Saturday, October 12, 2024

ಶಿಕ್ಷಣದ ಮೂಲಕ ರಾಷ್ಟ್ರಭಕ್ತರ ನಿರ್ಮಾಣವಾಗಬೇಕು-ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ, ಸೆ.5: ಸಮಾಜ ಇವತ್ತು ಶಿಕ್ಷಣದ ಮೇಲೆ ನಿಂತಿದೆ. ಸಮಸ್ಯೆ, ಸವಾಲುಗಳು ಇದ್ದರೂ ಕೂಡಾ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಉತ್ತಮ ಶಿಕ್ಷಣ ರಾಷ್ಟ್ರಭಕ್ತರನ್ನು ರೂಪುಗೊಳಿಸುತ್ತದೆ ಎನ್ನುವುದು ಸಾರ್ವತ್ರಿಕ ಕಲ್ಪನೆ. ಶಿಕ್ಷಣದ ಮೂಲಕವೇ ರಾಷ್ಟಭಕ್ತರ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಸೆ.೫ರಂದು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂದಾಪುರ ತಾಲೂಕು, ಶಿಕ್ಷಕರ ದಿನಾಚರಣೆ ಸಮಿತಿ ಕುಂದಾಪುರ ವತಿಯಿಂದ ಡಾ.ಎಸ್.ರಾಧಾಕೃಷ್ಣನ್ ಜನ್ಮದಿನಾಚರಣೆ, ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸ ಶಿಕ್ಷಣ ನೀತಿ ಅನುಷ್ಠಾನಿಸಬೇಕು ಎನ್ನುವ ವಾದ ಮುಂದಿಡುವ ಕಾಲಘಟ್ಟದಲ್ಲಿ ಒಳ್ಳೆಯದನ್ನು ಸ್ವೀಕರಾರ್ಹ ಮನಸ್ಸಿನಿಂದ ಒಪ್ಪಿಕೊಳ್ಳುವ ಅನಿವಾರ್ಯತೆ ಇದೆ.ಸತ್ಯಕ್ಕೆ ಅಪಚಾರವಾಗದಂತೆ ಸರಕಾರ ನಡೆದುಕೊಳ್ಳಬೇಕು. ಇವತ್ತು ಶಿಕ್ಷಣದೊಂದಿಗೆ ಕೌಶಲ್ಯವನ್ನು ನೀಡುವ ಅವಶ್ಯಕತೆ ಇದೆ. ರಾಜ್ಯದಲ್ಲಿ ೬.೫ಕೋಟಿ ಜನಸಂಖ್ಯೆ ಇದೆ. ಶೇ.೧ರಂದು ಮಂದಿಗೆ ಮಾತ್ರ ಸರ್ಕಾರಿ ಉದ್ಯೋಗ ಸಿಗುತ್ತಿದೆ. ೯೯% ಜನ ಸ್ವಂತ ಉದ್ಯೋಗ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಂಥಹ ಸಂದರ್ಭದಲ್ಲಿ ಕೌಶಲ್ಯಗಳನ್ನು ಶಿಕ್ಷಣದೊಂದಿಗೆ ನೀಡುವುದರಿಂದ ಮುಂದೆ ವಿದ್ಯಾವಂತ ಯುವಜನಾಂಗ ಸ್ವಂತ ಉದ್ಯೋಗ ಮಾಡಲು ಮುಂದಾಗುತ್ತಾರೆ. ಈ ಎಲ್ಲಾ ದೂರದೃಷ್ಟಿಯಿಂದ ಹೊಸ ಶಿಕ್ಷಣ ನೀತಿ ಜ್ಯಾರಿಗೆ ಒತ್ತಾಯ ಕೇಳಿ ಬರುತ್ತಿದೆ. ಭವಿಷ್ಯದಲ್ಲಿ ಖಂಡಿತಾ ಹೊಸ ಶಿಕ್ಷಣ ನೀತಿ ಜ್ಯಾರಿಯಾಗುವುದು ಖಂಡಿತ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಲಯನ್ಸ್ ಜಿಲ್ಲೆ ೩೧೭ಸಿ ಇದರ ಮಾಜಿ ಜಿಲ್ಲಾ ಗವರ್ನರ್ ವಿ.ಜಿ ಶೆಟ್ಟಿ, ತನ್ನ ವ್ಯಕ್ತಿತ್ವದ ಅರಿವನ್ನು ವಿದ್ಯಾರ್ಥಿಗೆ ಮೂಡಿಸಬೇಕಾದ ಅಗತ್ಯತೆ ಇದೆ. ನಾನು ಏನು ಎನ್ನುವುದನ್ನು ಪರಿಷ್ಕರಣೆ ಮಾಡಿಕೊಳ್ಳಬೇಕಾಗಿದೆ. ತಮ್ಮ ಒಳಗೆ ನೋಡಲು ವಿದ್ಯಾರ್ಥಿಗಳಿಗೆ ಕಲಿಸಬೇಕು. ಅಂತರಂಗ, ವ್ಯಕ್ತಿತ್ವವಿಕಾಸನ, ನಾಯಕತ್ವ, ಜ್ಞಾನಸಂಪಾದನೆ, ಪ್ರೀತಿ ವಾತ್ಸಲ್ಯ, ಸಂತೋಷ ಎಲ್ಲವನ್ನು ಒಳಗಿನಿಂದ ತಿಳಿದುಕೊಳ್ಳಬೇಕು. ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸುವ ಧೈರ್ಯವನ್ನು ಬಾಲ್ಯದಿಂದಲೇ ನೀಡಬೇಕು. ಆತ್ಮಶಕ್ತಿಯ ಅರಿವು ವಿದ್ಯಾರ್ಥಿಗಳಿಗೆ ಆಗಬೇಕು ಎಂದರು.

ಕುಂದಾಪುರ ಪುರಸಭೆ ಅಧ್ಯಕ್ಷರಾದ ಮೋಹನದಾಸ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಸಂಘ ಕುಂದಾಪುರ ಇದರ ಸಂಚಾಲಕರಾದ ಆವರ್ಸೆ ಸುಧಾಕರ ಶೆಟ್ಟಿ, ಸಮಿತಿ ಅಧ್ಯಕ್ಷರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ.ಜಿ, ತಹಶೀಲ್ದಾರ್ ಶೋಭಾ ಲಕ್ಷ್ಮೀ, ತಾಲೂಕು ಯುವಜನ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ನವೀನಚಂದ್ರ ಹೆಗ್ಡೆ, ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯಕ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ, ಶಿಕ್ಷಕರ ಸಂಘಟನೆಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಪ್ರಶಸ್ತಿ ಪಡೆದ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಕಿಯರು ನಾಡಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ಶಶಿಧರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿಕ್ಷಕ-ಶಿಕ್ಷಕಿಯರಿಂದ ಯಕ್ಷಗಾನ ‘ಭಾರತರತ್ನ’ ಪ್ರದರ್ಶನಗೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿಕ್ಷಕ-ಶಿಕ್ಷಕಿಯರಿಂದ ಯಕ್ಷಗಾನ ‘ಭಾರತರತ್ನ’ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!