Tuesday, October 22, 2024

ಪ್ರಕೃತಿ, ಸಂಸ್ಕೃತಿ ಉಳಿಸುವ ಕಾರ್ಯ ನಡೆಯಬೇಕು- ಈಶ ವಿಠಲದಾಸ ಸ್ವಾಮೀಜಿ

ಗಂಗೊಳ್ಳಿ : ಇಂದಿನ ದಿನಗಳಲ್ಲಿ ಭಾವನಾತ್ಮಕ ಸಂಬಂಧಗಳು ದೂರ ಹೋಗುತ್ತಿವೆ. ಕೂಡು ಕುಟುಂಬಗಳು ನಾಶವಾಗುತ್ತಿದ್ದು, ಇದರಿಂದ ನಮ್ಮ ಸಂಸ್ಕೃತಿ, ಗುರುಕುಲ ಶಿಕ್ಷಣ ನಾಶವಾಗುವುದರ ಜೊತೆಗೆ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ. ಹೀಗಾಗಿ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯಬೇಕಿದೆ. ಪ್ರಕೃತಿ, ಸಂಸ್ಕೃತಿ ಉಳಿಸುವ ಕಾರ್ಯ ನಡೆಯಬೇಕು. ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭ ಋಷಿ ಪರಂಪರೆಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ಶ್ರೀ ಶಾರದಾ ಮಹೋತ್ಸವದ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಶ್ರೀ ಶಾರದಾ ಮಂಟಪದಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಗಂಗೊಳ್ಳಿಯಲ್ಲಿ ಕಳೆದ 49 ವರ್ಷಗಳಿಂದ ಶ್ರೀ ಶಾರದಾ ಮಹೋತ್ಸವವನ್ನು ನಡೆಸಿ ಸಮಾಜದಲ್ಲಿ ಒಗ್ಗಟ್ಟು ಮೂಡಿಸಿ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಗಂಗೊಳ್ಳಿಯ ಶ್ರೀ ಶಾರದೋತ್ಸವ ಸಮಿತಿ ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಆಶೀರ್ವದಿಸಿದರು.

ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್.ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು ಹಾಗೂ ಶ್ರೀ ಶಾರದಾ ಮಹೋತ್ಸವಕ್ಕೆ ಸಹಕಾರ ನೀಡುತ್ತಿರುವ ಬ್ಯಾಂಕ್, ಸಹಕಾರಿ ಸಂಘಗಳು ಹಾಗೂ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. ಗಂಗೊಳ್ಳಿಯ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ, ೩೭೦ ಬೋಟ್ ಯೂನಿಯನ್ ಅಧ್ಯಕ್ಷ ಸೌಪರ್ಣಿಕ ಬಸವ ಖಾರ್ವಿ, ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಶುಭ ಹಾರೈಸಿದರು. ಪುರೋಹಿತರಾದ ಜಿ.ರಾಘವೇಂದ್ರ ಎನ್.ಆಚಾರ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಉಮಾನಾಥ ದೇವಾಡಿಗ, ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ಅಧ್ಯಕ್ಷ ಸತೀಶ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಮತ್ತು ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀಧರ ಎನ್.ಸಕ್ಲಾತಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!