Tuesday, September 17, 2024

ರೇಣುಕಾಸ್ವಾಮಿ ಕೊಲೆ ಪ್ರಕರಣ : ಘಟನೆಗೆ ಪವಿತ್ರಾ ಗೌಡಳೇ ಮುಖ್ಯ ಕಾರಣ | ಪೂರ್ವ ಯೋಜಿತ ಕೊಲೆ !? : ಕೋರ್ಟ್‌ ಹೇಳಿದ್ದೇನು ?

ಜನಪ್ರತಿನಿಧಿ (ಬೆಂಗಳೂರು) : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳು ಸಲ್ಲಿಕೆಯಾದ ಬೆನ್ನಲ್ಲೇ ಪ್ರಕರಣಕ್ಕೆ ಮುಖ್ಯ ಕಾರಣ ನಟಿ ಹಾಗೂ ಫ್ಯಾಶನ್ ಡಿಸೈನರ್ ಪವಿತ್ರಾ ಗೌಡ ಮೂಲ ಕಾರಣ ಎಂದು ನಗರ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಹೇಳಿದೆ.

ರೇಣುಕಾಸ್ವಾಮಿ ಎಂಬಾತನನ್ನು ಬರ್ಭರವಾಗಿ ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದ ರೀತಿಯಲ್ಲಿ  ಹಿಂಸೆ ಕೊಟ್ಟು ಹತ್ಯೆ ಮಾಡಲಾಗಿದೆ ಎಂದು ಹೇಳಿರುವ ಕೋರ್ಟ್, ಇದು ಅತ್ಯಂತ ಭಯಾನಕ ಮತ್ತು ಹೇಯ ಕೃತ್ಯವಾಗಿದೆ ಎಂದು ಹೇಳಿದೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಡಿಎನ್ ಎ ವರದಿಯಲ್ಲಿ ರೇಣುಕಾಸ್ವಾಮಿಯ ರಕ್ತದ ಮಾದರಿಯ ಹಾಗೂ ಕೊಲೆ ಆರೋಪಿ ಪವಿತ್ರಾ ಗೌಡ ಅವರ ಬಟ್ಟೆ ಹಾಗೂ ಚಪ್ಪಲಿಯಲ್ಲಿದ್ದ ರಕ್ತದ ಕಲೆಯ ಮಾದರಿಗಳು ಹೊಂದಿಕೆಯಾಗುತ್ತಿದ್ದು ಆಕೆ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾಳೆಂದು ತಿಳಿದು ಬಂದಿದ್ದಲ್ಲದೇ, ಹಲ್ಲೆಯಿಂದ ಮೃತಪಟ್ಟ ರೇಣುಕಾಸ್ವಾಮಿ ತನ್ನ ಇನ್ಸ್ಟಾಗ್ರಾಂ ಅಕೌಂಟ್ ನಿಂದ ನಗ್ನ ಚಿತ್ರಗಳನ್ನು ಪವಿತ್ರಾ ಗೌಡಳಿಗೆ ಕಳುಹಿಸಿದ್ದ ಎಂಬ ವಿಷಯವೂ ತನಿಖೆಯಲ್ಲಿ ತಿಳಿದು ಬಂದಿದೆ.

ಈ ಹೇಳಿಕೆಗಳನ್ನಿಟ್ಟುಕೊಂಡು, ಚಾರ್ಜ್ ಶೀಟ್ ಸಲ್ಲಿಕೆಗೂ ಮುನ್ನವೇ ಜಾಮೀನಿಗೆ ಅರ್ಜಿ ಹಾಕಿದ್ದ ಪವಿತ್ರಾ ಗೌಡಗೆ ಆಗಸ್ಟ್ 31ರಂದು ಜಾಮೀನು ನೀಡಲು ನಿರಾಕರಿಸಿದ್ದ 56ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಜೈಶಂಕರ್, ಈ ಹೀನ ಅಪರಾಧ ಕೃತ್ಯದಲ್ಲಿ ಪವಿತ್ರಾ ಗೌಡ ಪಿತೂರಿ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಇದೊಂದು ಅತ್ಯಂತ ಭೀಭತ್ಸ ಮತ್ತು ಹೇಯ ಕೃತ್ಯವಾಗಿದೆ ಎಂದು ಹೇಳಿದ್ದಾರೆ.

ಮರಣೋತ್ತರ ವರದಿ : ಇನ್ನು ರೇಣುಕಾಸ್ವಾಮಿ ಮರಣೋತ್ತರ ವರದಿಯನ್ನು ಉಲ್ಲೇಖಿಸಿರುವ ಕೋರ್ಟ್, ಮೃತ ವ್ಯಕ್ತಿಯ ಮೇಲೆ 39 ಗಾಯಗಳಾಗಿದ್ದವು. ಆತನ ಎದೆಯ ಮೂಳೆ ಮುರಿದಿತ್ತು. ತಲೆಗೆ ಗಂಭೀರ ಗಾಯವಾಗಿ ಸಾಕಷ್ಟು ರಕ್ತಸ್ರಾವವಾಗಿತ್ತು. ವೃಷಣಗಳು ಹಾನಿಗೀಡಾಗಿದ್ದು, ವಿದ್ಯುತ್ ನಿಂದ ಶಾಕ್ ಕೊಡಲಾಗಿತ್ತು. ಪೊಲೀಸರು ಸಲ್ಲಿಸಿರುವ ಫೋಟೋಗಳಲ್ಲಿ ಮೃತ ದೇಹದ ಬಹುತೇಕ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಕೆಲವು ಗಾಯಗಳು ಗಂಭೀರವಾಗಿವೆ. ಅಂದರೆ ವ್ಯಕ್ತಿಗೆ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ ಎಂದು ಕೋರ್ಟ್ ಹೇಳಿದೆ.

ಪ್ರಕರಣದ ಬಗ್ಗೆ ಕೂಲಂಕಷವಾಗಿ ಹಾಗೂ ವಿವರವಾಗಿ ತನಿಖೆ ನಡೆಸಲಾಗಿದ್ದು, ಆರೋಪಿಗಳ ಕರೆ ವಿವರಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸ್ಥಳದ ವಿವರಗಳನ್ನು ಸಹ ಸಂಗ್ರಹಿಸಲಾಗಿದೆ. ಇಬ್ಬರು ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ ಮತ್ತು ಅವುಗಳನ್ನು ಕಲೆಹಾಕಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.

ಮೊಬೈಲ್ ಕರೆಗಳ ವಿವರಗಳನ್ನು ತನಿಖೆಗೊಳಪಡಿಸಿದಾಗ ಆರೋಪಿ ಪವಿತ್ರಾ ಗೌಡ ಒಳಗೊಂಡಂತೆ ಇತರ ಆರೋಪಿಗಳು ಒಬ್ಬರಿಗೊಬ್ಬರು ಹತ್ಯೆ ಮಾಡುವ ಮುನ್ನ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅಪರಾಧ ನಡೆಸಲು ಅವರು ನಡೆಸಿದ ಪೂರ್ವ ಯೋಜನೆ ಹಾಗೂ ಅಪರಾಧ ನಡೆದ ಸ್ಥಳದಲ್ಲಿ ಅವರ ಇರುವಿಕೆ ಎಲ್ಲವೂ ಸಾಬೀತಾಗಿದೆ ಎಂದು ನ್ಯಾಯಾಲಯ ತನಿಖಾ ವರದಿಯ ಮೂಲಕ ಗಮನಕ್ಕೆ ತೆಗೆದುಕಕೊಂಡಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ ಪ್ರಸನ್ನ ಕುಮಾರ್ ಸಲ್ಲಿಸಿರುವ ತನಿಖಾ ದಾಖಲೆಗಳ ಪತ್ರಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಅರ್ಜಿದಾರ ಹಾಗೂ ಆರೋಪಿ ನಂಬರ್ 3 ಇತರ ಆರೋಪಿಗಳ ಜೊತೆಯಲ್ಲಿ ಪಿತೂರಿ ನಡೆಸಿ ರೇಣುಕಾಸ್ವಾಮಿಯನ್ನು ಅಪಹರಿಸಿ ತಂದಿದ್ದನು ಎಂದು ಹೇಳಲಾಗಿದೆ.

ಚಿತ್ರದುರ್ಗದ ಅನುಕುಮಾರ್ ಗೆ ಜಾಮೀನು ನೀಡಲು ನಿರಾಕರಿಸಿರುವ ನ್ಯಾಯಾಲಯ ಈತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ತಂದು ಹಲ್ಲೆ ಮಾಡುವಲ್ಲಿ ನೆರವಾಗಿದ್ದನು. ರೇಣುಕಾಸ್ವಾಮಿ ಬೆರಳಲ್ಲಿದ್ದ ಚಿನ್ನದ ಉಂಗುರು, ಕತ್ತಿನಲ್ಲಿದ್ದ ಚಿನ್ನದ ಸರ, ಲಿಂಗಾಯತ ಧರ್ಮದವರು ಧರಿಸುವ ಕರಡಿಕ ಮತ್ತು ಲಿಂಗ ಹಾಗೂ ವಾಚನ್ನು ಕಸಿದುಕೊಂಡಿದ್ದನು. ಅಲ್ಲದೆ ರೇಣುಕಾಸ್ವಾಮಿ ಮೃತಪಟ್ಟ ನಂತರ ಆತನ ಶರೀರವನ್ನು ಮೋರಿಯಲ್ಲಿ ಎಸೆಯುವಲ್ಲಿ ಕೂಡ ಭಾಗಿಯಾಗಿದ್ದನು. ಈತನ ಪ್ಯಾಂಟ್ ಮೇಲೆ ರೇಣುಕಾಸ್ವಾಮಿಯ ರಕ್ತದ ಮಾದರಿ ಪತ್ತೆಯಾಗಿದ್ದವು ಎಂದು ಎಫ್ ಎಸ್ ಎಲ್ ವರದಿ ಹೇಳುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!