spot_img
Friday, December 20, 2024
spot_img

ಯುಐ : ಹೊಸ ಆಲೋಚನೆಗೆ ಶ್ರೀಮಂತ | ಹಲವು ಸಂಗತಿಗಳ ಸಂಕೀರ್ಣ ಸಂಕಲನ !

ನಟ, ನಿರ್ದೇಶಕ ಸೂಪರ್‌ ಸ್ಟಾರ್‌ ಉಪೇಂದ್ರ ಸಿನೆಮಾಗಳ ಮೂಲಕ ಹೇಳುವ ಕಥೆಗಳು ಯಾವುವೂ ಹೊಸತೇನಲ್ಲ. ಅವರು ಹೇಳುವ ಕಥೆಗಳೆಲ್ಲವೂ ಇಲ್ಲಿನ ಈಗಿನ ಪ್ರಸ್ತುತ ಕಥೆಗಳೇ ಆಗಿವೆ. ಆದರೇ, ಅವರು ಆ ನಿಜ ಕಥೆಗಳನ್ನು ದೃಶ್ಯಗಳ ಮೂಲಕ ತೋರಿಸುವ ರೀತಿ, ಸೃಜನಶೀಲತೆ ನಿಜಕ್ಕೂ ಅಚ್ಚರಿ. ಅದೇ ಕಾರಣಕ್ಕೆ ಅವರು ಬಹುಶಃ ಸಿನೆಮಾ ಕ್ಷೇತ್ರದಲ್ಲಿ, ಅದರಲ್ಲೂ ನಿರ್ದೇಶನದಲ್ಲಿ ಯಾರೂ ಏರದ ಎತ್ತರಕ್ಕೆ ಏರಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ರಾಜಕೀಯ, ಧರ್ಮ, ಸಿದ್ದಾಂತಗಳ ಬಗ್ಗೆ ನೇರವಾಗಿ ಒಬ್ಬ ಸಾಮಾನ್ಯ ವ್ಯಕ್ತಿ ಹೇಳಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವುದನ್ನು ರಿಯಲ್‌ ಸ್ಟಾರ್‌ ಉಪೇಂದ್ರ ತಮ್ಮ ʼಯುಐʼ ಸಿನೆಮಾದ ಮೂಲಕ ಹೇಳಿದ್ದಾರೆ. ಬಹುಶಃ ಈ ಧೈರ್ಯವನ್ನು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡ ಬರುವ ಎಲ್ಲಾ ವಾದ, ವಿವಾದ, ಟೀಕೆಗಳಿಗೂ ತಯಾರಾಗಿಯೇ ಈ ಸಿನೆಮಾ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಬಹುದೇನೋ. ಅಷ್ಟಲ್ಲದೇ, ಇವೆಲ್ಲದರ ಬಗ್ಗೆ ಜನರೇ ಧ್ವನಿ ಎತ್ತಬೇಕಾಗಿರುವ ವಿಷಯಗಳು ಎಂದೂ ಅವರು ಹೇಳಿರುವುದು ಕೂಡ ಸಿನೆಮಾದ ಗಟ್ಟಿತನ.

ಈ ಸಮಾಜದ ವಾಸ್ತವ ಸಂಗತಿ, ಪ್ರಸ್ತುತ ವಿದ್ಯಾಮಾನ, ರಾಜಕೀಯ, ಸಾಮಾಜಿಕ ಜಾಲತಾಣ, ಧರ್ಮ ಸಂಘರ್ಷ, ಜಾತಿ, ಪ್ರಕೃತಿ ನಾಶ, ಕಾಮ, ದುರಾಸೆ, ಭ್ರಷ್ಟಾಚಾರ, ಮಾಫಿಯಾ, ದೇವರು ಮತ್ತು ನಾವು ಸೃಷ್ಟಿಸಿಕೊಂಡಿರುವ ದೇವರು, ಬುದ್ಧ, ಬಸವ,  ಹೀಗೆ ಇಲ್ಲಿ ಗೊತ್ತಿದ್ದೂ ಆಗುತ್ತಿರುವ ಎಲ್ಲಾ ತಪ್ಪುಗಳನ್ನು ಉಪೇಂದ್ರ ಸೃಜಲಶೀಲತೆಯನ್ನು ಮುಂದಿಟ್ಟು ಈ ಸಿನೆಮಾವಾಗಿ ಕೆತ್ತಿದ್ದಾರೆ. ತೀರಾ ಸಾಮಾನ್ಯ ಎಂಬಂತಹ ಕರ್ಮರ್ಷಿಯಲ್‌ ಸಿನೆಮಾಗಳ ಒಂದು ಸಿದ್ಧ ಮಾದರಿಯನ್ನು ಬಹುಶಃ ಅಕ್ಷರಶಃ ಉಪೇಂದ್ರ ಒಡೆದಿದ್ದಾರೆ. ಯಾವುದೋ ಕಟ್ಟುಕಥೆಯನ್ನು ಹೇಳದೇ ಇರುವುದರಿಂದ ಸಮಾಜ ಯಾವ ರೀತಿಯಲ್ಲಿ ಚೇತರಿಸಿಕೊಳ್ಳಬೇಕೆಂಬುವುದನ್ನು ಈ ಸಿನೆಮಾದ ಮೂಲಕ ಸ್ವಲ್ಪ ಖಾರವಾಗಿಯೇ ಹೇಳಿದ್ದಾರೆ.

ʼಯುಐʼ ಸಿನೆಮಾದೊಳಗೆಯೇ ಈ ಸಿನೆಮಾ ತೆರೆ ಕಾಣುತ್ತದೆ. ಅದೇ ಈ ಚಿತ್ರಕ್ಕೆ ಆರಂಭ. ಸಿನೆಮಾದೊಳಗೆ ತರೆಕಂಡ ಸಿನೆಮಾವನ್ನು ಕಂಡವರಿಗೆ ಕೆಲವರಿಗೆ ಅರ್ಥವಾಗುತ್ತದೆ, ಕೆಲವರಿಗೆ ಅರ್ಥವಾಗುವುದಿಲ್ಲ. ವಿರ್ಮರ್ಶಿಸಲು ಖ್ಯಾತ ವಿಮರ್ಶಕರೊಬ್ಬರೂ ಕೂಡ ಕಷ್ಟಪಡುವುದನ್ನು ಸಿನೆಮಾದಲ್ಲಿ ತೋರಿಸಿದ್ದಾರೆ. ಅದರ ಬಗ್ಗೆ ವಿಮರ್ಶಕ ಅನ್ವೇಶಿಸುವುದಕ್ಕೆ ಹೋದಾಗ ಉಪೇಂದ್ರ ಅವರ ಆಲೋಚನೆಯ ʼಕಲ್ಕಿʼ ಅವತಾರ ತೆರೆದುಕೊಳ್ಳುತ್ತದೆ. ಬಳಿಕ ಒಂದೊಂದೆ ವಿಷಯಗಳನ್ನು ತರೆಯುತ್ತಾ, ಪಾಠ ಹೇಳುತ್ತಾ ಸಿನೆಮಾ ಸಾಗುತ್ತದೆ. ಎಲ್ಲಾ ವಿಚಾರಗಳು ಸೇರಿ ಆಗಿರುವ ಒಟ್ಟು ಸಂಕಲನ ಆಗಿರುವುದರಿಂದ ಒಮ್ಮೊಮ್ಮೆ ಸಂಕೀರ್ಣ ಅನ್ನಿಸಬಹುದು.

ಉಪೇಂದ್ರ ಅವರು ʼಪ್ರಜಾಕೀಯʼದ ಮೂಲಕ ಹೇಳುವುದಕ್ಕೆ ಆಗದೇ ಇರುವುದೆಲ್ಲವನ್ನೂ ಈ ʼಯುಐʼ ಮೂಲಕ ʼಫೋಕಸ್‌ʼ ಮಾಡಿ ಹೇಳಿದ್ದಾರೆ. ಉಪೇಂದ್ರ ʼಪ್ರಜಾಕೀಯʼದ ಮೂಲಕ ಸಮಾಜ ಸುಧಾರಣೆಯ ತತ್ವಗಳನ್ನು ಹೇಳುವುದಕ್ಕೆ ಹೋಗಿ ಒಂದು ಹಂತದಲ್ಲಿ ಸೋತಿರಬಹುದು, ಆದರೇ ಈ ಸಿನೆಮಾದ ಮೂಲಕ ಭಾಗಶಃ ಗೆದ್ದಿದ್ದಾರೆ ಎನ್ನಬಹುದು. ಒಂದು ವಾಸ್ತವದ ಸಂಗತಿಯನ್ನು ದೃಶ್ಯ ರೂಪಕ್ಕೆ ಭಟ್ಟಿ ಇಳಿಸಿದ ಉಪೇಂದ್ರ ಅವರ ಸೃಜನಶೀಲ ಮನೋಭಾವಕ್ಕೆ ನಿಜಕ್ಕೂ ಮೆಚ್ಚಲೇಬೇಕು.

ಚಿತ್ರದಲ್ಲಿ ಆಡಮ್‌ ಹಾಗೂ ಈವ್‌ ಕಥೆ ಹೆಣೆದಿರುವ ಶೈಲಿ ತುಂಬಾ ಸೊಗಸಾಗಿ ಮೂಡಿಬಂದಿದೆ. ಎಲ್ಲಾ ಸುಖಗಳು ಹೇರಳವಾಗಿ ದೊರಕಿರುವಾಗಿ ಮತ್ತೇನಕ್ಕೋ ಬಯಸಿ ಹೋದಾಗ ನಿರಾಸೆಯಾಗುವುದನ್ನು ಪ್ರಕೃತಿಯೊಂದಿಗೆ ಸೂಚ್ಯವಾಗಿ ಉಪೇಂದ್ರ ಪೋಣಿಸಿದ್ದಾರೆ. ಸತ್ಯವನ್ನು ಪ್ರತಿಬಿಂಬಿಸುವ ಸತ್ಯ ಪಾತ್ರ, ಕೆಟ್ಟದ್ದನ್ನು ತೋರಿಸುವ ಕಲ್ಕಿಯೇ ಈ ಸಿನೆಮಾದ ಜೀವಾಳ. ಮೆದುಳಿನಾಕಾರದ ಒಂದು ನಿಗೂಢ ಸ್ಥಳ ಕಲ್ಕಿಯ ಸಾಮ್ರಾಜ್ಯ. ಅದೊಂದು ಕತ್ತಲೆಯ ಜಗತ್ತು. ಆ ಕರಾಳ ಕತ್ತಲೆಯಿಂದ ಹೊರಗೆ ಬರಲು ʼಫೋಕಸ್‌ʼ ಆಗಿರಬೇಕು. ಹಾಗಿದ್ದಾಗ ಮಾತ್ರ ಬಂಧಮುಕ್ತವಾಗಲು ಸಾಧ್ಯ ಎನ್ನುವ ಪಾಠ ಈ ಸಿನೆಮಾದಲ್ಲಿದೆ.

ಉಳ್ಳವರ ದರ್ಪ, ಇಲ್ಲದವರ ಕಷ್ಟ ಸಿನೆಮಾದಲ್ಲಿ ʼರಾಜಕೀಯ ಮೇಲಾಟʼಗಳ ಮೂಲಕ ಸೂಚ್ಯಯವಾಗಿ ಹೇಳಲಾಗಿದೆ. ರಾಜಕೀಯ ಸಮಾಜದಲ್ಲಿ ಬಿತ್ತುತ್ತಿರುವ ಜಾತಿ ವೈಷಮ್ಯ, ಧರ್ಮ ಸಂಘರ್ಷವನ್ನು ಯಾವುದೇ ಮುಲಾಜಿಲ್ಲದೇ ಉಪೇಂದ್ರ ಹೇಳಿದ್ದಾರೆ. ಒಂದೆಡೆ ಬಡತನ, ಇನ್ನೊಂದೆಡೆ ವಿಜ್ಞಾನದ ಪ್ರಗತಿಯನ್ನು ತೋರಿಸುವ ದೃಶ್ಯ, ದೇಶ ಇನ್ನೂ ಕಾಣದ ವಾಸ್ತವದ ಅಡಿ ಪದರವನ್ನು ತೋರಿಸುತ್ತದೆ.

ʼಕಾಮದಿಂದ ಮಗು ಹುಟ್ಟಿಸಿ ಆ ಮಗುವಿಗೆ ಕಾಮವನ್ನು ತಪ್ಪು ಎಂದು ಪಾಠ ಹೇಳ್ತೀರಿʼ, ʼಧಿಕ್ಕಾರಕ್ಕಿಂತ ಅಧಿಕಾರಕ್ಕೆ ಮಾತ್ರ ಪವರ್‌ʼ ಸೇರಿ ಹಲವು ಸಂಭಾಷಣೆಗಳು, ಸಿನೆಮಾಟೋಗ್ರಫಿ, ಹಿನ್ನೆಲೆ ಸಂಗೀತ, ಮೇಕಿಂಗ್‌ ಜನರ ಚಪ್ಪಾಳೆ ಪಡೆಯುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮೆದುಳನ್ನೇ ಒಂದು ನಿಗೂಢ ಸ್ಥಳವೆಂದು ಸೃಷ್ಟಿಸಿ ʼಯೂನಿವರ್ಸಲ್‌ ಇಂಟೆಲೆಜೆನ್ಸ್‌ʼ ಕಥೆಯ ಕಲ್ಪನೆಗೆ ಉಪೇಂದ್ರ ನಿಜಕ್ಕೂ ಶ್ಲಾಘನೀಯ.

ಇನ್ನು, ಸುದ್ದಿ ವಾಹಿನಿಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಸಿನೆಮಾ ಗೊಂದಲವಾಗಿದೆ, ಇನ್ನೂ ಎರಡು ಮೂರು ಬಾರಿ ನೋಡಿದರೇ ಅರ್ಥವಾಗಬಹುದು ಎಂದು ಪ್ರೇಕ್ಷಕರು, ಅಭಿಮಾನಿಗಳು ಕೊಟ್ಟ ರಿವೀವ್‌ ಅಂತೆ ಸಿನೆಮಾವಿಲ್ಲ. ವಾಸ್ತವ ಸ್ಥಿತಿಗತಿಗಳ ಗೃಹಿಕೆ ಅಗತ್ಯ ಎಂದು ಸಿನೆಮಾ ಮೂಲಕ ಉಪೇಂದ್ರ ಹೇಳಿರುವುದು ಸಮಾಜಕ್ಕೆ ತುರ್ತಾಗಿ ಅರ್ಥವಾಗಬೇಕಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಉಪೇಂದ್ರ, ರವಿಶಂಕರ್‌, ಸಾಧುಕೋಕಿಲ, ಅಚ್ಯುತ್‌ ಕುಮಾರ್‌,  ದಿ. ಗುರುಪ್ರಸಾದ್‌, ನಿಧಿ ಸುಬ್ಬಯ್ಯ ಸೇರಿ ಪ್ರಮುಖ ಕಲಾವಿದರು ಸಿಕ್ಕ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕಥಾ ನಾಯಕಿ ರೀಷ್ಮಾ ನಾಣಯ್ಯ ಚಿತ್ರದುದ್ದಕ್ಕೂ ಮುದ್ದಾಗಿ ಸೊಗಸಾಗಿ ಕಾಣಿಸಿದ್ದಾರೆ. ಹೆಚ್‌ ಸಿ ವೇಣು ಅವರ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಅವರ ಸಂಗೀತ, ವಿಜಯ್‌ ರಾಜ್‌ ಅವರ ಸಂಕಲನದ ಕಾರಣದಿಂದ ಚಿತ್ರ ಇನ್ನಷ್ಟು ಹೆಚ್ಚುಗಾರಿಕೆಯನ್ನು ಪಡೆದಿದೆ ಎನ್ನಬಹುದು.

ಸಿನೆಮಾದಲ್ಲಿ ವಾಸ್ತವವನ್ನು ಒಮ್ಮೊಮ್ಮೆ ನೇರವಾಗಿ, ಧೈರ್ಯವಾಗಿ, ಸೂಚ್ಯವಾಗಿ ಹೇಳಿರುವುದೇ ಮನೋರಂಜನೆ. ಒಟ್ಟಿನಲ್ಲಿ ಈ ಸಿನೆಮಾ ವಾಸ್ತವದ ಜೊತೆಗೆ ಹೊಸ ಆಲೋಚನೆಗೆ ಶ್ರೀಮಂತವಾಗಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!