Saturday, October 12, 2024

ಗುಡ್ಡಟ್ಟು ವಲಯ ಬ್ರಾಹ್ಮಣ ಪರಿಷತ್ ವಾರ್ಷಿಕಾಧಿವೇಶನ 

ಕುಂದಾಪುರ: “ಬ್ರಾಹ್ಮಣ ಸಂಘಟನೆ ಇಂದು ತೀರಾ ಅಗತ್ಯವಾಗಿದೆ. ಮಹಿಳಾ ವೇದಿಕೆಗಳ ಮೂಲಕ ಮಹಿಳೆಯರೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಬ್ರಾಹ್ಮಣ ಸಮುದಾಯ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಇದು ಸಹಕಾರಿಯಾಗುತ್ತದೆ” – ಎಂದು ಬಿದ್ಕಲ್ ಕಟ್ಟೆಯ ಶ್ರೀ ಮಹಾಲಕ್ಷ್ಮೀ ಸಭಾಭವನದ ಮಾಲಕಿ ನಾಗರತ್ನ ಐತಾಳ ಹೇಳಿದರು.
ಭಾನುವಾರ ಸಭಾಭವನದಲ್ಲಿ ನಡೆದ ಗುಡ್ಡಟ್ಟು ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ನ ವಾರ್ಷಿಕ ಅಧಿವೇಶನವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಪಾಕಶಾಸ್ತ್ರಜ್ಞ ಮತ್ಯಾಡಿಯ ಗೋಪಾಲಕೃಷ್ಣ ಅಡಿಗ – ಪಾರ್ವತಿ ದಂಪತಿ ಮತ್ತು ಭಾರತೀಯ ಹವಾಮಾನ ಇಲಾಖೆಯ ನಿವೃತ್ತ ಅಧಿಕಾರಿ ಸದಾನಂದ ಅಡಿಗ ಹೆರ್ಡೆಜಡ್ಡು – ಪ್ರಭಾ ದಂಪತಿಯನ್ನು ವಿಪ್ರಸಮ್ಮಾನ ನೀಡಿ ಗೌರವಿಸಲಾಯಿತು. ಕೃತಜ್ಞತೆ ಸಲ್ಲಿಸಿದ ಸದಾನಂದ ಅಡಿಗ, ಭಾರತೀಯ ಹವಾಮಾನ ಇಲಾಖೆಯಲ್ಲಿ ತಾನು ಸೇವೆಯಲ್ಲಿದ್ದಾಗ ದೇಶದಾದ್ಯಂತ ವಿಪ್ರ ಸಮುದಾಯದವರ ಭೇಟಿಯಾಗುತ್ತಿತ್ತು. ಎಲ್ಲೆಡೆ ವಿಪ್ರ ಬಂಧುಗಳ ಸಮಸ್ಯೆ ಒಂದೇ ತೆರನಾಗಿದೆ. ವಿಪ್ರ ದೂಷಣೆ ಇಂದು ಹೆಚ್ಚುತ್ತಿದೆ. ನಮ್ಮ ಸಂಘಟನೆ ಮತ್ತು ಸಾಧನೆಗಳಿಂದ ಅಂತಹವುಗಳಿಗೆ ಉತ್ತರಿಸಬೇಕು. ಆದ್ದರಿಂದ ದೇಶದಾದ್ಯಂತ ವಿಪ್ರ ಸಂಘಟನೆಗೆ ಸಮುದಾಯದವರು ಮಹತ್ವ ನೀಡಬೇಕು ಎಂದು ಕರೆ ನೀಡಿದರು. ಮಹಾಲಕ್ಷ್ಮೀ ಐತಾಳ ಮತ್ತು ಸುಶೀಲಾ ಉಪಾಧ್ಯಾಯ ಸನ್ಮಾನ ಪತ್ರಗಳನ್ನು ಓದಿದರು. 2024 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಲಯ ವ್ಯಾಪ್ತಿಯ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್ ಮಾತನಾಡಿ, ಪರಿಷತ್ತಿನ ರಚನಾತ್ಮಕ ಚಟುವಟಿಕೆಗಳಲ್ಲಿ ಗುಡ್ಡಟ್ಟು ವಲಯ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ವಲಯ ಮಟ್ಟದಲ್ಲಿ ಇನ್ನೂ ಹೆಚ್ಚು ಸಮಾಜಮುಖಿಯಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ತಾಲೂಕು ಪರಿಷತ್ತು ಸದಾ ಬೆಂಬಲ ನೀಡುವುದು ಎಂದರು.
ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ ಮಾತನಾಡಿ, ಮುಂಬರುವ ಸೆ. 1 ರಂದು ಪರಿಷತ್ತಿನ ಮಹಿಳಾ ಸಮಾವೇಶವು ನೀಲಾವರದಲ್ಲಿ ನಡೆಯಲಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಪರಿಷತ್ ಕಾರ್ಯದರ್ಶಿ ರತ್ನಾಕರ ಉಡುಪ, ಗುಡ್ಡಟ್ಟು ವಲಯ ಯುವ ವಿಪ್ರವೇದಿಕೆ ಅಧ್ಯಕ್ಷ ವಿಷ್ಣುಮೂರ್ತಿ ಭಟ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಇಂದಿರಾ ಉಡುಪ ಶುಭ ಹಾರೈಸಿದರು.
ಕಾರ್ಯದರ್ಶಿ ಶ್ರೀಧರ ಉಡುಪ ವಾರ್ಷಿಕ ವರದಿ ಓದಿದರೆ, ಖಜಾಂಚಿ ಕಲಾಧರ ಐತಾಳ ಆಯ – ವ್ಯಯ ವರದಿ ಒಪ್ಪಿಸಿದರು. ವಲಯ ಸದಸ್ಯರಿಗೆ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮೇಘಾ ಭಟ್ ಪಟ್ಟಿ ವಾಚಿಸಿದರು.
ಗುಡ್ಡಟ್ಟು ವಲಯಾಧ್ಯಕ್ಷ ಸುಬ್ರಹ್ಮಣ್ಯ ಉಡುಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವಿವಿಧ ಪ್ರಾಯೋಜಕತ್ವ ವಹಿಸಿದ ಸುಬ್ರಹ್ಮಣ್ಯ ಉಡುಪ ಮೊಳಹಳ್ಳಿ, ವಿಷ್ಣುಮೂರ್ತಿ ಭಟ್, ಹೊಂಬಾಡಿ, ನಾಗರತ್ನ ಐತಾಳ , ಬಿದ್ಕಲ್ ಕಟ್ಟೆ, ಗೋಪಾಲ ಅಡಿಗ, ಅನ್ಮಕ್ಕಿ, ರಾಘವೇಂದ್ರ ಅಡಿಗ, ರಾಜೇಂದ್ರ ಅಡಿಗ ಕಲ್ಕಟ್ಟೆ, ನಾಗರಾಜ ಮಂಜ ಕೈಲ್ಕೆರೆ, ಕಲಾಧರ ಐತಾಳ ಸೌಡ, ಶ್ರೀಧರ ಉಡುಪ ಮೊಳಹಳ್ಳಿ, ಸತೀಶ್ ಅಡಿಗ ಮತ್ಯಾಡಿ, ಕಾಂಚನಾ ಅಡಿಗ, ಸತೀಶ್ ಕೊಡ್ಲಾಯ ಇವರುಗಳನ್ನು ಗೌರವಿಸಲಾಯಿತು. ಪರಿಷತ್ ಖಜಾಂಚಿ ರಘುರಾಮ ರಾವ್, ಜಿಲ್ಲಾ ಮಹಿಳಾ ವೇದಿಕೆಯ ಅಧ್ಯಕ್ಷೆ ಪವಿತ್ರಾ ಅಡಿಗ, ವಿವಿಧ ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೇದಮೂರ್ತಿಗಳಾದ ಮಾಧವ ಬಾಯಿರಿ ಮತ್ತು ರಾಜೇಂದ್ರ ಅಡಿಗ ವೇದ ಘೋಷ ಮಾಡಿದರೆ, ಅರ್ಚನಾ ಬಾಯಿರಿ ಮತ್ತು ಪರ್ವ ಬಾಯಿರಿ ಪ್ರಾರ್ಥಿಸಿದರು. ಮಹಿಳಾ ಘಟಕಾಧ್ಯಕ್ಷೆ ಶೈಲಜಾ ಹೆಬ್ಬಾರ್ ಸ್ವಾಗತಿಸಿದರು. ಸತೀಶ್ ಅಡಿಗ ಮತ್ಯಾಡಿ ಕಾರ್ಯಕ್ರಮ ನಿರೂಪಿಸಿ, ಕೃಷ್ಣ ಕೆದ್ಲಾಯ ವಂದಿಸಿದರು.
ನಂತರ ಬಾಲ ಕಲಾವಿದರಿಂದೊಡ ಗೂಡಿದ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರಸಂಗ ‘ಕುಶಲವ’ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!