spot_img
Friday, December 20, 2024
spot_img

ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ | ಕನ್ನಡ ಉಳಿಯಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಮಂಡ್ಯ) : ಮಂಡ್ಯ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ ಅಪಾರ. ಕ್ರಿ.ಶ 10ನೇ ಶತಮಾನದ ಆತಕೂರಿನ ಶಾಸನ ನಾಡಿನ ಹಳೆಯ ಶಾಸನಗಳಲ್ಲೊಂದು. ನಾಯಿಯೊಂದರ ವೀರ ಮರಣವೂ ಇತಿಹಾಸದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಶಾಸನ ಮತ್ತು ಅಲ್ಲಿ ಬಳಕೆಯಾದ ಕನ್ನಡವನ್ನು ನಾವು ಮರೆಯಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೀಪ ಬೆಳಗಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಭಾಷೆ, ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಪ್ರತಿನಿಧಿಸುತ್ತದೆ. ವಿಶ್ವವೇ ಜಾಗತಿಕ ಹಳ್ಳಿಯಾಗಿ ಪರಿವರ್ತಿತವಾಗಿರುವ ಈ ಸಂದರ್ಭದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. “ನುಡಿ ಬಿಟ್ಟರೆ ನಾಡು ಬಿಟ್ಟಂತೆ ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ ಎಂದು ಕುವೆಂಪು ಹೇಳಿದ್ದರು” ಓದು-ಬರಹ ಭಾಷೆ ಬರವಣಿಗೆ ಎಲ್ಲವೂ ಪರಕೀಯವಾದರೆ ನಮ್ಮ ಮಾತೃಭಾಷೆಗೆ ಅಪಾಯ ತಪ್ಪಿದ್ದಲ್ಲ. ಯಾವುದೇ ಭಾಷೆಯ ಅಳಿವು ಆ ಭಾಷೆ ಸಮುದಾಯದ ಅಳಿವೂ ಆಗಿರುತ್ತದೆ. ಭಾಷೆ ಬೆಳೆಯುವುದು ಉಳಿಯುವುದು ಅದನ್ನು ಬಳಸಿದಾಗ ಮಾತ್ರ. ಬಳಸದೇ ಹೋದರೆ ಭಾಷೆಯ ಅಸ್ತಿತ್ವ ಹಾಗೂ ಬೆಳವಣಿಗೆ ಎರಡಕ್ಕೂ ಅಪಾಯ ತಪ್ಪಿದ್ದಲ್ಲ ಎಂದರು.

ಕನ್ನಡದ ಕಲೆ, ಜಾನಪದ, ಭಾಷೆ, ಉದ್ಯೋಗದ ಜೊತೆಗೆ ಕನ್ನಡದ ಅಸ್ಮಿತೆಗೆ ಉಂಟಾಗಿರುವ ಸಮಸ್ಯೆಗಳನ್ನು ಗುರುತಿಸಿ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಹಿತ್ಯ ಸಮ್ಮೇಳನಗಳು ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಸಮ್ಮೇಳನವೂ ಆ ದಿಕ್ಕಿನಲ್ಲಿ ಕೆಲಸ ಮಾಡಲಿ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಳ್ಳಿ. ಅನ್ಯ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ. ಅವರಿಗೆ ಕನ್ನಡ ಕಲಿಸಿ. ಕನ್ನಡ ಉಳಿಸಿ ಬೆಳೆಸಬೇಕಾಗಿದೆ ಎಂದವರು ಅಭಿಪ್ರಾಯ ಪಟ್ಟರು.

ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿ ದಾರ್ಶನಿಕರನ್ನು ಹಡೆದಿರುವ ಭಾಷೆ ಎಂದು ಕುವೆಂಪು ಹೇಳಿದರು. ಕಾವೇರಿ ಕಣಿವೆಯಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ ಮುಂತಾದ ಜೀವನದಿಗಳು ಹರಿಯುತ್ತಿವೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಸದಾಕಾಲಕ್ಕೂ ಮೆರೆಸಿರುವ ಮಂಡ್ಯ ಜಿಲ್ಲೆ, ಅಪ್ಪಟ ಕನ್ನಡದ ನೆಲ. ಭತ್ತದ ಕಣಜ, ಸಕ್ಕರೆ ನಾಡು ಎಂದೇ ಜನಜನಿತ. ಜಗತ್ತಿನ ಯಾವ ಮೂಲೆಯ ಭಾಷಿಕರೆ ಬಂದರೂ ಅವರಿಗೆ ಒಂದೇ ತಿಂಗಳಲ್ಲಿ ಕನ್ನಡವನ್ನು ಕಲಿಸುತ್ತೇವೆ ಎಂಬ ಭಾಷಾಭಿಮಾನ ಮತ್ತು ದಿಟ್ಟತನ ಮಂಡ್ಯದ ಜನರದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಮ್ಮೇಳನದಲ್ಲಿ ಪ್ರಮುಖವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂದು ಕರೆಯಲಾಗುವ 3-ಹೆಚ್ ಸೂತ್ರಗಳು ಮೆದುಳು, ಕರುಣೆ ಮತ್ತು ಕೌಶಲ್ಯವು ಸೇರಿ ರೂಪುಗೊಂಡ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಾಗಿದೆ. ಬುದ್ಧ ಇದನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದ. ಗಾಂಧೀಜಿಯವರೂ ಇದನ್ನೆ ಹೇಳಿದ್ದರು. ಈಗಿನ ಶಿಕ್ಷಣ ವ್ಯವಸ್ಥೆಯು ಹಳೆಯ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೆ ಬಾಯಿಪಾಠ ಮಾಡುವ ಉಪಯೋಗವಿಲ್ಲದ ವ್ಯವಸ್ಥೆಯಾಗಿದೆ. ಕನ್ನಡ ಉಳಿಯಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾಯಿಸಿ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೆಳೆಯಬೇಕಾಗಿದೆ. ಹೀಗಾದಾಗ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವ ಭಾಷೆಯಾಗಿ ಕನ್ನಡವು ಬೆಳೆಯುತ್ತದೆ ಎಂದು ಭಾವಿಸುತ್ತಿರುವುದಾಗಿ ಹೇಳಿದರು.

ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದ ಸಮಾರಂಭದಲ್ಲಿ, ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ. ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ|| ಚಂದ್ರ ಶೇಖರ ಕಂಬಾರ, ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಸಮಾಜ ಕಲ್ಯಾಣ ಸಚಿವರಾದ ಡಾ ಹೆ.ಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಪಿ.ರವಿಕುಮಾರ್, ಎಂ.ಬಿ‌,ರಮೇಶ್ ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!