Tuesday, October 22, 2024

ಗಂಗೊಳ್ಳಿ ಬಂದರು ಹಾಗೂ ಅಳಿವೆಯಲ್ಲಿ ತುರ್ತು ಹೂಳೆತ್ತಲು ಮೀನುಗಾರಿಕಾ ಸಚಿವರಿಗೆ ಮನವಿ

ಗಂಗೊಳ್ಳಿ : ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಹಾಗೂ ಅಳಿವೆಯಲ್ಲಿ ತುರ್ತು ಹೂಳೆತ್ತುವ ಕಾರ್ಯ ನಡೆಸಬೇಕೆಂದು ಗಂಗೊಳ್ಳಿಯ ಹಸಿ ಮೀನು ವ್ಯಾಪರಸ್ಥರ ಮತ್ತು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿಯೋಗ ರಾಜ್ಯದ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳು ವೈದ್ಯ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವ ಮಂಕಾಳು ವೈದ್ಯ ಅವರು, ಹೂಳೆತ್ತುವ ಬಗ್ಗೆ ಇಲಾಖೆ ಅಧಿಕಾರಿಗಳ ಮೂಲಕ ವರದಿ ತರಿಸಿಕೊಂಡು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಚಿವರ ಸೂಚನೆ ಮೇರೆಗೆ ಗಂಗೊಳ್ಳಿ ಮೀನುಗಾರಿಕೆ ಬಂದರು ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಜೆ‌ಇ ಭಾನುಪ್ರಕಾಶ್ ಅವರು ಬಂದರು ಹಾಗೂ ಅಳಿವೆ ಪ್ರದೇಶವನ್ನು ವೀಕ್ಷಿಸಿ ಅಳಿವೆಯಲ್ಲಿ ತುರ್ತು ಹೂಳೆತ್ತುವ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಳೆದ ನವೆಂಬರ್ ತಿಂಗಳಿನಲ್ಲಿ ಸುಮಾರು ೪.೬ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಮೀನುಗಾರರ ನಿರೀಕ್ಷೆಗೆ ತಕ್ಕಂತೆ ಡ್ರಜ್ಜಿಂಗ್ ಕಾಮಗಾರಿ ನಡೆದಿಲ್ಲ, ಗಂಗೊಳ್ಳಿ ಬಂದರಿಗೆ ಬರುವ ದಾರಿಯಲ್ಲಿ ಡ್ರಜ್ಜಿಂಗ್ ಮಾಡುವುದು ಬಿಟ್ಟು ಕೋಡಿಗೆ ಹೋಗುವ ದಾರಿಯಲ್ಲಿ ಡ್ರಜ್ಜಿಂಗ್ ಮಾಡಲಾಗಿದೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದರು.

ಗಂಗೊಳ್ಳಿ ಅಳಿವೆಯಲ್ಲಿ ಹಿಟಾಚಿ ಮೂಲಕ ಹೂಳೆತ್ತಿ ಬಾರ್ಜ್ ಮೂಲಕ ತೆಗೆದ ಹೂಳನ್ನು ಅಳಿವೆಯಿಂದ ಸ್ವಲ್ಪ ದೂರದಲ್ಲಿ ಹಾಕಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಅಳಿವೆಯಲ್ಲಿ ತೆಗೆದ ಹೂಳನ್ನು ಗಂಗೊಳ್ಳಿ ಬಂದರಿಗೆ ಬರುವ ದಾರಿಯುದ್ದಕ್ಕೂ ಹಾಕುತ್ತಾ ಹೋಗಿರುವುದರಿಂದ ಅಲ್ಲಲ್ಲಿ ಮರಳು ದಿಬ್ಬಗಳು ಸೃಷ್ಟಿಯಾಗಿದೆ. ಇದರಿಂದ ಪರ್ಸಿನ್ ಮತ್ತು ಫಿಶಿಂಗ್ ಬೋಟುಗಳು ಹಾಗೂ ದೋಣಿಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಕಷ್ಟವಾಗುತ್ತಿದ್ದು, ಅಳಿವೆಯಲ್ಲಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುತ್ತಿರುವ ಗಂಗೊಳ್ಳಿ – ಕೋಡಿ ಅಳಿವೆ ಪ್ರದೇಶದಲ್ಲಿ ಸರಿಯಾದ ರೀತಿಯಲ್ಲಿ ಹೂಳೆತ್ತುವ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.

ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಮೀನುಗಾರ ಮುಖಂಡರಾದ ರಾಮಪ್ಪ ಖಾರ್ವಿ, ರಾಘವೇಂದ್ರ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!