spot_img
Saturday, December 21, 2024
spot_img

ಹಿಯಾಳಿಕೆಯಲ್ಲೇ ಕಳೆದು ಹೋದ ಸಂವಿಧಾನ ಕುರಿತ ಚರ್ಚೆ

ʼಸಂವಿಧಾನʼ ಆರೋಪ, ಪತ್ಯಾರೋಪಗಳಿಗೆ ಸೀಮಿತವಾಗುವಷ್ಟು ಹಗುರಾದುದಲ್ಲ !

ಸಂವಿಧಾನದ ಮೇಲಿನ ಎರಡು ದಿನಗಳ ಲೋಕಸಭೆಯ ವಿಶೇಷ ಚರ್ಚೆ, ಸಂವಿಧಾನ ಅಪಾಯದಲ್ಲಿದೆ ಎಂಬ ಕಾಂಗ್ರೆಸ್‌ ಸೇರಿ ವಿಪಕ್ಷಗಳ ಆರೋಪದಲ್ಲೇ ಮುಳುಗಿತ್ತು. ಸಂವಿಧಾನ ಅಂಗೀಕರಿಸಿ 75ನೇ ವರ್ಷಾಚರಣೆಯ ಭಾಗವಾಗಿ ಸಂವಿಧಾನದ ಬಗ್ಗೆ ಒಂದು ಆತ್ಮಾವಲೋಕನ ಮಾಡುವ ವೇದಿಕೆಯಾಗಿ ಅಧಿವೇಶನ ಪರಿವರ್ತನೆಯಾಗಬೇಕಿತ್ತು. ಸಂವಿಧಾನ ಅಪಾಯದಲ್ಲಿದೆ ಎನ್ನುವ ಅಭಿಪ್ರಾಯವನ್ನು ಹೋಗಾಲಾಡಿಸುವಲ್ಲಿ ಸಂವಿಧಾನ ಹಾಗೂ ಭಾರತ ದೇಶದ ಭವಿಷ್ಯದ ಬಗ್ಗೆ ಸಂವಾದ ನಡೆಸುವ ವೇದಿಕೆಗೆ ಅಧಿವೇಶನ ಬದಲಾಗಬೇಕಿತ್ತು. ಆದರೇ, ಇವು ಯಾವುವೂ ಆಗದೆ ಜಗಳಕ್ಕೆ ಕಾರಣವಾಗಿದ್ದು ದುರಂತವೇ ಸರಿ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ ಗಳು ಒಂದು ಆರೋಗ್ಯಪೂರ್ಣ ಚರ್ಚೆಗೆ ಆಸ್ಪದ ನೀಡುವ ವೇದಿಕೆಗಳಾಗಬೇಕು ಹೊರತು, ಅದು ಜಗಳಕ್ಕೆ ವೇದಿಕೆಯಾಗಬಾರದು.

ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಡಿಯಲ್ಲಿ ಒಂದು ಆರೋಗ್ಯಕರ ಚರ್ಚೆ ನಡೆಯುವ ವೇದಿಕೆಗಳನ್ನೇ ಈ ದೇಶ ಕಳೆದುಕೊಳ್ಳುತ್ತಿದೆ ಎಂದೇ ಕಾಣಿಸುತ್ತಿದೆ. ಆಡಳಿತ ಪಕ್ಷ, ವಿಪಕ್ಷಗಳೆರಡೂ ಯಾವುದೇ ವಿಚಾರಪೂರ್ಣ ಆತ್ಮಾವಲೋಕನಕ್ಕಾಗಲಿ, ಸಂವಾದಕ್ಕಾಗಲಿ, ಚರ್ಚೆಗಾಗಲಿ ಮುಂದಾಗುತ್ತಿಲ್ಲ. ಸದಾ ಒಂದು ಸಂಘರ್ಷವನ್ನು, ಅನಗತ್ಯ ವಿವಾದಗಳನ್ನೇ ಚಾಲ್ತಿಯಲ್ಲಿಡುವ ಪ್ರಯತ್ನ ಮಾಡುತ್ತಿವೆ ಎನ್ನುವುದು ವಿಷಾದನೀಯ ಸಂಗತಿ.

ಎಲ್ಲಾ ಪಕ್ಷಗಳಿಗೂ ಲೋಕಸಭಾ ಚುನಾವಣೆಯ ಸಮಯದಲ್ಲಿ ʼಸಂವಿಧಾನʼವೇ ಪ್ರಮುಖ ಪ್ರಚಾರದ ವಿಷಯವಾಗಿತ್ತು. ಬಿಜೆಪಿ, ಕಾಂಗ್ರೆಸ್ ಆಡಳಿತಗಳ ಲೋಪಗಳನ್ನು ಎತ್ತಿ ತೋರಿಸಿತ್ತು. ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟದ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ʼಸಂವಿಧಾನʼ ಅಪಾಯದಲ್ಲಿದೆ ಎಂದು ಜನರ ಮುಂದೆ ಇಡುವಲ್ಲಿ ಪ್ರಯತ್ನಿಸಿದ್ದವು. ಅಧಿವೇಶನದಲ್ಲೂ ಅದೇ ಆರೋಪ, ಪ್ರತ್ಯಾರೋಪ. ಸಂವಿಧಾನದ ಮೇಲಿನ ಎರಡು ದಿನಗಳ ಲೋಕಸಭೆಯ ವಿಶೇಷ ಚರ್ಚೆಯನ್ನು  ಆಡಳಿತಾರೂಢ ಬಿಜೆಪಿ ಹಾಗೂ ಅದರ ನೇತೃತ್ವದ ಮೈತ್ರಿ ಪಕ್ಷದ ನಾಯಕರು ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿಯಲು ಈ ಅವಕಾಶವನ್ನು ಬಳಸಿಕೊಂಡರು. ಏಕರೂಪ ನಾಗರಿಕ ಸಂಹಿತೆಯ ಅಗತ್ಯದ ಬಗ್ಗೆ ಸಮರ್ಥಿಸಿಕೊಂಡರು. ತೀರಾ ಸಾಮನ್ಯವೆಂಬಂತೆ ಕಾಂಗ್ರೆಸ್‌ ಹಾಗೂ ಅದರ ನೇತೃತ್ವ ಮೈತ್ರಿಕೂಟದ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಸಂವಿಧಾನವನ್ನೇ ಬದಲಿಸುವ ಕೆಲಸಕ್ಕೆ ಮುಂದಾಗುತ್ತಿದೆ ಎಂಬ ಆರೋಪವನ್ನೇ ಪುನರ್‌ ಉಚ್ಛರಿಸಿದವು ಬಿಟ್ಟರೇ, ಮತ್ತೇನೂ ಆಗಿಲ್ಲ. ಉಭಯ ಪಕ್ಷಗಳು ತಮ್ಮ ತಮ್ಮ ವೈಫಲ್ಯಗಳನ್ನು ಪರಸ್ಪರರನ್ನು ದೂರುವುದರಲ್ಲೇ, ಹಿಯ್ಯಾಳಿಕೆಯಲ್ಲೇ ಕಾಲ ಕಳೆದವು.

ಈ ಹಿಂದೆ ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಮತ್ತು ಮೊದಲ ಕಲಾಪ ನಡೆಸುವ ವೇಳೆ ಕಾನೂನು ಸಚಿವಾಲಯ ಎಲ್ಲಾ ಸಂಸದರಿಗೆ ಸಂವಿಧಾನದ ಪ್ರತಿಯನ್ನು ಉಡುಗೊರೆಯಾಗಿ ನೀಡಿತ್ತು. ಉಡುಗೊರೆಯಾಗಿ ನೀಡಲಾದ ಸಂವಿಧಾನದ ಪ್ರತಿಯ ಪ್ರಸ್ತಾವನೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಕೈಬಿಡಲಾಗಿತ್ತು. ಆಡಳಿತರೂಢ, ವಿಪಕ್ಷಗಳ ದೊಡ್ಡ ಮಟ್ಟದ ಆರೋಪ, ಪ್ರತ್ಯಾರೋಪಗಳಿಗೆ ಈ ವಿಚಾರ ಗ್ರಾಸವಾಗಿತ್ತು. ಸಂವಿಧಾನದ ಮೂಲ ಪ್ರತಿಯಲ್ಲಿ ಈ ಪದಗಳು ಇರಲಿಲ್ಲ ಎಂದು ಕೇಂದ್ರ ಕಾನೂನು ಸಚಿವಾಲಯ ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿತ್ತು. ಆದರೆ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾದ ಅಂಶಗಳನ್ನು ಮನಸೋಇಚ್ಛೆ ಬದಲಿಸುವ ಸರ್ಕಾರದ ನಡೆ, ಸಂವಿಧಾನದ ತಿರುಚುವಿಕೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿದವು.

ಈ ಹಿಂದೆ ಸಂವಿಧಾನದ ಮೂಲ ರಚನೆ ಸಿದ್ಧಾಂತಕ್ಕೆ ಸಂಬಂಧಪಟ್ಟಂತೆ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಡುವೆ ಜಟಾಪಟಿಗಳೇ ನಡೆದಿವೆ. ಕೊಲಿಜಿಯಂ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕು ಎಂಬ ಪ್ರಸ್ತಾವದ ಸಂದರ್ಭದಲ್ಲೂ ‘ಸಂವಿಧಾನ ಮೂಲ ರಚನೆ ಸಿದ್ಧಾಂತ’ ಚರ್ಚೆ ಮುನ್ನೆಲೆಗೆ ಬಂದಿತ್ತು ಎನ್ನುವುದು ಉಲ್ಲೇಖಾರ್ಹ. ಆಡಳಿತಾರೂಢ ಬಿಜೆಪಿಯ ಹಲವು ನಾಯಕರು ಸಂವಿಧಾನವನ್ನು ಬದಲಿಸಬೇಕು ಎಂದು ಅನೇಕ ಬಾರಿ ಚುನಾವಣೆಯ ಸಂದರ್ಭಗಳಲ್ಲಿ ಸಾರ್ವಜನಿಕವಾಗಿಯೇ ಭಾಷಣ ಬಿಗಿದಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ವಿಪಕ್ಷಗಳು, ‘ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಹ ಇಂತಹ ಕೃತ್ಯ ಸಂವಿಧಾನದ ಮೇಲಿನ ದಾಳಿ’ ಎಂದು ಆಪಾದಿಸಿವೆ. ಹೀಗೆ ಬರೀ ಆರೋಪ, ಪ್ರತ್ಯಾರೋಪಗಳಿಗಷ್ಟೇ ಈ ʼಸಂವಿಧಾನʼ ವಿಚಾರ ಸೀಮಿತವಾಗುತ್ತಿದೆ ಎನ್ನುವುದು ನಿಜಕ್ಕೂ ವಿಷಾದನಿಯ.

ಆಡಳಿತ ಪಕ್ಷಕ್ಕಾಗಲಿ ಅಥವಾ ವಿಪಕ್ಷಗಳಿಗಾಗಲಿ ʼಸಂವಿಧಾನʼದ ಮೇಲೆ ನಿಜವಾದ ಕಾಳಜಿ ಇದ್ದಿದ್ದರೇ, ಅರ್ಥಪೂರ್ಣವಾದ ಚರ್ಚೆಗೆ ಅವಕಾಶ ಮಾಡಿಕೊಡಬೇಕಿತ್ತು. ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡುವುದು, ಅಧಿಕಾರ ಸ್ವೀಕರಿಸುವಾಗ ಸಂವಿಧಾನದ ಪುಸ್ತಕಕ್ಕೆ ತಲೆಯಿಟ್ಟು ನಮಸ್ಕರಿಸಿದರಷ್ಟೇ ಸಾಲದು ಎನ್ನುವುದನ್ನು ಅರ್ಥೈಸಿಕೊಳ್ಳಬೇಕಾದ ತುರ್ತಿದೆ.

ಸಂವಿಧಾನದ ಚರ್ಚೆಯಲ್ಲಿ ಪ್ರಿಯಾಂಕ ಮೇಲೆ ಸ್ಪಾಟ್ಲೈಟ್ : 

ಸಂಸದೆ ಪ್ರಿಯಾಂಕ ಗಾಂಧಿ, ಸಂವಿಧಾನದ ಚರ್ಚೆಯಲ್ಲಿ ತಮ್ಮ ಛಾಪು ಮೂಡಿಸಿದರು. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಎಂದೂ ಮೊದಲ ಅವಧಿಯ ಸಂಸದರಿಗೆ ವಿಪಕ್ಷಗಳ ಪರವಾಗಿ ಚರ್ಚೆಯನ್ನು ಆರಂಭಿಸುವ ಜವಾಬ್ದಾರಿಯನ್ನು ಹಿಂದೆಂದೂ ನೀಡಿಲ್ಲ. ಸಹಜವಾಗಿ, ಕಾಂಗ್ರೆಸ್ ಕುಟುಂಬದ ಸದಸ್ಯೆಯಾಗಿ ‘ಹಕ್ಕು’ ಸ್ಥಾನಮಾನ ಪ್ರಿಯಾಂಕ ಅವರಿಗೆ ಈ ಅವಕಾಶ ದೊರಕುವಲ್ಲಿ ಮುಖ್ಯ ಕಾರಣವಾಗಿದೆ. ಅದನ್ನು ಪ್ರಿಯಾಂಕ ವಿವೇಚನೆಯಿಂದ, ಸಮರ್ಥವಾಗಿ ಬಳಸಿಕೊಂಡರು ಎನ್ನುವುದು ಅಷ್ಟೇ ಸತ್ಯ.

ಪ್ರಿಯಾಂಕ ಮಾತಿನಲ್ಲಿ ಯಾವುದೇ ಕ್ಷುಲ್ಲಕ ವಿಷಯಗಳು ಇರಲಿಲ್ಲ. ತೀರಾ ಅವ್ಯವಸ್ಥೆಯನ್ನು ಪ್ರಚೋದಿಸದಂತೆ, ಆಡಳಿತ ಪಕ್ಷವನ್ನು ತೀರಾ ಟೀಕಿಸಿದಂತೆ ಮತ್ತು ಸ್ವಪಕ್ಷವನ್ನು ತೀರಾ ಸಮರ್ಥಿಸಿಕೊಳ್ಳದಂತೆಯೂ ಮಾತನಾಡಿದ ಅವರು, ಸಂವಿಧಾನದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಚರ್ಚೆಯಲ್ಲಿ ಪ್ರಧಾನಿ ಸದನದಲ್ಲಿ ಯಾಕೆ ಹಾಜರಿರಲಿಲ್ಲ ಎಂದವರು ಕಟುವಾಗಿ ಪ್ರಶ್ನಿಸಿದರು.

ಪ್ರಿಯಾಂಕ ಅವರ ಮಾತುಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸೂಚ್ಯವಾಗಿ ಟೀಕಿಸುವಂತೆ, ವಿಡಂಬನೆ ಮಾಡುವಂತಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರಿಯಾಂಕ ನಡುವೆ ನಡೆದ ಒಂದು ಶೀತಲ ವಾಕ್ಸಮರ ಎರಡು ದಿನಗಳ ಚರ್ಚೆಯುದ್ದಕ್ಕೂ ಉಳಿದುಕೊಂಡಿತು. ಇಬ್ಬರೂ ತಮ್ಮ ತಮ್ಮ ನಿಲುವುಗಳನ್ನು ಪ್ರತಿಧ್ವನಿಸಿದರು. ಎರಡೂ ಕಡೆಗಳಿಂದಲೂ ಅನೇಕ ಫ್ಲ್ಯಾಶ್‌ಪಾಯಿಂಟ್‌ಗಳು ಇದ್ದವು ಎನ್ನುವುದು ಉಲ್ಲೇಖಾರ್ಹ.

ಲಡ್ಕಿ ಹೂಂ, ಲಾಡ್‌ ಸಕ್ತಿ ಹೂಂ (ನಾನು ಮಹಿಳೆ ಮತ್ತು ನಾನೂ ಹೋರಾಡಬಲ್ಲೆ) ಎಂದು ಹೇಳುವುದರ ಮೂಲಕ ಉತ್ತರ ಪ್ರದೇಶದ ಮೂಲಕ ದೇಶದಾದ್ಯಂತ ಬಾರಿ ಸದ್ದು ಮಾಡಿದ್ದ ಪ್ರಿಯಾಂಕ, ಸಂವಿಧಾನ ರಚನೆಗೆ ಮಹತ್ವದ ಪಾತ್ರ ನಿಭಾಯಿಸಿದವರನ್ನು ನೆನಪಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಸಂವಿಧಾನದ ಬಗ್ಗೆ ಭಾಷಣದಲ್ಲಿ ಮೌಲಾನಾ ಆಜಾದ್, ಸಿ. ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವರ ಕೊಡುಗೆಯನ್ನು ಉಲ್ಲೇಖಿಸಿದರು. ಆದರೇ, ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದ ಡಾ ರಾಜೇಂದ್ರ ಪ್ರಸಾದ್‌, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ ಯಾವುದೇ ಉಲ್ಲೇಖಿಸದೇ ಮುಂದುವರಿದಿದ್ದು ಬಿಜೆಪಿ ಟೀಕೆಗೆ ಕಾರಣವಾಯಿತು. ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮೊಹುವಾ ಮೊಯಿತ್ರಾ ಅವರ ಭಾಷಣದಲ್ಲಿ ಜವಹರಲಾಲ್‌ ನೆಹರೂ ಅವರ ಸಹೋದರಿ ವಿಜಯಲಕ್ಷ್ಮೀ ಪಂಡಿತ್‌ ಅವರನ್ನು ಸ್ಮರಿಸಿಕೊಂಡಿದ್ದು ಕಾಂಗ್ರೆಸ್‌ಗೂ ಅಚ್ಚರಿಯಾಯ್ತು.

ಪ್ರಿಯಾಂಕ ಸಂಸದೆಯಾಗುವುದಕ್ಕೂ ಮುನ್ನವೇ ಕಾಂಗ್ರೆಸಿಗರಲ್ಲಿ ಭರವಸೆ ಮೂಡಿಸಿದವರು. ಸಂಸದೆಯಾದ ಮೇಲಂತೂ ರಾಹುಲ್‌ ಗಾಂಧಿ ಅವರಿಗಿಂತ ಹೆಚ್ಚು ಪ್ರಿಯಾಂಕ ಅವರ ಮೇಲೆ ಭರವಸೆ ಕಾಂಗ್ರೆಸಿಗರಲ್ಲಿದೆ. ಆ ಭರವಸೆಯನ್ನು ಪ್ರಿಯಾಂಕ ಉಳಿಸಿಕೊಳ್ಳಬೇಕಿದೆ. ಪ್ರಿಯಾಂಕ ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಳ್ಳಬೇಕೆಂದರೆ, ಅಜ್ಜ ಫಿರೋಜ್ ಗಾಂಧಿಯವರ ಸಂಶೋಧನೆ ಮತ್ತು ಶಿಷ್ಟಾಚಾರವನ್ನು ಅನುಕರಿಸಲು ಪ್ರಯತ್ನಿಸಬೇಕು ಮತ್ತು ರಾಹುಲ್ ಗಾಂಧಿ ಅವರ ಅಪಘರ್ಷಕ ಪ್ರಭಾವದಿಂದ ದೂರವಿರಬೇಕು ಎಂದನ್ನಿಸುತ್ತದೆ.

ಬರೀ ಆಡಳಿತ ಪಕ್ಷವನ್ನು ಟೀಕಿಸುವಷ್ಟು ʼಸಂವಿಧಾನʼದ ಚರ್ಚೆ ಹಗುರವಾದುದಲ್ಲ. ಸಂವಿಧಾನದ ಮಹತ್ವವನ್ನು, ಗಂಭೀರತೆಯನ್ನು ಸರಿಯಾಗಿ ಅರ್ಥೈಸಿಕೊಂಡು, ಆಡಳಿತ ಪಕ್ಷವನ್ನು ಚರ್ಚೆಗೆ ಬರುವಂತೆ ಆಹ್ವಾನಿಸುವುದೂ ವಿಪಕ್ಷದ ಜವಾಬ್ದಾರಿ. ಆ ನೆಲೆಯಲ್ಲಿ ಪ್ರಿಯಾಂಕ ಒಂದು ಒಳ್ಳೆಯ ಆರಂಭವನ್ನೇ ನೀಡಿದ್ದಾರೆ ಎನ್ನಬಹುದು. ಆದರೇ, ಈ ಚಿಲ್ಲರೆ ಟೀಕೆಗಳಿಂದ ʼಅಪಾಯದಲ್ಲಿರುವ ಸಂವಿಧಾನʼ ಚರ್ಚೆ ವ್ಯರ್ಥವಾಗುವಂತಾಯಿತು. ಇಂತಹ ಆರೋಪ ಪ್ರತ್ಯಾರೋಪಗಳಲ್ಲೇ ಮುಂದೆಯೂ ಈ ಸಂವಿಧಾನದ ಚರ್ಚೆ ಮುಂದುವರಿದರೇ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಸೇರಿ ದೇಶದ ಜನರಿಗೆ ಬಗೆಯುವ ದ್ರೋಹವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!