19 C
New York
Monday, June 14, 2021

Buy now

spot_img

ಎರಡು ವಿಶ್ವಕಪ್ ಗೆದ್ದ ಅಪ್ರತಿಮ : ಕ್ರಿಕೆಟ್ ಜಗತ್ತನ್ನೇ ಗೆದ್ದ ನಾಯಕ

ಟೀಂ ಇಂಡಿಯಾದ ಯಶಸ್ವಿ ಸಾರಥಿ – ಮಹೇಂದ್ರ ಸಿಂಗ್ ಧೋನಿ

♦ಜಗದೀಶ್ಚಂದ್ರ ಅಂಚನ್  ಸೂಟರ್ ಪೇಟೆ

ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ‘ಕೂಲ್’ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿ ತನ್ನದೇ ಶೈಲಿಯಲ್ಲಿ ಟೀಂ ಇಂಡಿಯಾವನ್ನು ವಿಶ್ವ ಮಟ್ಟಕ್ಕೇರಿಸಿದ ಮಹೇಂದ್ರ ಸಿಂಗ್ ಧೋನಿ ಭಾರತ ಸೃಷ್ಟಿಸಿದ ಶ್ರೇಷ್ಠ ನಾಯಕ. ವಿಶ್ವ ಶ್ರೇಷ್ಠ ನಾಯಕರಾಗಿದ್ದ ಇವರು ಟೀಂ ಇಂಡಿಯಾದ ಪಾಲಿಗೆ ಮ್ಯಾಚ್ ವಿನ್ನರ್. ಸುಮಾರು ಒಂದೂವರೆ ದಶಕ ಟೀಂ ಇಂಡಿಯಾದಲ್ಲಿ ಆಡಿರುವ ಮಹೇಂದ್ರ ಸಿಂಗ್ ಧೋನಿ ಒಂದು ದಶಕ ಟೀಂ ಇಂಡಿಯಾದ ನಾಯಕತ್ವ ವಹಿಸಿ ತನ್ನದೇ ಆದ ಆಧಿಪತ್ಯವನ್ನು ಸ್ಥಾಪಿಸಿದ್ದರು. ಇವರ ಕ್ರಿಕೆಟ್ ಬದುಕೇ ಒಂದು ಅಚ್ಚರಿಯ ಮೂಟೆ. ಮೈದಾನದ ಒಳಗಿರಲಿ, ಹೊರಗಿರಲಿ ಸದಾ ಸಮಚಿತ್ತತೆಯಿಂದ ಕೂಡಿದ ಇವರ ನಡೆ ಯಾವಾಗಲೂ ಕೌತುಕಕ್ಕೆ ಕಾರಣವಾಗುತ್ತಿತ್ತು. ಕ್ರಿಕೆಟ್ ನಲ್ಲಿ ಅಂದುಕೊಂಡದ್ದನ್ನು ಸಾಧಿಸಿಕೊಳ್ಳುವ ಜಾಣ್ಮೆಯ ನಾಯಕತ್ವ ಎಂಎಸ್. ಧೋನಿಗೆ ಸಿದ್ದಿಸಿತ್ತು . ಹಾಗಾಗಿಯೇ ಅವರು ಭಾರತೀಯ ಕ್ರಿಕೆಟ್ ರಂಗದಲ್ಲಿ ಅತ್ಯಂತ ಯಶಸ್ವೀ ನಾಯಕ ಎನ್ನುವ ಶ್ರೇಯಕ್ಕೂ ಪಾತ್ರರಾಗಿದ್ದರು.

ಭಾರತೀಯ ಕ್ರಿಕೆಟ್ ತಂಡ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಆ ಸ್ಥಾನವನ್ನು ತುಂಬುವ ಆಟಗಾರನಾಗಿ ತಂಡಕ್ಕೆ ಆಯ್ಕೆಗೊಂಡ ಎಂಎಸ್.ಧೋನಿ, ನಂತರ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರ ಪೈಕಿ ಒಬ್ಬರಾಗಿ ಇತಿಹಾಸ ನಿರ್ಮಿಸಿದರು. ಆಗಿನ ಬಿಹಾರ್, ಈಗಿನ ಜಾರ್ಖಂಡ್ ನ ರಾಂಚಿಯಲ್ಲಿ ರಂದು ಜನಿಸಿದ ಧೋನಿ ಆರಂಭದಲ್ಲಿ ಬ್ಯಾಡ್ಮಿಂಟನ್ ಮತ್ತು ಫುಟ್ಬಾಲ್ ನ್ನು ಉತ್ತಮವಾಗಿ ಆಡಿ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಹೆಸರುವಾಸಿಯಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿ ಇವರು ಫುಟ್ಬಾಲ್ ತಂಡದ ಉತ್ತಮ ಗೋಲ್ ಕೀಪರ್ ಆಗಿದ್ದರು. ಇವರು ಚುರುಕುತನದ ಆಟವನ್ನು ಫುಟ್ಬಾಲ್ ತಂಡದ ತರಬೇತುದಾರರು ಸ್ಥಳೀಯ ಕ್ರಿಕೆಟ್ ಕ್ಲಬ್ ತಂಡಗಳಿಗೆ ವಿಕೆಟ್ ಕೀಪರ್ ಆಗಿ ಕಳುಹಿಸಿದರು. ಅದುವರೆಗೆ ಕ್ರಿಕೆಟ್ ಆಡದ ಧೋನಿ ವಿಕೆಟ್ ಹಿಂದುಗಡೆ ಕೌಶಲ್ಯಭರಿತ ಕೀಪಿಂಗ್ ಮಾಡಿ ಗಮನ ಸೆಳೆದರು.

ವಿಕೆಟ್ ಕೀಪಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಎಂಎಸ್ ಧೋನಿ ನಂತರ ದೇಶೀಯ ಟೂರ್ನಿಗಳಲ್ಲಿ ವಿವಿಧ ವಯೋಮಿತಿಯ ತಂಡದಲ್ಲಿ ಆಡಿ ತನ್ನ ಪ್ರತಿಭೆಯನ್ನು ತೋರ್ಪಡಿಸಿದರು . 1999-2000ರಲ್ಲಿ ಇವರು ತನ್ನ 18ನೇ ವಯಸ್ಸಿನಲ್ಲಿ ಬಿಹಾರ ತಂಡದ ಪರವಾಗಿ ರಣಜಿ ಕ್ರಿಕೆಟಿಗೆ ಪಾದಾರ್ಪಣೆಗೈದರು. ಇವರು ಮೊದಲ ಶತಕವನ್ನು ಬಂಗಾಲದ ವಿರುದ್ದ 2000-01ರ ರಣಜಿ ಋತುವಿನಲ್ಲಿ ಬಾರಿಸಿದರು. ಅಲ್ಲಿಂದ ರಣಜಿ ಸೇರಿದಂತೆ ದುಲೀಪ್ ಟ್ರೋಫಿ, ದೇವಧರ್ ಕ್ರಿಕೆಟ್ ಟೂರ್ನಿಗಳಲ್ಲಿ ಅಪ್ರತಿಮ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಮೂಲಕ ಮಿಂಚಿದರು. ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಯಶಸ್ಸು ಅವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು.

ಟೀಂ ಇಂಡಿಯಾಕ್ಕೆ ಆಯ್ಕೆ:
2004-05ರಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾಕ್ಕೆ ಆಯ್ಕೆಗೊಂಡ ಎಂಎಸ್ ಧೋನಿ ಮೊದಲ ಪಂದ್ಯದಲ್ಲಿ ನಿರಾಸೆಯನ್ನು ಮೂಡಿಸಿದರು. ಆ ಪಂದ್ಯದಲ್ಲಿ ಅವರು ರನ್ ಗಳಿಸುವ ಮೊದಲೇ ರನ್ ಔಟ್ ಆಗಿದ್ದರು. ಬಾಂಗ್ಲಾದೇಶ ಸರಣಿಯಲ್ಲಿ ಅಷ್ಟೇನೂ ಉತ್ತಮ ಸಾಧನೆ ತೋರದ ಇವರಿಗೆ ಯಶಸ್ಸು ತಂದುಕೊಟ್ಟಿದ್ದು ಪಾಕಿಸ್ತಾನ ವಿರುದ್ಧದ ಸರಣಿ. ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಧೋನಿ, ಎದುರಿಸಿದ 123 ಎಸೆತಗಳಲ್ಲಿ 148 ರನ್ ಗಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು. ಪಾಕಿಸ್ತಾನ ವಿರುದ್ಧ ಆಡಿದ ಈ ಭರ್ಜರಿ ಇನ್ನಿಂಗ್ಸ್ ಭಾರತ ಕ್ರಿಕೆಟ್‍ನಲ್ಲಿ ‘ಧೋನಿ ಯುಗ’ಕ್ಕೆ ನಾಂದಿ ಹಾಡಿತು. ಆ ಬಳಿಕ ಧೋನಿ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಬಳಿಕ ಒಂದು ದಾಖಲೆಗಳನ್ನು ನಿರ್ಮಿಸುತ್ತಾ ಇವರು ಸಾಗಿದರು. 2005ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯವೊಂದಲ್ಲಿ ಇವರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ , 145 ಎಸೆತಗಳಲ್ಲಿ 183ರನ್ ಬಾರಿಸಿದರು. ಇದು ಎಂಎಸ್. ಧೋನಿ ಆಡಿದ ಶ್ರೇಷ್ಠ ಇನಿಂಗ್ಸ್‍ಗಳಲ್ಲಿ ಒಂದು. ಈ ಮೂಲಕ ಇವರು ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದು ದಾಖಲೆ ನಿರ್ಮಿಸಿದರು. ನಂತರ 2005ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಧೋನಿ ಎಂಟ್ರಿ ಪಡೆದುಕೊಂಡರು. ಈ ಪಂದ್ಯದಲ್ಲಿ ಅವರು ಗಳಿಸಿದ್ದು 30 ರನ್. ಧೋನಿ ತನ್ನ ಮೊದಲ ಟೆಸ್ಟ್ ಶತಕವನ್ನು ಬಾರಿಸಿದ್ದು ಪಾಕಿಸ್ತಾನ ತಂಡದ ವಿರುದ್ದ 2006ರ ಫೈಸಲಾಬಾದ್ ಟೆಸ್ಟ್‍ನಲ್ಲಿ. ಈ ಶತಕದ ನಂತರ ಅವರು ಮೂರು ಟೆಸ್ಟ್ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ನಡೆಸಿದರು.

ಟೀಂ ಇಂಡಿಯಾದ ಸಾರಥ್ಯ :
ಮಹೇಂದ್ರ ಸಿಂಗ್ ಧೋನಿ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟು ಮೂರು ವರ್ಷಗಳ ಬಳಿಕ ಟೀಂ ಇಂಡಿಯಾದ ಸಾರಥ್ಯವನ್ನು ವಹಿಸಿಕೊಂಡರು. ಇದಕ್ಕೂ ಮೊದಲು ಅವರು 2005ರಲ್ಲಿ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗಳಿಗೆ ಟೀಂ ಇಂಡಿಯಾದ ಉಪನಾಯಕರಾಗಿದ್ದರು. ಇವರು 2007ರ ಚೊಚ್ಚಲ ಟ್ವೆಂಟಿ -20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾದ ನಾಯಕರಾಗಿ ಆಯ್ಕೆಗೊಂಡಿದ್ದರು. ಈ ಮಹತ್ವದ ಟೂರ್ನಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಬೇಕಾಗಿದ್ದ ಟೀಂ ಇಂಡಿಯಾದ ನಾಯಕತ್ವ ಎಂಎಸ್.ಧೋನಿಗೆ ಅಚಾನಕವಾಗಿ ದೊರೆಯಿತು. ಈ ಜಬರ್ದಾಸ್ತದ ಕ್ರಿಕೆಟ್ ಟೂರ್ನಿಯ ನಾಯಕತ್ವ ವಹಿಸಿಕೊಳ್ಳಲು ಆಗಿನ ಭಾರತ ತಂಡದ ದಿಗ್ಗಜ ಆಟಗಾರರಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಹಿಂದೇಟು ಹಾಕಿದ್ದರು.ಆ ಸಮಯದಲ್ಲಿ ಟೀಂ ಇಂಡಿಯಾದ ನಾಯಕತ್ವದ ವಿಚಾರದಲ್ಲಿ ಗೊಂದಲದಲ್ಲಿದ್ದ ಆಯ್ಕೆ ಸಮಿತಿಗೆ ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‍ಮನ್ ಆಗಿ ಗುರುತಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವದ ಜವಾಬ್ದಾರಿ ನೀಡುವಂತೆ ನೀಡಿದರು. ಹೀಗೆ ಟೀಂ ಇಂಡಿಯಾದ ನಾಯಕತ್ವ ಧೋನಿ ಹೆಗಲೇರಿತು. ಆಕಸ್ಮಿಕವಾಗಿ ಒಲಿದ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಿದ ಇವರು ಭಾರತೀಯ ಕ್ರಿಕೆಟಿಗೆ ಯಾರೂ ನೀಡದ ಅನನ್ಯ ಕೊಡುಗೆಯನ್ನು ನೀಡಿರುವರು. ಇವರ ಸಾರಥ್ಯದಲ್ಲಿ ಟೀಂ ಇಂಡಿಯಾ ಮಹತ್ವದ ಟ್ರೋಫಿಗಳನ್ನು ಜಯಿಸಿತು. ಇದರಲ್ಲಿ ಟ್ವೆಂಟಿ-20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಪ್ರಮುಖವಾಗಿದೆ.

ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಚಾಂಪ್ಯನ್ :
2007ರಲ್ಲಿ ಐಸಿಸಿ ಆಯೋಜಿಸಿದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ ಸಾರಥ್ಯ ವಹಿಸಿದ ಮಹೇಂದ್ರ ಸಿಂಗ್ ಧೋನಿ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದು ಟ್ವೆಂಟಿ-20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡರು. ತಮಗೆ ದೊರೆತ ಮೊದಲ ಅವಕಾಶದಲ್ಲೇ ತಾವೆಂತ ಸಾಧಕ ಎಂಬುದನ್ನು ಎಂಎಸ್. ಧೋನಿ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟರು. ಈ ಟೂರ್ನಿಯ ವೇಳೆ ಇವರು ತೆಗೆದುಕೊಂಡ ಅಚ್ಚರಿಯ ನಿರ್ಣಯಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಅದರಲ್ಲೂ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಇನ್ನೇನು ಸೋಲು ಖಚಿತ ಎನ್ನುವ ಸಂದರ್ಭದಲ್ಲಿ, ಜೋಗಿಂದರ್ ಶರ್ಮಾಗೆ ಬೌಲಿಂಗ್ ನೀಡುವ ಮೂಲಕ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ವಿಕೆಟ್ ಉರುಳಿಸಿದ ಕ್ಷಣ ಯಾವತ್ತೂ ಅವಿಸ್ಮರಣೀಯ. ಹೀಗೆ ತನ್ನ ನಾಯಕತ್ವದ ಮೊದಲ ಟೂರ್ನಿಯಲ್ಲೇ ಟ್ವೆಂಟಿ-20 ವಿಶ್ವಕಪ್ ಜಯಿಸಿದ ಎಂಎಸ್.ಧೋನಿ ಅಂದು ರಾತ್ರಿ ಬೆಳಗಾಗುವುದರೊಳಗೆ ಭಾರತೀಯ ಕ್ರಿಕೆಟ್ ರಂಗದ ಅದ್ವೀತಿಯ ನಾಯಕರಾಗಿ ಮಿಂಚಿದರು.

ಏಕದಿನ ವಿಶ್ವಕಪ್
ಮಹೇಂದ್ರ ಸಿಂಗ್ ಧೋನಿ ಟ್ವೆಂಟಿ-20 ವಿಶ್ವಕಪ್ ಗೆದ್ದ ನಂತರ ಇವರ ಮೇಲಿನ ಜವಾಬ್ದಾರಿ ಮತ್ತಷ್ಟೂ ಹೆಚ್ಚಾಯಿತು. ಸೀಮಿತ ಓವರ್‍ಗಳ ಪಂದ್ಯಗಳಿಗೆ ಧೋನಿ ನಾಯಕತ್ವ ಅನಿವಾರ್ಯ ಎನಿಸಿತು. ಈ ರಾಂಚಿ ಯುವಕನ ನೇತೃತ್ವದಲ್ಲಿ ಟೀಂ ಇಂಡಿಯಾ 2011ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಡಲು ಇಂಗ್ಲೆಂಡಿಗೆ ತೆರಳಿತು . ಧೋನಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು. ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ಸಮತೋಲಿತ ತಂಡವನ್ನು ಕಟ್ಟಿದರು. ಇದರ ಫಲವೇ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಕಿರೀಟ ಟೀಂ ಇಂಡಿಯಾದ ಮುಡಿಗೇರಿತು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ ಸಂದರ್ಭದಲ್ಲಿ ಧೋನಿ ಬ್ಯಾಟಿಂಗ್‍ಗೆ ಇಳಿದು ನಡೆಸಿದ ಅದ್ಭುತ ಆಟವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಎದುರಾಳಿಗಳು ಊಹಿಸದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ ಧೋನಿ ನಿರ್ಣಯಗಳು ನಾಯಕತ್ವದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಯಿತು. ತನ್ನ ಕ್ರಿಕೆಟ್ ಬದುಕಿನಲ್ಲಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಲೇಬೇಕೆಂಬ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕನಸನ್ನು ನನಸು ಮಾಡಿಸಿದ್ದು ಕೂಡ ಎಂಎಸ್. ಧೋನಿ ನಾಯಕತ್ವ.

ಐಸಿಸಿ ಚಾಂಪಿಯನ್ಸ್ ಟ್ರೋಫಿ :
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007ರ ಟ್ವೆಂಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಗೆದ್ದ ನಂತರ 2013ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತೀಯ ಅಭಿಮಾನಿಗಳು ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಅಭಿಮಾನಿಗಳ ಈ ನಿರೀಕ್ಷೆಯನ್ನು ಧೋನಿ ನಾಯಕತ್ವ ಹುಸಿಗೊಳಿಸಿದೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ, ಐಸಿಸಿಯ ಮೂರು ಮಹತ್ವದ ಟ್ರೋಫಿಗಳನ್ನು ಗೆದ್ದಿರುವ ವಿಶ್ವ ಕ್ರಿಕೆಟಿನ ಏಕೈಕ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿರುವರು. ಟೀಂ ಇಂಡಿಯಾ ಈ ಮೂರು ಮಹತ್ವದ ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಮಹೇಂದ್ರ ಸಿಂಗ್ ಧೋನಿ ನಾಯಕತ್ವವೇ ಮಹತ್ವದ ಪಾತ್ರ ವಹಿಸಿತ್ತು.

ಟೆಸ್ಟ್ ಕ್ರಿಕೆಟಿನಲ್ಲೂ ಅಗ್ರಪಟ್ಟ :
ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟಿನಲ್ಲಿ ಟೀಂ ಇಂಡಿಯಾವನ್ನು ಯಶಸ್ಸಿನ ಉನ್ನತ ಶಿಖರಕ್ಕೇರಿಸಿರುವ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟಿನಲ್ಲೂ ಪಾರಮ್ಯ ಮೆರೆದಿರುವರು. 2008ರಲ್ಲಿ ಅನಿಲ್ ಕುಂಬ್ಳೆ ಗಾಯಗೊಂಡ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲೂ ತಂಡ ಸಮಬಲ ಸಾಧಿಸಿತು. ಅನಿಲ್ ಕುಂಬ್ಳೆ ಅನುಪಸ್ಥಿತಿಯಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ಧೋನಿ, ಅನಿಲ್ ಕುಂಬ್ಳೆ ನಿವೃತ್ತಿಯ ನಂತರ ಟೆಸ್ಟ್ ತಂಡದ ನಾಯಕರಾದರು. 2008-09ರಲ್ಲಿ ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಟೀಂ ಇಂಡಿಯಾ, 2009-10ರಲ್ಲಿ ಶ್ರೀಲಂಕಾ ವಿರುದ್ಧ 2-0ರಲ್ಲಿ ಸರಣಿ ಜಯ ಸಾಧಿಸುವ ಮೂಲಕ ಟೆಸ್ಟ್‍ನಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿತು. ಅಲ್ಲದೇ 11 ತಿಂಗಳು ಸತತ ನಂ.1 ಸ್ಥಾನದಲ್ಲಿದ್ದ ಟೀಂ ಇಂಡಿಯಾ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟಿನಲ್ಲಿ ಅಗ್ರಪಟ್ಟವನ್ನು ಅಲಂಕರಿಸಿ ಪ್ರಶಸ್ತಿ ಗೆದ್ದುಕೊಂಡಿತು. ಅಗ್ರಸ್ಥಾನಕ್ಕೆ ಐಸಿಸಿ ನೀಡಿದ ಟೆಸ್ಟ್ ಗದೆಯನ್ನು ಪಡೆದ ಭಾರತ ತಂಡದ ಮೊದಲ ನಾಯಕ ಎಂಬ ದಾಖಲೆಯನ್ನು ಎಂಎಸ್ ಧೋನಿ ನಿರ್ಮಿಸಿದರು.

ನಾಯಕತ್ವದ ದಾಖಲೆ :
ಮಹೇಂದ್ರ ಸಿಂಗ್ ಧೋನಿ ಮೊದಲ ಬಾರಿ ಟೀಂ ಇಂಡಿಯಾವನ್ನು ಟೆಸ್ಟ್ ಕ್ರಿಕೆಟಿನಲ್ಲಿ ಮುನ್ನಡೆಸಿದ್ದು 2009ರಲ್ಲಿ. ಅಲ್ಲಿಂದ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದು 27ರಲ್ಲಿ ಗೆಲುವು ಸಾಧಿಸಿದ್ದರೆ, 18ರಲ್ಲಿ ಸೋಲು ಹಾಗೂ 15 ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿವೆ. ಇದು ಮಾತ್ರವಲ್ಲದೇ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ, ಏಕದಿನ ಹಾಗೂ ಟ್ವೆಂಟಿ-20ಕ್ರಿಕೆಟ್ ಮಾದರಿಯಲ್ಲೂ ಅಗ್ರಸ್ಥಾನಕ್ಕೇರಿತ್ತು. ಧೋನಿ 2007ರಿಂದ 2018ರವರೆಗೆ ಟೀಂ ಇಂಡಿಯಾದ ಸಾಮರ್ಥ್ಯವನ್ನು 200 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಇದರಲ್ಲಿ ಟೀಂ ಇಂಡಿಯಾ 110 ಪಂದ್ಯಗಳನ್ನು ಗೆದ್ದಿದೆ . 74ರಲ್ಲಿ ಸೋಲು, 5 ಪಂದ್ಯ ಟೈ ಆಗಿದ್ದು, 11 ಪಂದ್ಯ ಫಲಿತಾಂಶ ರಹಿತವಾಗಿತ್ತು. ಅಲ್ಲದೆ 72 ಟ್ವೆಂಟಿ-20 ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದ ಇವರು 41ರಲ್ಲಿ ಜಯ , 28ರಲ್ಲಿ ಸೋಲು, 2 ಪಂದ್ಯ ಟೈ ಹಾಗೂ 1 ಪಂದ್ಯ ಫಲಿತಾಂಶ ರಹಿತವಾಗಿತ್ತು.

ವಿಕೆಟ್ ಹಿಂದಿನ ಮಾಂತ್ರಿಕ :
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಜೊತೆಗೆ ವಿಕೆಟ್ ಹಿಂದುಗಡೆ ಮಾಂತ್ರಿಕ ಸ್ಪರ್ಶದ ವಿಕೆಟ್ ಕೀಪರ್ ಆಗಿಯೂ ಗುರುತಿಸಿಕೊಂಡವರು. ಬ್ಯಾಟ್ಸ್‍ಮನ್ ಅರ್ಧ ಇಂಚು ಕ್ರೀಸ್ ದಾಟಿದರೂ ಆತ ಗೆರೆಯೊಳಕ್ಕೆ ಮರಳುವ ಮುನ್ನ ಕ್ಷಣಾರ್ಧದಲ್ಲಿ ಬೇಲ್ಸ್ ಎಗರಿಸುವ ಕಲೆ ಕರಗತವಾಗಿರುವುದು ಧೋನಿಗೆ ಮಾತ್ರ. ಅವರು ಅದ್ಭುತ ಕ್ಯಾಚುಗಳನ್ನು ಹಿಡಿಯುದರಲ್ಲಿರ ಬಹುದು, ಎಲ್‍ಬಿಡಬ್ಲ್ಯು- ಕ್ಯಾಚ್‍ಗಳ ಬಗ್ಗೆ ಅಂಪೈರ್‍ಗೆ ಅಪೀಲು ಮಾಡುವುದು ಅಥವಾ ಮೂರನೇ ಅಂಪೈರ್ ನಿರ್ಧಾರಕ್ಕೆ ಡಿಆರ್‍ಎಸ್ ಮನವಿಯ ಚಾಕಚಕ್ಯತೆ ಇರಬಹುದು… ಇಂತಹ ಅನೇಕ ತಂತ್ರಗಳಲ್ಲೂ ಧೋನಿ ವಿಕೆಟ್ ಹಿಂದುಗಡೆ ನಿಸ್ಸೀಮರು. ಏಕದಿನ ಪಂದ್ಯವೊಂದರಲ್ಲಿ 6 ಬ್ಯಾಟ್ಸ್‍ಮನ್ ಗಳನ್ನು ಬಲಿ ಪಡಿದ ದಾಖಲೆ ಧೋನಿ ಹೆಸರಿನಲ್ಲಿದೆ. ಏಕದಿನ ಕ್ರಿಕೆಟ್ ನಲ್ಲಿ ವಿಕೆಟ್ ಹಿಂದೆ ನಿಂತು ಒಟ್ಟು 444 ವಿಕೆಟ್‍ಗಳನ್ನು ಧೋನಿ ಪಡೆದುಕೊಂಡಿದ್ದಾರೆ. ಇದರಲ್ಲಿ 321 ಕ್ಯಾಚ್ ಹಾಗೂ 123 ಸ್ಟಂಪಿಂಗ್‍ಗಳು ಸೇರಿವೆ. ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಯನ್ನೂ ಧೋನಿ ತಮ್ಮದಾಗಿಸಿಕೊಂಡಿದ್ದಾರೆ. 300ಕ್ಕೂ ಹೆಚ್ಚು ಕ್ಯಾಚ್ ಹಿಡಿದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಟೆಸ್ಟ್‍ನಲ್ಲೂ ವಿಕೆಟ್ ಕೀಪರ್ ಆಗಿ ಧೋನಿ ಗಮನ ಸೆಳೆದಿದ್ದಾರೆ. 256 ಕ್ಯಾಚ್ ಹಾಗೂ 38 ಸ್ಟಂಪಿಂಗ್ ಮೂಲಕ ಒಟ್ಟು 294 ಬಲಿ ಪಡೆದಿದ್ದಾರೆ. ಟ್ವೆಂಟಿ-20 ಕ್ರಿಕೆಟ್ ನಲ್ಲಿ ಇವರು 57 ಕ್ಯಾಚ್ ಹಾಗೂ 34 ಸ್ಟಂಪಿಂಗ್ ಮೂಲಕ ವಿಕೆಟ್ ಹಿಂದುಗಡೆ 91 ಬಲಿ ಪಡೆದಿದ್ದಾರೆ.

ಬ್ಯಾಟಿಂಗ್ ಪರಾಕ್ರಮ:
ಮಹೇಂದ್ರ ಸಿಂಗ್ ಧೋನಿ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ದ ಆಡಿ ಶೂನ್ಯಕ್ಕೆ ರನೌಟ್ ಆದರು. ಶೂನ್ಯದಿಂದ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಪ್ರಾರಂಭಿಸಿದ ಇವರು ಮುಂದೆ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಶಕ್ತಿಯಾಗಿ ಮೆರೆದರು. ಧೋನಿ ತನ್ನ ಕ್ರಿಕೆಟ್ ಬಾಳ್ವೆಯಲ್ಲಿ 350 ಏಕದಿನ ಪಂದ್ಯಗಳನ್ನು ಆಡಿದ್ದು 10 ಶತಕ ಹಾಗೂ 73 ಅರ್ಧಶತಕಗಳ ನೆರವಿನಿಂದ 50.53ರ ಸರಾಸರಿಯಲ್ಲಿ 10773 ರನ್ ಗಳಿಸಿದ್ದಾರೆ. ಇವರು 2005ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಏಕದಿನ ಪಂದ್ಯದಲ್ಲಿ ಸಿಡಿಸಿದ 183 ರನ್ ಗರಿಷ್ಠ ಮೊತ್ತ. 90 ಟೆಸ್ಟ್ ಪಂದ್ಯಗಳಲ್ಲಿ 38.09ರ ಸರಾಸರಿಯಲ್ಲಿ 4876 ರನ್ ಗಳಿಸಿದ್ದು, ಇದರಲ್ಲಿ 6 ಶತಕ ಹಾಗೂ 1 ದ್ವಿಶತಕ ಹಾಗೂ 33 ಅರ್ಧಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ 224 ರನ್ ಗರಿಷ್ಠ ಮೊತ್ತವಾಗಿದೆ. 98 ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಧೋನಿ 1617ರನ್ ಕಲೆಹಾಕಿದ್ದಾರೆ.
ಹೀಗೆ ಮಹೇಂದ್ರ ಸಿಂಗ್ ಧೋನಿ ಜಗತ್ತನ್ನೇ ಗೆದ್ದ ನಾಯಕ. ಭಾರತ ಕ್ರಿಕೆಟ್ ತಂಡದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಅಸಾಮಾನ್ಯ ಕ್ರಿಕೆಟಿಗ. ಇಂತಹ ಅದ್ಭುತ ಆಟಗಾರ 2020ರ ಆಗಸ್ಟ್-15ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ದಿಢೀರನೇ ವಿದಾಯ ಹೇಳಿದರು.
ವಿದಾಯದ ಪಂದ್ಯವನ್ನು ಆಡದೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಎಂಎಸ್ ಧೋನಿ ಭಾಜನರಾಗಿರುವರು. ಸಾಧನೆಗಳ ಸರದಾರರಾಗಿ ಕ್ರಿಕೆಟ್ ಜಗತ್ತಿನಲ್ಲಿ ಕಾಣಿಸಿಕೊಂಡಿರುವ ಎಂಎಸ್ ಧೋನಿ ಭಾರತೀಯ ಕ್ರಿಕೆಟ್ ಕಂಡ ಅದ್ಭುತ ಆಟಗಾರ ಹಾಗೂ ಅಪ್ರತಿಮ ನಾಯಕ ಅನ್ನುವುದರಲ್ಲಿ ಎರಡು ಮಾತಿಲ್ಲ.

 


‘ಹೆಲಿಕಾಪ್ಟರ್ ಶಾಟ್’.
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವುದೇ ತಮ್ಮ ಮನಮೋಹಕ ಹೊಡೆತಗಳಿಂದ. ಅದರಲ್ಲೂ ಧೋನಿ ಎಂದರೆ ಪಕ್ಕನೇ ನೆನಪಾಗುವುದು ಅವರು ಬಾರಿಸುವ ‘ಹೆಲಿಕಾಪ್ಟರ್ ಶಾಟ್’. ಇವರ ಈ ಹೆಲಿಕಾಪ್ಟರ್ ಶಾಟ್ ಗೆ ಮನಸೋಲದ ಕ್ರಿಕೆಟ್ ಅಭಿಮಾನಿಗಳೇ ಇಲ್ಲ. ಈ ಅಪರೂಪದ ಶಾಟ್ ನಿಂದಲೇ ಧೋನಿಯ ಕ್ರಿಕೆಟ್ ಲೈಫ್ ಸ್ಟೈಲ್ ಕೂಡ ಚೇಂಜ್ ಆಗಿತ್ತು. ಆರಂಭಿಕ ಪಂದ್ಯಗಳಲ್ಲಿ ಸತತ ವೈಫಲ್ಯತೆ ಕಂಡ ನಂತರ, ಕೆಳಕ್ರಮಾಂಕದಿಂದ ಬ್ಯಾಟಿಂಗ್ ಪ್ರಮೋಷನ್ ಪಡೆದು ಕೊಂಡ ಇವರು ತನ್ನ ಫೇವರಿಟ್ ಹೆಲಿಕಾಪ್ಟರ್ ಶಾಟ್ ನಿಂದ ರನ್ ಗಳ ಕೊಳ್ಳೆ ಹೊಡೆಯಲು ಆರಂಭಿಸಿದರು. ಆಗಿನ ನಾಯಕರುಗಳಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರುಗಳಿಗೆ ಶಿಸ್ತಿನ ಆಟಗಾರನಾಗಿದ್ದ ಎಂಎಸ್.ಧೋನಿ ಏಕದಿನ ಕ್ರಿಕೆಟ್ ಪಂದ್ಯಗಳ ‘ಗ್ರೇಟ್ ಫಿನಿಶರ್’ ಆಗಿಯೂ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿ ಕೊಂಡವರು. ಕ್ರಿಕೆಟ್ ಜಗತ್ತಿಗೆ ಕಗ್ಗಂಟಾಗಿದ್ದ ಈ ಹೆಲಿಕಾಪ್ಟರ್ ಶಾಟ್ ಧೋನಿಯಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪರಿಚಯಿಸಲ್ಪಟ್ಟಿತು.


ಹೇರ್ ಸ್ಟೈಲ್
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆಗೈದ ಹೊತ್ತಿನಲ್ಲಿ ಅವರ ಹೇರ್ ಸ್ಟೈಲ್ ಹೇಳುವ ಹಾಗೆಯೇ ಇಲ್ಲ. ಮೊದಲು ಅವರು ಮಿಂಚಿದ್ದೇ ಉದ್ದನೇಯ ಕೂದಲಿನ ಹೇರ್ ಸ್ಟೈಲ್‍ನಿಂದ. ನಂತರ ಕಾಲ ಕಾಲಕ್ಕೆ ತಕ್ಕಂತೆ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡು ಹೊಸ ಹೊಸ ಟ್ರೆಂಡನ್ನು ಧೋನಿ ಸೃಷ್ಟಿಸಿದರು.

Related Articles

Stay Connected

21,961FansLike
2,812FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!