spot_img
Wednesday, January 22, 2025
spot_img

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಳಮದ್ದಳೆ ಘಟಕ ನೈಕಂಬ್ಳಿ ಅಸ್ವಿತ್ವಕ್ಕೆ: ತಾಳಮದ್ದಲೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ ಯೋಚನೆ

 


ಕುಂದಾಪುರ, ಆ.1: ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಬೇರೆ ಬೇರೆ ಘಟಕಗಳು ಚಾಲ್ತಿಯಲ್ಲಿವೆ. ತಾಳಮದ್ದಲೆ ಘಟಕವೊಂದು ತಲೆ ಎತ್ತಿರುವುದು ಉಡುಪಿ ಜಿಲ್ಲೆಗೆ ವಿಶೇಷವಾಗಿದೆ. ಇದು ಹೊಸದೊಂದು ಪ್ರಯತ್ನ ಮತ್ತು ಹೊಸ ಹೆಜ್ಜೆ. ಯಕ್ಷಗಾನ ಮತ್ತು ತಾಳಮದ್ದಲೆ ಈ ಭಾಗದ ಆಸ್ತಿ ಮತ್ತು ಶ್ರೇಷ್ಠತೆ. ತಾಳಮದ್ದಲೆಯ ಮೂಲಕ ಮಾತಿನ ಮಂಟಪ ಕಟ್ಟುತ್ತಾ ಹೋದಂತೆ ಬದುಕಿನ ಮೌಲ್ಯಗಳು ಹೊಳವು ಪಡೆಯುತ್ತಾ ಹೋಗುತ್ತದೆ. ಕಲಾವಿದರ, ಅರ್ಥಧಾರಿಗಳ ಪಾಂಡಿತ್ಯ ಪೂರ್ಣ ವಾಗ್‍ವೈಭವದ ಮೂಲಕವೇ ಜನಸಾಮಾನ್ಯರು ಅದ್ಬುತವಾದ ಅನುಭವ ಪಡೆಯುತ್ತಾರೆ.
ತಾಳಮದ್ದಲೆ ಪ್ರಕಾರವನ್ನು ಕರಾವಳಿಯ ಆಚೆಗೂ ದಾಟಿಸುವ, ಕರ್ನಾಟಕದ ಎಲ್ಲೆಡೆ ಹಬ್ಬಿಸುವ ಪ್ರಯತ್ನದ ಜೊತೆಗೆ ಆಸಕ್ತರಿಗೆ ಅವಕಾಶ ಕಲ್ಪಿಸುವ ಕಾರ್ಯವನ್ನು ಈ ತಂಡ ಮಾಡಹೊರಟಿದೆ.
ಇತ್ತೀಚೆಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ನೈಕಂಬ್ಳಿ ಘಟಕದ ಉದ್ಘಾಟನೆ ಆಯಿತು. ಉಳಿದೆಲ್ಲ ಘಟಕದಂತೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕೃಷಿ, ವಿಚಾರ ವಿನಿಮಯಕ್ಕೆ, ಸಾಹಿತ್ಯದ ವಿಚಾರಗಳಿಗೆ ವೇದಿಕೆ ಆಗಿರುತ್ತಾ, ವಿಶೇಷವಾಗಿ ತಾಳಮದ್ದಳೆ ಘಟಕವಾಗಿ ರೂಪುಗೊಳ್ಳಲಿದೆ. ವಾರಕ್ಕೊಂದು ತಾಳಮದ್ದಳೆ ಕೂಟವನ್ನೂ ಕೂಡಾ ಆಯೋಜಿಸುವ ಯೋಚನೆಯೊಂದಿಗೆ, ಒಂದಿಷ್ಟು ಯೋಜನೆಗಳೊಂದಿಗೆ ಈ ಘಟಕ ಆವಿರ್ಭವಿಸಿದೆ.
ಕೊರೋನಾ ಎನ್ನುವ ಜಾಗತಿಕ ಮಹಾಮಾರಿಯಿಂದ ಸೃಷ್ಟಿಯಾದ ಹಿಂದೆಂದೂ ಕಂಡರಿಯದ ಬಿಕ್ಕಟ್ಟಿನ ಸಂದರ್ಭದಲ್ಲಿ ರಂಗ ಪ್ರದರ್ಶನಗಳು, ಸಾಂಸ್ಕøತಿಕ ರಂಗ ಪ್ರಜ್ಞೆಗಳು, ತಲೆತಲಾಂತರದಿಂದ ಅನುಚಾನವಾಗಿ ಹರಿದು ಬಂದ ಕಲಾ ಪ್ರಕಾರಗಳು ಜನಸಾಮಾನ್ಯರ ಜೀವನಕ್ರಮದಿಂದ ಮರೆಯಾಗಬಾರದು, ಚಂಡೆ-ಮದ್ದಳೆಯ ನುಡಿತ-ಬಡಿತಗಳು ಕೇಳಿಸುತ್ತಲೇ ಇರಬೇಕು ಎನ್ನುವ ಆಶಯದೊಂದಿಗೆ ಯುವ ಕನಸುಗಳು ಚಿಗುರೊಡೆದಿದೆ.

ನಾಲ್ಕಾರು ಯಕ್ಷಗಾನ ಆಸಕ್ತರು, ಅರ್ಥಾತ್ ಯಕ್ಷಗಾನದಲ್ಲಿ ಕ್ಲಿಷ್ಟ, ಹಿರಿಯ ಕಲಾವಿದರಿಗೇ ಬಿಟ್ಟಿದ್ದು ಎನ್ನುವಂತಹ ಅರ್ಥಧಾರಿಕೆಯನ್ನು ಈ ಯುವ ಮನಸುಗಳು ಸಿದ್ಧಿಸಿಕೊಂಡು, ರಾಜಧಾನಿಯಲ್ಲಿ ಕಾರ್ಯಬಾಹುಳ್ಯದ ನಡುವೆಯೂ ಒಂದಿಷ್ಟು ಹೊತ್ತು ಬಿಡುವು ಮಾಡಿಕೊಂಡು ಯಕ್ಷಗಾನ ಸಂಬಂಧಿ ಚಟುವಟಿಕೆಗಳನ್ನು ಆಯೋಜಿಸುತ್ತಾ, ಎಳವೆಯಲ್ಲಿಯೇ ಭರವಸೆಯ ಅರ್ಥಧಾರಿಗಳಾಗಿ ಮೂಡಿಬಂದವರು.

ಈ ತಂಡದ ಕನಸು ತಾಳಮದ್ದಲೆ ಘಟಕದ ಸ್ಥಾಪನೆ. ಈಗ ಬೆಳವಣಿಗೆಯ ಶೈಶವ ಘಟ್ಟ. ಇತ್ತೀಚೆಗೆ ಚಿತ್ತೂರಿನ ಚಿತ್ರಕೂಟದಲ್ಲಿ ಆಯುರ್ವೇದ ವೈದ್ಯರಾದ ಡಾ|ರಾಜೇಶ ಬಾಯರಿ ಅವರು ದೀಪ ಪ್ರಜ್ಞಲನೆಗೊಳಿಸುವ ಮೂಲಕ ಉದ್ಘಾಟಿಸಿದ್ದಾರೆ.

ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಕರು, ಖ್ಯಾತ ವಾಗ್ಮಿಗಳಾದ ದಿವಾಕರ ಹೆಗಡೆ ವೆಬಿನಾರ್ ಮೂಲಕ ಈ ಘಟಕದ ಆಶಯ ವಿವರಿಸಿದ್ದಾರೆ.

ಮೊದಲ ಕಾರ್ಯಕ್ರಮವಾಗಿ ಚಿತ್ರಕೂಟದಲ್ಲಿ ರಾವಣ ವಧೆ ತಾಳಮದ್ದಳೆ ಎನ್ನುವ ತಾಳಮದ್ದಲೆ ನೆರವೇರಿತು. ಕೋವಿಡ್-19 ನಿಂದಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನೇರ ಪ್ರಸಾರ ಮಾಡಲಾಯಿತು. ಇದು ಯಶಸ್ವಿಯೂ ಆಯಿತು. ನಿರೀಕ್ಷೆಗಿಂತಲೂ ಹೆಚ್ಚು ವೀಕ್ಷಕರು ವೀಕ್ಷಿಸಿ ಪ್ರಶಂಸೆ ವ್ಯಕ್ತ ಪಡಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ರಕ್ಷಿತ್ ಶೆಟ್ಟಿ ಮೇಲಾರಿಕಲ್ಲು, ಮದ್ದಳೆ ಸುಬ್ರಹ್ಮಣ್ಯ ಅಡಿಗ ಅಂಪಾರು, ಚಂಡೆಯಲ್ಲಿ ಮಂಜುನಾಥ ಆಚಾರ್ಯ ನಿರ್ವಹಿಸಿದರು.
ಮುಮ್ಮೇಳದಲ್ಲಿ ಸುನಿಲ್ ಕುಮಾರ್ ಹೊಲಾಡು, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಸತೀಶ ಶೆಟ್ಟಿ ಮೂಡುಬಗೆ, ನಾಗರಾಜ್ ನೈಕಂಬ್ಳಿ, ಮಂಜುನಾಥ ಆಚಾರ್ ಕುಂಟನೇರ್ಲು, ಸಚಿನ್ ಶೆಟ್ಟಿ ನೈಕಂಬ್ಳಿ ಭಾಗವಹಿಸಿದರು.

ತಾಳಮದ್ದಳೆ ಕೂಟಗಳನ್ನು ಆಯೋಜಿಸುವುದರ ಜೊತೆಗೆ, ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅತ್ಯಮೂಲ್ಯ ಮಾಹಿತಿ ಕಾರ್ಯಗಾರ , ಸಂವಾದ, ಪುರಾಣ ಅವಲೋಕನ, ಪ್ರಸಂಗ ಪ್ರತಿ ಅವಲೋಕನ, ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದ ಬದಲಾವಣೆಗಳು ಹೀಗೆ ಈ ಎಲ್ಲಾ ವಿಚಾರಗಳ ಕುರಿತಂತೆ ಬೆಳಕು ಚೆಲ್ಲುವ ಆಶಯ ಹೊಂದಿದೆ. ತಾಳಮದ್ದಳೆಯಲ್ಲಿ ಅರ್ಥ ಹೇಳುವ ಎಲ್ಲಾ ಆಸಕ್ತರಿಗೂ ಇದು ಮುಕ್ತ ವೇದಿಕೆ ಆಗಿದ್ದು. ಆಸಕ್ತರು ನಮ್ಮನ್ನು ಸಂಪರ್ಕಿಸಬಹುದು. ಎಲ್ಲರಿಗೂ ಅವಕಾಶ ಕಲ್ಪಿಸುವ ಆಶಯ ಹೊಂದಿದ್ದೇವೆ ಎನ್ನುತ್ತಾರೆ ತಾಳಮದ್ದಲೆ ಕೂಟದ ನಾಗರಾಜ್ ನೈಕಂಬ್ಳಿ ಅವರು.

ಹೊಸ ಹೊಸ ಪ್ರತಿಭೆಗಳ ಪ್ರೋತ್ಸಾಹ, ತೆರೆಮರೆಯ ಸುಪ್ತ ಪ್ರತಿಭೆಗಳಿಗೆ ಅವಕಾಶ ಕೊಡುವುದು ಈ ಘಟಕದ ಆಶಯವಾಗಿದೆ. ಮೊದಲ ಕೂಟದಲ್ಲಿ ಸಚಿನ್ ಮತ್ತು ಮಂಜುನಾಥ ಆಚಾರ್ಯರು ಪ್ರಥಮ ಬಾರಿಗೆ ಅರ್ಥ ಹೇಳಿದ್ದಾರೆ.

ಮನೆಯಲ್ಲಿಯೇ ತಾಳಮದ್ದಳೆ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಆನ್‍ಲೈನ್ ಮೂಲಕ ಸಾವಿರಾರು ಜನರಿಗೆ ಈ ಕಾರ್ಯಕ್ರಮವನ್ನು ಪ್ರಸಾರಿಸಲಾಗುವುದು. ಮಾಹಿತಿಗೆ 8105312519, 974144255, 9611638199 ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!