Sunday, September 8, 2024

ಯಾವ ಪುರುಷಾರ್ಥಕ್ಕೆ ಬಿಜೆಪಿ ಪಾದಯಾತ್ರೆ ಮಾಡುತ್ತದೆ ? : ಬಿಜೆಪಿ ವಿರುದ್ಧ ಕಾಂಗ್ರೆಸ್‌ ಶಾಸಕರ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಳು ಮಾಡಲು, ನಾಡಿನ ಜನರ ದಿಕ್ಕು ತಪ್ಪಿಸಲು ಬಿಜೆಪಿಯವರು ಹೊರಟ್ಟಿದ್ದಾರೆ’ ಎಂದು ಕಾಂಗ್ರೆಸ್ ಶಾಸಕರು ಗಂಭೀರ ಆರೋಪಿಸಿದರು.

ಇಂದು(ಗುರುವಾರ) ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರಾದ ಎಸ್‌.ಎನ್. ನಾರಾಯಣಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಪಿ.ಎಂ. ನರೇಂದ್ರಸ್ವಾಮಿ, ‘ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುತ್ತೇವೆ ಎಂದು ಹೊರಟರೆ ಸಾಧ್ಯಕ್ಕೆ ದೂರವಾದ ಮಾತು. ಬಿಜೆಪಿಯವರ ಪ್ರತಿಭಟನೆ ನಾಟಕ ಅಷ್ಟೆ. ಎಷ್ಟು ದಿನ ಈ ನಾಟಕ ನಡೆಯುತ್ತದೆ ಎಂದು ನೋಡೋಣ’ ಎಂದು ಅವರು ತಾಕೀತು ಹಾಕಿದರು.

ಮುಂದಿನ ದಿನಗಳಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಕುತಂತ್ರಗಳನ್ನು ರಾಜ್ಯದ ಜನರ ಮುಂದೆ ನಾವು ಬಿಚ್ಚಿಡುತ್ತೇವೆ ಎಂದೂ ಇದೇ ಸಂದರ್ಭದಲ್ಲಿ ಹೇಳಿದರು.

ನಾರಾಯಣಸ್ವಾಮಿ ಮಾತನಾಡಿ, ‘ಮುಡಾ ನಿವೇಶನ ಹಂಚಿಕೆಯ ಹಳೆಯ ಹಗರಣವನ್ನು ಉದ್ದೇಶಪೂರ್ವಕವಾಗಿ ಬಿಜೆಪಿ ಅವರು ಎತ್ತಿದ್ದಾರೆ. ಚರ್ಚೆಗೆ ಅವಕಾಶ ಕೇಳಿ ಧರಣಿ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದ ಪ್ರತಿಭಟನೆ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ವಾಗ್ದಾಳಿ ಮಾಡಿದರು.

‘ಈ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿ ಆಗಿಲ್ಲ. ಹಂಚಿಕೆ ಮಾಡಿದರಲ್ಲಿ ಮುಖ್ಯಮಂತ್ರಿ ಸಹಿ ಇಲ್ಲ. ಬಿಜೆಪಿ ಅವಧಿಯಲ್ಲಿ ಈ ಹಗರಣ ನಡೆದಿದೆ. ಬಿಜೆಪಿಯವರದ್ದು ರಾಜಕೀಯ ಉದ್ದೇಶದ ಧರಣಿ. ಬಿಜೆಪಿಯವರು ಯಾವ ಉದ್ದೇಶದಿಂದ ಮೈಸೂರು ಪಾದಯಾತ್ರೆ ಮಾಡಲು ಹೊರಟಿದ್ದಾರೆ? ಈಗಾಗಲೇ ಈ ಹಗರಣದ ತನಿಖೆ ನಡೆಯುತ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಪಾದಯಾತ್ರೆ ಮಾಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮೈಸೂರಿನಲ್ಲಿ ವಾಸವಿದ್ದೇನೆ. ನನಗೆ ನಿವೇಶನ ಕೊಡಿ ಎಂದು ಕುಮಾರಣ್ಣ (ಎಚ್.ಡಿ. ಕುಮಾರಸ್ವಾಮಿ) ಪತ್ರ ಬರೆದಿದ್ದಾರೆ. ಕುಮಾರಣ್ಣ ಏನಾದರೂ ಉದ್ಯಮ ಮಾಡಿದ್ದಾರಾ? ಕುಮಾರಣ್ಣನವರೇ ಯಾವ ಇಂಡಸ್ಟ್ರಿ ಮಾಡಿ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ? ಎಚ್.ಡಿ. ಬಾಲಕೃಷ್ಣ ಕೂಡ ನಿವೇಶನ ಪಡೆದಿದ್ದಾರೆ. ಅವರ ಅತ್ತೆ, ಪತ್ನಿ ಕೂಡ ನಿವೇಶನ ಪಡೆದುಕೊಂಡಿದ್ದಾರೆ. ಅದೂ ಅಕ್ರಮ ಅಲ್ಲವೇ ಕುಮಾರಣ್ಣ? ಇದರ ಬಗ್ಗೆ ಯಾಕೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಸಿದ್ರಾಮಣ್ಣ ಅವರನ್ನು ಕಟ್ಟಿಹಾಕಲು ಬಿಜೆಪಿಯವರು ಈ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದೂ ನಾರಾಯಣಸ್ವಾಮಿ ಗಂಭೀರವಾಗಿ ಆರೋಪಿಸಿದರು.

ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ‘ಕಪ್ಪು ಚುಕ್ಕೆಯಿಲ್ಲದ ರಾಜಕಾರಣಿ ಅಂದ್ರೆ ಸಿದ್ರಾಮಣ್ಣ (ಸಿಎಂ ಸಿದ್ದರಾಮಯ್ಯ). ಇಡೀ ದೇಶದಲ್ಲೇ ಅಂತಹ ರಾಜಕಾರಣಿ ಇಲ್ಲ. ಅವರಿಗೆ ಕಪ್ಪು ಚುಕ್ಕೆ ತರಲು ಬಿಜೆಪಿಯವರು ಹೊರಟಿದ್ದಾರೆ. ನಾಟಕ ಮಾಡುತ್ತಿರುವ ಬಿಜೆಪಿ, ಜೆಡಿಎಸ್‌ನವರಿಗೆ ಜನ ಬುದ್ಧಿ ಕಲಿಸಬೇಕು’ ಎಂದು ಹೇಳಿದರು.

ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ‘ದಲಿತರ ಭೂಮಿ ಪಡೆದಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ, ಅದು ಕ್ರಯಕ್ಕೆ ಪಡೆದ ಭೂಮಿ’ ಎಂದರು.

ಕುಮಾರಣ್ಣ ಅರ್ಜಿ ಹಾಕಿ ಮುಡಾದಿಂದ 21 ಸಾವಿರ ಚದರಡಿ ವಿಸ್ತೀರ್ಣದ ನಿವೇಶನ ಪಡೆದಿದ್ದಾರೆ. ಅವರಿಗೆ ಹೇಗೆ ನಿವೇಶನ ಕೊಟ್ಟರು? ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ ಅವರು ಕೂಡ ನಿವೇಶನ ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ? ಸಿದ್ದರಾಮಯ್ಯ ಪಡೆದರೆ ಮಾತ್ರ ಅಕ್ರಮವೇ’ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಕೊಟ್ಟಿದ್ದು ಯಾವ ಸರ್ಕಾರ? ಅಂದಿನ ಅಧ್ಯಕ್ಷ ರಾಜೀವ ಯಾವ ಪಕ್ಷದಲ್ಲಿದ್ದ? ಆಗ ನಗರಾಭಿವೃದ್ಧಿ ಸಚಿವ ಯಾರಿದ್ದರು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನು ಮಾಡುತ್ತಿದ್ದರು? ಈಗ ಧರಣಿ ಮಾಡುತ್ತಿರುವ ಬಿಜೆಪಿ ನಾಯಕರು, ತಮ್ಮವರೂ ತಪ್ಪು ಮಾಡಿದ್ದಾರೆಂದು ಹೇಳುತ್ತಿದ್ದಾರಾ’ ಎಂದೂ ಪ್ರಶ್ನಿಸಿದರು.

ನರೇಂದ್ರಸ್ವಾಮಿ ಮಾತನಾಡಿ, ‘ಈ ಪ್ರಕರಣದ ಹಿನ್ನೆಲೆ ಗಾಯಕ ಎಚ್.ಡಿ. ಕುಮಾರಸ್ವಾಮಿ. ಧರಣಿ ಮಾಡುವಂತೆ ಸೂಚನೆ ಕೊಟ್ಟಿರುವುದೂ ಅವರೇ’ ಎಂದು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ : ಜಂಟಿ ಮಾಧ್ಯಮಗೋಷ್ಠಿ, ವಿಧಾನಸೌಧ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!