Sunday, October 13, 2024

ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ !

ಜನಪ್ರತಿನಿಧಿ (ಬೆಂಗಳೂರು) : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಇಂದು(ಶನಿವಾರ) ಆದೇಶಿಸಿದೆ.

ಗುತ್ತಿಗೆದಾರನಿಗೆ ಬೆದರಿಕೆ ಹಾಕಿ ಲಂಚಕ್ಕೆ ಬೇಡಿಕೆ ನೀಡಿದ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ.

ಮುನಿರತ್ನ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಇಂದು ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಮುನಿರತ್ನಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎನ್ ಮುನಿರತ್ನ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ರೆಸಾರ್ಟ್‌ನಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಿ 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಬಂಧನಕ್ಕೊಳಪಡಿಸಲಾಗಿತ್ತು.

ಎಸ್‌ಐಟಿ ರಚನೆ
ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಹಿರಿಯ ಐಪಿಎಸ್‌ ಅಧಿಕಾರಿ ಬಿ.ಕೆ ಸಿಂಗ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು, ಶಾಸಕ ಮುನಿರತ್ನ ಒಳಗೊಂಡು ಒಟ್ಟು 7 ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಕಗ್ಗಲೀಪುರದ ಖಾಸಗಿ ರೆಸಾರ್ಟ್‌ ನಲ್ಲಿ ಅತ್ಯಾಚಾರ ನಡೆದಿರುವುದಾಗಿ 40 ವರ್ಷ ವಯಸ್ಸಿನ ಸಂತ್ರಸ್ತೆ ಮಹಿಳೆಯೊಬ್ಬರು ಪ್ರಕರಣ ದಾಖಲು ಮಾಡಿದ್ದರು.

ಸಂತ್ರಸ್ತೆ ನೀಡಿರುವ ದೂರಿನ ಅನ್ವಯ ಪೊಲೀಸರು ಐಟಿ ಆಕ್ಟ್‌ 2000, ಐಪಿಸಿ ಸೆಕ್ಷನ್ 354ಎ, 354ಸಿ, 376, 506, 504, 120(ಬಿ), 149, 384, 406, 308 ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಮುನಿರತ್ನ ನಾಯ್ಡು (ಎ1), ವಿಜಯ್ ಕುಮಾರ್ (ಎ2), ಸುಧಾಕರ (ಎ3), ಕಿರಣ್ ಕುಮಾರ್ (ಎ4), ಲೋಹಿತ್ ಗೌಡ (ಎ5), ಮಂಜುನಾಥ (ಎ6), ಲೋಕಿ (ಎ7) ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!