Friday, October 18, 2024

ತೆಂಕನಿಡಿಯೂರು ಕಾಲೇಜಿನಲ್ಲಿ ನಿರಂಜನ ನೂರರ ನೆನಪಲ್ಲಿ ರಂಗರೂಪಕ

ಉಡುಪಿ: ಕೆಯ್ಯೂರು ಹೋರಾಟ ಮತ್ತು ತಮ್ಮ ಬರಹ ಎರಡನ್ನೂ ಕನ್ನಡದ ನೆನಪಿನ ಚಿರಸ್ಮರಣೆಯಲ್ಲಿ ಉಳಿಸಿದ ಸಮಸಮಾಜದ ಕನಸುಗಾರ, ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಖ್ಯಾತ ಕಾದಂಬರಿಕಾರ, ಕಥೆಗಾರ ನಿರಂಜನರೆಂದೇ ಖ್ಯಾತರಾದ ಕುಳಕುಂದ ಶಿವರಾಯರ ನೂರರ ನೆನಪಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆ(ರಿ) ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿರಂಜನ ನೂರರ ನೆನಪು ಮತ್ತು ಕಥೆಯ ರಂಗರೂಪಕ ಕಾರ್‍ಯಕ್ರಮ ನಡೆಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿಯವರು ನಿರಂಜನರ ಸಾಹಿತ್ಯ ಮತ್ತು ಸಾಮಾಜಿಕ ಕಾಳಜಿಗಳನ್ನು ಪರಿಚಯಿಸುತ್ತಾ, ಕನ್ನಡದ ಪಾಲಿಗೆ ಅವರೊಬ್ಬ ಕೇವಲ ಕಥೆಗಾರ, ಕಾದಂಬರಿಕಾರರಷ್ಟೇ ಅಲ್ಲ, ವೈಯಕ್ತಿಕ ಬದುಕಿನ ನೋವಿನ ನಡುವೆಯೂ ಸಮಾಜದ ಬದುಕಿನ ಘನತೆಗಾಗಿ ಇಡಿಯ ಬದುಕನ್ನು ಮುಡಿಪಾಗಿಟ್ಟ ಹೋರಾಟಗಾರ, ಬರಹಗಾರ ಮತ್ತು ಜನಪರ ಪತ್ರಕರ್ತರೂ ಆಗಿ ಅವರು ಕನ್ನಡಕ್ಕೆ ಉಳಿಸಿಹೋದ ಚಿರಸ್ಮರಣೆ ದೊಡ್ಡದೇ ಎಂದರು. ಉಪನ್ಯಾಸದ ತರುವಾಯ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ನಿರಂಜನ ಸಣ್ಣಕಥೆ ಧ್ವನಿಯ ರಂಗರೂಪದ ಪ್ರದರ್ಶನ ನಡೆಯಿತು. ಕಥಾ ಓದಿನ ಹೊಸಬಗೆಯ ಈ ಪ್ರಯೋಗದಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸದಸ್ಯ ಕಲಾವಿದರು ಪಾತ್ರಗಳಾಗಿ ಕಥೆಯ ಮಾತುಗಳಿಗೆ ಕೊರಳಾದರು.

ಪ್ರಭಾರ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಡಾ. ಸದಾನಂದ ಬೈಂದೂರು, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನಾಗಪ್ಪ ಗೌಡ, ಐಕ್ಯೂ‌ಎಸಿ ಸಂಚಾಲಕಿ ಮೇವಿ. ಮಿರಾಂದ, ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ, ಸಂದ್ಯಾರಾಣಿ, ಅರ್ಚನ ಹಾಗೂ ಶಾಲಿನಿ ಉಪಸ್ಥಿತರಿದ್ದರು. ಶ್ರೀಮತಿ ಶರಿತಾ ಹೆಗ್ಡೆ ನಿರೂಪಿಸಿ, ಭಾರತಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!