Sunday, October 13, 2024

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ 1030 ಕೋಟಿ ವ್ಯವಹಾರ: ರೂ.6.01 ಕೋಟಿ ಲಾಭ | 15 ಡಿವಿಡೆಂಡ್ ಘೋಷಣೆ

ಉಪ್ಪುಂದ: ಉಡುಪಿ ಜಿಲ್ಲೆಯಲ್ಲಿಯೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗುರುತಿಸಿಕೊಂಡಿರುವ ಉಪ್ಪುಂದದಲ್ಲಿ ಪ್ರಧಾನ ಕಛೇರಿ ಹೊಂದಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 47 ವರ್ಷಗಳನ್ನು ಪೂರೈಸಿದ್ದು 2023-24ನೇ ಸಾಲಿನ ವರದಿ ವರ್ಷದಲ್ಲಿ ರೂ.1030 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದೆ. ವರದಿ ವರ್ಷದಲ್ಲಿ 6 ಕೋಟಿ 1ಲಕ್ಷ ಗರಿಷ್ಠ ಲಾಭ ಗಳಿಸಿ ಸಾಧನೆಯ ಪಥದಲ್ಲಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಅವರು ಸೆ.22ರಂದು ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಇದರ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಶೇ.15% ಡಿವಿಡೆಂಡ್ ಘೋಷಣೆ ಮಾಡಿದರು.
ಠೇವಣಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ಕೂಡಾ ನಮ್ಮ ಸಂಘವು 4 ಶಾಖೆಗಳ ಮೂಲಕ ಒಟ್ಟು 238.08 ಕೋಟಿ ಠೇವಣಿ ಸಂಗ್ರಹಿಸಿದೆ. ಸ್ಪರ್ಧಾತ್ಮಕ ಆರ್ಥಿಕ ಹಿನ್ನೆಲೆಯಲ್ಲಿಯೂ ಕೂಡಾ ಸಂಘವು ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.200.22 ಕೋಟಿ ಸಾಲ ನೀಡಿದೆ. ರೂ.77.18 ಕೋಟಿ ಹೂಡಿಕೆಯನ್ನು ಮತ್ತು ರೂ.32.05 ಕೋಟಿ ನಿಧಿಗಳನ್ನು ಹೊಂದಿ ಸದೃಢವಾಗಿದೆ ಎಂದರು.
ಸಂಘದಲ್ಲಿ ವರ್ಷಾಂತ್ಯಕ್ಕೆ 13525 ಎ ತರಗತಿಯ ಸದಸ್ಯರಿದ್ದಾರೆ. ವರದಿ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ 4000 ಕ್ಕೂ ಮಿಕ್ಕಿ ಅ ವರ್ಗದ ಸದಸ್ಯರ ಐತಿಹಾಸಿಕ ಪ್ರಮಾಣದ ಹಾಜರಾತಿ ಆಗಿದೆ. ಸಂಘವು ಒಟ್ಟು 35.35 ಕೋಟ ನಿಧಿಗಳನ್ನು ಹೊಂದಿದೆ. ರೂ.2.60 ಕೋಟಿ ಪಾಲು ಬಂಡವಾಳವನ್ನು ಹೊಂದಿದೆ. ರೂ.20.93 ಕೋಟಿ ಕೃಷಿ ಸಾಲವನ್ನು ನೀಡಲಾಗಿದೆ. ರೈತ ಸಿರಿ ಸ್ವಸಹಾಯ ಗುಂಪುಗಳಿಗೆ ರೂ. 23.29 ಕೋಟಿ ಸಾಲ ನೀಡಲಾಗಿದೆ ಎಂದರು.
ಸಂಘವು ಕಳೆದ 21 ವರ್ಷಗಳಿಂದ ಸತತವಾಗಿ ‘ಎ’ ವರ್ಗದ ಆಡಿಟ್ ವರ್ಗೀಕರಣ ಹೊಂದಿದ್ದು ಸಂಘದ ಸರ್ವಾಂಗೀಣ ನಿರ್ವಹಣೆಗೆ ವರದಿ ವರ್ಷದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಕೊಡಮಾಡುವ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಸ್ವೀಕರಿಸಲಾಗಿದೆ. ಸಂಘವು ಪ್ರಾಯೋಜಿಸಿರುವ ರೈತಸಿರಿ ರೈತ ಸೇವಾ ಒಕ್ಕೂಟಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ ಸಂದಿದೆ ಎಂದರು.
ಸಂಘವು 8400 ಸದಸ್ಯರನ್ನೊಳಗೊಂಡ 756 ರೈತಸಿರಿ ಸ್ವಸಹಾಯ ಗುಂಪುಗಳನ್ನು ಸಂಯೋಜಿಸಿ ಗುಂಪುಗಳಿಗೆ ಸಾಲವನ್ನು ನೀಡಲಾಗಿದೆ. ಸ್ವಸಹಾಯ ಗುಂಪುಗಳಿಗೆ 3 ತಿಂಗಳಿಗೊಮ್ಮೆ ಸಭೆ ನಡೆಸಿ ಸ್ವ-ಉದ್ಯೋಗ ಇತ್ಯಾದಿ ಮಾಹಿತಿ ಶಿಬಿರ ಏರ್ಪಡಿಸಲಾಗಿದೆ.920 ಸದಸ್ಯರ 96 ರೈತ ಕೂಟಗಳಿದ್ದು ರೈತ ಕೂಟದ ಸದಸ್ಯರಿಗೆ ಪ್ರತಿ ತಿಂಗಳೊಂದರಂತೆ ಕೊನೆಯ ಶನಿವಾರ ಮಾಸಿಕ ಸಭೆ ಮತ್ತು ಸಂಪನ್ನೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ ಎಂದರು.
ಸಂಘದ ಶ್ರೇಯೋಭಿವೃದ್ಧಿಗೆ ಅಡಿಪಾಯ ಹಾಕಿದ ಹಿರಿಯ ಸದಸ್ಯರನ್ನು ಪ್ರತಿ ವರ್ಷ ಜರಗುವ ಮಹಾಸಭೆಯಲ್ಲಿ ರೈತಸಿರಿ ಗೌರವಾರ್ಪಣೆ ನೀಡಲಾಗುತ್ತದೆ. ಪ್ರತಿ ವರ್ಷ ಸಹಕರ ಸಪ್ತಾಹ ಕಾರ್ಯಕ್ರಮ ಹಾಗೂ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ರಾಜ್ಯದ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಯೇ ಪ್ರಥಮವಾಗಿ ಸಂಘದ ಮಾಲಕತ್ವದಲ್ಲಿ ಖರೀದಿಸಿದ ನಿವೇಶನದಲ್ಲಿ ವಿಶಿಷ್ಟ ವಿನ್ಯಾಸದ ರೈತಸಿರಿ ಅಗ್ರಿ ಮೊಲ್ ಸರ್ವ ಸರಕಿನ ಮಳಿಗೆ ಇದರ ಮುಂದಿನ ಕಟ್ಟಡ ಕಾಮಗಾರಿ ಬಗ್ಗೆ ಇ-ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕಾಮಗಾರಿ ಪ್ರಾರಂಭಿಸಿ ಸೀಮಿತ ಅವಧಿಗೊಳಗೆ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಸಂಘದ 25 ಹಿರಿಯ ಸದಸ್ಯರಿಗೆ ರೈತಸಿರಿ ಗೌರವಾರ್ಪಣೆ ನೀಡಲಾಯಿತು. ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಂಘದ ಸದಸ್ಯರ ಪುತ್ರಿ ಗೌತಮಿ ಗೋಪಾಲ ಭಂಡಾರಿ ಇವರನ್ನು ಸನ್ಮಾನಿಸಲಾಯಿತು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರದ ಈಶ್ವರ ಹಕ್ಲತೋಡ್, ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ, ಮೋಹನ ಪೂಜಾರಿ, ಬಿ.ಎಸ್.ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್, ವೀರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ, ಹೂವ ನಾಯ್ಕ, ಶ್ರೀಮತಿ ದಿನೀತಾ ಶೆಟ್ಟಿ, ಶ್ರೀಮತಿ ಜಲಜಾಕ್ಷಿ ಪೂಜಾರಿ ಹಾಗೂ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.
ಅರುಣ್ ಗಾಣಿಗ ಪ್ರಾರ್ಥನೆ ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್ ಪೈ ಸ್ವಾಗತಿಸಿ ವರದಿ ಮಂಡಿಸಿದರು. ಚಂದಯ್ಯ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!