Saturday, October 12, 2024

ರಾಜಕಾರಣವೇ ನಮ್ಮ ಪ್ರಜಾಪ್ರಭುತ್ವಕ್ಕೆ ಮಾರಕ…!

(-ಪ್ರಸಾದ್ ಶೆಟ್ಟಿ ಸೀತಾನದಿ)
ಪ್ರಜೆಗಳನ್ನೇ ಸರಪಳಿಯಲ್ಲಿ ಸುತ್ತಿ ದರ್ಬಾರು ನಡೆಸುವರು ಮಾಡುವ ಪ್ರಜಾಪ್ರಭುತ್ವದ ಅಣಕು ಪ್ರದರ್ಶನ ಇದು.
ಇಲ್ಲಿ ರಾಜಕಾರಣಿಗಳ ದರ್ಪ ದೌಲತ್ತಿನ ಮುಂದೆ ಕಾಲ ಕಸವಾಗಿ ಬಿದ್ದಿರುವ ಪ್ರಜೆಗಳೇ ಪ್ರಭುಗಳಾಗುವುದು ಹಗಲು ಕನಸು…. ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಂತೆ ಕೇಳಿ ನನಗೆ ನಗೂ ಬರುತ್ತಿದೆ….ಪೂರ್ತಿ ಓದಿದ ಮೇಲೆ ನಿಮಗೂ ಅಸಹ್ಯ ಹುಟ್ಟಬಹುದು ಈ ವ್ಯವಸ್ಥೆಯ ಮೇಲೆ…

ಸಂವಿಧಾನದಲ್ಲಿಯೇ ಉಲ್ಲೇಖ ಇರುವಂತೆ ಇಲ್ಲಿ ಪ್ರಜೆಗಳೇ ಪ್ರಭುಗಳಂತೆ….ನಿಮಗೆ ಯಾವತ್ತಾದರೂ ಹಾಗೆ ಅನ್ನಿಸಿದೆಯಾ….!? ಒಮ್ಮೆ ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿ…?

ಇಂದು ಬೃಹತ್ ಮಾನವ ಸರಪಳಿಮಾಡಿಕೊಂಡು ಪ್ರಜಾಪ್ರಭುತ್ವದ ಹಬ್ಬವನ್ನು ಮಾಡುತ್ತಿದ್ದೀರಿ, ಪ್ರಜೆಗಳ ಕತ್ತಿಗೆ ಅಧಿಕಾರ ಎಂಬ ಲಗಾಮು (ಸರಪಳಿ) ಹಾಕಿ ಕಟ್ಟಿಹಾಕಿರುವ ರಾಜಕಾರಣಿಗಳು.

ಇಂದು ನಿಮ್ಮ ಯಾವುದೋ ಶೋಕಿಗಾಗಿ , ಇಲ್ಲಿ ಇಲ್ಲದೇ ಇರುವ ಪ್ರಜಾಪ್ರಭುತ್ವವನ್ನು ದೊಡ್ಡದಾಗಿ ತೋರ್ಪಡಿಸಲು ಪ್ರಜೆಗಳನ್ನು ಬಿಸಿಲಲ್ಲಿ ನಿಲ್ಲಿಸಿ ಮಾನವ ಸರಪಳಿ ಮಾಡುವುದು ಯಾವ ಘನಂದಾರಿ ಉದ್ದೇಶಕ್ಕಾಗಿ ಎಂದು ತಿಳಿಸಬಹುದಾ ರಾಜಕಾರಣಿಗಳೇ…?
ಪ್ರಜೆಗಳೇ, ಪ್ರಜೆಗಳಿಂದ ,ಪ್ರಜೆಗಳಿಗೋಸ್ಕರ …..ಈ ಮಾತಿನ ಅನ್ವಯ ಪ್ರಜೆಗಳೇ ಮಾತ್ರ ಕಾಣುತ್ತಿದ್ದಾರೆ, ಪ್ರಜೆಗಳಿಂದ ಎಲ್ಲಿದೆ ? ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ಒಂದನ್ನು ಬಿಟ್ಟು ಮತ್ತೆ ಯಾವ ಹಿಡಿತ ಪ್ರಜೆಗಳ ಕೈಯಲ್ಲಿ ಇದೆ…?

ಆಮೇಲೆ ಸರಿಯಾದವರನ್ನೇ ಆರಿಸಿ ಕಳುಹಿಸಿ ಇದು ನಿಮ್ಮ ಕೈಯಲ್ಲಿದೆ ಎಂದು ಬೊಗಳೆಬಿಡುವುದನ್ನು ಮೊದಲು ಬಿಟ್ಟುಬಿಡಿ.
ಹಣ , ಹೆಂಡ ,ಸೀರೆ, ಕುಕ್ಕರ್ ಹಂಚಿ ಮತ ಗಿಟ್ಟಿಸಿಕೊಳ್ಳುವ ನೀಚ ಬುದ್ದಿಯೊಂದು ಬಿಟ್ಟರೆ ಗೆದ್ದ ಮೇಲೆ ನೀವು ಜನರ ಪ್ರತಿನಿಧಿಗಳು ಎಂಬುದನ್ನೇ ಮರೆಯುತ್ತಾರೆ.

ಜನಪ್ರತಿನಿಧಿ ಅಂದರೆ ಏನು….!?
ಕೋಟ್ಯಾಂತರ ಜನ ಎಲ್ಲರೂ ಅಧಿಕಾರ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಒಬ್ಬ ಜನರ ಪ್ರತಿನಿಧಿಯಾಗಿ ಆಯ್ಕೆ ಮಾಡುವುದು ಅಷ್ಟೇ.
ಜನಪ್ರತಿನಿಧಿ ಎಂದರೆ ಜನರ ಪರವಾಗಿ ಸರ್ಕಾರದ ಭಾಗದಲ್ಲಿ ಇರುವ ಒಬ್ಬ ಸಾಮನ್ಯ ಪ್ರಜೆ ಅಷ್ಟೇ… ಗೂಟದ ಕಾರು ಏರಿಕೊಂಡು ನಾನು ಶಾಸಕ, ಮಂತ್ರಿ, ಸಂಸದ ಎಂದು ದರ್ಪ ಮೆರೆಯಲು ಅಲ್ಲಿ ನಿಮ್ಮನ್ನು ಯಾರು ಬಿಟ್ಟಿಲ್ಲ….

ಬನ್ನಿ ಜನರ ಬಳಿ, ಪ್ರಜೆಗಳನ್ನು ಒಂದೆಡೆ ಸೇರಿಸಿ ಆಯಾ ಭಾಗಕ್ಕೆ ಜನರ ಅವಶ್ಯಕತೆಗೆ ಅನುಗುಣವಾಗಿ ಅಲ್ಲಿನ ಮೂಲಭೂತ ಸೌಕರ್ಯ, ನೀರು, ಆರೋಗ್ಯ, ಶಾಲೆ,ರಸ್ತೆ, ಇಂತಹ ಸೌಲಭ್ಯಗಳನ್ನು ಮಾಡಿಕೊಡಬೇಕೆ ಹೊರತು ನಿಮ್ಮ ಸಂಭಂದಿಕನೊಬ್ಬ ಕಾಂಟ್ರಾಕ್ಟರ್ ಇದ್ದಾನೆ ಎಂದು ಸೇತುವೆ ಕಟ್ಟುವುದಲ್ಲ, ಯಾವುದೋ ಸೌಧ ಕಟ್ಟುವುದೂ ಅಲ್ಲ. ಆಮೇಲೆ ಧಮ್ಕಿ ಹಾಕಿ ಅದೇ ಕಾಂಟ್ರಾಕ್ಟರ್ ಬಳಿ ಹಣ ತಂದುಕೊಡು ಎನ್ನುವುದು ಪ್ರಜಾಪ್ರಭುತ್ವ ಅಲ್ಲವೇ ಅಲ್ಲ…

ನಿಮಗೆ ಬೇಕಾದ ಕೆಲಸವನ್ನು ನಿಮಗೆ ಬೇಕಾದವರಿಗೆ ಕೊಟ್ಟು ಜನರ ನಡುವೆ ದರ್ಪಮೆರೆಯಿರಿ ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ ಅಲ್ಲವೆ…!?

ಪ್ರಜಾಪ್ರಭುತ್ವದ ಆಚರಣೆ ಮಾನವ ಸರಪಳಿಯಿಂದ ಮಾಡುವುದಲ್ಲ ಪ್ರಜೆಗಳಿಗೆ ಏನೂ ಬೇಕು ಎಂಬುದನ್ನು ಜನರ ನಾಡಿಮಿಡಿತವನ್ನು ಅರಿಯುವ ಕೆಲಸವಾಗಬೇಕು ಇದು ಬೇರು ಮಟ್ಟದಲ್ಲಿಯೇ ಆಗಬೇಕು ಅಂದರೆ ಗ್ರಾಮ, ಹೊಬಳಿ, ತಾಲ್ಲೂಕು ಮಟ್ಟದಲ್ಲಿ ಪ್ರಜಾಪ್ರಭುತ್ವದ ಕೆಲಸ ಶುರುವಾಗಬೇಕು, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನ ದರ್ಪ ಅಹಂಕಾರ ನೋಡಿದರೆ ತಿಳಿಯುತ್ತದೆ ಶಾಸಕ, ಸಂಸದರು ಪ್ರಜೆಗಳನ್ನು ತುಚ್ಛವಾಗಿ ಕಾಣಬಹುದು ಎಂದು.

ತಳಮಟ್ಟದಲ್ಲಿ, ಹಳ್ಳಿ ಹಳ್ಳಿಯಲ್ಲೂ ಪ್ರಜಾಪ್ರಭುತ್ವದ ಕಾರ್ಯಗಾರ ಮಾಡಿ ಜನರ ಸಮಸ್ಯೆ, ಅವರ ಅವಶ್ಯಕತೆಗೆ ಅನುಸಾರವಾಗಿ ಸರ್ಕಾರದಿಂದ ಬರುವ ಅನುದಾನದ ನಿಧಿ ಬಳಕೆ ಆಗಬೇಕು. ಬದಲಿಗೆ ಇಲ್ಲಿ ಅಧಿಕಾರಗಳ ಜೇಬು ತುಂಬುತ್ತಿದೆ , ರಾಜಕಾರಣಿಗಳ ಹೊಟ್ಟೆ ತುಂಬುತ್ತಿದೆ.

ಜನರ ದುಡ್ಡು ತಿಂದು ದಡೂತಿಗಳಂತೆ ಬೆಳೆದ ರಾಜಕಾರಣಿಗಳು ಪ್ರಜೆಗಳನ್ನು ಪಾಲಿಸದೆ ದರ್ಪ ಮೆರೆಯುತ್ತಿದ್ದರೆ, ಇದನ್ನು ಪ್ರಶ್ನಿಸಿದರೆ ಅವರನ್ನು ಸದೆಬಡಿಯುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಇದು ನಿಜವಾದ ಪ್ರಜಾಪ್ರಭುತ್ವ ವೇ…! ಪ್ರಜೆಗಳು ಪ್ರಶ್ನೆ ಮಾಡಬೇಕು…
ಯಾವೊಬ್ಬ ರಾಜಕಾರಣಿ ಕೂಡ ಇದನ್ನು ಪ್ರಶ್ನಿಸಿಲಾರ, ಇಂದು ಅವರಾದರೆ ನಾಳೆ ನಾವು ಜನರ ದುಡ್ಡನ್ನು ಲೂಟಿ ಹೊಡೆದು ಪ್ರಜೆಗಳನ್ನು ತುಳಿದು ಬದುಕಬಹುದು ಎಂಬ ದುರಾಸೆ ಈ ರಾಜಕಾರಣಿಗಳದ್ದು.
ಸಂವಿಧಾನದಲ್ಲಿ ಉಲ್ಲೇಖ ಇರುವಂತೆ ಪ್ರಜೆಗಳನ್ನು ಪ್ರಭುಗಳಂತೆ ಕಾಣದ ಇರುವ ಯಾವೊಬ್ಬ ರಾಜಕಾರಣಿಗೂ ಸಂವಿಧಾನದ ಬಗ್ಗೆ ಮಾತನಾಡುವುದಾಗಲಿ, ಮುಟ್ಟುವುದಕ್ಕೂ ಅರ್ಹತೆ ಇಲ್ಲ.

ಮತ್ತೆ ಮತ್ತೆ ಹೇಳುತ್ತಿದ್ದೇನೆ ಇಲ್ಲಿ ಸಂವಿಧಾನ ವಿರೋಧಿ ಮಾತುಗಳು ಯಾವುದೂ ಇಲ್ಲ, ಸಂವಿಧಾನಕ್ಕೆ ತಕ್ಕದಾದ ಗೌರವ ಕೊಡದೆ ಸಂವಿಧಾನದಲ್ಲಿಯೇ ಉಲ್ಲೇಖ ಇರುವಂತೆ ಪ್ರಜಾಪ್ರಭುತ್ವದ ಆಶಯದಂತೆ ಆಡಳಿತ ನಡೆಸದ ಜನಪ್ರತಿನಿಧಿಗಳೇ ಪ್ರಜಾಪ್ರಭುತ್ವದ ದೊಡ್ಡ ಶತ್ರುಗಳು ಎಂದರೆ ತಪ್ಪಲ್ಲ.

ವ್ಯವಸ್ಥೆ ಸರಿಯಾಗಬೇಕು ಪ್ರಜೆಗಳು ಮೊದಲು ಇದನ್ನು ಸರಿಯಾಗಿ ತಿಳಿದುಕೊಂಡು ಇಲ್ಲಿ ಪ್ರಜೆಗಳೇ ಪ್ರಭುಗಳಾಗಬೇಕೆ ಹೊರತು ಪುಂಡು ಪುಢಾರಿಗಳು ಪ್ರಜೆಗಳ ರಕ್ತಹೀರಿ ಅಧಿಕಾರ ನಡೆಸಬಾರದು ಅಷ್ಟೇ….

ಪ್ರಸಾದ್ ಶೆಟ್ಟಿ ಸೀತಾನದಿ

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!