Monday, September 9, 2024

ಪ್ರಾದೇಶಿಕತೆ ಮೀರಿ ಬೆಳೆಯುವುದಕ್ಕೆ ಸಾಧ್ಯವೇ !? | ಸಿನೆಮಾ ರಂಗದಲ್ಲಿ ಏಕಸ್ವಾಮ್ಯ ಸ್ಥಾಪನೆ ಸಾಧ್ಯವಿಲ್ಲ !

ಪ್ರಾದೇಶಿಕ ಸಿನೆಮಾಗಳು ಜನರನ್ನು ತಲುಪುತ್ತಿಲ್ಲ, ಎಲ್ಲಿಯೂ ಮಾನ್ಯತೆ ಗಿಟ್ಟಿಸಿಕೊಳ್ಳುತ್ತಿಲ್ಲ ಎನ್ನುವ ಅಭಿಪ್ರಾಯಗಳ ನಡುವೆ ಈ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಚಲನಚಿತ್ರಗಳು ಪ್ರಾಬಲ್ಯ ಸಾಧಿಸಿವೆ. 2022 ರಿಂದ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಲನಚಿತ್ರಗಳಿಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರಿಗೆ ಕನ್ನಡ ಸೂಪರ್‌ ಡಿವೈನ್‌ ಹಿಟ್ ಚಲನಚಿತ್ರ ‘ಕಾಂತಾರ’ದಲ್ಲಿನ ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೇ ʼಕಾಂತಾರʼ ನೀಡಿದ ಮನರಂಜನೆಗೆ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ.

ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮಿಳು ಚಿತ್ರ ʼತಿರುಚಿತ್ರಂಬಲಂʼನಲ್ಲಿನ ನಟನೆಗಾಗಿ ನಿತ್ಯಾ ಮೆನೆನ್ ಮತ್ತು ಗುಜರಾತಿ ಚಿತ್ರ ʼದಿ ಕಚ್ ಎಕ್ಸ್‌ಪ್ರೆಸ್‌ʼ ಚಿತ್ರದಲ್ಲಿನ ನಟನೆಗಾಗಿ ಮಾನ್ಸಿ ಪರೇಖ್ ಅವರಿಗೆ ಲಭಿಸಿದೆ. ಮಲಯಾಳಂ ಚಿತ್ರ ʼಆಟ್ಟಂʼ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹರ್ಯಾನ್ವಿ ಚಿತ್ರ ʼಫೌಜಾʼ ಚಿತ್ರದಲ್ಲಿನ ನಟನೆಗಾಗಿ ಪವನ್ ರಾಜ್ ಮಲ್ಹೋತ್ರಾ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಹಿಂದಿ ಚಿತ್ರ ʼಉಂಚೈʼ ಸಿನೆಮಾದ ನಟನೆಗಾಗಿ ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.
ಹೀಗೆ ಈ ಕೆಲವು ಪ್ರಮುಖ ಚಲನಚಿತ್ರಗಳು ಬೇರೆ ಬೇರೆ ರಾಜ್ಯಗಳ ಇತರ ಗಮನಾರ್ಹ ಪ್ರಾದೇಶಿಕತೆಯನ್ನು ಬಿಂಬಿಸಿರುವುದನ್ನು ನಾವು ಗಮನಿಸಬಹುದಾಗಿದೆ. ಕೇವಲ ಮನರಂಜನೆಯಷ್ಟೇ ಸಿನೆಮಾ ಮಾಧ್ಯಮದ ಕೆಲಸವಲ್ಲ ಎನ್ನುವುದಕ್ಕೆ ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಎತ್ತಿ ತೋರಿಸಿವೆ.

ಸಿನೆಮಾಗಳಲ್ಲಿ ಪ್ರಾದೇಶಿಕತೆಯನ್ನು ವ್ಯವಸ್ಥಿತವಾಗಿ ಮೂಲೆಗೆ ಸರಿಸುತ್ತಾ ಬರಲಾಯಿತು.ಆದಾಗ್ಯೂ ಪ್ರಾದೇಶಿಕತೆಯನ್ನು ತುಂಬಿಕೊಂಡಿರುವ ಪ್ರಾದೇಶಿಕ ಸಿನೆಮಾಗಳು ನಿನೆಮಾ ವಿಮರ್ಶಕರಲ್ಲಿ ತುಸು ಸಮಾಧಾನ ಇರಿಸಿದ್ದವು.

ಎಲ್ಲಾ ಕ್ಷೇತ್ರಗಳಲ್ಲಿ ಸ್ವಂತಿಕೆ ಕಳೆದು ಏಕಸ್ವಾಮ್ಯ ಸ್ಥಾಪನೆಯಾಗುತ್ತಾ ಬರುತ್ತಿದೆಯೋ ಏನೋ, ಆ ಪಟ್ಟಿಯಲ್ಲಿ ಸಿನೆಮಾ ಕ್ಷೇತ್ರ ಹೊರತಾಗಿಲ್ಲ ಎನ್ನುವುದು ಉಲ್ಲೇಖಾರ್ಹ.

ಅಮೇಜಾನ್ ಪ್ರೈಮ್, ನೆಟ್-ಫ್ಲಿಕ್ಸ್, ಹಾಟ್ ಸ್ಟಾರ್ ಅಂತಹ ಅನೇಕ ವಿದೇಶಿ ಹೂಡಿಕೆಯ ಓ.ಟಿ.ಟಿ ವೇದಿಕೆಗಳಲ್ಲಿ ನೇರವಾಗಿ ಬಿಡುಗಡೆ ಹೊಂದಿರುವ ಭಾರತೀಯ ಸಿನೆಮಾಗಳಲ್ಲಿ ಬಹುತೇಕ ಕಾಣಿಸುವುದು ಬಾಲಿವುಡ್ ಸ್ಟಾರ್ ನಟರ ಅಥವಾ ಬ್ರ್ಯಾಂಡ್ ಪ್ರೊಡಕ್ಷನ್ ಹೌಸ್ ಸಿನೆಮಾಗಳು ಮಾತ್ರ. ಅವೆರಡೂ ಅಲ್ಲದೇ ತೆರೆ ಕಾಣುವುದಕ್ಕೆ ಪ್ರಯತ್ನಿಸುವ ಸಿನೆಮಾಗಳು ಓ.ಟಿ.ಟಿ ವೇದಿಕೆಗಲ್ಲಿ ಕಾಣಿಸಿಕೊಂಡಿದ್ದರೇ ಅವು ಥಿಯೇಟರ್ ಗಳಲ್ಲಿ ತೆರೆಕಂಡು ಹೆಸರು ಮಾಡಿದ್ದು ಬಿಟ್ಟರೇ ಮತ್ತೇನಿಲ್ಲ.
ನೇರವಾಗಿ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಬಹುತೇಕ ಸಿನೆಮಾಗಳು ಪೇಕ್ಷಕರ ಮನಸ್ಸಿನಲ್ಲಿ ಅಚ್ಚು ಮೂಡಿಸಿಲ್ಲ ಎನ್ನುವುದು ಅಕ್ಷರಶಃ ಸತ್ಯ. ನೆಟ್-ಫ್ಲಿಕ್ಸ್ ನಂತಹ ದೈತ್ಯ ಕಂಪೆನಿ ನಿರ್ಮಿಸಿದ ಬಹುತೇಕ ಒರಿಜಿನಲ್ ಸಿನೆಮಾಗಳೂ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ವಿಫಲವಾಗಿವೆ ಎನ್ನುವುದು ಕೂಡ ಅಷ್ಟೇ ಸತ್ಯ. ಇವೆಲ್ಲಾ ಸಿನೆಮಾ ಗುಣಮಟ್ಟಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಇವು ಈ ಓಟಿಟಿ ವೇದಿಕೆಗಳ ನ್ಯೂನ್ಯತೆಗಳು. ಎಷ್ಟು ನ್ಯೂನ್ಯತೆಗಳಿವೆಯೋ ಅಷ್ಟೇ ಸಾಧ್ಯತೆಗಳೂ ಈ ಓಟಿಟಿ ವೇದಿಕೆಗಳಲ್ಲಿವೆ.

ಇತ್ತೀಚಿನ ವರ್ಷಗಳಲ್ಲಿ, ಪ್ರಾದೇಶಿಕ ಚಲನಚಿತ್ರಗಳ ಯಶಸ್ಸು, ವಿಷಯ ಮತ್ತು ಗಲ್ಲಾಪೆಟ್ಟಿಗೆಯಲ್ಲಿನ ಪ್ರದರ್ಶನ, ಪ್ರಾದೇಶಿಕ ಸಿನೆಮಾಗಳು ಮುಂಪಂಕ್ತಿಗೆ ಬರುತ್ತಿವೆ, ಮಾತ್ರವಲ್ಲದೆ ಬಾಲಿವುಡ್‌ಗೆ ಸವಾಲಾಗಿ ಪರಿಣಮಿಸುತ್ತಿವೆ ಎನ್ನುವುದನ್ನು ತೋರಿಸಿವೆ. ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಾದೇಶಿಕ ಚಲನಚಿತ್ರಗಳಿಗೆ ಭಾಷೆ ಇನ್ನು ಮುಂದೆ ತಡೆಗೋಡೆಯಾಗಿರಲ್ಲ ಎನ್ನುವುದಕ್ಕೆ ಇತ್ತೀಚೆಗೆ ತೆರೆಕಂಡ ಕೆಲವು ಪ್ರಾದೇಶಿಕ ಸಿನೆಮಾಗಳೇ ಸಾಕ್ಷಿ. ಇಲ್ಲಿ ಪ್ರಾದೇಶಿಕತೆ ಅಂದರೇ ಬಾಲಿವುಡ್‌ ಹೊರತಾಗಿ ಇರುವ ಉಳಿದ ಭಾರತೀಯ ಚಿತ್ರರಂಗಗಳು ಅಷ್ಟೇ ಅಲ್ಲ. ಪ್ರಾದೇಶಿಕತೆಯನ್ನು ಅಕ್ಷರಶಃ ತುಂಬಿಕೊಂಡಿರುವ ಸಿನೆಮಾಗಳೂ ಹೌದು.

2022 ರಲ್ಲಿ, ಕನ್ನಡ ಚಲನಚಿತ್ರಗಳಾದ ಕಾಂತಾರ ಮತ್ತು ಚಾರ್ಲಿ 777 ಮಲ್ಟಿಪ್ಲೆಕ್ಸ್‌ಗಳಿಗೆ ಹೆಚ್ಚಿನ ಜನರನ್ನು ಆಕರ್ಷಿಸಿತು. ವರದಿಯ ಪ್ರಕಾರ, ಭಾರತದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಪ್ರಾದೇಶಿಕ ಚಲನಚಿತ್ರಗಳ ಬಾಕ್ಸ್ ಆಫೀಸ್ ಸಂಗ್ರಹಗಳ ಪಾಲು ಜೂನ್ 2023 ತ್ರೈಮಾಸಿಕದಲ್ಲಿ ಶೇ. 40.3 ರಿಂದ ಜೂನ್ 2024 ತ್ರೈಮಾಸಿಕದಲ್ಲಿ ಶೇ. 56.8ಕ್ಕೆ ಏರಿದೆ. ವ್ಯತಿರಿಕ್ತವಾಗಿ, ಅದೇ ಅವಧಿಯಲ್ಲಿ ಹಿಂದಿ ಚಲನಚಿತ್ರಗಳ ಪಾಲು ಶೇ. 41.3 ರಿಂದ ಶೇ. 35.1ಕ್ಕೆ ಕುಸಿದಿವೆ ಎನ್ನುವುದು ಗಮನಾರ್ಹ.

ಇನ್ನು, ಓಟಿಟಿ ಪ್ಲಾಟ್‌ಫಾರ್ಮ್‌ಗಳು, ಸ್ಮಾರ್ಟ್‌ಫೋನ್‌ ಗಳು ಮತ್ತು ಕೈಗೆಟುಕುವ 4ಜಿ, 5ಜಿ ಇಂಟರ್ನೆಟ್‌ಗಳ ಹೆಚ್ಚಳದೊಂದಿಗೆ, ಸಿನೆಮಾ ವೀಕ್ಷಕರು ಈಗ ಎಲ್ಲಾ ಭಾಷೆಗಳ ಸಿನೆಮಾಗಳ ನೋಡುಗರಾಗುತ್ತಿದ್ದಾರೆ. ದಕ್ಷಿಣ ಭಾರತದ ಸಿನೆಮಾಗಳು, ನಿರ್ದಿಷ್ಟವಾಗಿ, ಮೇಕಿಂಗ್ ಅಥವಾ ಕಂಟೆಂಟ್ ಗಳ ಮೂಲಕ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಪ್ರಾದೇಶಿಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಉತ್ತಮ ಗುಣಮಟ್ಟಗಳಲ್ಲಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ.

ಬಾಹುಬಲಿ 1 ಮತ್ತು 2, ಕೆಜಿಎಫ್ 1 ಮತ್ತು 2, ಸಾಹೋ, ಪುಷ್ಪ, ಮತ್ತು ಆರ್‌ಆರ್‌ಆರ್‌ ನಂತಹ ದಕ್ಷಿಣ ಭಾರತ ಮೂಲದ ಚಲನಚಿತ್ರಗಳು ತಮ್ಮ ಉತ್ತಮ ಗುಣಮಟ್ಟದ ಮೇಕಿಂಗ್ ಮತ್ತು ಕಂಟೆಂಟ್‌ ನಿಂದಾಗಿ ಭಾರತದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿವೆ. ಧನುಷ್ ಅವರ ಹಾಡು “ವೈ ದಿಸ್ ಕೊಲವೆರಿ ಡಿ” ಮತ್ತು ಆದಿತ್ಯ ಗಾಧ್ವಿ ಹಾಡಿರುವ “ಖಲಾಸಿ” ಗುಜರಾತಿ ಹಾಡು ಭಾರತದಾದ್ಯಂತ ವೈರಲ್ ಆಗಿತ್ತು.
ಪ್ರಾದೇಶಿಕ ತಾರೆಗಳಾದ ಯಶ್ (ಕೆಜಿಎಫ್, ಕನ್ನಡ), ಪ್ರಭಾಸ್ (ಬಾಹುಬಲಿ, ತೆಲುಗು), ಅಲ್ಲು ಅರ್ಜುನ್ (ಪುಷ್ಪಾ, ತೆಲುಗು), ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ (ಆರ್‌ಆರ್‌ಆರ್) ಅವರವರ ರಾಜ್ಯಗಳನ್ನು ಮೀರಿ ದೊಡ್ಡ ಅಭಿಮಾನಿಗಳನ್ನು ವೃದ್ಧಿಸಿಕೊಂಡರು. ಪ್ರಾದೇಶಿಕ ಚಲನಚಿತ್ರಗಳು, ನಟರು ಮತ್ತು ನಟಿಯರು ಖ್ಯಾತಿ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿದರು. ದಕ್ಷಿಣ ಭಾರತ ಮೂಲದ ಸಿನೆಮಾ ರಂಗಗಳು ನೀಡುತ್ತಿರುವ ಕಂಟೆಂಟ್ ಗಳು ಚಲನಚಿತ್ರ ಉದ್ಯಮಗಳಲ್ಲಿ ಭರವಸೆ ಮೂಡಿಸುವಷ್ಟರ ಮಟ್ಟಿಗೆ ಬೆಳೆದಿವೆ‌. ಮೇಕಿಂಕ್ ಲೆವೆಲ್ ಹಾಗೂ ಕಂಟೆಂಟ್ ಗಳ ಗುಣಮಟ್ಟದ ಕಾರಣದಿಂದ ನಿಧಾನವಾಗಿ ಬೇರೆ ಬೇರೆ ಭಾಷೆಗಳ ಸಿನೆಮಾಗಳನ್ನು ಜನ ಒಪ್ಪಿಕೊಳ್ಳತೊಡಗಿದ್ದಾರೆ. ಇದು ನಿಜವಾಗಿಯೂ ಒಳ್ಳೆಯ ಪ್ರವೃತ್ತಿ.

ಬಹಳಷ್ಟು ಮಂದಿ ಮಲಯಾಳಂ ಚಲನಚಿತ್ರಗಳ ಬಗ್ಗೆ ನಿರ್ದಿಷ್ಟವಾಗಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡ ಕೆಜಿಎಫ್ 1 ಮತ್ತು 2, ಕಾಂತಾರ, ಚಾರ್ಲಿ 777, ಹಾಗೂ ಇನ್ನಿತರ ಲೋ ಬಡ್ಜೆಟ್ ಸಿನೆಮಾಗಳು, ಉದಾಹರಣೆಗೆ ಡೇರ್ ಡೆವಿಲ್ ಮುಸ್ತಫಾ, ಆಚಾರ್ ಅಂಡ್ ಕೋ, ಕೋಟಿ, ಒಂದು ಸರಳ ಪ್ರೇಮಕಥೆ, ಸ್ವಾತಿ ಮುತ್ತಿನ ಮಳೆ ಹನಿಯೇ, ಗುರುದೇವ್ ಹೊಯ್ಸಳ, ಗಂಧದ ಗುಡಿ(ಪುನಿತ್ ರಾಜ್ ಕುಮಾರ್), ಡೊಳ್ಳು, ಬಡವ ರಾಸ್ಕಲ್, ರತ್ನನ್ ಪ್ರಪಂಚ, ಆಕ್ಟ್ 1978, 19.20.21 ನಂತಹ ಸಿನೆಮಾಗಳು ಚಂದನವನದಲ್ಲಿ ಮೂಡಿದ ಉತ್ತಮ ಕಥೆಗಳು ಪರಿಣಾಮಕಾರಿಯಾಗಿವೆ ಎನ್ನುವುದು ಸಮಾಧಾನಕರ.

ದಕ್ಷಿಣ ಭಾರತದ ಆರ್ ಆರ್ ಆರ್ ಜಾಗತಿಕ ಮೆಚ್ಚುಗೆಯನ್ನು ಪಡೆಯಿತು ಮತ್ತು ಆ ಚಿತ್ರದ ಹಾಡು “ನಾಟು ನಾಟು” ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹೀಗೆ ಪ್ರಾದೇಶಿಕತೆ ಮುಂಪಕ್ತಿಗೆ ಬರುತ್ತಿರುವುದು ಪ್ರಗತಿಯ ಸಂಕೇತ.

ವಿಕಸನಗೊಳ್ಳುತ್ತಿರುವ ಪ್ರೇಕ್ಷಕರ ಆದ್ಯತೆಗಳು, ತಂತ್ರಜ್ಞಾನದ ಪ್ರಗತಿಗಳು ಮತ್ತು ಹೊಸ ಹೊಸ ಮನರಂಜನಾ ವೇದಿಕೆಗಳೊಂದಿಗೆ, ಜನರು ಈಗ ಹಿಂದೆಂದಿಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಹೊಂದಿದ್ದಾರೆ. ಕನ್ನಡ ಸಿನೆಮಾ ರಂಗದಲ್ಲಿ ಕಂಟೆಂಟ್ ಆಧಾರಿತ ಸಿನೆಮಾಗಳು ಬರುತ್ತಿದ್ದು, ಥಿಯೇಟರ್, ಮಲ್ಟಿ ಫ್ಲೆಕ್ಸ್ ಗಳಲ್ಲಿ ಜನಮನ್ನಣೆ ಪಡೆಯುತ್ತಿವೆ. ಕಾಂತಾರದಂತಹ ಸಿನೆಮಾ ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಪ್ರಾದೇಶಿಕತೆಯನ್ನು ಮೀರಿ ಬೆಳೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದಕ್ಕೆ ಸೂಚ್ಯ ಉತ್ತರವಲ್ಲದೆ ಮತ್ತೇನು ?

-ಶ್ರೀರಾಜ್ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!