Thursday, November 21, 2024

ನೆರಳು-ಬೆಳಕಿನ ಕಣ್ಸೆರೆ ಹಿಡಿಯುವ ಮೋಡಿಗಾರ: ಯಕ್ಷ ಛಾಯಾಚಿತ್ರಕಾರ ಪ್ರಶಾಂತ್ ಮಲ್ಯಾಡಿ

 

ಪದ್ಮವ್ಯೂಹ ಪ್ರಸಂಗದಲ್ಲಿ ಆರು ಜನ ಕಲಾವಿದರು ಧಿಗಿಣ ತೆಗೆಯುತ್ತಿದ್ದಾಗ ರಂಗಸ್ಥಳದ ಮೇಲ್ಭಾಗದಿಂದ ತೆಗೆದ ಚಿತ್ರ.
ಪದ್ಮವ್ಯೂಹ ಪ್ರಸಂಗದಲ್ಲಿ ಆರು ಜನ ಕಲಾವಿದರು ಧಿಗಿಣ ತೆಗೆಯುತ್ತಿದ್ದಾಗ ರಂಗಸ್ಥಳದ ಮೇಲ್ಭಾಗದಿಂದ ತೆಗೆದ ಚಿತ್ರ.
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರಗಳು.
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ.
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ.
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ.
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ.
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ.
ಪ್ರಶಾಂತ್ ಮಲ್ಯಾಡಿ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ.

ಕುಂದಾಪುರ: ಯಕ್ಷಗಾನ ಛಾಯಾಗ್ರಾಹಣ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಚಾಲ್ತಿಗೆ ಬರುತ್ತಿದೆ. ಬಣ್ಣಗಳ ವೈವಿಧ್ಯ, ನೃತ್ಯ, ಭಂಗಿ, ಅಭಿವ್ಯಕ್ತಿ ಇತ್ಯಾದಿಗಳು ಕ್ರಿಯಾತ್ಮಕ, ಸೂಕ್ಷ್ಮಗ್ರಾಹಿ ಛಾಯಾಗ್ರಾಹಕನ ಹೊಸ ಹೊಸ ಕಣ್ಸೆರೆಯ ಸಾಹಸಕ್ಕೆ ಸ್ಪೂರ್ತಿ ನೀಡುತ್ತದೆ. ಅದ್ಭುತ ಕ್ಷಣಗಳನ್ನು ನೆನಪುಗಳಾಗಿ ಸಂಗ್ರಹಿಸಬೇಕು ಎನ್ನುವ ತುಡಿತ ಛಾಯಾಗ್ರಾಹಕನೆನ್ನುವ ಕಲಾವಿದನಲ್ಲಿ ಜಾಗೃತವಾದಾಗ ಕೌತುಕ ಮೂಡಿಸುವಂತಹ ಛಾಯಾಚಿತ್ರಗಳು ಮೂಡಿ ಬರುತ್ತವೆ. ಅಪರೂಪದ ಯಕ್ಷಗಾನ ಫೋಟೋಗ್ರಾಫರ್ ನಡುವೆ ಸದ್ದಿಲ್ಲದೇ ಛಾಯಾಚಿತ್ರಗಳ ಮೂಲಕ ಸುದ್ಧಿ ಮಾಡುತ್ತಿರುವ ಯಕ್ಷಛಾಯಾಚಿತ್ರಕಾರ ಪ್ರಶಾಂತ್ ಮಲ್ಯಾಡಿ.

ಛಾಯಾಚಿತ್ರಕಾರನಿಗೆ ತಾಳ್ಮೆಯೇ ಆಸ್ತಿ. ಅದರಲ್ಲಿಯೂ ಯಕ್ಷಗಾನಕ್ಕೆ ಇನ್ನಷ್ಟು ತಾಳ್ಮೆ ಬೇಕು. ಇಡೀ ಆಟವನ್ನು ನೋಡುವ ಸಂಯಮ ಇರಬೇಕಾಗುತ್ತದೆ. ಎಲ್ಲಿ ಆಟ ಇದೆ, ಅಲ್ಲಿ ಯಾವ ಪ್ರಸಿದ್ಧ ಕಲಾವಿದರು ಬರುತ್ತಾರೆ? ಯಕ್ಷಗಾನದ ವಿಶಿಷ್ಠ ಪ್ರಯೋಗಗಳು ಎಲ್ಲಿ ಇವೆ? ಇತ್ಯಾದಿ ಮಾಹಿತಿಯನ್ನು ಕಲೆ ಹಾಕಿ ಕಾದು ಕುಳಿತು ಪೋಟೋ ತಗೆಯುವ ತಾಳ್ಮೆಗೆ ಪ್ರಶಾಂತರೆ ಉದಾಹರಣೆ.

ಪ್ರಶಾಂತ್ ಮಲ್ಯಾಡಿ ಇವತ್ತು ಲಕ್ಷಕ್ಕೂ ಹೆಚ್ಚು ಯಕ್ಷಗಾನದ ಫೋಟೋಗಳನ್ನು ತಗೆದಿದ್ದಾರೆ. ಪ್ರತಿಯೊಂದು ಕೂಡಾ ಕಲಾತ್ಮಕ, ವಿಭಿನ್ನ ದೃಷ್ಟಿಕೋನದಿಂದ. ಹವ್ಯಾಸಕ್ಕಾಗಿ ಕ್ಯಾಮರ ಎತ್ತಿಕೊಂಡ ಅವರು ಅದನ್ನು ವ್ಯವಹಾರಿಕಾ ದೃಷ್ಟಿಕೋನಕ್ಕೆ ಬಳಸಿಲ್ಲ. ಫೋಟೋಗ್ರಫಿಯನ್ನು ಗುರುವಿಲ್ಲದೇ ಏಕಲವ್ಯನಂತೆ ಸಿದ್ಧಿಸಿಕೊಂಡರು. ಯಕ್ಷಗಾನದ ಅಪೂರ್ವ ಕ್ಷಣಗಳು, ಅದ್ಭುತ ಸನ್ನಿವೇಶಗಳು, ಕಲ್ಪನಾತೀತ ನಿಮಿಷಗಳ ಮೌಲಿಕತೆಯನ್ನು ಕಾಪಿಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಅದ್ಬುತ ಕ್ಷಣಗಳ ಕಾಪಿಡುವ ಕಲೆಗಾರ
ತೆಂಕುಬಡಗು ಉಭಯ ತಿಟ್ಟನಲ್ಲಿ ಯಕ್ಷ ಛಾಯಾಗ್ರಾಹಣ ಸಂಚಲಕ್ಕೆ ಕಾರಣರಾಗಿದ್ದು ಪ್ರಶಾಂತ್ ಮಲ್ಯಾಡಿ. 2015ರಲ್ಲಿ ಸರ್ಪಂಗಳದಲ್ಲಿ ನಡೆದ ಯಕ್ಷೋತ್ಸವ ಪದ್ಮವ್ಯೂಹ ಆಖ್ಯಾನದಲ್ಲಿ ಆರು ಕಲಾವಿದರು ಧಿಗಿಣ ತೆಗೆಯುತ್ತಿರುವಾಗ ರಂಗಸ್ಥಳದ ಮೇಲ್ಬಾಗದಿಂದ ಕ್ಲಿಕ್ಕಿಸುವ ಅದ್ಬುತ ಕ್ಷಣವೊಂದನ್ನು ಕಲಾಭಿಮಾನಿಗಳ ಮುಂದಿಟ್ಟರು ಈ ಪ್ರಶಾಂತ್. ನೀರಿನ ಅಭಾವದ ಸಂದರ್ಭದಲ್ಲಿ ಕಾಗೆಯೊಂದು ನೀರಿನ ಹನಿಗಾಗಿ ಕೊಕ್ಕು ತೆರೆದು ಕಾಯುತ್ತಿರುವ ಪಟ, ನಾಡಿನ ಹೆಚ್ಚಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ವೃತ್ತಿ ಕಸುಬಿನ ಬವಣೆ, ಪ್ರಕೃತಿ ವಿಹಂಗಮತೆ, ರಂಗಭೂಮಿಯಲ್ಲಿ ನೆರಳು-ಬೆಳಕಿನ ಅಪೂರ್ವತೆಯ ನಡುವೆ ಪಾತ್ರಗಳ ಹೃದ್ಗಿತತೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಕರ ಶ್ಲಾಘನೆಗೆ ಪಾತ್ರವಾಗಿದ್ದವು.

ಯಕ್ಷಗಾನ ಸಂಯೋಜಕ
ಪ್ರಶಾಂತ್ ಬಹುಮುಖಿ. ಮೇಲಾಗಿ ಕಲಾವಿದ. ಸ್ವತಃ ತಾಳಜ್ಞಾನ ಇರುವುದರಿಂದ ಸನ್ನಿವೇಶದ ಅರಿವು ಇರುವುದರಿಂದ ಕಣ್ಣಂಚಲಿ ಮಿಂಚಿ ಮರೆಯಾಗುವ ಕ್ಷಣಗಳನ್ನು ಕ್ಯಾಮರ ಕಣ್ಣಲ್ಲಿ ಸೆರೆ ಹಿಡಿಯಬಲ್ಲರು. ಈಗಾಗಲೇ 50ಕ್ಕೂ ಹೆಚ್ಚು ಬಡಗು-ತೆಂಕಿನ ಯಕ್ಷಗಾನ ಪ್ರದರ್ಶನಗಳನ್ನು ಇವರು ಸಂಯೋಜಿಸಿದ್ದಾರೆ. ಮೂರು ತಿಟ್ಟುಗಳ ಘಟಾನುಘಟಿ ಕಲಾವಿದರ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಯಕ್ಷಗಾನ ಕಾರ್ಯಕ್ರಮಗಳ ಸಂಚಾಲಕರಾಗಿಯೂ ಅಪರೂಪದ ಯಕ್ಷ ಪ್ರಯೋಗಗಳಿಗೆ ಸಾಕ್ಷಿಯಾಗಿದ್ದಾರೆ.

ಯಕ್ಷಗಾನ ಟಿಸರ್ ನಿರ್ಮಾಣ
ಯಕ್ಷಗಾನದ ಹೊಸ ಪ್ರಸಂಗಗಳ ಟೀಸರ್ ಸಂಸ್ಕøತಿ ಆರಂಭ ಮಾಡಿದ್ದು ಇವರೇ. 2018ರಲ್ಲಿ ‘ಕಸ್ತೂರಿ ತಿಲಕ’ ಯಕ್ಷಗಾನ ಪ್ರಸಂಗದ ಟೀಸರ್ ಟ್ರೈಲರ್ ಸಿದ್ಧ ಪಡಿಸಿದ ಇವರು, ಈ ಬಾರಿ ಸಾಲಿಗ್ರಾಮ ಮೇಳದ ಸೂರ್ಯಸಖಿ ಚಂದ್ರಮುಖ ಪ್ರಸಂಗದ ಟೇಸರ್‍ನ್ನು ಸಿದ್ಧ ಪಡಿಸಿದ್ದಾರೆ. ಟೀಸರ್ ಸಿದ್ಧ ಪಡಿಸುವುದು ಸುಲಭದ ಕೆಲಸವಲ್ಲ, ಇಡೀ ಆಟದ ವಿಡಿಯೋ ಮಾಡಿ, ಅದರ ಒಳ್ಳೆಯ ದೃಶ್ಯಗಳನ್ನು ಬೇರ್ಪಡಿಸಿ ಜೋಡಿಸುವುದು ಸವಾಲಿನ ಕೆಲಸ. ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಗೆಜ್ಜೆ ಕಟ್ಟಿ ಕುಣಿದ ಕಲಾವಿದ
ಪ್ರಶಾಂತ್ ಬಡಗುತಿಟ್ಟು ಯಕ್ಷಗಾನವನ್ನು ತೆಕ್ಕಟ್ಟೆಯ ಯಶಸ್ವಿ ಕಲಾವೃಂದದಲ್ಲಿ ಸೀತಾರಾಮ ಶೆಟ್ಟಿ ಹಾಗೂ ಕೆ.ಪಿ ಹೆಗಡೆಯವರಿಂದ ಕಲಿಯುತ್ತಿದ್ದಾರೆ. ಯಕ್ಷಗುರು ಪ್ರಸಾದ ಕುಮಾರ್ ಮೊಗೆಬೆಟ್ಟು ವೇಷ ಮಾಡಲು ಅವಕಾಶ ಕಲ್ಪಿಸಿ, ಸಾಕಷ್ಟು ಮಾರ್ಗದರ್ಶನ ಮಾಡಿದರು ಎನ್ನುವ ಪ್ರಶಾಂತ್ ರಂಗಭೂಮಿಯ ಬಗ್ಗೆಯೂ ವಿಶೇಷ ಆಸಕ್ತಿ ಇರಿಸಿಕೊಂಡವರು. ಕೈಲಾಸ ಕಲಾ ಕ್ಷೇತ್ರದ ಮೂಲಕ ಮಾರ ನಾಯಕ, ಮದುವೆ ಹೆಣ್ಣು, ಊರುಭಂಗ, ಪ್ರಸ್ತುತ ‘ಕೊಳ್ಳಿ’ ರಂಗ ನಾಟಕವನ್ನು ಮಾಡುತ್ತಿದ್ದಾರೆ.

ಕಲೆಗಾಗಿ ಸಂಘಟಕ
ಯಶಸ್ವಿ ಕಲಾವೃಂದ ತೆಕ್ಕಟ್ಟೆಯ ಸದಸ್ಯರಾಗಿ, ಕೈಲಾಸ ಕಲಾ ಕ್ಷೇತ್ರ, ಯಕ್ಷ ದೀಪ ಕಲಾ ಟ್ರಸ್ಟ್ ಸಂಸ್ಥಾಪಕರಾಗಿ ಪ್ರಸ್ತುತ ಕಾರ್ಯದರ್ಶಿಯಾಗಿದ್ದಾರೆ. ರಂಗಸ್ಥಳ ಫೌಂಡೇಶನ್‍ನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ ಕಲಾಸಕ್ತ ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಯಕ್ಷಗಾನ ಕಲಿಸುವ ಕಲಾಶಾಲೆ ತೆರೆಯುವ ಯೋಚನೆ ಹೊಂದಿದ್ದಾರೆ. ಒಂದು ತಿರುಗಾಟದಲ್ಲಿ 100ಕ್ಕೂ ಹೆಚ್ಚು ಆಟಗಳನ್ನು ನೋಡುವ ಇವರು, ನೆಚ್ಚಿನ ಕಲಾವಿದರುಗಳಿಗೆ ತಾನು ಕ್ಲಿಕ್ಕಿಸಿದ ಪೋಟೋಗಳನ್ನು ಉಚಿತವಾಗಿ ನೀಡುತ್ತಾರೆ. ಕಲೆ-ರಂಗಭೂಮಿಯ ಬಗ್ಗೆ ಲಾಲಿತ್ಯಪೂರ್ಣವಾಗಿ ಬರೆಯುವ ಸಾಮರ್ಥ್ಯ ವನ್ನು ಹೊಂದಿದ್ದಾರೆ.

ತೆಕ್ಕಟ್ಟೆಯ ಸಮರ್ಥ ಟ್ರೆಡರ್ಸ್‍ನಲ್ಲಿ ವೃತ್ತಿ ನಿರ್ವಹಿಸುತ್ತಿರುವ ಇವರು ಪ್ರವೃತ್ತಿಯಲ್ಲಿ ಸದಾ ಬ್ಯುಸಿ. ಇವರ ಹವ್ಯಾಸವನ್ನು ಹಲವು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಸ್ಪರ್ಧಾತ್ಮಕವಾದ ಈ ದಿನಗಳಲ್ಲಿಯೂ ಕೂಡಾ ವ್ಯವಹಾರಿಕ ದೃಷ್ಟಿ ಇರಿಸಿಕೊಳ್ಳದೇ ರಾತ್ರಿ ಬೆಳಗಿನ ತನಕ ಸುಂದರ ದೃಶ್ಯಗಳಿಗಾಗಿ ಕ್ಯಾಮರ ಹಿಡಿದುಕೊಂಡು ಕುಳಿತುಕೊಳ್ಳುವ ತಾಳ್ಮೆ ಇದೆಯಲ್ಲ ಅದಕ್ಕೆ ಭೇಷ್ ಎನ್ನಲೇಬೇಕು.

ಪ್ರಯೋಗಶೀಲ ವಿನ್ಯಾಸಗಾರ
ಪ್ರಶಾಂತ್ ಕೇವಲ ಕ್ಯಾಮರ ಮಾತ್ರವಲ್ಲ ಕಂಪ್ಯೂಟರ್‍ ನಲ್ಲಿಯೂ ಕೈಚಳಕ ತೋರಬಲ್ಲರು. ಯಕ್ಷಗಾನ ಸಂಬಂಧಿ ಬ್ಯಾನರ್‍ ಗಳ ವಿನ್ಯಾಸ ಅರ್ಥಪೂರ್ಣವಾಗಿ ಮಾಡುತ್ತಾರೆ. ಇವತ್ತಿನ ಅಭಿರುಚಿಗೆ ಅನುಗುಣವಾಗಿ, ಬಹುಬೇಗ ಕಲಾಮನಸುಗಳನ್ನು ತಟ್ಟುವ ಶೈಲಿಯಲ್ಲಿ ಯಕ್ಷಗಾನಗಳ ವಿನ್ಯಾಸ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ಮಾಡಿದ ವಿನ್ಯಾಸಗಳು ಬಹು ವೇಗವಾಗಿ ಪ್ರಸಾರವಾಗುತ್ತಿವೆ. ಒಂದು ಮೇಳದ ಯಕ್ಷಗಾನವಾದರೆ ಪ್ರಚಾರ ಸಾಮಾಗ್ರಿಯಲ್ಲಿ ಆ ಮೇಳದ ಕಲಾವಿದರ ಚಿತ್ರಗಳನ್ನೇ ಅಳವಡಿಸುವುದು ಇವರ ವಿಶೇಷತೆ.
ಪ್ರಶಾಂತ್‍ರ ದೂರವಾಣಿ ಸಂಖ್ಯೆ-9036719621.

(ನಾಗರಾಜ್ ವಂಡ್ಸೆ)

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!