spot_img
Thursday, December 5, 2024
spot_img

40ನೇ ವರ್ಷದ ಶಬರಿಮಲೆ ಯಾತ್ರೆ ಸಂಭ್ರಮದಲ್ಲಿ ವಂಡಬಳ್ಳಿ ಜಯರಾಮ ಶೆಟ್ಟಿ

ಕುಂದಾಪುರ: (ಜನಪ್ರತಿನಿಧಿ ವರದಿ), ಅತ್ಯಂತ ಶ್ರದ್ದಾಭಕ್ತಿಯಿಂದ ನಿರಂತರವಾಗಿ ಶಬರಿಮಲೆ ಯಾತ್ರೆ ಮಾಡುವುದೆಂದರೆ ಅದು ಸುಲಭದ ಮಾತಲ್ಲ. ಭಕ್ತಿ, ಶ್ರದ್ಧೆ, ಕಟ್ಟುನಿಟ್ಟಾದ ವ್ರತಾಚರಣೆಯ ಮೂಲಕ ಒಂದು ಮಂಡಲದ ಪರ್ಯಂತ ಶಿಬಿರದಲ್ಲಿಯೇ ಇದ್ದು ವ್ರತ ಕೈಗೊಂಡು ಯಾತ್ರೆ ಪೂರೈಸುವುದು ಎಂದರೆ ಒಂದು ತಪಸ್ಸು ಎಂದೇ ಹೇಳಬಹುದು. ಅದರಲ್ಲೂ ನಿರಂತರವಾಗಿ 40 ವರ್ಷಗಳ ಕಾಲ, 40 ಬಾರಿ ಶಬರಿಮಲೆ ಯಾತ್ರೆ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಧಾರ್ಮಿಕ ವಲಯದಲ್ಲಿದ್ದುಕೊಂಡು ಎಲ್ಲದ್ದು ಅಯ್ಯಪ್ಪನಿಂದಲೇ ಆಯಿತು ಎನ್ನುವ ಮನಸ್ಥಿತಿಯ ಧಾರ್ಮಿಕ ಮುಂದಾಳು ವಂಡಬಳ್ಳಿ ಜಯರಾಮ ಶೆಟ್ಟರು ಈಗಾಗಲೇ 39 ಶಬರಿಮಲೆಯಾತ್ರೆ ಪೂರೈಸಿ 40ನೇ ವರ್ಷದ ಶಬರಿಮಲೆ ಯಾತ್ರೆಯ ಸನ್ನದ್ಧದಲ್ಲಿದ್ದಾರೆ.

ವಂಡಬಳ್ಳಿ ಜಯರಾಮ ಶೆಟ್ಟಿಯವರು ಉಡುಪಿ ಜಿಲ್ಲೆಯ ಧಾರ್ಮಿಕ ವಲಯದಲ್ಲಿ ಗುರುತಿಸಿಕೊಂಡವರು. ಕೊಲ್ಲೂರು ದೇವಳದಲ್ಲಿ ಮೂರು ಬಾರಿ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದವರು. ತೆಂಕೂರು ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು. ಪರಿಸರದ ಹತ್ತು ಹಲವು ದೇವಸ್ಥಾನಗಳ ಜೀರ್ಣೋದ್ಧಾರ, ನಾಗಮಂಡಲ, ಧಾರ್ಮಿಕ ಪ್ರಕ್ರಿಯೆಗಳಲ್ಲಿ ಮುಂದೆ ನಿಂತು ನೆರವೇರಿಸುವ ಧಾರ್ಮಿಕ ಮುಂದಾಳು. ಸಾಮಾಜಿಕ, ಧಾರ್ಮಿಕ ಜೀವನದ ಯಶಸ್ಸು, ಸಮಾಜದಲ್ಲಿನ ಸ್ಥಾನಮಾನಕ್ಕೆಲ್ಲ ಕಾರಣ ಶಬರಿಮಲೆ ಅಯ್ಯಪ್ಪಸ್ವಾಮಿ ಎನ್ನುವ ಕೃತಾರ್ಥ ಭಾವ ವಂಡಬಳ್ಳಿ ಜಯರಾಮ ಶೆಟ್ಟಿಯವರದ್ದು.
ಚಪ್ಪರಮಕ್ಕಿ ದಿ.ಅನಂದ ಶೆಟ್ಟಿ ಮತ್ತು ದಿ.ವಂಡಬಳ್ಳಿ ಜಲಜಾಕ್ಷಿ ಶೆಟ್ಟಿಯವರ ೮ ಜನ ಮಕ್ಕಳಲ್ಲಿ ಒಬ್ಬರಾದ ಜಯರಾಮ ಶೆಟ್ಟಿಯವರು 1982ನೇ ಇಸವಿಯಲ್ಲಿ ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆಯುತ್ತಾರೆ. ಆ ಸಮಯದಲ್ಲಿ ಅವರಿಗೆ ಧಾರ್ಮಿಕವಾಗಿ ಅಷ್ಟೊಂದು ಒಲವು ಇರಲಿಲ್ಲ. ಹೀಗೆ ಒಮ್ಮೆ ಕುಂದಾಪುರದಲ್ಲಿ ಸೂರ್ಯ ಗುರುಸ್ವಾಮಿ ನೇತೃತ್ವದಲ್ಲಿ ಶಬರಿಮಲೆ ಯಾತ್ರೆಗೆ ಹೋಗುವ ಮಾಲಾಧಾರಿಗಳನ್ನು ಗಮನಿಸಿದ ಅವರಲ್ಲಿ ಅವ್ಯಕ್ತವಾಗಿ ಶಬರಿಮಲೆ ಯಾತ್ರೆಯ ಆಸಕ್ತಿ ಮೂಡಿತು. ತನ್ನ 27ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಕುಂದಾಪುರದ ಸೂರ್ಯ ಗುರುಸ್ವಾಮಿ ಅವರ ಗುರುತನದಲ್ಲಿ ಮಾಲಾ ಧಾರಣೆ ಮಾಡಿದರು. ಕುಂದೇಶ್ವರ ದೇವಸ್ಥಾನದಲ್ಲಿ ಶಿಬಿರ. ಗುರುಸ್ವಾಮಿಗಳು ತುಂಬಾ ಕಟ್ಟು ನಿಟ್ಟು. ಕಠಿಣ ವೃತಾನುಸರಣೆ ಮಾಡುತ್ತಿದ್ದರು. ಭಕ್ತಿ, ಶ್ರದ್ದೆಯಿಂದ ಪ್ರಥಮ ವರ್ಷ ಶಬರಿಮಲೆ ಯಾತ್ರೆ ಮಾಡಿದ ಅವರಲ್ಲಿ ಧಾರ್ಮಿಕವಾಗಿ ಸಾಕಷ್ಟು ಬದಲಾವಣೆಗಳು ಆದವು. ಪ್ರಥಮ ಯಾತ್ರೆಯ ಪ್ರೇರಣೆಯಿಂದ ಮುಂದಿನ ವರ್ಷ ಮಾರಣಕಟ್ಟೆಯಲ್ಲಿ ವೃತ ಮಾಡಿದರು. ಆಗೆಲ್ಲಾ ಒಂದು ಮಂಡಲ( ೪೮ದಿನ) ವ್ರತ ಮಾಡುತ್ತಿದ್ದರು. ಅಂದಿನ ಮಾರಣಕಟ್ಟೆ ದೇಸ್ಥಾನದ ಮೊಕ್ತೇಸರರಾಗಿದ್ದ ಮಂಜಯ್ಯ ಶೆಟ್ಟಿ ಹಾಗೂ ನೈಲಾಡಿ ಶಿವರಾಮ ಶೆಟ್ಟರ ಸಹಕಾರವೂ ಸಿಕ್ಕಿತು. ಅರ್ಚಕ ಕುಟುಂಬದವರ ಆಶೀರ್ವಾದವೂ ದೊರೆಯಿತು.
ಇಂದಿನಂತೆ ಆಗ ಮೂಲಸೌಕರ್ಯಗಳಿರಲಿಲ್ಲ. ತುಂಬಾ ಕಷ್ಟವಿತ್ತು. ವೃತ ಆಚರಣೆಗಳು ಕಠಿಣವಾಗಿದ್ದವು. ಸಣ್ಣ ಸಣ್ಣ ವ್ಯಾನ್ ಗಳಲ್ಲಿ ಶಬರಿ ಮಲೆಗೆ ಹೋಗಬೇಕಿತ್ತು. ಶಬರಿಮಲೆಯಲ್ಲೂ ಕೂಡಾ ಸಾಕಷ್ಟು ಸಮಸ್ಯೆಗಳಿದ್ದವು. ಪಂಪಾಸರೋವರ ಇಷ್ಟೊಂದು ವ್ಯವಸ್ಥಿತವಾಗಿರಲಿಲ್ಲ. ಶಬರಿಮಲೆಯಲ್ಲಿ ಸಾಮಗ್ರಿಗಳನ್ನು ಕತ್ತೆಗಳ ಮೂಲಕ ತಗೆದುಕೊಂಡು ಹೋಗುತ್ತಿದ್ದರು. ಇವತ್ತು ಹಾಗಿಲ್ಲ ತುಂಬಾ ಬದಲಾವಣೆಯಾಗಿದೆ. ಅಲ್ಲಿನ ಸರಕಾರ ಭಕ್ತಾದಿಗಳಿಗೆ ಸಾಕಷ್ಟು ಅವಕಾಶ, ಅನುಕೂಲಗಳನ್ನು ಸೃಷ್ಟಿಸಿಕೊಟ್ಟಿದೆ ಎನ್ನುತ್ತಾ ಹಳೆಯ ಅಂದಿನ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಆಗೆಲ್ಲಾ 5 ಸಾವಿರ ರೂಪಾಯಿ ಇದ್ದರೆ ಮಂಡಲವ್ರತದೊಂದಿಗೆ ಯಾತ್ರೆ ಪೂರೈಸಬಹುದಿತ್ತು ಎನ್ನುತ್ತಾರೆ.

ವಂಡಬಳ್ಳಿಯವರ ಸುದೀರ್ಘ ಅವಧಿಯಲ್ಲಿ ಕೊರೋನಾ ಸಮಯದಲ್ಲಿ ಹೊರತು ಪಡಿಸಿ ಇಲ್ಲಿಯ ತನಕ ತಡೆಯಾಗಲಿಲ್ಲ. ನಿರಂತರವಾಗಿ ಶಬರಿಮಲೆ ಯಾತ್ರೆ ಶಿಷ್ಯವೃಂದದ ಜೊತೆ ಹೋಗಿ ಬರುತ್ತಿದ್ದಾರೆ.
ವಂಡಬಳ್ಳಿಯವರಿಗೆ ಸುಮಾರು ೭೦೦ಕ್ಕೂ ಮಿಕ್ಕಿ ಶಿಷ್ಯರಿದ್ದಾರೆ. ಸಾವಿರಾರು ಅಯ್ಯಪ್ಪ ವೃತಾಧಾರಿಗಳಿಗೆ ಇರುಮುಡಿ ಕಟ್ಟಿದ್ದಾರೆ. ಅಯ್ಯಪ್ಪ ಸ್ವಾಮಿಯ ಪೋಟೋ ಇಟ್ಟು ಪೂಜೆ ಮಾಡುವ ಬದಲು ಕಾಷ್ಠ ಪ್ರತಿಮೆ ಮಾಡುವ ಯೋಚನೆ ಮಾಡಿ ಸೂಕ್ತ ವೃಕ್ಷವೊಂದನ್ನು ಗುರುತಿಸಿ ಶಿಲ್ಪಿಗಳ ಮೂಲಕ ಪ್ರತಿಮೆ ನಿರ್ಮಿಸಲಾಯಿತು. ಶಬರಿಮಲೆ ಯಾತ್ರೆ ಮುಗಿದ ಬಳಿಕ ಅದನ್ನು ಅರ್ಚಕರಾದ ದಿ.ಲಕ್ಷ್ಮೀನಾರಾಯಣ ಮಂಜರ ಮನೆಯಲ್ಲಿಡುವ ಪರಿಪಾಠ. ಅಲ್ಲಿ ವರ್ಷದ 365 ದಿನವೂ ಅಯ್ಯಪ್ಪ ಸ್ವಾಮಿಗೆ ಪೂಜೆ ಆಗುತ್ತದೆ. ಈಗ ವಿಘ್ನೇಶ್ವರ ಮಂಜರು ಅವರು ಅದನ್ನು ನೆರವೇರಿಸುತ್ತಾರೆ. ಇದು ಕೂಡಾ ಮಾರಣಕಟ್ಟೆ ಅಯ್ಯಪ್ಪಸ್ವಾಮಿ ಭಕ್ತಾದಿಗಳ ವಿಶೇಷ.
ವಂಡಬಳ್ಳಿ ಜಯರಾಮ ಶೆಟ್ಟಿಯವರು ಭಕ್ತಿಯ ವಿಚಾರಕ್ಕೆ ಬಂದರೆ ಬಹಳ ಕಟ್ಟುನಿಟ್ಟು. ಪ್ರತಿಯೋರ್ವ ವ್ರತಧಾರಿಯೂ ಶಿಬಿರಕ್ಕೆ ಸರಿಯಾದ ಸಮಯಕ್ಕೆ ಬರಬೇಕು, ಪೂಜಾ ವಿಧಾನಗಳಲ್ಲಿ ಪಾಲ್ಗೊಳ್ಳಬೇಕು, ಬೆಳಿಗ್ಗೆ ನಿಗದಿತ ಸಮಯಕ್ಕೆ ಎದ್ದು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಬೇಕು. ಅಂತಃಕರಣ ಶುದ್ಧ ಭಕ್ತಿ, ವ್ರತದಲ್ಲಿ ಇರಬೇಕು ಎನ್ನುವುದು ಇವರ ನಿಯಮ. ಅದನ್ನು ಶಿಷ್ಯವೃಂದವೂ ಸ್ವೀಕರಿಸಿದ್ದಾರೆ.
ಇವರು ಸುದೀರ್ಘ ಅವಧಿಗೆ ಶಬರಿಮಲೆ ಯಾತ್ರೆ ಮಾಡಲು ಮನೆಯವರ ಪ್ರೋತ್ಸಾಹವೂ ಕಾರಣ ಎನ್ನುತ್ತಾರೆ. ಪತ್ನಿ ಗುಣರತ್ನ ಶೆಟ್ಟಿ ಸಂಪೂರ್ಣ ಸಹಕಾರ ನೀಡುತ್ತಾರೆ. ಇಬ್ಬರು ಪುತ್ರಿಯರು. ಶಬರಿ ಶೆಟ್ಟಿ ಹಾಗೂ ಲಕ್ಷ್ಮೀ ಶೆಟ್ಟಿ ತಂದೆಯ ಭಕ್ತಿ ಆರಾಧನೆಯ ವಲಯದಲ್ಲಿ ಬೆಳೆದವರು. ಕಿರಿಯ ಪುತ್ರಿ ಲಕ್ಷ್ಮೀ ಬಾಲ್ಯದಲ್ಲಿ ನಾಲ್ಕು ಬಾರಿ ತಂದೆಯೊಂದಿಗೆ ಶಬರಿಮಲೆ ಯಾತ್ರೆ ಮಾಡಿದ್ದಾರೆ. ಮೊಮ್ಮಕ್ಕಳಾದ ಸರ್ವದ ಶೆಟ್ಟಿ 3 ಬಾರಿ, ಸ್ಕಂದ ಶೆಟ್ಟಿ 2ಬಾರಿ ಅಜ್ಜನೊಂದಿಗೆ ಶಬರಿಮಲೆಯಾತ್ರೆ ಮಾಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಉತ್ತಮ ಸ್ಥಿತಿಯಲ್ಲಿದ್ದಾರೆ. ಹಿರಿಯಮಗಳು ಶಬರಿ ಶೆಟ್ಟಿ ಪತಿ ಸತೀಶ್ ಶಟ್ಟಿ (ಇಂಜಿನಿಯರ್) ಹಾಗೂ ಮೂವರು ಮಕ್ಕಳೊಂದಿಗೆ ಕುಂದಾಪುರದಲ್ಲಿ ನೆಲೆಸಿದ್ದಾರೆ. ಲಕ್ಷ್ಮೀ ಶೆಟ್ಟಿ ಪತಿ ಸೂರಜ್ ಶೆಟ್ಟಿ (ಇಂಜಿನಿಯರ್) ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಸಂತೃಪ್ತ ಕುಟುಂಬ ಇವರದ್ದು.
ಇವರ 18ನೇ ಯಾತ್ರೆ ಸಂದರ್ಭ ಶಿಷ್ಯವೃಂದ ಸನ್ಮಾನಿಸಿದರೆ, 25ನೇ ಯಾತ್ರೆಯ ಕಾರ್ಯಕ್ರಮಕ್ಕೆ ಹಂಗಾರಕಟ್ಟೆ ಬಾಳೆಕುದುರು ಮಠದ ಶ್ರೀಗಳು ಆಗಮಿಸಿ ಆಶೀರ್ವದಿಸಿದ್ದರು.
40ನೇ ವರ್ಷದ ಕಾರ್ಯಕ್ರಮಕ್ಕೆ ವಿಶೇಷವಾಗಿ ಶಿಷ್ಯವೃಂದ ಗೌರವಿಸಿತು. ಅಯ್ಯಪ್ಪ ಸ್ವಾಮಿಗೆ ರಜತ ಕವಚ ಸಮರ್ಪಣೆ ನಡೆಯಿತು. ಬೆಳಿಗ್ಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಚಿತ್ತೂರು ಮಂಜಯ್ಯ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಡಾ.ಅತುಲ್ ಕುಮಾರ್ ಶೆಟ್ಟಿ, ಮಾರಣಕಟ್ಟೆ ದೇವಳದ ಅಕೌಟೆಂಟ್ ಕೆ.ನಾರಾಯಣ ಶೆಟ್ಟಿ ಮೊದಲಾದವರು ಶುಭಶಂಸನೆಗೈದರು, ಶಿಷ್ಯವೃಂದದ ವತಿಯಿಂದ ಗುರುವಂದನೆ ಜರುಗಿತು. ಸಂಜೆ ವೈಭವದ ಮೆರವಣಿಗೆ ನಡೆಯಿತು.

ಸಂದರ್ಶನದ ವಿಡಿಯೋ ವೀಕ್ಷಿಸಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!