Saturday, October 12, 2024

ಗುತ್ತಿಗೆದಾರರೊಂದಿಗೆ ಕುಂದಾಪುರ ಪುರಸಭೆ ಅಧ್ಯಕ್ಷರ ಒಳ ಒಪ್ಪಂದ : ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿಕಾಸ್‌ ಹೆಗ್ಡೆ ಒತ್ತಾಯ

ಜನಪ್ರತಿನಿಧಿ (ಕುಂದಾಪುರ) : ಕುಂದಾಪುರ ಪುರಸಭೆಯಲ್ಲಿ ಕಳೆದ 17 ತಿಂಗಳಿಂದ ಅಧ್ಯಕ್ಷ/ಉಪಾಧ್ಯಕ್ಷರಿಲ್ಲದ ಕಾರಣ, ಪುರಸಭಾ ಸದಸ್ಯರು, ತಮ್ಮ ಬಳಿಗೆ ಬರುವ ವಾರ್ಡಿನ ಜನರ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹೇಳಿಕೊಳ್ಳಬೇಕಾದ ಅನೀವಾರ್ಯತೆ ಇತ್ತು. ಇದೀಗ ಮೀಸಲಾತಿಯಂತೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಆಯ್ಕೆ ನಡೆದಿರುವುದರಿಂದ ಪುರಜನರ ಸಮಸ್ಯೆಗಳನ್ನು ಬಗೆಹರಿಸಲು ತಿಂಗಳ ಸಾಮಾನ್ಯ ಸಭೆ ಹಾಗೂ ಜನಪ್ರತಿನಿಧಿಗಳು ಸ್ಪಂದನದಿಂದ ಸಾಧ್ಯವಾಗುತ್ತದೆ ಎನ್ನುವ ಭಾವನೆಗಳು ಇತ್ತು. ಆದರೆ ಕುಂದಾಪುರ ಪುರಸಭೆಯಲ್ಲಿ ಈ ನಿರೀಕ್ಷೆಗಳು ಸಂಪೂರ್ಣ ಸುಳ್ಳಾಗವಂತ ಬೆಳವಣಿಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ ಎಂದು ನಗರ ಯೋಜನಾ ಪ್ರಾಧಿಕಾರ ಕುಂದಾಪುರದ ಮಾಜಿ ಅಧ್ಯಕ್ಷ ಕೆ. ವಿಕಾಸ್‌ ಹೆಗ್ಡೆ ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ನೆನಗುದಿಗೆ ಬಿದ್ದಿರುವ ಪುರಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕ್ರಮಗಳನ್ನು ಹಾಗೂ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲು ಸಾಗರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕಾದ ಆಡಳಿತ ಚುಕ್ಕಾಣಿ ಹಿಡಿದವರು ಇದೆಲ್ಲವನ್ನು ಬಿಟ್ಟು, ಸರ್ಕಾರದ 15ನೇ ಹಣಕಾಸಿನ ಅನುದಾನದಲ್ಲಿ ಗುರುತಿಸಿರುವ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ಹಂಚಿಕೆ ಮಾಡಲು ವಿಶೇಷ ಆಸಕ್ತಿಯನ್ನು ತೋರುತ್ತಿರುವುದು ಇವರ ಪೊಳ್ಳು ಜನಪರ ನೀತಿಯನ್ನು ಅನಾವರಣ ಮಾಡುತ್ತಿದೆ ಎಂದು ವಿಕಾಸ್‌ ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಪುರಸಭೆಯ ಅತ್ಯಂತ ಹಿರಿಯ ಸದಸ್ಯ ಹಾಗೂ ಪ್ರಸ್ತುತ ಪುರಸಭೆಯ ಅಧ್ಯಕ್ಷರಾಗಿರುವ ಮೋಹನ್‌ದಾಸ್ ಶೆಣೈ ಅವರು, ಸೆ.04 ರಂದು ಸಂಜೆ 6 ಗಂಟೆಗೆ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುತ್ತಿಗೆದಾರರ ಸಭೆ ನಡೆಸಿ, 15ನೇ ಹಣಕಾಸಿನ ಅನುದಾನದ ನಿಗದಿತ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್‌ಗಳನ್ನು ತಮಗೆ ಬೇಕಾಗಿರುವ ಗುತ್ತಿಗೆದಾರರಿಗೆ ಹಂಚಿಕೆ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಇರುವ ಟೆಂಡರ್‌ನ ಪಾರದರ್ಶಕತೆಯನ್ನು ಮರೆಮಾಚಿ ಗುತ್ತಿಗೆದಾರರಿಗೆ ಎಸ್‌ಆರ್ ದರದಲ್ಲಿಯೇ ಟೆಂಡರ್‌ ದರವನ್ನು ಹಾಕುವಂತೆ ಮೌಕಿಕ ಸೂಚನೆ ನೀಡಿದ್ದಾರೆ. ನನ್ನ ಸೂಚನೆಯನ್ನು ಮೀರಿ ಯಾರಾದರೂ ಕಡಿಮೆ ದರ ನಿಕ್ಕಿ ಮಾಡಿದ್ದಲ್ಲಿ ಅಧಿಕಾರಿಗಳಿಗೆ ಹೇಳಿ ಅಂತವರ ಟೆಂಡರ್ ರದ್ದು ಮಾಡುವುದಾಗಿಯೂ ಎಚ್ಚರಿಕೆ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಪುರಸಭೆಯ ಮೀಟಿಂಗ್ ಹಾಲ್‌ನಲ್ಲಿ ಈ ಅನಧಿಕೃತ ಸಭೆ ನಡೆಯುವಾಗ ಪುರಸಭೆಯ ಬಹುತೇಕ ಸದಸ್ಯರು ಇರಲಿಲ್ಲ ಎನ್ನುವುದು ವಿಷಾದನೀಯ ಎಂದವರು ಹೇಳಿದ್ದಾರೆ.

ಅಧ್ಯಕ್ಷ ಈ ನಡವಳಿಕೆಯಿಂದಾಗಿ ಸೆ.05 ರಂದು ನಡೆದ ಪುರಸಭೆಯ ಕಾಮಗಾರಿ ಟೆಂಡರ್‌ಗಳಿಂದ ಪುರಸಭೆ ಹಾಗೂ ಸರ್ಕಾರಕ್ಕೆ ಅಂದಾಜು 20 ಲಕ್ಷ ರೂ. ನಷ್ಟವಾಗಿರುವುದಲ್ಲದೆ, ಮೇಲ್ನೋಟಕ್ಕೆ ಭ್ರಷ್ಟಚಾರ ನಡೆದಿರುವುದು ಕಾಣಿಸುತ್ತಿದೆ. ಈ ಅನಧಿಕೃತ ಸಭೆಯ ನಡವಳಿಗಳನ್ನು ಮಾನ್ಯ ಲೋಕಾಯುಕ್ತ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಬೇಕು ಹಾಗೂ ಸರ್ಕಾರದ ನಿಯಮಾವಳಿಯಂತೆ ಪಾರದರ್ಶಕವಾಗಿ ನಡೆಯದ ಟೆಂಡ‌ರ್ ಗಳನ್ನು ರದ್ದುಪಡಿಸಿ ಪುನ: ನಿಯಮಾನುಸಾರ ಟೆಂಡರ್ ನಡೆಯಲು ಮಾನ್ಯ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನು,  ರಾಷ್ಟ್ರ ಪುರಸ್ಕೃತ ಪ್ರಶಸ್ತಿ ಪಡೆದ ಕುಂದಾಪುರ ಪುರಸಭೆಗೆ 3ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಶೈಣೈಯವರ ಪ್ರಾಮಾಣಿಕ ಆಡಳಿತ ವ್ಯವಸ್ಥೆ ಬಗ್ಗೆ ಪುರಸಭೆಯ ಸಾರ್ವಜನಿಕರು ಸಾಕಷ್ಟು ನಿರೀಕ್ಷೆಯಲ್ಲಿದ್ದರು. ಆದರೆ ಪುರಸಭೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೇವಲ 1 ತಿಂಗಳ ಒಳಗೆ ಗುತ್ತಿಗೆದಾರರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು, ಈ ರೀತಿ ಅಧಿಕಾರ ದುರುಪಯೋಗ ಮಾಡಿ ಪುರಸಭೆಯ 23 ವಾರ್ಡಿನ ಜನರಿಗೆ ಹಾಗೂ ಸರ್ಕಾರಕ್ಕೆ ಅನ್ಯಾಯ ಮಾಡುವುದು ಎಷ್ಟು ಮಟ್ಟಕ್ಕೆ ಸರಿ ಎಂದು ಅಧ್ಯಕ್ಷರು ಉತ್ತರಿಸಬೇಕು ಹಾಗೂ ಇದಕ್ಕೆ ಕಾರಣರಾಗಿರುವ ಅವರು ನೈತಿಕ ನೆಲೆಯಲ್ಲಿ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!