Tuesday, October 22, 2024

ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಬಗ್ಗೆ ಪರಿಶೀಲನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ !

ಜನಪ್ರತಿನಿಧಿ (ಬೆಂಗಳೂರು) : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 34,863 ಹುದ್ದೆಗಳನ್ನು ತುಂಬಲು ಕಾಲ ಮಿತಿಯನ್ನು ನಿಗದಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಗತ್ಯ ಸೇವೆಗಳ ಇಲಾಖೆಗಳಲ್ಲಿ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಸಂಬಂಧ ಇಂದು(ಸೋಮವಾರ) ನಡೆದ  ಸಭೆಯಲ್ಲಿ ಸಿಎಂ ಸೂಚಿಸಿದರು.
371ಜೆ ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು ಯುಪಿಎಸ್‌ಸಿ ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು  ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು. ಯುಪಿಎಸ್‌ಸಿಯಲ್ಲಿ ಕೇವಲ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಮಾಡಲು ನೇಮಕಾತಿ ಮಾಡಲಾಗುತ್ತಿದೆ. ಇದೇ ರೀತಿ ಕೆಪಿಎಸ್‌ಸಿ ಕೇವಲ ಗ್ರೂಪ್‌ ಎ ಮತ್ತು ಬಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌ ಸಿ ಯಂತಹ ಬೇರೆ ನೇಮಕಾತಿಗಳನ್ನು ಕೆಇಎ ಮೂಲಕ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು. ಆರ್ಥಿಕ ವರ್ಷದ ಆರಂಭದಲ್ಲಿ ಆಯಾ ಇಲಾಖೆಗಳು ನೇಮಕಾತಿಗೆ ಖಾಲಿಯಿರುವ ಹುದ್ದೆಗಳ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಬೇಕು. ಕಾಲಮಿತಿಯೊಳಗಾಗಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತಾಗಿ ಏಕರೀತಿಯ ಕ್ಯಾಲೆಂಡರ್‌ ಸಿದ್ಧಪಡಿಸಬೇಕು ಎಂದರು.
ಪಿಎಸ್‌ಐ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಮೊದಲು ನಡೆಸಲಾಗುತ್ತಿದ್ದು, ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯನ್ನು ಮೊದಲು ಮಾಡಲಾಗುತ್ತದೆ. ಅಬಕಾರಿ ಇಲಾಖೆ ಮಾದರಿಯನ್ನು ಪಿಎಸ್‌ಐ ನೇಮಕಾತಿಯಲ್ಲೂ ಅನುಸರಿಸುವ ಕುರಿತು ಪರಿಶೀಲನೆ ನಡೆಸಬೇಕು. ರಾಜ್ಯದಲ್ಲಿ 41 ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾಗದ ಕಾರಣ ನೇಮಕಾತಿ ವಿಳಂಬವಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ಹಲವು ದಶಕಗಳಿಂದ ಸಿ ಅಂಡ್‌ ಆರ್‌ ತಿದ್ದುಪಡಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ಸಿ ಅಂಡ್‌ ಆರ್‌ ಸಿದ್ಧಪಡಿಸಬೇಕೆಂದು ಸಿಎಂ ಸೂಚನೆ ನೀಡಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!