Sunday, November 3, 2024

ಗುಜರಾತ್‌ನ ಮುಖ್ಯಮಂತ್ರಿ ದೇಶದ ಪ್ರಧಾನಿಯಾಗಿ ದಶಕ ಪೂರ್ತಿ

ಅಪೌಷ್ಟಿತೆಯ ಗಂಭೀರತೆ : ಸಮಸ್ಯೆ ಸಮಸ್ಯೆಯಾಗಿ ಕಾಣದಿರುವ ದುರಂತ !

ಗುಜರಾತ್‌ ರಾಜ್ಯವನ್ನು ಈ ದೇಶದಲ್ಲಿ ಮಾದರಿ ರಾಜ್ಯ ಎಂಬೆಲ್ಲಾ ರೀತಿಯಲ್ಲಿ ಬಿಂಬಿಸಲಾಗಿತ್ತು. ಆದರೇ, ಗುಜರಾತ್‌ ಹಾಗಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಹಳೆಯ ಗೋಡೆಗೆ ಬಣ್ಣ ಹಚ್ಚಿದ್ದನ್ನೇ ಅಭಿವೃದ್ಧಿ ಎಂದು ರಾಜಕೀಯವಾಗಿ ಬಿಂಬಿಸಲಾಗಿತ್ತು. ಗುಜರಾತ್‌ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಹೊರತಾಗಿ ದೇಶವನ್ನು ಮುನ್ನಡೆಸಲು ಇನ್ನು ಯಾರೂ ಇಲ್ಲ ಎಂಬಂತೆ ಅಭಿಪ್ರಾಯವನ್ನು ಮೂಡಿಸಲಾಯಿತು. ದೇಶದಲ್ಲಿ ಒಂದು ರಾಜ್ಯ ಗುಜರಾತ್‌ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಚರ್ಚೆಗಳನ್ನು ರಾಜಕೀಯ ವಲಯದಲ್ಲಿ ಸೃಷ್ಟಿಸಲಾಯಿತು. ಕಾಲಾಂತರದಲ್ಲಿ ಗುಜರಾತ್‌ನ ನಿಜ ಬಣ್ಣ ಬಯಲಾಗುತ್ತಾ ಹೋಯಿತು. ಅದಕ್ಕೆ ದೇಶದ ನಾಗರಿಕರು ಸಾಕ್ಷಿಯಾಗುತ್ತಾ ಬಂದರು.

ಗುಜರಾತ್‌ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ದಶಕ ಕಳೆದಿದೆ. ಆದಾಗ್ಯೂ ಗುಜರಾತ್ ನ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅವರು ಸಫಲವಾಗಿಲ್ಲ ಎನ್ನುವುದಕ್ಕೆ ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿದ ೨೦೨೩-೨೪ರ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ) ವರದಿಯ ಪ್ರಕಾರ, ಹಸಿವಿನ ವಿರುದ್ಧದ ಹೋರಾಟ ಮತ್ತು ಮಕ್ಕಳಲ್ಲಿ ಪೌಷ್ಟಿಕತೆ ಸುಧಾರಿಸುವಲ್ಲಿ ಗುಜರಾತ್‌ ಹಿಂದುಳಿದಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತದ ರಾಜ್ಯಗಳ ಪೈಕಿ ಗುಜರಾತ್‌ 25ನೇ ಸ್ಥಾನದಲ್ಲಿದೆ ಎಂಬ ವರದಿಯೇ ಸಾಕ್ಷಿ.

2012 ರಲ್ಲಿ, ಗುಜರಾತ್ ಇಡೀ ದೇಶದಲ್ಲೆ ಕಡಿಮೆ ತೂಕ ಹೊಂದಿರುವ ಹೆಚ್ಚು ಮಕ್ಕಳನ್ನು ಹೊಂದಿದೆ ಎಂಬ ವರದಿಯೂ ಆಗಿತ್ತು. ಇದು ಗುಜರಾತ್‌ನ ಇಂದಿನ ಸಮಸ್ಯೆ ಅಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಕಳೆದ ಹದಿನೈದು ವರ್ಷಗಳಿಂದಲೂ ಗುಜಾರಾತ್‌ ಅಪೌಷ್ಟಿಕತೆಯನ್ನು ಎದುರಿಸುತ್ತಿದೆ ಎನ್ನುವುದನ್ನು ನಾವು ವರದಿಗಳಲ್ಲಿ ಗಮನಿಸಬಹುದಾಗಿದೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅಂದಿನ ಗುಜರಾತ್‌ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಈ ಆತಂಕಕಾರಿ ಅಂಕಿ ಅಂಶದ ಬಗ್ಗೆ ಕೇಳಿದಾಗ, ಬೇಜವಾಬ್ದಾರಿ ಹೇಳಿಕೆಯೊಂದನ್ನು ನೀಡಿದ್ದರು. “ತಾಯಿ ತನ್ನ ಮಗಳಿಗೆ ಹಾಲು ಕುಡಿಯಲು ಹೇಳಿದರೇ, ಮಗಳು ನಾನು ಹಾಲು ಕುಡಿಯುವುದಿಲ್ಲ ಎಂದು ಹೇಳುತ್ತಾಳೆ. ನಾನು ದಪ್ಪವಾಗುತ್ತೇನೆ ಎನ್ನುತ್ತಾಳೆ. ಅವರ ಬಳಿ ಹಣವಿದೆ. ಆದರೆ ಆಕೆ ಸೌಂದರ್ಯ ಪ್ರಜ್ಞೆಯುಳ್ಳವಳು, ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.

ಗುಜರಾತ್‌ ನ ಮುಖ್ಯಮಂತ್ರಿ ದೇಶದ ಪ್ರಧಾನಿಯಾಗಿ ದಶಕ ಕಳೆದಿದೆ. ಅದೇ ನಡವಳಿಕೆ ಇಂದಿಗೂ ಮುಂದುವರಿದಿದೆ ಎನ್ನುವುದಕ್ಕೆ ಪ್ರಧಾನಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದೆ ಸಾಕ್ಷಿ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಎವಿಪಿಡಿ (ಅವಾಯಿಡೆಂಟ್ ಪರ್ಸನಾಲಿಟಿ ಡಿಸಾರ್ಡರ್) ಎಂದು ಕರೆಯುತ್ತಾರೆ. ಬಿಜೆಪಿ ಸರ್ಕಾರದ 100 ದಿನಗಳ ಅಜೆಂಡಾ ಮತ್ತು ಹಣಕಾಸು ಸಚಿವರ ಬಜೆಟ್ ಭಾಷಣದಲ್ಲಿ ಒಮ್ಮೆಯೂ “ಹಸಿವು” ಮತ್ತು “ಪೌಷ್ಟಿಕತೆ” ಎಂಬ ಪದಗಳನ್ನು ಉಲ್ಲೇಖಿಸದಿರುವುದು ಆಶ್ಚರ್ಯ ಸಂಗತಿಯಲ್ಲದೇ ಮತ್ತೇನು ?

ಬಾಯಿ ತೆರೆದರೆ ಆರ್ಥಿಕವಾಗಿ ಸ್ವಾಯತ್ತ ಸಾಧಿಸುತ್ತಿರುವ ಭಾರತವನ್ನು ಅಂತರಾಷ್ಟ್ರೀಯ ಶಕ್ತಿಗಳು ದುರ್ಬಲಗೊಳಿಸುವುದಕ್ಕೆ ಸಂಚು ರೂಪಿಸುತ್ತಿವೆ ಎಂದೆಲ್ಲಾ ರಾಜಕೀಯ ಮಾತನಾಡುವ ಪ್ರಧಾನಿಯವರಿಗೆ ದೇಶದ ಮತ್ತು ತಮ್ಮದೇ ತವರು ರಾಜ್ಯದ ಸಮಸ್ಯೆಗಳ ಅರಿವಾಗಿಲ್ಲ ಎನ್ನುವುದು ದುರಂತವೇ ಸರಿ. ವಿಶ್ವದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಮೂವರಲ್ಲಿ ಒಬ್ಬರು ಭಾರತದಲ್ಲಿದ್ದಾರೆ ಎನ್ನುವುದು ಕಟು ಸತ್ಯ. 2014-16 ರಲ್ಲಿ ದೀರ್ಘಕಾಲದ ಹಸಿವಿನಿಂದ ಬಳಲುತ್ತಿರುವ ಜನರ ಶೇಕಡಾವಾರು ಪ್ರಮಾಣ ಶೇ. 10ರಷ್ಟಿತ್ತು, 2021-23 ರಲ್ಲಿ ಈ ಪ್ರಮಾಣ  ಸುಮಾರು ಶೇ. 14 ರಷ್ಟಕ್ಕೆ ಏರಿದೆ. ಎನ್ನುವಲ್ಲಿಗೆ ಈ ಪ್ರಮಾಣ ಐದು ಕೋಟಿ ಜನರ ಹೆಚ್ಚಳವಾಗಿದೆ. ಶೇ. 70ರಷ್ಟು ಭಾರತೀಯರು ಮೂಲಭೂತ, ಆರೋಗ್ಯಕರ ಆಹಾರವನ್ನು ಸೇವಿಸುವುದಕ್ಕೂ ತಮ್ಮ ಕೌಟುಂಬಿಕ ಹಾಗೂ ವೈಯಕ್ತಿಕ ಆದಾಯದ ಅಸಮಾನತೆ, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯೇ ಮೂಲ ಕಾರಣ ಎಂದು ವರದಿ ಹೇಳುತ್ತಿದೆ ಎಂದರೇ ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರ ಸರ್ಕಾರಕ್ಕೆ ಅರಿವಿಗೆ ಬಂದಿಲ್ಲ ಎನ್ನುವ ಅರ್ಥವಲ್ಲವೇ ?.

ಗ್ಲೋಬಲ್ ನ್ಯೂಟ್ರಿಷನ್ ವರದಿ 2024 ಹೇಳುವ ಪ್ರಕಾರ, “ರಿಪ್ರೊಡಕ್ಟೀವ್‌ ಏಜ್‌ (ಸಂತಾನೋತ್ಪತ್ತಿ ವಯಸ್ಸಿನ)ನ ಮಹಿಳೆಯರಲ್ಲಿ ರಕ್ತಹೀನತೆಯನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸುವಲ್ಲಿ ಭಾರತ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ. ಶೇ. 32ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ, ಶೇ. 35ರಷ್ಟು ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗಿದೆ ಮತ್ತು ಶೇ. 59ರಷ್ಟು ಮಕ್ಕಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಶೇ. 53ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ವರದಿ ಕಾಣಿಸಲೇ ಇಲ್ಲ. ಪ್ರಧಾನಮಂತ್ರಿಯವರ ಹೆಸರಿನ ಬೃಹತ್ ಕ್ರಿಕೆಟ್ ಅಂಗಣವನ್ನು ಹೊಂದಿರುವ ರಾಜ್ಯ ಹಸಿವನ್ನು ನಿಭಾಯಿಸುವಲ್ಲಿ ಸೋತಿದೆ ಎನ್ನುವುದಕ್ಕೆ ಮತ್ತೆ ಯಾವ ಸಾಕ್ಷಿ ಬೇಕಿದೆ ?

ಇನ್ನು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ,  ಸಂಸತ್ತಿನಲ್ಲಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ, ಶೇ. 13ರಷ್ಟು ಪ್ರಮಾಣ ಮಕ್ಕಳು ತೀವ್ರ ಅಪೌಷ್ಟಿಕತೆ ಹೊಂದಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಕಾಣಬಹುದಾಗಿದೆ. ಕೇಂದ್ರ ಸರ್ಕಾರವೇ ನೀಡುವ ಪೋಶನ್ ಟ್ರ್ಯಾಕರ್ ಪ್ರಕಾರ, ದೇಶದಲ್ಲಿ 14 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕತೆಯಲ್ಲಿ ಪ್ರಗತಿ ಸಾಧಿಸಲು ಸಂಪೂರ್ಣವಾಗಿ ವಿಫಲವಾಗಿರುವ ಕೇಂದ್ರ ಸರ್ಕಾರ, ಐದು ಅಂತರಾಷ್ಟ್ರೀಯ ಸಂಸ್ಥೆಗಳು ತಯಾರಿಸಿದ ʼಅಪೌಷ್ಠಿಕತೆʼಯ ಬಗ್ಗೆ ವರದಿಯನ್ನು ಬಿಡುಗಡೆ ಮಾಡಲು ವಿರೋಧ ವ್ಯಕ್ತಪಡಿಸಿದೆ. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಪೌಷ್ಟಿಕತೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವ ಅರ್ಥ ಹೌದಲ್ಲವೆ ? ಅಥವಾ ಪರೋಕ್ಷವಾಗಿ ಅಪೌಷ್ಟಿಕತೆ ನಿವಾರಣೆಗೆ ಮಾಡುವಲ್ಲಿ ಸೋತಿದೆ ಎನ್ನುವುದನ್ನು ಒಪ್ಪಿಕೊಂಡಂತಾಯಿತಲ್ಲವೆ ?.

ಸ್ವಾತಂತ್ರ್ಯ ಪಡೆದಾಗಿನಿಂದ ಈವರೆಗೆ ಬಡತನ ಮತ್ತು ಹಸಿವು ನಿರ್ಮೂಲನೆ ಮಾಡುವ ಉದ್ದೇಶದಿಂದಲೇ ಅನೇಕ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆಯಾದರೂ ಈ ಮೂಲಭೂತ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಪ್ರಯತ್ನ ಪಟ್ಟಿಲ್ಲ ಎಂಬುವುದೇ ಆಗಿದೆ ಅಲ್ಲವೆ ? ‘ಗರೀಬಿ ಹಠಾವೊ’ದಿಂದ ಕರ್ನಾಟಕ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಂತಹ ಹಲವು ಯೋಜನೆಗಳು ಹಸಿವು ಮುಕ್ತ ಭಾರತ ಮಾಡುವ ಉದ್ದೇಶದಿಂದಲೇ ರೂಪುಗೊಂಡವುಗಳು. ಹಸಿವು ನಿರ್ಮೂಲನೆಯ ಉದ್ದೇಶದಿಂದಲೇ ರೂಪುಗೊಂಡಂತಹ ಇಂತಹ ಯೋಜನೆಗಳಿಂದಲೇ ಹಸಿವು, ಅಪೌಷ್ಟಿಕತೆ ಪ್ರಮಾಣಗಳು ಕಡಿಮೆಯಾಗುತ್ತಿಲ್ಲ ಎನ್ನುವುದಾದರೇ, ಇಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದಲ್ಲವೇ? ಈ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸರ್ಕಾರಗಳಿಗೆ ಅರಿವಿಲ್ಲದೇ ಏನಲ್ಲ. ನಿವಾರಿಸುವ ಇಚ್ಛಾಶಕ್ತಿ ಇಲ್ಲ ಅಷ್ಟೆ. ಉಚಿತವಾಗಿ ಇಲ್ಲವೆ ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಪಡಿತರ ಯೋಜನೆಗಳು ಎಲ್ಲ ರಾಜ್ಯಗಳಲ್ಲಿವೆ ಬೇರೆ ಬೇರೆ ರೀತಿಯಲ್ಲಿ ಜಾರಿಯಲ್ಲಿವೆ. ಇಷ್ಟೆಲ್ಲ ಕಾರ್ಯಕ್ರಮಗಳು, ಯೋಜನೆಗಳು ಇದ್ದರೂ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಸರ್ಕಾರದ ಯೋಜನೆಗಳು ಅರ್ಹರನ್ನು ತಲುಪುವಲ್ಲಿ ಯಶಸ್ವಿಯಾಗಿಲ್ಲ ಎಂಬುವುದೇ ಅರ್ಥ ಅಲ್ಲವೆ ?

ತಮಾಷೆಯೆಂದರೇ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ನ 14ನೇ ಮುಖ್ಯಮಂತ್ರಿಯಾಗಿ 2001ರ ಅಕ್ಟೋಬರ್‌ 7ರಂದು ಪ್ರಮಾಣವಚನ ಸ್ವೀಕರಸಿದ್ದರು. ಅದರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್‌ 7ರಂದು ʼವಿಕಾಸ ಸಪ್ತಾಹʼ ಆಯೋಜಿಸಲು ಗುಜರಾತ್ ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂತಹ ಸಮಸ್ಯೆಗಳು ರಾಶಿ ಇರುವಾಗ ಗುಜರಾತ್‌ ಯಾವುದರಲ್ಲಿ ವಿಕಾಸ ಹೊಂದಿದೆ ಎನ್ನುವುದು ಇಲ್ಲಿ ಪ್ರಶ್ನೆ ಎದ್ದಿದೆ. ಅಪೌಷ್ಟಿಕತೆಯ ಪ್ರಮಾಣ ಏರಿಕೆಯಾಗಿದ್ದನ್ನೇ ಗುಜರಾತ್ ಸರ್ಕಾರ ವಿಕಾಸ ಎಂದು ಭಾವಿಸಿದೆಯೇ ?‌ ಇವೆಲ್ಲಾ ಜನರಿಗೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿಗೆ ಬಾರದೇ ಇರುವ ಹಾಗೆ ಮಾಡುವ ಯೋಜಿತ ಪ್ರಯತ್ನವಲ್ಲದೆ ಮತ್ತೇನು ? ಎಲ್ಲಿಯವರೆಗೆ ಆಳುವ ಸರ್ಕಾರಗಳಿಗೆ ಇಲ್ಲಿನ ಮೂಲಭೂತ ಸಮಸ್ಯೆಗಳು ಸಮಸ್ಯೆಗಳಂತೆಯೇ ಕಾಣುವುದಿಲ್ಲವೋ ಅಲ್ಲಿಯವರೆಗೆ ಇನ್ನಷ್ಟ ಮತ್ತಷ್ಟು ದುರಂತಗಳನ್ನು ಈ ದೇಶ ಕಾಣುವುದಕ್ಕೆ ತಯಾರಾಗಬೇಕಾಗುತ್ತದೆ. ಯೋಚಿಸಿ ನೋಡಿ.

ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!