧತೆಯೇ ಇಲ್ಲ. ಆರೂವರೆ ವರ್ಷ ಮುಖ್ಯಮಂತ್ರಿ ಆಗಿರುವ ತಾವು ಯಾವುದಾದರೂ ಒಂದು ಯೋಜನೆಗೆ, ಒಂದು ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅವರ ಹೆಸರಿಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಅಮಿತ್ ಶಾ ಅವರ ಭಾಷಣವನ್ನು ತಿರುಚಿ, ಅರ್ಧ ಸತ್ಯ ಹೇಳುವ ವಿಡಿಯೋ ಹಾಕಿ ತಾವು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಹುದಷ್ಟೇ. ಆದರೆ ಅಂಬೇಡ್ಕರ್ ಅವರ ಬಗ್ಗೆ, ಅವರು ರಚಿಸಿದ ಸಂವಿಧಾನದ ಬಗ್ಗೆ ತಮ್ಮ ಹಾಗು ತಮ್ಮ ದಲಿತ ವಿರೋಧಿ ಕಾಂಗ್ರೆಸ್ ಪಕ್ಷದ ಆಷಾಢಭೂತಿತನವನ್ನ ಮರೆಮಾಚಲು ಸಾಧ್ಯವೇ ಇಲ್ಲ. ಅಂಬೇಡ್ಕರ್ ಅವರ ಬಗ್ಗೆ ತಮ್ಮದು ಅಂತರಂಗ ಶುದ್ಧಿಯೂ ಇಲ್ಲದ, ಬಹಿರಂಗ ಶುದ್ಧಿಯೂ ಇಲ್ಲದ ಚುನಾವಣಾ ಬೂಟಾಟಿಕೆ ಮಾತ್ರ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಹೇಳಿದ್ದಾರೆ.

https://x.com/RAshokaBJP/status/1869294361650896989

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!