spot_img
Friday, January 17, 2025
spot_img

ಕಾಂಗ್ರೆಸ್‌ ಜನಾಂದೋಲನ ಸಭೆ : ಮನುವಾದಿಗಳು ಶೋಷಿತರನ್ನು ಸಹಿಸುವುದಿಲ್ಲ : ಸಿಎಂ ವಾಗ್ದಾಳಿ | ಕಿಕ್ಕಿರಿದು ಸೇರಿದ ಜನ | ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರ ಆಕ್ರೋಶ

ಜನಪ್ರತಿನಿಧಿ (ಮೈಸೂರು) : ಕೋಮುವಾದಿಗಳು, ಜಾತಿವಾದಿಗಳು, ಪಾಳೇಗಾರಿಕೆ ಪ್ರವೃತ್ತಿ ಇರುವವರನ್ನು ಭಾರತದಿಂದ ಓಡಿಸಬೇಕಾದ ಅನಿವಾರ್ಯತೆ ಇದು. ಮನುವಾದಿಗಳು ಶೋಷಿತರನ್ನು ಸಹಿಸುವುದಿಲ್ಲ. ಅಂಥವರನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗುತ್ತದೆ. ಅದಕ್ಕಾಗಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಕಾಂಗ್ರೆಸ್‌ ಜನಾಂದೋಲನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯಿಲಿ ಅವರನ್ನು ಕೂಡ ಸಹಿಸಿಕೊಳ್ಳಲಿಲ್ಲ. ದೇವೇಗೌಡ, ಕುಮಾರಸ್ವಾಮಿ ಎಂದಿಗೂ ಕೂಡ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಲ್ಲ. ದೇವೇಗೌಡರ ಕುಟುಂಬದವರು ದ್ವೇಷದ ರಾಜಕಾರಣ ಮಾಡುವ ಮನಸ್ಥಿತಿ ಹಾಗೂ ಬೇರೆಯವರು ಬೆಳೆಯಬಾರದೆಂಬ ಮನೋಭಾವ ಇರುವವರು ಎಂದು ಅವರು ವಾಗ್ದಾಳಿ ನಡೆಸಿದರು.

ಕೋಮುವಾದಿಗಳ ಜೊತೆ ಸೇರಿ, ಕೇಂದ್ರದೊಂದಿಗೆ ಶಾಮೀಲಾಗಿ ಕರ್ನಾಟಕ ಸರ್ಕಾರವನ್ನು ದುರ್ಬಲಗೊಳಿಸಲು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹಮಂತ್ರಿ ಡಾ. ಜಿ. ಪರಮೇಶ್ವರ,  ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಕೇಳಿ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ಸಚಿವರ ರಾಜೀನಾಮೆಯನ್ನೂ ಪಡೆದುಕೊಂಡಿದ್ದಾರೆ. ಅದಕ್ಕಿಂತ ಇನ್ನೇನು ಬೇಕು? ಎಂದು ಕೇಳಿದರು.

ಪಾದಯಾತ್ರೆ ಮಾಡುತ್ತಿದ್ದೀರೇಕೆ ಎಂಬಿತ್ಯಾದಿ ನಮ್ಮ ಪ್ರಶ್ನೆಗಳಿಗೆ ವಿರೋಧ ಪಕ್ಷದವರು ಮೈಸೂರು ಚಲೋ ಸಮಾವೇಶದಲ್ಲಿ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಕಾಂಗ್ರೆಸ್‌ ನ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಮಾತನಾಡಿ, ಕೇಂದ್ರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡಲಿಲ್ಲವೇಕೆ? ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನ್ಯಾಯ ಮಾಡಿದೆ. ರೈತರಿಗೆ ನೆರವಾಗುವ ಮಹದಾಯಿ ಹಾಗೂ ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಡದೇ ದ್ರೋಹ ಬಗೆದಿದೆ ಎಂದು ವಾಗ್ದಾಳಿ ನಡೆಸಿದರು.

ಈ ಜನಾಂದೋಲನ ಸಮಾವೇಶದೊಂದಿಗೆ ಬಿಜೆಪಿ ಹಾಗೂ ಜೆಡಿಎಸ್ ಕಥೆ ಮುಗಿಯಲಿದೆ ಎಂದು ಹೇಳಿದರು.

ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹಾಗೂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಆರೋಪಗಳ ವಿಡಿಯೊ ಕೂಡ ಪ್ರದರ್ಶಿಸಲಾಯಿತು. ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌, ಇವರೆಲ್ಲರೂ ಯೂಟರ್ನ್ ನಾಯಕರು ಎಂದು ಡಿ.ಕೆ. ಶಿವಕುಮಾ‌ರ್ ಆರೋಪಿಸಿದರು. ಕುಟುಂಬದವರ ಅನುಕೂಲಕ್ಕಾಗಿ ಬೇರೆ ನಾಯಕರನ್ನು ಓಡಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಯಾರನ್ನೂ ಬೆಳೆಯಲು ಬಿಡುವ ಜಾಯಮಾನ ಅವರದಲ್ಲ ಎಂದರು.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗುವುದಿಲ್ಲ . ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ಹೇಳಿದರು.

ನಮ್ಮ ಐದೂ ಗ್ಯಾರಂಟಿಗಳನ್ನು ತೆಗೆದು ಹಾಕಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿ ಪತ್ನಿ ಹಾಗೂ ಯಾವುದೇ ಪ್ರಭಾವವನ್ನು ಬಳಸದ ಪಾರ್ವತಮ್ಮ ಅವರ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ತಾಯಿ ಚಾಮುಂಡೇಶ್ವರಿ ಒಪ್ಪುವುದಿಲ್ಲ ಎಂದರು.

ಡೂಪ್ಲಿಕೇಟ್ ಸಹಿ ಮಾಡುತ್ತಿದ್ದ ವಿಜಯೇಂದ್ರ: ಹರಿಪ್ರಸಾದ್‌ ಆರೋಪ

ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿ- ಜೆಡಿಎಸ್‌ನವರು ಪಾದಯಾತ್ರೆ ಮೂಲಕ ಕಾಂಗ್ರೆಸ್‌ಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ಚಸ್ಸು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.

ಆಪರೇಷನ್‌ ಕಮಲದ ಮೂಲಕ ಕುಖ್ಯಾತಿ ಗಳಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ನಾಚಿಕೆ, ಮಾನ- ಮರ್ಯಾದೆ ಇಲ್ಲದೇ ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಪರೋಕ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಆಗ ಎಷ್ಟು ಕಡತಗಳಿಗೆ ಅಪ್ಪನ ಡೂಪ್ಲಿಕೇಟ್ ಸಹಿ ಮಾಡಿದ್ದರು ಎಂಬುದನ್ನು ಸರ್ಕಾರವು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಆಗ, ಯಡಿಯೂರಪ್ಪ ಅವರ ಕಾಲದಲ್ಲಾಗಿದ್ದ ಮತ್ತಷ್ಟು ಹಗರಣಗಳು ಹೊರಬರುತ್ತವೆ ಎಂದು ಹೇಳಿದರು.

ಸಭೆಯಲ್ಲಿ ಸೇರಿದ ಅಷ್ಟೂ ಜನರು ಜಿಂದಾಬಾದ್‌ ಸಿದ್ದರಾಮಯ್ಯ ಘೋಷಣೆ ಕೂಗಿದರು. ಕಾಂಗ್ರೆಸ್‌ ಪರ ಘೋಷಣೆ ಕೂಗಿದರು. ಶಿಳ್ಳೆ, ಚಪ್ಪಾಳೆ ಸದ್ದುಗಳು ತಾರಕಕ್ಕೇರಿತ್ತು. ಈ ನಡುವೆಯೂ ಸಭೆ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!