Saturday, September 21, 2024

ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ʼಹೈʼ ತಡೆಯಾಜ್ಞೆ !

ಜನಪ್ರತಿನಿಧಿ (ಬೆಂಗಳೂರು/ಪುತ್ತಿಲ) : ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಹಾಗೂ ವಿಚಾರಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿದು ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ.

ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರ ವಾದವನ್ನು ಪುರಸ್ಕರಿಸಿ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.

ಪುತ್ತೂರಿನಲ್ಲಿ ಸದ್ಯ ವಾಸ್ತವ್ಯ ಹೂಡಿರುವ ಮಹಿಳೆಯೊರ್ವರು ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ಸೆಪ್ಟೆಂಬರ್‌ 1 ರಂದು ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ನಂಬಿಕೆ ದ್ರೋಹ ಪ್ರಕರಣದ ದಾಖಲು ಮಾಡಿದ್ದರು. ಅಂದೇ ಪುತ್ತಿಲ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪುತ್ತೂರು ನಗರ ಠಾಣೆ ಇನ್‌ಸ್ಪೆಕ್ಟರ್‌ ತನಿಖಾಧಿಕಾರಿಯಾಗಿ ತನಿಖೆ ಆರಂಭಿಸಿದ್ದರು.

ನ್ಯಾಯವಾದಿ ನರಸಿಂಹ ಪ್ರಸಾದ್‌ ಅವರ ಮೂಲಕ ಸೆಪ್ಟೆಂಬರ್‌ 2 ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರಾದ ಪುತ್ತಿಲ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಪುತ್ತಿಲ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಅಂದೇ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದ ಸಂತ್ರಸ್ತ ಮಹಿಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾತ್ರ ನಡೆದಿದ್ದಲ್ಲ, ಅತ್ಯಾಚಾರ ಕೂಡ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹೇಳಿಕೆ ದಾಖಲಾದ ನಂತರ ಪುತ್ತಿಲ ವಿರುದ್ಧದ ಎಫ್‌ಐಆರ್‌ನಲ್ಲಿಐಪಿಸಿ-376 ಕಲಂ ಪ್ರಕಾರ ಅತ್ಯಾಚಾರ ಪ್ರಕರಣ ಸೇರ್ಪಡೆಯಾಗಿತ್ತು.

2023ರ ಜೂನ್‌ನಲ್ಲಿ ಬೆಂಗಳೂರಿನ ಹೋಟೆಲೊಂದರಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಮಹಿಳೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪುತ್ತೂರು ಪೊಲೀಸರು ಹೋಟೆಲ್‌ ಮಹಜರು ನಡೆಸಿದ್ದರು. ಪ್ರಕರಣದ ತನಿಖೆ ಪುತ್ತೂರು ಠಾಣೆಯಿಂದ ಬೆಂಗಳೂರಿಗೆ ವರ್ಗವಾಗಿತ್ತು. ನ್ಯಾಯಾಂಗ ವಿಚಾರಣೆ ಬೆಂಗಳೂರು ಸಿಟಿ ನ್ಯಾಯಾಲಯಕ್ಕೆ ವರ್ಗವಾಗಿತ್ತು.

ಎಫ್‌ಐಆರ್‌ನಲ್ಲಿ ದಾಖಲಾದ ಐಪಿಸಿ-354 (ಎ) ಕಲಂ ಅಡಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಅರುಣ್‌ ಕುಮಾರ್‌ ಪುತ್ತಿಲ ಜಾಮೀನು ಪಡೆದುಕೊಂಡಿದ್ದರೂ, ಐಪಿಸಿ ಕಲಂ-376 (ಅತ್ಯಾಚಾರ) ಸೇರ್ಪಡೆಯಾದ ಕಾರಣ ಅದಕ್ಕೆ ಹೊಸದಾಗಿ ಜಾಮೀನು ಪಡೆಯಬೇಕಾದ ಅಥವಾ ಮೇಲಿನ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಅನಿವಾರ್ಯತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದರು. ಪ್ರಸ್ತುತ ಪುತ್ತಿಲ ಪ್ರಕರಣದ ರದ್ದತಿ ಕೋರಿದ್ದಾರೆ.

ಸುಳ್ಳು ದೂರು: ಪುತ್ತಿಲ ಪರ ವಕೀಲರ ವಾದ
ಪುತ್ತಿಲ ಜತೆಗಿನ ಮಹಿಳೆಯ ಫೋನ್‌ ಸಂಭಾಷಣೆಯ ಆಡಿಯೋ ವೈರಲ್‌ ಆಗಿತ್ತು. ಇದರಲ್ಲಿ ರಾಜಕೀಯ ವಿರೋಧಿಗಳಿಂದ ಹಣ ಪಡೆದ ಆರೋಪದ ವಿಚಾರ ಚರ್ಚೆಯಾಗಿತ್ತು. ಬಳಿಕ ಪುತ್ತಿಲ ಅವರು ತನ್ನ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

ತಡೆಯಾಜ್ಞೆ ಬಂದ ನಂತರವೇ ಮಹಿಳೆ ಲೈಂಗಿಕ ದೌರ್ಜನ್ಯದ ಪ್ರಕರಣದ ದಾಖಲಿಸಿದ್ದಾರೆ. ಅದಕ್ಕೆ ಜಾಮೀನು ಸಿಕ್ಕ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೊಸ ಹೇಳಿಕೆ ನೀಡಿದ್ದಾರೆ. 2023ರ ಜೂನ್‌ನಲ್ಲಿ ನಡೆದಿದೆ ಎಂದು ಅವರೇ ದೂರಿನಲ್ಲಿ ಹೇಳಿದ ಘಟನೆಗೆ 14 ತಿಂಗಳ ನಂತರ ಈ 47 ವರ್ಷದ ಮಹಿಳೆ ದೂರು ನೀಡಿದ್ದಾರೆ. ಹೀಗಾಗಿ ಇದೊಂದು ಸುಳ್ಳು ದೂರಾಗಿದ್ದು, ಇದನ್ನು ರದ್ದುಪಡಿಸಬೇಕು ಎಂದು ಪುತ್ತಿಲ ಪರ ವಕೀಲರಾದ ಪಿ.ಪಿ. ಹೆಗ್ಡೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!