Monday, September 9, 2024

ಶ್ರೀ ವನದುರ್ಗಾಪರಮೇಶ್ವರೀ ಶ್ರೀ ಲಕ್ಷ್ಮೀಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಛತ್ರಮಠ, ಮೆಕ್ಕೆ-ಜಡ್ಕಲ್: ಸೆ.6 ಮತ್ತು 7ರಂದು ಶ್ರೀ ಗಣೇಶೋತ್ಸವ ರಜತ ಸಂಭ್ರಮ

ಜಡ್ಕಲ್:(ಜನಪ್ರತಿನಿಧಿ ವಾರ್ತೆ) ಶ್ರೀ ವನದುರ್ಗಾಪರಮೇಶ್ವರೀ ಶ್ರೀ ಲಕ್ಷ್ಮೀಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಛತ್ರಮಠ, ಮೆಕ್ಕೆ-ಜಡ್ಕಲ್ ಇಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ರಜತ ಸಂಭ್ರಮ 2024 ಸೆ.6 ಮತ್ತು 7ರಂದು ನಡೆಯಲಿದೆ. ರಜತ ಸಂಭ್ರಮದ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕøತಿಕ ವೈಭವ ನೆರವೇರಲಿದೆ.

ಸೆ.6ನೇ ಶುಕ್ರವಾರ ಸ್ವರ್ಣಗೌರಿ ವ್ರತದ ಅಂಗವಾಗಿ ಶ್ರೀಕ್ಷೇತ್ರದಲ್ಲಿ ಶ್ರೀ ವನದುರ್ಗಾಪರಮೇಶ್ವರೀ ದೇವಿಯ ಪ್ರೀತ್ಯಾರ್ಥವಾಗಿ ಬೆಳಿಗ್ಗೆ 9ರಿಂದ ಪಂಚದುರ್ಗಾ ಶಾಂತಿ ಹೋಮ, ಹಾಗೂ ಶ್ರೀ ವಿದ್ಯಾ ತ್ರಿಕಾಲ ಮಹಾ ಪೂಜೆ ನಡೆಯಲಿದೆ. ಮಧ್ಯಾಹ್ನ 12-15ಕ್ಕೆ ಪೂರ್ಣಾಹುತಿ, 12.30ಕ್ಕೆ ಅನ್ನ ಪ್ರಸಾದ, ಸಂಜೆ 3ರಿಂದ ತ್ರಿಕಾಲ ಮಹಾ ಪೂಜೆಯ ಮುಂದುವರಿಯಲಿದೆ. ಸಂಜೆ 6.45ಕ್ಕೆ ಅಷ್ಟಾವಧಾನ, ಸಂಜೆ 7 ಗಂಟೆಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7.30ರಿಂದ 10ರ ತನಕ ರಜತ ಸ್ವರಾಂಜಲಿ ನಡೆಯಲಿದೆ. ಕಲರ್ಸ್ ಕನ್ನಡ ವಾಹಿನಿ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸಿ ಪುರಸ್ಕøತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ರಾತ್ರಿ 10ರಿಂದ 12ರ ತನಕ ರಜತ ಯಕ್ಷವೈಭವ ನಡೆಯಲಿದೆ. ಟೀಮ್ ತಿತ್ತತ್ತೆ-ಯಕ್ಷಬಳಗ ಕುಡೇರಿ ಇವರಿಂದ ಯಕ್ಷ ವೈಭವ ಪ್ರಸಂಗ ಸುಧನ್ವಾರ್ಜುನ ಕಾಳಗ ಪ್ರದರ್ಶನಗೊಳ್ಳಲಿದೆ.
ಸೆ.7ರಂದು ಶನಿವಾರ ಗಣೇಶ ಚತುರ್ಥಿ ಅಂಗವಾಗಿ ಅಷ್ಟೋತ್ತರ ಶತ ನಾಳಿಕೇರ ಗಣಪತಿ ಯಾಗ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 5ರಿಂದ 5,30ರ ತನಕ ನಾಟ್ಯಾಮೃತ ನಡೆಯಲಿದೆ. 5.30ರಿಂದ 8 ಗಂಟೆಯ ತನಕ ಮನು ಹಂದಾಡಿ ಮತ್ತು ಬಳಗದವರಿಂದ ನಗೆ ಸುಗ್ಗಿ ಹಾಸ್ಯ ರಸಾಯನ ರಜತ ನಗು ಪ್ರದರ್ಶನಗೊಳ್ಳಲಿದೆ. ರಾತ್ರಿ 8 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಗಣೋತ್ಸವ ರಜತ ಸಂಭ್ರಮದ ಅಧ್ಯಕ್ಷರಾದ ನಾಗರಾಜ್ ಬಿ ಹುಣ್ಸೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟನೆ ನೆರವೇರಿಸಲಿದ್ದಾರೆ. ರಾತ್ರಿ 9ರಿಂದ 10ರ ತನಕ ಜನತಾ ಚಿತ್ತಾರ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿನೂತನ ಕಾರ್ಯಕ್ರಮ, 10 ಗಂಟೆಯಿಂದ 10-30ರ ತನಕ ರಜತ ನೃತ್ಯೋತ್ಸವ-ಸ್ಥಳೀಯ ಆಯ್ದ ಪ್ರತಿಭೆಗಳಿಂದ ಆಕರ್ಷಕವಾದ ನೃತ್ಯ ಪ್ರದರ್ಶನ ನಡೆಯಲಿದೆ. 10-30ರಿಂದ ರಜತ ಕಲಾಂಜಲಿ-ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಜಿಷ್ಣು ಪಿ.ಎಸ್ ಬಳಗದವರಿಂದ ಕಲಾ-ಕುಂಚ-ವೈಭವ ನಡೆಯಲಿದೆ. ರಾತ್ರಿ 11 ಗಂಟೆಯಿಂದ ರಜತ ತಾಳಮದ್ದಳೆ ನಡೆಯಲಿದೆ. ಹೆಬ್ರಿ ಗಣೇಶ ಅವರ ಭಾಗವತಿಕೆಯಲ್ಲಿ ವಿದ್ಯಾ ವಾಚಸ್ಪತಿ ವಾಸುದೇವ ರಂಗಭಟ್ ಬಳಗದವರಿಂದ ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ –ಕರ್ಣಪರ್ವ ನಡೆಯಲಿದೆ.

ಛತ್ರಮಠದ ಇತಿಹಾಸ: ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರ ಕೊಲ್ಲೂರಿನಿಂದ ಇನ್ನೊಂದು ಪ್ರಸಿದ್ಧ ದೇವಿ ಕ್ಷೇತ್ರ ಕಮಲಶಿಲೆಗೆ ಹೋಗುವ ಮಾರ್ಗದಲ್ಲಿ, ಕೊಡಚಾದ್ರಿ ತಪ್ಪಲಿನ ಇತ್ತೀಚೆಗೆ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಗೋವಿಂದ ತೀರ್ಥದಿಂದ ಉಗಮವಾಗಿ ಅರಬ್ಬಿ ಸಮುದ್ರ ಸೇರುವ ಖೇಟ ನದಿ ದಡದಲ್ಲಿನ ನಯನ ಮನೋಹರ ಪ್ರಕೃತಿ ಮಡಿಲಲ್ಲಿ ಬರುವ ಕ್ಷೇತ್ರವೇ ಛತ್ರಮಠ. ಒಂದು ಕಡೆ ದಟ್ಟ ಗಿಡಮರಗಳು ಇನ್ನೊಂದು ದಿಕ್ಕಿಗೆ ಮನಸ್ಸಿಗೆ ಮುದ ನೀಡುವ ಜಲರಾಶಿಯ ಮಧ್ಯೆ ಬೇಡಿ ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಈಡೇರಿಶುವ ಶಕ್ತಿದೇವತೆ ಶ್ರೀ ವನದುರ್ಗ ಪರಮೇಶ್ವರಿ ಹಾಗು ಶ್ರೀ ಲಕ್ಷ್ಮಿಗಣಪತಿ ದೇವರು ನೆಲೆ ನಿಂತಿರುವ ಕ್ಷೇತ್ರವೇ ಶ್ರೀ ಕ್ಷೇತ್ರ ಛತ್ರಮಠ.

ಹೆಸರೇ ಹೇಳುವಂತೆ ಸುಮಾರು 18ನೆ ಶತಮಾನದ ಕೊನೆಯವರೆಗೂ ಈ ಕ್ಷೇತ್ರ ಶ್ರೀ ರಾಮಚಂದ್ರಾಪುರ ಮಠದ ಅಧೀನದಲ್ಲಿದ್ದು ಇಲ್ಲಿ ದೇವರ ಆರಾಧನೆ ಜೊತೆಗೆ ಅನ್ನದಾನ ನಡೆಯುತ್ತಿತ್ತು. ಹಳೆಯ ದಾಖಲೆಗಳ(ದಾಖಲೆ ಪ್ರತಿ ಲಭ್ಯವಿದೆ) ಪ್ರಕಾರ ದೇವಸ್ಥಾನವು ಸೇರಿದಂತೆ ದೇವಸ್ಥಾನದ ಸುತ್ತಲಿನ ಸುಮಾರು 289 ಎಕ್ರೆ ಭೂಮಿ ಶ್ರೀ ಮಠದ ಅಧೀನದಲ್ಲಿ ಇತ್ತು. ನಂತರದ ದಿನಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದೇಶದ ವಿವಿಡದೆ ನೆಡೆದ ಅನ್ಯಧರ್ಮೀಯರ ದಾಳಿಗಳಾದಂತೆ ಈ ಕ್ಷೇತ್ರ ಕೂಡ ದಾಳಿಗೆ ಒಳಗಾಗಿ ಇಲ್ಲಿರುವ ಅಮೂಲ್ಯ ಒಡವೆ ವಸ್ತುಗಳನ್ನು ದೋಚಿದ ಆಕ್ರಮಣಕಾರರು ದೇವರ ಮೂರ್ತಿ ನದಿಗೆ ಎಸೆದು ದೇವಸ್ಥಾನ ನೆಲಸಮ ಮಾಡಿದರು ಎನ್ನಲಾಗಿದೆ. ಕ್ರಮೇಣ ಇಲ್ಲಿನ ಸ್ಥಳೀಯ ಜನರ ಕಷ್ಟ ಕಾರ್ಪಣ್ಯಗಳು ಹೆಚ್ಚಾಗಿ ದೇವಸ್ಥಾನದ ಬಗ್ಗೆ ಯಾರೂ ಗಮನ ಕೊಡದ ಸ್ಥಿತಿಗೆ ತಲುಪಿ ದೇವಸ್ಥಾನವೇ ಅಳಿದು ಹೋಗಿ ಕಾಡು ಬೆಳೆಯಿತು.

ಆರಂಭದಲ್ಲಿ ಊರ ಜನರು ಸ್ಥಳದ ಬಗ್ಗೆ ಯಾವದೇ ವಿಶೇಷ ಮನ್ನಣೆ ಕೊಡದಿದ್ದರೂ, ಕಾಲಕ್ರಮೇಣ ಜನರಿಗೆ ಆ ಸ್ಥಳದಲ್ಲಿ ಒಂದು ದೈವಿ ಶಕ್ತಿ ಇರುವುದು ಅರಿವಿಗೆ ಬಂತು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ಸ್ಥಳೀಯ ಕೆಲವರು ಸೇರಿಕೊಂಡು ಇಲ್ಲಿ ಒಂದು ಭವ್ಯ ದೇವಸ್ಥಾನ ಕಟ್ಟುವ ಬಗ್ಗೆ ಚರ್ಚೆ ಚಿಗುರೊಡೆಯಿತು. ಕಾಡಂಚಿನ ಕುಗ್ರಾಮ, ಜೊತೆಗೆ ಬಡತನದ ಬೇಗೆಯಿಂದ ಬೇಯುತ್ತಿರುವ ಸ್ಥಳೀಯ ಜನರ ಆರ್ಥಿಕ ಪರಿಸ್ಥಿತಿ, ಸಂಪನ್ಮೂಲ ಕ್ರೋಢೀಕರಣ ಒಂದು ದೊಡ್ಡ ಸವಾಲು ಆಗಿದ್ದರು ಕೂಡ ಒಂದಷ್ಟು ಜನರನ್ನು ಒಗ್ಗೂಡಿಸಿ ದೇವಸ್ಥಾನ ನಿರ್ಮಿಸುವ ದೃಢ ನಿರ್ಧಾರ ಮಾಡಲಾಯಿತು.

ಸ್ಥಳೀಯ ಕೆಲವರನ್ನು ಸೇರಿಸಿ ಒಂದು ಜೀರ್ಣೋದ್ದಾರ ಸಮಿತಿ ರಚಿಸಿಕೊಂಡರು. ನಂತರ ಒಂದು ಟ್ರಸ್ಟ್ ರಿಜಿಸ್ಟರ್ ಮಾಡಿಕೊಳ್ಳಲಾಯಿತು. ನಿರಂತರ ಪ್ರಯತ್ನದ ಫಲವಾಗಿ ಜೀರ್ಣೋದ್ದಾರ ಕಾಮಗಾರಿ ಪ್ರಾರಂಭಿಸುವ ಹಂತಕ್ಕೆ ಬಂದಾಗ ಒಂದು ದೈವೀ ಚಮತ್ಕಾರ ನಡೆಯಿತು. ಅದೇನೆಂದರೆ. ದೇವಸ್ಥಾನದ ತಳಗಟ್ಟು ನಿರ್ಮಿಸಲು ಜೆಸಿಬಿಯಲ್ಲಿ ಕೆಲಸ ಮಾಡುವಾಗ ಮೊದಲೇ ಪ್ರಶ್ನಾವಳಿಯಲ್ಲಿ ದೈವಜ್ಞರೊಬ್ಬರು ತಿಳಿಸಿದಂತೆ ದೇವಿಯ ಚಿನ್ನದ ಸೊಂಟದಪಟ್ಟಿ ಮಣ್ಣಿನ ಅಡಿಯಲ್ಲಿ ಸಿಕ್ಕಿತು. ಆಗ ಜನರಿಗೆ ದೇವಸ್ಥಾನ ಇದ್ದ ಬಗ್ಗೆ ನಂಬಿಕೆ ಇನ್ನಷ್ಟು ಹೆಚ್ಚಾಯಿತು. ಇನ್ನು ಹೆಚ್ಚು ಹೆಚ್ಚು ಜನರು ಸಹಾಯ ಮಾಡಲು ಮುಂದೆ ಬಂದರು. ಕೇವಲ 6 ತಿಂಗಳಲ್ಲಿ ಭವ್ಯ ದೇವಸ್ಥಾನ ಎದ್ದು ನಿಂತಿತು. ವಿಜೃಂಭಣೆಯಿಂದ ಪ್ರತಿಷ್ಠಾಪನಾ ಕಾರ್ಯ ನೆರವೇರಿತು.

ಶ್ರೀ ಕ್ಷೇತ್ರದಲ್ಲಿ ರಾಜದುರ್ಗೆಯಾಗಿ ಶ್ರೀ ವನದುರ್ಗಪರಮೇಶ್ವರಿ ದೇವಿ ವಿರಾಜಮಾನಳಾಗಿ ಪ್ರಾರ್ಥಿಸುವ ಭಕ್ತರ ನಕಾರಾತ್ಮಕ ಶಕ್ತಿ ದೂರ ಮಾಡಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ ವಿಶೇಷ ಅನುಗ್ರಹ ಕೊಡುವ ಶಕ್ತಿಯಾಗಿ ನೆಲೆನಿಂತಿದ್ದಾಳೆ. ದೇವಸ್ಥಾನದ ನೈರುತ್ಯ ದಿಕ್ಕಿನಲ್ಲಿ ಶ್ರೀ ಲಕ್ಷ್ಮಿ ಗಣಪತಿಯು ಮೂಲ ಲಿಂಗಾಕಾರದಲ್ಲಿ ಇದ್ದು ದಶ ಭುಜ ಸಹಿತವಾಗಿ ಲಕ್ಷ್ಮಿಯನ್ನು ತೊಡೆಯ ಮೇಲೀರಿಸಿಕೊಂಡ ಸ್ವರೂಪದಲ್ಲಿ ಇದ್ದು ಭಕ್ತಾದಿಗಳ ನೆಚ್ಚಿನ ಆರಾಧ್ಯ ದೇವರಾಗಿದ್ದಾನೆ.

ದೇವಸ್ಥಾನದ ಜೀರ್ಣೋದ್ಧಾರಕ್ಕಿಂತಲೂ ಮೊದಲಿಂದ ಇಲ್ಲಿ ಚೌತಿ ಆಚರಣೆ ಇದ್ದಿದ್ದರೂ ಜೀರ್ಣೋದ್ಧಾರದ ನಂತರದಿಂದ ಇಲ್ಲಿಯವರೆಗೆ ನಿರಂತರ ವಿಜೃಂಭಣೆಯ ಗಣೇಶ ಚತುರ್ಥಿ ಆಚರಿಸಿಕೊಂಡು ಬರಲಾಗುತ್ತಿದೆ. ಚೌತಿಯ ನಂತರ ನವರಾತ್ರಿಯುನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹಾಗೂ ನಿತ್ಯಪೂಜೆ ನೆಡೆಯುತ್ತಿದ್ದು ಪ್ರತಿದಿನ ಭಕ್ತರು ಬಂದು ಅವರವರ ಇಷ್ಟಾರ್ಥ ಸಿದ್ಧಿಗಾಗಿ ರಂಗಪೂಜೆ, ಕುಂಕುಮಾರ್ಚನೆ, ಮಂಗಳಾರತಿ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿಸುತ್ತಾರೆ. ವ್ಯವಹಾರಿಕ ಉದ್ದೇಶ ಮಕ್ಕಳ ವಿದ್ಯಾಭ್ಯಾಸ ಮತ್ತು ವಿವಾಹ ಹಾಗೂ ವಿಶೇಷವಾಗಿ ಸಂತಾನ ಪ್ರಾಪ್ತಿಗಾಗಿ ಭಕ್ತರು ಈ ಕ್ಷೇತ್ರದ ದೇವರಲ್ಲಿ ಹರಕೆ ಹೇಳಿಕೊಳ್ಳುತ್ತಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!