Wednesday, September 11, 2024

ರಾಷ್ಟ್ರೀಯ ಕ್ರೀಡಾ ದಿನ: ಇದು ಚಿಂತನೆಯ ಹೊತ್ತು ಕ್ರೀಡಾ ಜ್ಯೋತಿ ಬೆಳಗಲಿ

  • ಎಸ್. ಜಗದೀಶಚಂದ್ರ ಅಂಚನ್‌, ಸೂಟರ್‌ಪೇಟೆ 

ವಿಶ್ವ ಕಂಡ ಅಪರೂಪದ ‘ಹಾಕಿ ಮಾಂತ್ರಿಕ’ ಮೇಜರ್ ಧ್ಯಾನ್‌ಚಂದ್ ಭಾರತೀಯ ಕ್ರೀಡಾರಂಗದ ಅನರ್ಘ್ಯ ರತ್ನ. ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲೂ ಭಾರತದ ಕ್ರೀಡಾರಂಗವನ್ನು ಎತ್ತರಕ್ಕೇರಿಸಿದ ಅದ್ಭುತ ಹಾಕಿ ಆಟಗಾರ ಧ್ಯಾನ್‌ಚಂದ್. ಭಾರತದ ಕ್ರೀಡಾ ಭೂಪಟದಲ್ಲಿ ಈ ಮಹಾನ್ ಹಾಕಿ ಆಟಗಾರನಿಗೆ ಸರಿಸಾಟಿಯಾದ ಆಟಗಾರ ಮತ್ತೊಬ್ಬರಿಲ್ಲ. ಇಂತಹ ಮಹಾನ್ ಕ್ರೀಡಾಪಟುವನ್ನು ಸ್ಮರಿಸುವ ಉದ್ದೇಶದಿಂದ ಭಾರತ ಸರಕಾರ ಧ್ಯಾನ್‌ಚಂದ್‌ರ ಜನ್ಮದಿನವಾದ ಆಗಸ್ಟ್ ೨೯ನ್ನು “ಭಾರತದ ರಾಷ್ಟೀಯ ಕ್ರೀಡಾದಿನ” ವನ್ನಾಗಿ ಆಚರಿಸುತ್ತಿದೆ.

ಭಾರತೀಯ ಹಾಕಿಯನ್ನು ಯಶಸ್ಸಿನ ಶಿಖರಾಗ್ರಕ್ಕೊಯ್ದ ಧ್ಯಾನ್‌ಚಂದ್‌ಗೆ ಇಂದು ಭಾರತೀಯರೆಲ್ಲರೂ ನಮನವನ್ನು ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ‍್ಯಪೂರ್ವದಲ್ಲಿ ೧೯೨೮ರಿಂದ ಒಲಿಂಪಿಕ್ಸ್ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದ ಮಹಾನ್ ಆಟಗಾರ ಇವರು. ಮೂರು ದಶಕಗಳ ಕಾಲ ಭಾರತದ ಹಾಕಿ ಆಟಗಾರರ “ಅನಭಿಷಿಕ್ತ ದೊರೆ” ಎಂದೇ ಗುರುತಿಸಲ್ಪಟ್ಟ ಧ್ಯಾನ್‌ಚಂದ್‌ರನ್ನು ಆಗಸ್ಟ್ ೨೯ರಂದು ಸ್ಮರಿಸುವುದರ ಜೊತೆಗೆ ಕ್ರೀಡಾರಂಗದ ಬಗ್ಗೆ ಅವಲೋಕನ ಮಾಡುವ ದಿನ ಇದಾಗಿದೆ.

ಹೊಸ ಉತ್ಸಾಹದೊಂದಿಗೆ ಪುಟಿದೆದ್ದು ಗತಕಾಲವನ್ನು ಮರೆತು, ಹೊಸ ಮುನ್ನುಡಿಯನ್ನು ಬರೆಯಲು ಸಜ್ಜುಗೊಂಡಿರುವ ಭಾರತದ ಕ್ರೀಡಾಕ್ಷೇತ್ರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸ್ವಾತಂತ್ರದ ನಂತರ ಭಾರತದ ಕ್ರೀಡಾರಂಗದಲ್ಲಿ ಅಂತಾರಾಷ್ಟ್ರೀಯ ಸಾಧನೆಗಳು ಆಗೊಮ್ಮೆ ಈಗೊಮ್ಮೆ ದಾಖಲಿಸಿಕೊಂಡಿದ್ದರೂ ಗಮನಾರ್ಹ ಸಾಧನೆ ಕೈಗೆ ಎಟಕಲಿಲ್ಲ. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದ ಕ್ರೀಡಾಕ್ಷೇತ್ರ ಸಮೃದ್ದಿಯತ್ತ ಸಾಗಿದೆ. ಪ್ರವಾಹದ ಬಿರುಸಿಲ್ಲದ ಕ್ರೀಡಾನದಿಯಂತೆ ಭಾರತದ ಕ್ರೀಡಾಕ್ಷೇತ್ರ ನಿಧಾನವಾಗಿ ಹರಿಯಲಾರಂಭಿಸಿದೆ.

ಪ್ರತಿಭೆಗಳು ಸಾಕಷ್ಟಿದ್ದರೂ ಸೌಲಭ್ಯಗಳ ಕೊರತೆ ಭಾರತದ ಕ್ರೀಡಾಪಟುಗಳ ಬೆಳವಣಿಗೆಗೆ ಅಡ್ಡಗಾಲು ಎನ್ನದೆ ಬೇರೆ ವಿಧಿಯಿಲ್ಲ. ಈ ಬಗ್ಗೆ ಕೇವಲ ಮಾತನಾಡಿದರೆ ಪ್ರಯೋಜನವಿಲ್ಲ. ಅದಕ್ಕೆ ತಕ್ಕ ಕಾರ್ಯವೂ ನಡೆಯಬೇಕು. ಬರೀ ಟೀಕಿಸುವುದನ್ನು ಮಾತ್ರ ಮಾಡದೆ ಎಲ್ಲರೂ ಕೈಗೂಡಿ ಕೆಲಸ ಮಾಡಿದಾಗ ಮಾತ್ರ ನಮ್ಮ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಗೆಲುವಿನೊಂದಿಗೆ ಮೆರೆಯಲು ಸಾಧ್ಯ. ಕ್ರಿಕೆಟ್ ಆಟಕ್ಕೆ ಒಂದೆಡೆ ಇಡೀ ಕ್ರೀಡಾ ಸಮೂಹವೇ ಕಡಲ ಕೊರೆತದೋಪಾದಿಯಲ್ಲಿ ನುಗ್ಗುವ ವೇಳೆ ಇತರ ಕ್ರೀಡೆಗಳತ್ತ ಗಮನಹರಿಸುವವರೇ ಇಲ್ಲ.
“ಕ್ರೀಡೆಯೇ ಉಸಿರು, ಇದರ ಏಳಿಗೆಗಾಗಿ ಪ್ರಯತ್ನ ಮಾಡುವುದೇ ಗುರಿ” ಎನ್ನುವ ಮನೋಭಾವ ನಮ್ಮ ಯುವ ಜನತೆಯಲ್ಲಿ ಬೆಳೆಯಬೇಕು. ಇದರ ಪಾಲನೆಗಾಗಿ ಅನೇಕ ಮಹಾತ್ವಾಕಾಂಕ್ಷೆಯ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಾಕಾರಗೊಳ್ಳಬೇಕಾಗಿದೆ. ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಲಭ್ಯವಿರುವ ಸೌಲಭ್ಯಗಳು ಭಾರತದಲ್ಲಿ ಬಹಳ ಕಡಿಮೆ. ಪಾಶ್ಚಿಮಾತ್ಯ ರಾಷ್ಟçಗಳಲ್ಲಿ ಕ್ರೀಡಾಪಟುಗಳಿಗೆ ವ್ಯವಸ್ಥಿತವಾದ ತರಬೇತಿಗಳು ಆಧುನಿಕ ಕ್ರಮದಲ್ಲಿ ನಡೆಯುತ್ತಿರುವುದರಿಂದಲೇ ಜಾಗತಿಕ ಕ್ರೀಡಾಸ್ಪರ್ಧೆಗಳಲ್ಲಿ ಪಾಶ್ಚಾತ್ಯ ರಾಷ್ಟ್ರಗಳದ್ದೇ ಪ್ರಾಬಲ್ಯ.

ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತ ಕ್ರೀಡೆಯಲ್ಲಿ ಇನ್ನೂ ಮುಂದುವರಿದಿಲ್ಲ. ಇದಕ್ಕೆ ಕಾರಣಗಳು ಹಲವು. ಪಾಶ್ಚಾತ್ಯ ದೇಶಗಳಲ್ಲಿ ಮೊದಲು ಕ್ರೀಡೆ ನಂತರ ಶಿಕ್ಷಣ ಎಂಬ ಸಿದ್ಧಾಂತವಿದೆ. ನಮ್ಮಲ್ಲಿ ಕ್ರೀಡೆಗಳಿಗೆ ಮಹತ್ವ ಕಡಿಮೆ. ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತದ ವಿವಿಧ ಕಡೆಗಳಲ್ಲಿ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ತರಬೇತಿಗೆ ಬೇಕಿರುವ ಆಧುನಿಕ ಸಾಧನಗಳು ಸಿಗುವಂತಾಗಬೇಕು. ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವವನ್ನು ನೀಡಬೇಕು. ಕೆಲವರು ಕ್ರೀಡಾ ಕೋಟಾದಲ್ಲಿ ಸೀಟು ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಕ್ರೀಡೆಗೆ ಒಂದಿಷ್ಟು ಮಹತ್ವ ನೀಡುತ್ತಾರೆ. ಆದರೆ ಅವರ ಉದ್ದೇಶ ಶಿಕ್ಷಣವೇ ಆಗಿರುತ್ತದೆ.

ಕ್ರೀಡೆ ಎನ್ನುವುದು ಒಂದು ತಪಸ್ಸು. ಅದರ ಸಿದ್ಧಿಯನ್ನು ಪಡೆಯಬೇಕಾದರೆ ಏಕಾಗ್ರತೆ, ಸಂಯಮಶೀಲ ಸಾಹಸ ಪ್ರವೃತ್ತಿಗಳು ಅತ್ಯವಶ್ಯಕ. ಆದರೆ, ಇಂದಿನ ನಮ್ಮ ಯುವ ಜನಾಂಗದಲ್ಲಿ ಇವುಗಳಾವುದನ್ನು ದಟ್ಟವಾಗಿ ಕಾಣಲು ಸಾಧ್ಯವಾಗುತ್ತಿಲ್ಲ. ಅಪಾರವಾದ ಪ್ರತಿಭೆಗಳನ್ನು ಹೊಂದಿದ್ದರೂ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷಿತ ಯಶಸ್ಸು ಭಾರತಕ್ಕೆ ಇನ್ನೂ ದಕ್ಕಿಲ್ಲ.

ಭಾರತದ ರಾಷ್ಟ್ರೀಯ ಕ್ರೀಡೆ ಎನಿಸಿದ ಹಾಕಿ ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ತೃಪ್ತಿದಾಯಕ ಪ್ರದರ್ಶನವನ್ನು ನೀಡುತ್ತಾ ಸಾಗುತ್ತಿದೆ. ೧೯೨೮ರಲ್ಲಿ ಆರಂಭಗೊಂಡು ೧೯೫೬ರವರೆಗೆ ಭಾರತ ನಿರಂತರವಾಗಿ ಆರು ಬಾರಿ ಒಲಿಂಪಿಕ್ಸ್ ಚಿನ್ನದ ಪದಕವನ್ನು ಬಾಚಿಕೊಂಡಿದ್ದೇ ದೊಡ್ಡ ಸಾಧನೆ. ಆಗ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ರಂತಹ ಅಪ್ರತಿಮ ಕ್ರೀಡಾಪಟುಗಳು ಮುಂಚೂಣಿಯಲ್ಲಿದ್ದರು. ೧೯೮೦ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತ ಕೊನೆಯದಾಗಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ ನಂತರ ಇಂದಿನವರೆಗೆ ಒಲಿಂಪಿಕ್ಸ್ನಲ್ಲಿ ಭಾರತದಿಂದ ಚಿನ್ನದ ಸಾಧನೆ ಕೇವಲ ಕನಸ್ಸಾಗಿತ್ತು.

ಆದರೆ, ಈಚೆಗೆ ಎರಡು ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದು ಕಂಚಿನ ಪದಕ ಗೆದ್ದು, ಮತ್ತೊಮ್ಮೆ ‘ಹಾಕಿ ಲೆಜೆಂಡ್‘ ಧ್ಯಾನ್‌ಚಂದ್ ಅವರನ್ನು ಒಲಿಂಪಿಕ್ಸ್ ಅಂಗಳದಲ್ಲಿ ನೆನೆಪಿಸುವಂತೆ ಮಾಡಿದೆ. ಹಾಕಿ ಸಾಧನೆಯ ಹೊರತಾಗಿಯೂ ೨೦೨೦ರ ಟೋಕಿಯೋ ಹಾಗೂ ೨೦೨೪ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಭರವಸೆಯ ಹೊಂಗಿರಣವನ್ನು ಮೂಡಿಸಿ, ಕ್ರೀಡಾರಂಗದಲ್ಲಿ ನವಚೈತನ್ಯ ತಂದಿದ್ದಾರೆ. ೭ ಪದಕಗಳ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಹಿಂದೆಂದೂ ತಲುಪದ ಹಂತವನ್ನು ಮೊದಲ ಬಾರಿ ಭಾರತ ೨೦೨೦ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ತಲುಪಿ ಹೊಸ ಮೈಲಿಗಲ್ಲನ್ನು ನೆಟ್ಟಿತ್ತು. ಅದಾದ ಬಳಿಕ ೨೦೨೪ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ೬ ಪದಕಗಳು ಭಾರತದ ಕ್ರೀಡಾಪಟುಗಳಿಗೆ ಲಭಿಸಿದೆ. ಭಾರತೀಯ ಕ್ರೀಡಾಪಟುಗಳ ಈ ಸಾಧನೆ ಭವಿಷ್ಯದ ಒಲಿಂಪಿಕ್ಸ್ಗೆ ಪ್ರೇರಣೆಯಾಗಿದೆ.

ಅಂತೂ ಒಟ್ಟಾರೆಯಾಗಿ ಹೇಳುವುದಾದರೆ, ಜಾಗತಿಕ ಮಟ್ಟದ ಕ್ರೀಡೆಯಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆ ಆಶಾದಾಯಕವಾಗಿದೆ. ಹಾಕಿ, ಟೆನಿಸ್, ಬ್ಯಾಂಡ್ಮಿಟನ್, ಟೆಬಲ್ ಟೆನ್ನಿಸ್, ಆರ್ಚರಿ, ಶೂಟಿಂಗ್, ಚೆಸ್, ಸ್ನೂಕರ್, ಅತ್ಲೆಟಿಕ್ಸ್, ಚೆಸ್, ಬಾಕ್ಸಿಂಗ್, ಮೊದಲಾದ ಕ್ರೀಡೆಗಳಲ್ಲಿ ಗೆಲುವು ಸಾಧಿಸಬಲ್ಲ ಪ್ರತಿಭಾನ್ವಿತ ಆಟಗಾರರು ನಮ್ಮಲ್ಲಿದ್ದಾರೆ. ಇವರು ಇನ್ನಷ್ಟೂ ವಿಶ್ವಾಸನೀಯ ಪ್ರಯತ್ನಗಳನ್ನು ನಡೆಸಬೇಕಾಗಿದೆ. ಜೊತೆಗೆ ಸರಕಾರದ ನೆರವು ಮತ್ತು ಕ್ರೀಡೆಗೆ ಸಂಬಂಧಿಸಿದ ಜನರ ಒಲವು ಎರಡರಲ್ಲೂ ಬದಲಾವಣೆಯಾಗಬೇಕಾಗಿದೆ. ಆಗ ಮಾತ್ರ ಭಾರತದ ಕ್ರೀಡಾಜ್ಯೋತಿ ಪ್ರಜ್ವಲಮಾನವಾಗಿ ಬೆಳಗಬಹುದು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!