Wednesday, September 11, 2024

ಚೋರಾಡಿ: ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ಲೋಪ: ಕೃಷಿ ಜಮೀನಿಗೆ ನುಗ್ಗಿದ ಮಣ್ಣು: ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಶಾಸಕ ಕಿರಣ್ ಕೊಡ್ಗಿ

ಜನಪ್ರತಿನಿಧಿ (ಹಾಲಾಡಿ) : ವರಾಹಿ ನದಿ ನೀರನ್ನು ಹಾಲಾಡಿಯ ಭರತ್ ಕಲ್ ಎಂಬಲ್ಲಿಂದ ಚೋರಾಡಿ ಎಂಬಲ್ಲಿಗೆ ಪೈಪ್‌ಗಳ ಮೂಲಕ ಸರಬರಾಜು ಮಾಡಿ ಚೋರಾಡಿಯಲ್ಲಿ ಶುದ್ಧೀಕರಣಗೊಳಿಸಿ ಅಲ್ಲಿಂದ ಉಡುಪಿ ನಗರಕ್ಕೆ ಶುದ್ಧ ಕುಡಿಯುವ ನೀರನ್ನು ನೀಡುವ ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಸ್ಥಳೀಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂಬ ವಿರೋಧಗಳು ಕೇಳಿ ಬರುತ್ತಿದ್ದು ಮಳೆಯಿಂದ ಮತ್ತೆ ಕೃಷಿ ಭೂಮಿಗೆ ಕಾಮಗಾರಿ ಪ್ರದೇಶದ ಮಣ್ಣು, ಮರಳು ಹೋಗಿ ತುಂಬಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸ್ಥಳಕ್ಕೆ ಶಾಸಕ ಕಿರಣ್ ಕೊಡ್ಗಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳ ಪರಿಶೀಲನೆ ನಡೆಸಿದ ಶಾಸಕರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಕಾಮಗಾರಿಯ ನ್ಯೂನತೆಗಳನ್ನು ಗಮನಿಸಿದರು. ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಕಾಮಗಾರಿ ಪ್ರದೇಶದಿಂದ ಮಣ್ಣು, ಇತ್ಯಾದಿ ನಿರುಪಯೂಕ್ತ ವಸ್ತುಗಳು ಸಮೀಪದ ಕೃಷಿ ಗದ್ದೆಗೆ ಹೋಗಿ ತುಂಬಿದೆ. ಕಾಮಗಾರಿ ಪ್ರದೇಶದ ಗಡಿ ಗುರುತು ಇನ್ನೂ ಮಾಡಿಕೊಂಡಿಲ್ಲ, ಆವರಣಗೋಡೆ ನಿರ್ಮಾಣ ಮಾಡಿಲ್ಲ, ಮಣ್ಣು, ಮರಳು, ಮೊಳೆ ಇತ್ಯಾದಿ ಅಪಾಯಕಾರಿ ವಸ್ತುಗಳು ರಸ್ತೆ, ಕೃಷಿಭೂಮಿಯಲ್ಲಿ ಸೇರಿಕೊಂಡಿದೆ. ಅವ್ಯವಸ್ಥಿತವಾಗಿದೆ. ನೀರು ಶುದ್ದೀಕರಣದ ಬಳಿಕ ಉಳಿಯುವ ವೇಸ್ಟ್ ನೀರನ್ನು ಎಲ್ಲಿ ಬಿಡಬೇಕು ಎನ್ನುವ ನಿರ್ದಿಷ್ಟ ಸ್ಥಳದ ಗುರುತು ಇನ್ನೂ ಮಾಡಿಲ್ಲ ಎಂದು ಆರೋಪಿಸಿದ ಸ್ಥಳೀಯರು ಆವರಣೆಗೋಡೆ ನಿರ್ಮಿಸುವ ತನಕ ಕಾಮಗಾರಿ ಸ್ಥಗಿತಗೊಳಿಸಿ ಎಂದು ಒತ್ತಾಯಿಸಿದರು.

ಶುದ್ಧೀಕರಣದ ಬಳಿಕ ಉಳಿಯುವ ಕೊಳಚೆ ನೀರನ್ನು ಎಲ್ಲಿ ವಿಲೇವಾರಿ ಮಾಡುತ್ತಿರಿ? ಎಂದು ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಅಧಿಕಾರಿಗಳು ಆ ಸ್ಥಳವನ್ನು ಇನ್ನೂ ಗುರುತಿಸಿಲ್ಲ, ಕಾಮಗಾರಿಯ ಒಟ್ಟು ಪ್ರದೇಶದ ಗಡಿ ಗುರುತು ಕೂಡಾ ಆಗಬೇಕಾಗಿದೆ ಎಂದು ಉತ್ತರಿಸಿದರು. ಇದರಿಂದ ಕೆರಳಿದ ಶಾಸಕರು ಇನ್ನೂ ಕಾಮಗಾರಿ ಒಟ್ಟು ಪ್ರದೇಶದ ಗಡಿ ಗುರುತು ಮಾಡಿಲ್ಲವೇ? ವೇಸ್ಟ್ ವಾಟರ್ ಹೋಗಲು ಸ್ಥಳ ಗುರುತಿಸಲ್ಲವೇಕೆ? ಎಂದು ತರಾಟೆಗೆ ತಗೆದುಕೊಂಡರು. ಕೂಡಲೇ ಕಾಮಗಾರಿ ಪ್ರದೇಶದ ಸರ್ವೇ ನಡೆಸಿ, ಗಡಿ ಗುರುತು ಮಾಡಿಕೊಳ್ಳಿ, ಈಗಾಗಲೇ ಕೃಷಿಕರ ಗದ್ದೆಗೆ ಹೋಗಿರುವ ಮಣ್ಣನ್ನು ತೆರವು ಮಾಡಿಕೊಡಬೇಕು, ಮತ್ತೆ ಗದ್ದೆ, ಕೃಷಿ ಭೂಮಿಗೆ ಕಾಮಗಾರಿ ಪ್ರದೇಶದ ಮಣ್ಣು, ಇತರ ವಸ್ತುಗಳು ಹೋಗದಂತೆ ಬಂಡನ್ನು ನಿರ್ಮಿಸಿ, ಮತ್ತೆ ಸಾರ್ವಜನಿಕರಿಗೆ ಸಮಸ್ಯೆಯಾಗಿ ದೂರುಗಳು ಬಂದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಬಗ್ಗೆ ಗುತ್ತಿಗೆದಾರರು, ಹಾಗೂ ಇಲಾಖೆ ವತಿಯಿಂದ ಲಿಖಿತ ರೂಪದಲ್ಲಿ ನೀಡಿ ಎಂದರು.
ತಹಶೀಲ್ದಾರ್ ಶೋಭಾಲಕ್ಷ್ಮೀ ಕೂಡಲೇ ಕಾಮಗಾರಿ ಪ್ರದೇಶದ ನಿಖರ ವ್ಯಾಪ್ತಿಯನ್ನು ಸರ್ವೇ ಮೂಲಕ ಗುರುತು ಮಾಡಿಕೊಡಲಾಗುವುದು ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಚೋರಾಡಿ ಮಾತನಾಡಿ, ಈಗಾಗಲೇ ಈ ಕಾಮಗಾರಿಯಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗಿದೆ. ಫಲವತ್ತಾದ ಗದ್ದೆಗಳಿಗೆ ಕಾಮಗಾರಿಯಿಂದ ಮಣ್ಣು ಮರಳು ಹೋಗಿ ತುಂಬಿಕೊಂಡಿದೆ. ಇವರು ಇನ್ನು ವೇಸ್ಟ್ ನೀರು ಬಿಡುವ ಸ್ಥಳ ಗುರುತು ಮಾಡಿಲ್ಲ. ಈಗ ಸುಮ್ಮನಿದ್ದರೆ ಮುಂದೆ ತುರ್ತು ಎಂದು ಸಿಕ್ಕಸಿಕ್ಕಲ್ಲಿ ಕೊಳಚೆ ನೀರು ಬಿಡಬೇಕಾಗಬಹುದು. ಇವರು ಆವರಣಗೋಡೆ ನಿರ್ಮಿಸಲಿ, ಮಳೆಗಾಲ ಮುಗಿಯುವ ತನಕ ಕಾಮಗಾರಿ ನಿಲ್ಲಿಸಲಿ ಎಂದರು.

ಆಗ ಶಾಸಕರು ನೀರು ಶುದ್ಧೀಕರಣದ ಬಳಿಕ ಉಳಿದ ಕಲುಷಿತ ನೀರನ್ನು ಎಲ್ಲಿ ವಿಲೇವಾರಿ ಮಾಡಬೇಕು ಎನ್ನುವುದು ಇನ್ನೂ ಸ್ಪಷ್ಟಪಡಿಸಿಲ್ಲ, ಬೇಗ ಈ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಗ್ರಾಮ ಪಂಚಾಯತ್ ನಿಂದ ನಿರ್ಣಯ ಮಾಡಿ, ನಾನು ಕೂಡಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವೆ ಎಂದರು.

ಯದ್ವಾತದ್ವಾ ಪೈಪ್ ಲೈನ್ ಮಾಡಲಾಗಿದ್ದು ಮಳೆಗೆ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಸಮರ್ಪಕ ರೀತಿಯಲ್ಲಿ ಗುತ್ತಿಗೆ ಸಂಸ್ಥೆ ಕಾಮಾಗಾರಿ ನಡೆಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಕಾಮಗಾರಿಯ ವೈಫಲ್ಯಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!