Friday, October 18, 2024

ʼವಯನಾಡಿಂತೆ ಪ್ರಿಯಾಂಕರಿʼಗೆ ಪರಿಸರ ಸೂಕ್ಷ್ಮ ವಲಯದ ದೊಡ್ಡ ಸವಾಲು !

ಪ. ಸೂ ಪ್ರದೇಶಗಳ ಜನಪ್ರತಿನಿಧಿಗಳಿಗೆ ಸ್ಥಿತಿಗತಿಗಳ ವೈಜ್ಞಾನಿಕ ಅರಿವು ಮುಖ್ಯ

ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಕಾಂಗ್ರೆಸ್‌ಗೆ ಗಟ್ಟಿ ಪ್ರಾಬಲ್ಯದ ಕ್ಷೇತ್ರವೇ ಆಗಿರುವ ವಯನಾಡು ಈಗ ವಿಪತ್ತು ಪೀಡಿತ ಪ್ರದೇಶ. ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್‌ ಗಾಂಧಿ ಈಗಾಗಲೇ ಘೋಷಣೆ ಮಾಡಿದೆ.

ವಯನಾಡು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧೆಗೆ ಇಳಿಯುವ ಎಲ್ಲಾ ಅಭ್ಯರ್ಥಿಗಳಿಗೂ ದೊಡ್ಡ ಸವಾಲು ಮುಂದಿದೆ. ರಾಹುಲ್‌ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 64.7ರಷ್ಟು ಮತಗಳಿಸುವುದರ ಮೂಲಕ ತಮ್ಮ ಸಮೀಪದ ಅಭ್ಯರ್ಥಿ ಸಿಪಿಐನ ಅನ್ನಿ ರಾಜಾ ವಿರುದ್ಧ 3.64 ಲಕ್ಷಗಳ ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದ ಕೆ. ಸುರೇಂದ್ರನ್‌ 1.3 ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದರು. ಕಾಂಗ್ರೆಸ್‌ ಪಾಲಿಗೆ ಭದ್ರ ಕ್ಷೇತ್ರವಾಗಿರುವುದರಿಂದ ಸಹಜವಾಗಿ ಇಲ್ಲಿಂದ ಮತ್ತ ಕಾಂಗ್ರೆಸ್‌ ಅಭ್ಯರ್ಥಿಯೇ ಲೋಕಸಭೆಗೆ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ರಾಹುಲ್‌ ಗಾಂಧಿ ಪಡೆದಷ್ಟು ಮತಗಳನ್ನು ಪ್ರಿಯಾಂಕ ಗಿಟ್ಟಿಸಿಕೊಳ್ಳದೇ ಇದ್ದರೂ, ಪ್ರಿಯಾಂಕಾ ಇಲ್ಲಿಂದ ಸಂಸದರಾಗಿ ಆಯ್ಕೆಯಾಗುವುದು ನಿಶ್ಚಿತ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ. ಪ್ರಿಯಾಂಕಾ ಗಾಂಧಿ ಆಗಲಿ ಅಥವಾ ಎದರಿರುವ ಯಾರೇ ಆಗಲಿ ಸಂಸದರಾಗಿ ವಯನಾಡು ಕ್ಷೇತ್ರದಿಂದ ಆಯ್ಕೆಯಾದರೆ, ಕ್ಷೇತ್ರದ ಮುಂದಿರುವ ಬಹುದೊಡ್ಡ ಸವಾಲನ್ನು ಎದುರಿಸಲೇ ಬೇಕಿದೆ ಎನ್ನುವುದು ಅಕ್ಷರಶಃ ಸತ್ಯ.

ವಯನಾಡು ಸಂಸದರ ಮುಂದಿರುವ ಸವಾಲುಗಳು :

ಮಲೆಗಳ ನಾಡು ಕೇರಳ. ಕೇರಳದ 14 ಜಿಲ್ಲೆಗಳಲ್ಲಿ 12 ಜಿಲ್ಲೆಗಳಲ್ಲಿರುವ ಸುಮಾರು 123 ಹಳ್ಳಿಗಳ ವ್ಯಾಪ್ತಿಯ 13,108 ಚ.ಕೀ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕು ಎಂದು ಪ್ರೊ. ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿ ಮೂಲಕ ಶಿಫಾರಸ್ಸು ಮಾಡಿತ್ತು. ಇದರಲ್ಲಿ ಸುಮಾರು 60 ಹಳ್ಳಿಗಳು ಇಡುಕ್ಕಿ ಹಾಗೂ ವಯನಾಡು ಜಿಲ್ಲೆಗಳಲ್ಲೇ ಇವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೇರಳದ ಜನಪ್ರಿಯ ಪ್ರವಾಸಿ ತಾಣವಾಗಿರುವ ವಯನಾಡು ಕಳೆದ ಜುಲೈನಲ್ಲಿ ಭಾರಿ ಪ್ರಮಾಣದಲ್ಲಿ ಪ್ರಕೃತಿ ವಿಪತ್ತಿಗೆ ತುತ್ತಾಗಿತ್ತು. ಭೀಮ ಗಾತ್ರದ ಮಲೆ ಪ್ರದೇಶಗಳೇ ಕುಸಿದು ನದಿಯಾಗಿ ಹರಿದು ಹೋಗಿದ್ದವು. ಸಂಸದರಿಲ್ಲದ ಒಂದು ಲೋಕಸಭಾ ಕ್ಷೇತ್ರ ಅಕ್ಷರಶಃ ಅನಾಥವಾಗಿತ್ತು. ವಯನಾಡಿನ ದುರಂತ ಸುದ್ದಿ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಬಿತ್ತರವಾದ, ಪ್ರಸಾರವಾದ ವರದಿಗಳಿಗಿಂತಲೂ ಭೀಕರವಾಗಿತ್ತು ಎನ್ನುವುದು ಸತ್ಯ ಎನ್ನುವುದಕ್ಕೆ ಬಹುತೇಕ ನಾಮಾವಶೇಷದಂತೆಯೇ ಆಗಿ ಕಂಡ ವಯನಾಡಿನ ಮುಂಡಕ್ಕೈ, ಚೂರಲ್‌ ಮಲ, ಅಟ್ಟಮಲ ಹಾಗೂ ನೂಲ್ಪುಳ ಧರಾಶಾಹಿಯಾಗಿ ಬಿದ್ದ ಚಿತ್ರಣವೇ ಸಾಕ್ಷಿ.

ಈಗ ಇಲ್ಲಿನ ಸ್ಥಿತಿ ಬಹುತೇಕ ಚೇತರಿಸಿಕೊಂಡಿದೆ ಎನ್ನುವುದಕ್ಕಿಂತ ʼಬಾಹ್ಯವಾಗಿ ಅಳುವಿಲ್ಲದೆʼ ಹೇಗೋ ಮುಂದೆ ಸಾಗುತ್ತಿದೆ ಎನ್ನುವುದೇ ಯಥಾರ್ಥವಾಗಿ ಒಪ್ಪುತ್ತದೆ ಎಂದು ಹೇಳುವುದು ಸರಿ ಅನ್ನಿಸುತ್ತದೆ. ಮುಂದೆ ಈ ಲೋಕಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹೊರಲಿರುವ ಸಂಸದರ ಮುಂದೆಯೂ ಇಲ್ಲಿನ ಸ್ಥಿತಿಗತಿಗಳ ದೊಡ್ಡ ಸವಾಲಿದೆ ಎನ್ನುವುದು ಸತ್ಯ.

ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳನ್ನು ರಕ್ಷಿಸಬೇಕು ಎಂಬ ದೃಷ್ಟಿಯಲ್ಲಿ ಅಧ್ಯಯನ ಮಾಡುವಂತೆ ಕೇಂದ್ರ ಸರ್ಕಾರ ನೇಮಿಸಿದ್ಧ ಪ್ರೊ. ಮಾಧವ ಗಾಡ್ಗೀಳ್‌ ನೇತೃತ್ವದ ಸಮಿತಿ ಹಾಗೂ ಪ್ರೊ. ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿದ ವರದಿಗಳನ್ನು ಕೇರಳ ಸರ್ಕಾರ ಸಂಪೂರ್ಣವಾಗಿ ವಿರೋಧಿಸಿತ್ತು. ಇಂತಹ ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು ಹಾಗೂ ಕೈಗಾರಿಕೆ ಸ್ಥಾಪನೆಯಂತಹ ಚಟುವಟಿಕೆಗಳಿಗೆ ಕೇರಳ ಸರ್ಕಾರ (ಐದು ರಾಜ್ಯಗಳ ಸರ್ಕಾರಗಳು) ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾಗಿತ್ತು. ಇದೇ ಕಾರಣಕ್ಕೆ ಕೇರಳ ಅನೇಕ ಭಾರಿ ಈ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ವಿಪತ್ತನ್ನು ಕಂಡಿದೆ. ಇಷ್ಟಾಗಿಯೂ ಪಾಠ ಕಲಿತಿಲ್ಲ.

2018ರ ಆಗಸ್ಟ್‌ 14ರಿಂದ 19ರ ನಡುವೆ ಕೇರಳದಲ್ಲಿ ಸುರಿದ ಭಾರಿ ಮಳೆಗೆ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಪ್ರವಾ‌‌ಹ ಉಂಟಾಗಿತ್ತು. 480ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. 1924ರಲ್ಲಿ ಉಂಟಾಗಿದ್ದ ನೆರೆಯ ನಂತರ ಆ ಮಟ್ಟಿಗಿನ ಭೀಕರ ಪ್ರವಾಹ ಸ್ಥಿತಿಯನ್ನು ಕೇರಳ ಕಂಡಿರಲಿಲ್ಲ. ಇಡುಕ್ಕಿ ಜಲಾಶಯ ಸೇರಿದಂತೆ ರಾಜ್ಯದ ಎಲ್ಲ ಜಲಾಶಯಗಳಿಂದ ಅನಿವಾರ್ಯವಾಗಿ ಹೆಚ್ಚು ನೀರು ಹೊರಗೆ ಬಿಡಬೇಕಾಯಿತು. ಇದರೊಂದಿಗೆ ಮಳೆಯೂ ತೀವ್ರವಾಗಿದ್ದರಿಂದ ನೆರೆ ಸೃಷ್ಟಿಯಾಗಿ, ಭೂಕುಸಿತ ಸಂಭವಿಸಿತು. ಪೂತ್ತುಮಲ ಎನ್ನುವುದು ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಒಂದು ಹಳ್ಳಿ. 2019ರ ಆಗಸ್ಟ್ 8ರಂದು ಭಾರಿ ಮಳೆಯ ಪರಿಣಾಮದಿಂದಾಗಿ ಭೂಕುಸಿತ ಸಂಭವಿಸಿತ್ತು. ಅದು ಎಷ್ಟು ತೀವ್ರವಾಗಿತ್ತು ಎಂದರೆ, 20 ಹೆಕ್ಟೇರ್‌ನಷ್ಟು ಭೂಮಿಯು 2 ಕಿಮೀನಷ್ಟು ದೂರಕ್ಕೆ ಸರಿದಿತ್ತು. ಹೀಗೆ ಕೇರಳದ ಜನರನ್ನು ಮಳೆಗಾಲ ದುಸ್ವಪ್ನವಾಗಿ ಪ್ರತಿ ಭಾರಿಯೂ ಕಾಡುತ್ತದೆ.

ಪಶ್ಚಿಮ ಘಟ್ಟ ಜನ ಸಂರಕ್ಷಣಾ ಸಮಿತಿ ಮತ್ತು ಹೊಣೆಗಾರಿಕೆ :

ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟ ಕಸ್ತೂರಿ ರಂಗನ್‌ ವರದಿಯ ವಿರುದ್ಧ ಕೇರಳದಲ್ಲಿ ಬೃಹತ್‌ ಮಟ್ಟದಲ್ಲಿ ಪ್ರತಿಭಟನೆಯ ಕಾವು ಎದ್ದಿತ್ತು.

ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರವೂ ಕೂಡ ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿರುವ ಭಾಗಗಳಲ್ಲಿ ದಟ್ಟ ಜನವಸತಿ ಇದೆ. ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ವರದಿಯು ರೈತ ವಿರೋಧಿಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕು ಉಂಟಾಗಲಿದೆ. ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ವಾದ ಮಂಡಿಸಿತ್ತು. ಆದರೇ, ಪರಸರಕ್ಕೆ ಹಾನಿವುಂಟು ಮಾಡುವ ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು ಹಾಗೂ ಕೈಗಾರಿಕೆ ಸ್ಥಾಪನೆಯಂತಹ ಚಟುವಟಿಕೆಗಳ ಬಗ್ಗೆ ಗಮನವೇ ನೀಡಿಲ್ಲ. ಬಹುಶಃ ಗುಡ್ಡ ಕುಸಿತದಂತಹ ವಿಪತ್ತು ಸೃಷ್ಟಿಯಾಗುವುದು ಅಲ್ಲಿ ವಾಸವಿರುವ ಜನರಿಂದ ಅಲ್ಲ, ಅರಣ್ಯನಾಶ, ಅತಿಕ್ರಮಣ, ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು ಹಾಗೂ ಗಣಿಗಾರಿಕೆಯಿಂದಾಗಿ ಪಶ್ಚಿಮಘಟ್ಟ ಪ್ರದೇಶಕ್ಕೆ ಎದುರಾಗಿರುವ ಅಪಾಯಗಳಿಂದಲೇ ಎನ್ನುವುದು ಅಕ್ಷರಶಃ ಸತ್ಯ. ಇಂತಹ ಪರಿಸರ ಸೂಕ್ಷ್ಮ ಪ್ರದೇಶವನ್ನು ಒಳಗೊಂಡಿರುವ ಚುನಾವಣಾ ಕ್ಷೇತ್ರಗಳ ಜನಪ್ರತಿನಿಧಿಗಳಿಗೆ ಇಲ್ಲಿನ ಸ್ಥಿತಿಗತಿಗಳ ವೈಜ್ಞಾನಿಕ ಆಳ ಅಗಲ ಅರಿವು ಮುಖ್ಯ.

ಪ್ರತಿಭಟನೆ, ರಾಜಕೀಯ ಒತ್ತಡಗಳಿಗೆ ಮಣಿದು ಸರ್ಕಾರ ಕೂಡ ಶಿಫಾರಸ್ಸುಗಳನ್ನು ರಾಜ್ಯ, ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಜುಲೈನಲ್ಲಿ ನಡೆದ ವಯನಾಡಿನ ದುರಂತ ಇತರೆ ರಾಜ್ಯಗಳಿಗೂ, ಅಲ್ಲಿರುವ ಜನಪ್ರತಿನಿಧಿಗಳಿಗೂ ಪಾಠ. ಮುಂದೆ ʼವಯನಾಡಿಂತೆ ಪ್ರಿಯಾಂಕರಿʼಗೂ ಒಂದು ಎಚ್ಚರಿಕೆ. ಇಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗುವ ಚಟುವಟಿಕೆಗಳಿಂದ ಪರಿಸರವನ್ನು ಸಂರಕ್ಷಿಸುವ ಹೊಣೆಗಾರಿಕೆ ಇದೆ. ಪ್ರಕೃತಿಯ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಮಾನವ ದಾಳಿಯಿಂದ ಉಂಟಾಗುವ ಪರಿಣಾಮ ಕೆಟ್ಟದಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಆಗಾಗ ಪರಿಸರವಾದಿಗಳು ನೀಡುತ್ತಲೆ ಬಂದಿದ್ದಾರೆ. ಈವರೆಗೆ ಸಂಬಂಧಪಟ್ಟ ಸರ್ಕಾರ, ಸ್ಥಳಿಯಾಡಳಿತ, ಜನಪ್ರತಿನಿಧಿಗಳು ಕೇಳಿಸಿಕೊಂಡಿಲ್ಲ. ಈ ಗಂಭೀರ ಎಚ್ಚರಿಕೆಯನ್ನು ಗೃಹಿಸಿಕೊಳ್ಳುವ ಸಂಸದರು ವಯನಾಡಿಗೆ ಬೇಕಿದೆ. ಅಥವಾ ಇತರೆ ರಾಜ್ಯದ ಎಲ್ಲಾ ಇಂತಹ ಪ್ರದೇಶಗಳ ವ್ಯಾಪ್ತಿಗೆ ಒಳಪಡುವ ಕ್ಷೇತ್ರದ ಜನಪ್ರತಿನಿಧಿಗಳಿಗೆ ತುರ್ತಿದೆ ಎನ್ನುವುದು ಸತ್ಯ.

-ಶ್ರೀರಾಜ್‌ ವಕ್ವಾಡಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!