Monday, September 9, 2024

ಆಳ್ವಾಸ್‌ನಲ್ಲಿ ಸಂಭ್ರಮದ 78ನೇ ಸ್ವಾತಂತ್ರ‍್ಯೋತ್ಸವ | ನಿರ್ಭೀತ ಸ್ವಾತಂತ್ರ‍್ಯದ ಸಂಸ್ಕೃತಿ ನಮ್ಮದಾಗಲಿ : ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ | 15 ಸಾವಿರಕ್ಕೂ ಅಧಿಕ ಜನರು ಭಾಗಿ

ಜನಪ್ರತಿನಿಧಿ (ಮೂಡುಬಿದಿರೆ) : ವ್ಯಕ್ತಿ, ಸಮುದಾಯ, ದೇಶ ಸೇರಿದಂತೆ ಸರ್ವರಲ್ಲಿ ನಿರ್ಭೀತ ಸ್ವಾತಂತ್ರ‍್ಯದ ಸಂಸ್ಕೃತಿ ನಮ್ಮದಾಗಬೇಕು ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಆಶಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆಳ್ವ ಆವರಣದ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡ 78ನೇ ಸ್ವಾತಂತ್ರ‍್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ದೇಶವನ್ನು ಆರ್ಥಿಕ, ಸಾಮಾಜಿಕ, ಸಾಮುದಾಯಿಕವಾಗಿ ಎಲ್ಲರೂ ಸೇರಿ ಕಟ್ಟೋಣ’ ಎಂದ ಅವರು, ‘ವೈಯಕ್ತಿಕ ಸ್ವಾತಂತ್ರ‍್ಯದ ಉಳಿವೂ ಇಂದಿನ ಅವಶ್ಯಕತೆ. ಸ್ವಾತಂತ್ರ‍್ಯ ವನ್ನು ಯಾರದೇ ಪಾದಕ್ಕೆ ಸಮರ್ಪಿಸಬೇಡಿ’ ಎಂದು ಯುವ ಸಮುದಾಯವನ್ನು ಎಚ್ಚರಿಸಿದರು. ಯಾವುದೂ ಅಸಾಧ್ಯ ಎಂಬುದು ಇಲ್ಲ. ಪ್ರಕೃತಿ ಪೂರಕ ಸಂಸ್ಕೃತಿ ಬೆಳೆಯಬೇಕು. ಸ್ವಾತಂತ್ರ‍್ಯದ ಸಂಸ್ಕೃತಿ ನಮ್ಮದಾಗಬೇಕು. ಅದಕ್ಕೆ ಪ್ರತಿ ವ್ಯಕ್ತಿಯೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.

ದೇಶದಲ್ಲಿ ಅನೇಕ ಜಾತಿ-ಧರ್ಮಗಳಿವೆ. ಆದರೆ ವೈವಿಧ್ಯತೆಯ ನಡುವೆ ಐಕ್ಯತೆ ಹಾಗೂ ಸಾಮರಸ್ಯ ಇದೆ. ದೇಶದಲ್ಲಿನ ನದಿಗಳು ಸಮುದ್ರ ಸೇರಿದಂತೆ, ಇಲ್ಲಿ ಯಾರ ಪಾಲು ಎಷ್ಟು ಎಂದು ಕೇಳಬಾರದು. ದೇಶ ನಿರ್ಮಾಣಕ್ಕೆ ಸಮರ್ಪಣ ಭಾವ ಬೇಕು. ಮಾಧುರ್ಯ, ಸಮತೆ, ಸಮಾನತೆ ಪಡೆದ ದೇಶ ಭಾರತ ಎಂದು ಬಣ್ಣಿಸಿದರು.

ದೇಶದ ದ್ವಜವೇ ನಮ್ಮ ಐಕ್ಯತೆಯ ಸಂಕೇತ. ಕೇಸರಿ ಧೈರ್ಯ, ಬಲ, ತ್ಯಾಗವಾದರೆ, ಬಿಳಿ ಶಾಂತಿಯ ಸಂಕೇತ. ಹಸಿರು ಸಮೃದ್ಧಿಯ ಸಂಕೇತ. ಅಶೋಕ ಚಕ್ರದ ಇಪ್ಪತ್ತನಾಲ್ಕು ಗೆರೆಗಳು ದಿನದ ಗಂಟೆಯಂತೆ ನಮ್ಮ ಸಮಯ ಪ್ರಜ್ಞೆ ಜಾಗೃತವಾಗಿಡುತ್ತವೆ. ಹೋರಾಟದಿಂದ ಬಂದ ಸ್ವಾತಂತ್ರ‍್ಯವನ್ನು ನಾವೆಲ್ಲ ಉಳಿಸಬೇಕು ಎಂದರು.

ಸಂವಿಧಾನ ಯಂತ್ರದ ಹಾಗೆ. ಅದನ್ನು ಕಾರ್ಯಗೊಳಿಸುವವರು ಜೀವಂತಿಕೆ ನೀಡುತ್ತಾರೆ. ನಮ್ಮಲ್ಲಿ ಧೈರ್ಯ ಹಾಗೂ ಸ್ಥೈರ್ಯ ಬೇಕು. ಶೋಷಣೆಯ ವಿರುದ್ಧ ಪ್ರತಿಭಟಿಸಬೇಕು. ಆಗ ಸ್ವಾತಂತ್ರ‍್ಯ ಸಾರ್ಥಕವಾಗುತ್ತದೆ. ಎಲ್ಲರಲ್ಲೂ ನಿರ್ಭೀತಿ ಮನೋಭೂಮಿಕೆ ಬೇಕು ಎಂದರು.

ಭಾರತದ ಪ್ರಜಾಪ್ರಭುತ್ವಕ್ಕೆ ಹಿರಿಯರು ಸದೃಢ ಅಡಿಪಾಯ ಹಾಕಿದ್ದಾರೆ. ಇದರಿಂದ ದೇಶವು ರಾಜಕೀಯ ಸಬಲತೆ, ಸದೃಢತೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆ ಎಂದರು.

ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಡಾ.ಎಂ.ಮೋಹನ ಆಳ್ವ ಅವರು ಮಹಾಶಿಲ್ಪಿ. ಇಲ್ಲಿ ಪಾಲ್ಗೊಂಡಿರುವುದು ನನ್ನ ಸೌಭಾಗ್ಯ. ಇಲ್ಲಿ ಎಲ್ಲರೂ ಶಿಸ್ತು ಬದ್ಧರಾಗಿ ಧ್ವಜ ವಂದನೆ ಮಾಡಿರುವುದು ರೋಮಾಂಚನ ನೀಡಿದೆ ಎಂದು ಸಂತಸ ಹಂಚಿಕೊಂಡರು. ‘ವಿಶ್ವ ಸಂಸ್ಕೃತಿಯ ಮಹಾಯಾನ’ ಬರೆಯುತ್ತಿದ್ದೇನೆ. ಇದು ಸಂಸ್ಕೃತಿಯ ಸಾರ. ಸಂಸ್ಕೃತಿಯು ಪ್ರಕೃತಿಗೆ ಪೂರಕವಾಗಿ ಇರಬೇಕು. ಮನೆ, ಮನಗಳಲ್ಲಿ ಸ್ವಾತಂತ್ರ‍್ಯ ಅರಳಲಿ ಎಂದು ಅವರು ಹಾರೈಸಿದರು.

ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಪಿ.ಜಿ.ಆರ್ ಸಿಂಧ್ಯಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಉದ್ಯಮಿ ಶ್ರೀಪತಿ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಡಾ ವಿನಯ ಆಳ್ವ ಇದ್ದರು.

ಧ್ವಜಾರೋಹಣದ ತಕ್ಷಣ ರಾಷ್ಟ್ರ ಗೀತೆ ಹಾಡಿ, ದೇಶಪ್ರೇಮ ವ್ಯಕ್ತಪಡಿಸಲಾಯಿತು..

ಇದಕ್ಕೂ ಮೊದಲು ಅತಿಥಿಗಳು ಕಾಲೇಜಿನ ಎನ್ ಸಿಸಿ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಜೊನಾಥನ್ ಡಿಸೋಜ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಬಳಿಕ ‘ವಂದೇ ಮಾತರಂ’ ಹಾಡಲಾಯಿತು. ‘ಕೋಟಿ ಕಂಠೋ ಸೇ..’ ಗಾನಕ್ಕೆ ವೇದಿಕೆ ಹಾಗೂ ಸಭಾಂಗಣದಲ್ಲಿ ಶಿಸ್ತು ಬದ್ಧವಾಗಿ ನಿಂತ ವಿದ್ಯಾರ್ಥಿಗಳು ಧ್ವಜ ಹಾರಡಿಸಿದರೆ, ಕೇಸರಿ, ಬಿಳಿ, ಹಸಿರು ಬಣ್ಣಗಳ ರಂಗು ಬ್ಲೋವರ್ ಮೂಲಕ ಗಾಳಿಯಲ್ಲಿ ತೇಲಿ ಬಂತು. ಕೇಸರಿ,ಬಿಳಿ, ಹಸಿರು ಬಣ್ಣದ ಪುರುಲಿಯಾ ಸಿಂಹಗಳು ವಿಶೇಷ ಮೆರುಗು ನೀಡಿದವು. ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕ್ಷೇತ್ರದ ಸಾಧಕರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ ಸೇರಿದಂತೆ ೧೫ ಸಾವಿರಕ್ಕೂ ಅಧಿಕ ಜನರು ಸಂಭ್ರಮದಲ್ಲಿ ಪಾಲ್ಗೊಂಡರು.


(ಆಳ್ವಾಸ್‌ ಸ್ವಾತಂತ್ರ್ಯ ಸಂಭ್ರಮ) 

ಆನಂದ ಆಳ್ವರ ಪ್ರಥಮ ಪುಣ್ಯಸ್ಮರಣೆ
ಸ್ವಾತಂತ್ರ‍್ಯ ದಿನಾಚರಣೆಯ ಬಳಿಕ ಕೃಷಿಋಷಿ ಮಿಜಾರುಗುತ್ತು ಆನಂದ ಆಳ್ವರ ಪ್ರಥಮ ಪುಣ್ಯಸ್ಮರಣೆ ಡಾ ವಿಎಸ್ ಆಚರ‍್ಯ ಸಭಾಭವನದಲ್ಲಿ ನಡೆಯಿತು.
ಮೌಲ್ಯಾಧಾರಿತ ಜೀವನ ನಡೆಸಿ ಸರ್ವರಿಗೂ ಆದರ್ಶಪ್ರಾಯರಾದ ಆನಂದ ಆಳ್ವರ ನೆನಪಿಗಾಗಿ, ಅವರಂತೆ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ಸೇವೆಗೈದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಪಿ.ಜಿ.ಆರ್ ಸಿಂಧ್ಯಾ, ಉದ್ಯಮಿ ಶ್ರೀಪತಿ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಕರ‍್ಯಕ್ರಮದಲ್ಲಿ ಡಾ ಮೋಹನ್ ಆಳ್ವರ ಸಹೋದರ ಬಾಲಕೃಷ್ಣ ಆಳ್ವ, ಸಹೋದರಿ ಮೀನಾಕ್ಷಿ ಆಳ್ವ ಇದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!