Wednesday, September 11, 2024

ಅಮೇರಿಕಾದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ’ಟ್ರಿಪಲ್ ತಲಾಖ್’ ಸಿನಿಮಾದ ಪ್ರದರ್ಶನ

ಕುಂದಾಪುರ: ಇದೇ ಆಗಸ್ಟ್ 30, 31ಮತ್ತು ಸೆಪ್ಟೆಂಬರ್ 1ರಂದು ಅಮೇರಿಕಾದ ವಾಷಿಂಗ್ಟನ್ ಡಿಸಿಯ ರಿಚ್‌ಮಂಡ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 12ನೇ ’ಅಕ್ಕ’ ವಿಶ್ವ ಕನ್ನಡ ಸಮ್ಮೇಳನದಲ್ಲಿ (ಅಮೇರಿಕ ಕನ್ನಡ ಕೂಟಗಳ ಆಗರ) ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಸೂಕ್ಷ್ಮ ಸಂವೇದನೆಯ ಸಿನಿಮಾ ’ಟ್ರಿಪಲ್ ತಲಾಖ್’ ಪ್ರದರ್ಶನ ಮತ್ತು ಸಂವಾದ ನಡೆಯಲಿದೆ.

೨೦೧೮ ರಲ್ಲಿ ಅಮೇರಿಕಾದ ಡಲ್ಲಾಸ್ ನಡೆದ ಸಮ್ಮೇಳನದಲ್ಲಿ ಕೂಡ ಇವರ ನಿರ್ಮಾಣದ ರಾಷ್ಟ್ರ ಪ್ರಶಸ್ತಿ ಪಡೆದ ’ರಿಸರ್ವೇಶನ್’ ಸಿನಿಮಾದ ಪ್ರದರ್ಶನ ನಡೆದಿದ್ದು ೨೦೧೬ರಲ್ಲಿ ನ್ಯೂಯಾರ್ಕ್ ನ್ಯೂಜೆರ್ಸಿಯಲ್ಲಿ, ೨೦೧೪ ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ಸಮ್ಮೇಳನದ ಬಹುಭಾಷ ಕವಿಗೋಷ್ಟಿಯ ಭಾಗವಹಿಸುವ ಮೂಲಕ ಸತತ ನಾಲ್ಕು ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.

೨೦೦೬ ರಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಯಾಕೂಬ್ ಖಾದರ್ ಗುಲ್ವಾಡಿ ಕನ್ನಡದ ಖ್ಯಾತ ನಿರ್ದೇಶಕರಾದ ಡಾ. ಗಿರೀಶ ಕಾಸರವಳ್ಳಿಯವರ ’ಗುಲಾಬಿ ಟಾಕೀಸ್’ ನಿರ್ದೇಶಕ ನಿಖಿಲ್ ಮಂಜು ಲಿಂಗೇಗೌಡ ಅವರ ’ಹಜ್ ಮತ್ತು ಗೆರೆಗಳು’ ಡಾ. ನಾಗತಿಹಳ್ಳಿ ಚಂದ್ರಶೇಖರ ಅವರ ’ಇಷ್ಟಕಾಮ್ಯ’ ಮತ್ತು ’ಇಂಡಿಯ ವರ್ಸಸ್ ಇಂಗ್ಲೆಂಡ್’ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ, ಕಲಾ ನಿರ್ದೇಶನ, ನಟನೆಯ ಮೂಲಕ ಕೆಲಸ ಮಾಡಿದ್ದರು. ೨೦೧೬ ರಲ್ಲಿ ತನ್ನದೆ ’ಗುಲ್ವಾಡಿ ಟಾಕೀಸ್’ ಸಂಸ್ಥೆಯ ಮೂಲಕ ಮೊದಲ ಬಾರಿಗೆ ಕುಂದಾಪ್ರ ಕನ್ನಡದಲ್ಲಿ ’ರಿಸರ್ವೇಶನ’ ಎಂಬ ಸಿನಿಮಾ ಮಾಡಿ ಅದಕ್ಕೆ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಪಡೆದಿದ್ದರು.

ಯಾಕೂಬ್ ಗುಲ್ವಾಡಿ ಕಳೆದ ಹದಿನೈದು ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದು ರಾಜ್ಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದ ಇವರಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲದೆ ಅಂಡಮಾನ್ ನಲ್ಲಿ ನಡೆದ ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಕೇಂದ್ರ ಸರ್ಕಾರದ ಗೌರವ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಗೌರವ, ಸೌದಿ ಅರೇಬಿಯ ಮತ್ತು ದುಬೈ ಕನ್ನಡ ಸಂಘದ ಗೌರವ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಂದಿದೆ. ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ.

ಸಚಿವ ಝಮೀರ್ ಅಹ್ಮದ್ ಕಾರಣ:
ನನ್ನ ಸಾಧನೆಯ ಹಿಂದೆ ಹಲವು ಗೆಳೆಯರ ಸಹಕಾರವಿದೆ. ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ನನ್ನ ಸಿನಿಮಾ ಪ್ರದರ್ಶನಕ್ಕೆ ಸಮಿತಿ ಅವಕಾಶ ಮಾಡಿಕೊಟ್ಟರೂ ಕೂಡ ಹಣಕಾಸಿನ ಕಾರಣದಿಂದ ನಾನು ಭಾಗವಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರಾದ ಜಿ.ಎ.ಬಾವ, ಕರ್ನಾಟಕ ವಕ್ಫ್ ಮಂಡಳಿಯ ಸದಸ್ಯರಾದ ಯಾಕೂಬ್ ಯೂಸುಫ್, ಮಾಜಿ ಅಧ್ಯಕ್ಷರಾದ ಮೌಲಾನ ಶಾಫಿ ಸಹದಿ ಉಸ್ತಾದ್ ಅವರು ಕರ್ನಾಟಕ ಸರ್ಕಾರದ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಜನಾಬ್ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಮಾಡಿದ ಕಾರಣ ನನ್ನ ಅಮೇರಿಕ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಸ್ವತಃ ಭರಿಸಿದರು. ಸಾಮಾನ್ಯ ಕಲಾವಿದನಾದ ನನ್ನ ಸಹಾಯಕ್ಕೆ ಬಂದ ಸಚಿವರಿಗೆ ವಂದನೆಗಳನ್ನು ಸಲ್ಲಿಸುವುದಾಗಿ ಯಾಕೂಬ್ ಖಾದರ್ ಗುಲ್ವಾಡಿ ತಿಳಿಸಿದ್ದಾರೆ.

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!