Wednesday, September 11, 2024

ಎಸ್‍ಸಿಡಿಸಿಸಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ ರೂ.79.05 ಕೋಟಿ ಲಾಭ, ಶೇ.9 ಡಿವಿಡೆಂಡ್ ಘೋಷಣೆ

ಮಂಗಳೂರು : ‘ಸಾಧನೆ’ಯ ಮಹಾಪೂರದೊಂದಿಗೆ ಸಹಕಾರ ಕ್ಷೇತ್ರಕ್ಕೆ ಆದರ್ಶವಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಆಧುನಿಕ ಬ್ಯಾಂಕಿಂಗ್ ಸೇವೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿರುವ ಎಸ್‍ಸಿಡಿಸಿಸಿ ಬ್ಯಾಂಕ್ ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ “ಜನ ಮನ್ನಣೆ” ಗಳಿಸಿಕೊಂಡಿದೆ. ‘ಜನಸ್ನೇಹಿ’ ಬ್ಯಾಂಕ್ ಎನ್ನುವ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಈ ಬ್ಯಾಂಕ್ ಸಹಕಾರಿ ರಂಗದಲ್ಲಿ ವಿಶಿಷ್ಠ ವಿನೂತನ ಸಾಧನೆಯೊಂದಿಗೆ ದೇಶದ ಅಗ್ರಮಾನ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಗಿ ಜನಾನುರಾಗಿಯಾಗಿದೆ. 2023-24ನೇ ಸಾಲಿನಲ್ಲಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ ರೂ.79.05 ಕೋಟಿ ಲಾಭ ಗಳಿಸಿ ತನ್ನ ಸದಸ್ಯ ಸಂಘಗಳಿಗೆ ಶೇ.9 ಡಿವಿಡೆಂಡ್‍ನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಅವರು ಬುಧವಾರ ಬ್ಯಾಂಕಿನ ಸಭಾಭವನದಲ್ಲಿ ನಡೆದ 110ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ತತ್ವದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್‍ಸಿಡಿಸಿಸಿ ಬ್ಯಾಂಕ್ ಸಾಧನೆಯ 110 ವರ್ಷಗಳನ್ನು ಪೂರೈಸಿ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ವರದಿ ವರ್ಷದಲ್ಲಿ ಬ್ಯಾಂಕ್ ಸಾಧಿಸಿದ ಯಶಸ್ಸು ಅಭೂತಪೂರ್ವವಾದದ್ದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನೇ ದಿನೇ ಸ್ಪರ್ಧೆಯನ್ನು ಎದುರಿಸಿದರೂ ಬ್ಯಾಂಕ್ ಅಭಿವೃದ್ಧಿಯ ಪಥವನ್ನು ಕಂಡು ದೇಶದ ಅಗ್ರಮಾನ್ಯ ಸಹಕಾರಿ ಬ್ಯಾಂಕ್ ಎನಿಸಿಕೊಂಡಿದೆ ಎಂದರು.

ಹೊಸತನದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ಕøಷ್ಟ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಟರ್‍ನೆಟ್, ಕೋರ್ ಬ್ಯಾಂಕಿಂಗ್‍ನಂತಹ ಉನ್ನತ ಸೇವೆಯು ಬ್ಯಾಂಕಿನ 113 ಶಾಖೆಗಳಲ್ಲಿ ದೊರೆಯುತ್ತಿದೆ. ಮೊಬೈಲ್ ಆ್ಯಪ್, ಟ್ಯಾಬ್ ಬ್ಯಾಂಕಿಂಗ್‍ನಂತಹ ವಿನೂತನ ವ್ಯವಸ್ಥೆಯನ್ನು ಬ್ಯಾಂಕ್ ಗ್ರಾಹಕರಿಗೆ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ “ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್” ಹಾಗೂ “ಇಂಟರ್‍ನೆಟ್ ಬ್ಯಾಂಕಿಂಗ್” ಸೇವೆಯನ್ನು ರೂಪಿಸಲು ಬ್ಯಾಂಕ್ ಮುಂದಾಗಿದೆ. ವರದಿ ವರ್ಷದಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಬ್ಯಾಂಕ್ ಹಮ್ಮಿಕೊಂಡಿದೆ.

ಗುರಿ ಮೀರಿದ ಸಾಧನೆ:
ಸುದೀರ್ಘ ಕಾಲ ಸಾರ್ವಜನಿಕ ಸೇವೆಯಲ್ಲಿರುವ ಎಸ್‍ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು ರೂ.15544.34 ಕೋಟಿ ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಾತಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ಬ್ಯಾಂಕ್ 113 ಶಾಖೆಗಳ ಮೂಲಕ ಒಟ್ಟು ರೂ.7224.91 ಕೋಟಿ ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ ಎಂದರು.

ಸ್ಪರ್ಧಾತ್ಮಕ ಆರ್ಥಿಕ ಹಿನ್ನಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.6485.12 ಕೋಟಿ ಮುಂಗಡ ನೀಡಿದೆ. 1072 ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು ಪಾಲು ಬಂಡವಾಳ ರೂ.403.61 ಕೋಟಿ, ಬ್ಯಾಂಕಿನ ದುಡಿಯುವ ಬಂಡವಾಳ ರೂ.11418.68 ಕೋಟಿ, ಬ್ಯಾಂಕ್ ರೂ.250.09 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು.
ಕೃಷಿ ಸಾಲ ಮರುಪಾವತಿಯಲ್ಲಿ ರಾಷ್ಟ್ರೀಯ ದಾಖಲೆ:

ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ ನೂರರ ಮರುಪಾವತಿಯನ್ನು ಕಂಡಿದೆ. ಇಂತಹ ಸಾಧನೆಯನ್ನು ಬ್ಯಾಂಕ್ ಕಳೆದ 29 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ವರದಿ ವರ್ಷದಲ್ಲಿ ಕೃಷಿಕರು ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲೂ ಕೃಷಿ ಸಾಲವನ್ನು ಮರುಪಾವತಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 13 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ ನೂರರ ಸಾಧನೆ ಮಾಡಿದೆ ಎಂದು ಮಹಾಸಭೆಯಲ್ಲಿ ಅವರು ತಿಳಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸಂಘಟನೆಯಲ್ಲೂ ಬ್ಯಾಂಕ್ ಮುಂಚೂಣಿಯಲ್ಲಿದೆ. ಈ ಬ್ಯಾಂಕ್ ಒಟ್ಟು 34523 ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ ರೂ.136.58 ಕೋಟಿ. ಒಟ್ಟು 34379 ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, ಇದರಲ್ಲಿ ರೂ.513.88 ಕೋಟಿ ಸಾಲ ಹೊರಬಾಕಿ ಇರುತ್ತದೆ.

ಅಪೆಕ್ಸ್/ನಬಾರ್ಡ್ ಪ್ರಶಸ್ತಿ:

ಜನಪರ ಯೋಜನೆಗಳೊಂದಿಗೆ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೇಶದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸರ್ವಾಂಗೀಣ ನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ 21 ಬಾರಿ ದೊರೆತಿರುವುದು ಬ್ಯಾಂಕ್‍ನ ಕಾರ್ಯಸಾಧನೆಗೆ ಸಂದ ಪುರಸ್ಕಾರ. ಸ್ವಸಹಾಯ ಗುಂಪುಗಳ ನಿರ್ವಹಣೆಗೂ ನಬಾರ್ಡ್ ಪ್ರಶಸ್ತಿ 19 ಬಾರಿ ಬ್ಯಾಂಕಿಗೆ ದೊರೆತಿದೆ. ವರದಿ ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಬ್ಯಾಂಕಿಗೆ “ಎಪಿವೈ ರಾಷ್ಟ್ರೀಯ ಪ್ರಶಸ್ತಿ” ಮೂರನೇ ಬಾರಿ ಬಂದಿದೆ ಎಂದು ಅವರು ತಿಳಿಸಿದರು.

ಸನ್ಮಾನ :
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸತತ 30 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಂಕನ್ನು ಮುನ್ನಡೆಸಿ, ರಾಜ್ಯದ ಅಗ್ರಮಾನ್ಯ ಬ್ಯಾಂಕನ್ನಾಗಿ ರೂಪಿಸಿದ “ಸಹಕಾರ ರತ್ನ” ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳಿಂದ ಗೌರವಾರ್ಪಣೆಯೊಂದಿಗೆ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷ ಪ್ರಶಸ್ತಿ :
ವರದಿ ವರ್ಷದಲ್ಲಿ ರೂ.1000.00 ಕೋಟಿ ವ್ಯವಹಾರ ನಡೆಸಿದ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ, ಮಂಗಳೂರು, ರೂ.500.00 ಕೋಟಿ ಠೇವಣಿ ಸಂಗ್ರಹಿಸಿದ ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್, ಉಡುಪಿ, ಬಡಗಬೆಟ್ಟು ಕೋ-ಅಪರೇಟಿವ್ ಸೊಸೈಟಿ, ಉಡುಪಿ ಮತ್ತು ರೂ.100.00 ಕೋಟಿ ಠೇವಣಿ ಸಂಗ್ರಹಿಸಿದ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಮಂದಾರ್ತಿ ಸೇವಾ ಸಹಕಾರಿ ಸಂಘ, ಗಣಪತಿ ಸಹಕಾರಿ ವ್ಯವಸಾಯಿಕ ಸಂಘ, ಉಡುಪಿ, ಹಿರಿಯಡ್ಕ ವ್ಯವಸಾಯ ಸೇವಾ ಸಹಕಾರಿ ಸಂಘ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಇಡ್ಕಿದು ಸೇವಾ ಸಹಕಾರಿ ಸಂಘ, ಬಂಟ್ವಾಳ, ಒಕ್ಕಲಿಗ ಸೇವಾ ಸಹಕಾರಿ ಸಂಘ, ಪುತ್ತೂರು – ಇವರಿಗೆ ವಿಶೇಷ ಪುರಸ್ಕಾರದ ಜೊತೆಗೆ ಒಂದು ಪವನ್ ಚಿನ್ನದ ನಾಣ್ಯವನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕಾರ:
ಈ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಶೇ.100ರ ವಸೂಲಾತಿಯಲ್ಲಿ ಸಾಧನೆಗೈದ 13 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಮಾಡಲಾಯಿತು. ಲೆಕ್ಕ ಪರಿಶೋಧನಾ “ಅ” ವರ್ಗ ಮತ್ತು “ಬಿ” ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಆಯ್ದ ತಲಾ 3 ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ 2023-24ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

2023-24ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿಯನ್ನು 139 ಸಹಕಾರಿ ಸಂಘಗಳು, 2022-23ನೇ ಸಾಲಿನ ಅಪೆಕ್ಸ್ ಬ್ಯಾಂಕಿನ ಪ್ರಶಸ್ತಿಯನ್ನು 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಡೆದಿವೆ. 2023-24ನೇ ಸಾಲಿನ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು 12 ಪತ್ತಿನ ಸಹಕಾರಿ ಸಂಘಗಳಿಗೆ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ನೀಡುವ ಪ್ರಶಸ್ತಿಯನ್ನು 4 ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರಶಸ್ತಿಗೆ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ತಲಾ 3 ಸಂಘಗಳು ಪ್ರಶಸ್ತಿಯನ್ನು ಪಡೆದಿವೆ. ಉಭಯ ಜಿಲ್ಲೆಯ 7 ಟಿಎಪಿಸಿಎಂಎಸ್‍ಗಳಿಗೆ ಪ್ರಶಸ್ತಿ, ಮಹಿಳಾ ಹಾಲು ಉತ್ಪಾದಕರ ಸಂಘಗಳ ಪೈಕಿ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ತಲಾ 2 ಸಂಘಗಳಿಗೆ ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳಿಗೆ ನೀಡುವ ಪ್ರಶಸ್ತಿಯನ್ನು 33 ಸಹಕಾರಿ ಸಂಘಗಳು ಸ್ವೀಕರಿಸಿಕೊಂಡಿವೆ.

ವರದಿ ವರ್ಷದಲ್ಲಿ ಎಸ್‍ಸಿಡಿಸಿಸಿ ಬ್ಯಾಂಕಿನ 12 ಸಿಬ್ಬಂದಿಗಳು ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ 14 ಮಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿವೃತ್ತಿಯನ್ನು ಹೊಂದಿದ್ದು ಇವರಿಗೆ ಬ್ಯಾಂಕಿನಿಂದ ತಲಾ ರೂ.50,000/-ವನ್ನು ನೀಡಿ ಗೌರವಿಸಲಾಯಿತು.

ಈ ಸಭೆಯಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್‍ಪಾಲ್ ಸುವರ್ಣ, ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಟಿ.ಜಿ. ರಾಜಾರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಸ್. ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಸ್.ಬಿ. ಜಯರಾಮ ರೈ, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆ.ಹರಿಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ, ಕುಶಾಲಪ್ಪ ಗೌಡ ಪಿ., ಎಸ್. ಎನ್. ಮನ್ಮಥ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಉಭಯ ಜಿಲ್ಲೆಗಳ ಸಹಕಾರಿ ಸಂಘಗಳ ಉಪನಿಬಂಧಕರಾದ ಹೆಚ್. ಎನ್. ರಮೇಶ್, ಶ್ರೀಮತಿ ಲಾವಣ್ಯ, ಉಭಯ ಜಿಲ್ಲೆಗಳ ಸಹಕಾರಿ ಯೂನಿಯನ್ ಅಧ್ಯಕ್ಷರುಗಳಾದ ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಸಾದ್ ಕೌಶಲ್ ಶೆಟ್ಟಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕರಾದ ಟಿ.ಜಿ. ರಾಜಾರಾಮ್ ಭಟ್ ಸ್ವಾಗತಿಸಿದರು. ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!