Sunday, September 8, 2024

ನಕಲಿ ಪರಶುರಾಮ : ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್‌ ಕುಮಾರ್‌ ಅಮಾನತು !

ಜನಪ್ರತಿನಿಧಿ (ಉಡುಪಿ) : ಕಾರ್ಕಳದ ವಿವಾದಿತ ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್‌ ಕುಮಾರ್‌ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ಮೂಲಕ ಪ್ರಕರಣದ ವಿರುದ್ಧ ಹೋರಾಟ ಮಾಡಿದ ಕಾರ್ಕಳದ ದಿವ್ಯ ನಾಯಕ್‌ ನೇತೃತ್ವದ ಸಮಾನ ಮನಸ್ಕರ ತಂಡಕ್ಕೆ ಪ್ರಾಥಮಿಕ ಗೆಲುವು ಸಿಕ್ಕಂತಾಗಿದೆ.

ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಕುಂಜದಲ್ಲಿ ನಿರ್ಮಿಸಿರುವ ಪರಶುರಾಮ ಥೀಂ ಪಾರ್ಕ್‌ನ ಕಾಮಗಾರಿಯನ್ನು ಅನುಷ್ಠಾನ ಅಧಿಕಾರಿಯಾಗಿ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಜಿಲ್ಲೆ ಇವರು ನಿರ್ಮಿಸಿದ್ದು ಸದ್ರಿ ಕಾಮಗಾರಿಗೆ ಅಂದಾಜು ಮೊತ್ತ ರೂ. 1105.00 ಲಕ್ಷಕ್ಕೆ ಆಡಳಿತ್ಮಾತಕ ಮಂಜೂರಾತಿಗೊಂಡಿದ್ದು, ಈ ಪೈಕಿ ರೂ.672.00ಲಕ್ಷ ಅನುದಾನ ಈಗಾಗಲೇ ಬಿಡುಗಡೆಯಾಗಿ, ಸದ್ರಿ ಕಾಮಗಾರಿ ಪೂರ್ಣಗೊಳಿಸದೇ, ಸಂಬಂದಪಟ್ಟ ಇಲಾಖೆಗೆ ಹಸ್ತಾಂತರ ಮಾಡದೇ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿರುವುದು ಹಾಗೂ ಫೈಬರ್‌ ಪರಶುರಾಮನ ಪ್ರತಿಮೆಯನ್ನು ಸ್ಥಾಪಿಸಿ ಕಂಚಿನ ಪ್ರತಿಮೆಯೆಂದು ವಂಚಿಸಿದ್ದಲ್ಲದೇ ಕಳಪೆ ಕಾಮಗಾರಿ ಮತ್ತು ಧಾರ್ಮಿಕ ಭಾವನೆಗಳಿಗೆ ಅಪಚಾರ, ಕರ್ತವ್ಯ ಲೋಪವೆಸಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶವನ್ನು ಹೊರಡಿಸಲಾಗಿದೆ.

ಪೊಲೀಸ್ ಇಲಾಖೆ ಮತ್ತು ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣಾ ಆಯೋಗದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ನಡೆಯುತ್ತಿದ್ದು ಹಾಗೂ ಉಚ್ಚನ್ಯಾಯಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿರುವುದರಿಂದ ಅರುಣ್ ಕುಮಾರ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಜಿಲ್ಲೆ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸದ್ಯ ಈ ಪ್ರಕರಣದ ಬಗ್ಗೆ, ಸಿ.ಒ.ಡಿ ತನಿಖೆ ಹಾಗೂ ಗೌರವಾನ್ವಿತ ನಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣಾ ಆಯೋಗದಲ್ಲಿ ತನಿಖಾ ಹಂತದಲಲ್ಲಿದೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು ಆದೇಶಿಸಸಲಾಗಿದೆ.

ಸದ್ಯಕ್ಕೆ ಇವರ ಸ್ಥಾನಕ್ಕೆ, ದಿವಾಕರ ಪಿ. ಸಹಾಯಕ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಇವರನ್ನು ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಹುದ್ದೆಗೆ ಹೆಚ್ಚುವರಿ ಪ್ರಭಾರ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾನ ಮನಸ್ಕರ ತಂಡ ಹೋರಾಟ ಮಾಡಿಕೊಂಡು ಬಂದಿದ್ದು, ಪ್ರಕರಣಕ್ಕೆ ಸಂಬಂದಿಸಿದಂತೆ ಶಾಸಕ ಸುನೀಲ್‌ ಕುಮಾರ್‌, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್‌ ಕುಮಾರ್‌, ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ ಹಾಗೂ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ವಿರುದ್ಧ ಲೋಕಾಯುಕ್ತದಲ್ಲಿ ಕರ್ತವ್ಯಲೋಪದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೋರಾಟಗಾರರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಪ್ರಕರಣವನ್ನು ಇತ್ತೀಚೆಗಷ್ಟೇ ಸಿಒಡಿ ತನಿಖೆಗೆ ಒಪ್ಪಿಸಿತ್ತು.

ಸದ್ಯ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್‌ ಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ.

ನಮ್ಮ ಹೋರಾಟ ಮುಂದುವರಿಯುತ್ತದೆ
ಇದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಜಯ. ಇಲ್ಲಿಗೆ ನಾವು ಸುಮ್ಮನಾಗುವ ಸಂಗತಿಯೇ ಎದುರಾಗುವುದಿಲ್ಲ. ಪರಶುರಾಮ ಥೀಂ ಪಾರ್ಕ್‌ನ ಅವ್ಯವಹಾರದಲ್ಲಿ ಭಾಗಿಯಾಗಿರುವ ಕಾರ್ಕಳದ ಶಾಸಕ ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿಗಳನ್ನು ಒಳಗೊಂಡು ಎಲ್ಲಾ ಅಧಿಕಾರಿಗಳಿಗೆ ಶಿಕ್ಷೆಯಾಗುವವರೆಗೆ ಸಮಾನ ಮನಸ್ಕರ ತಂಡ ಹೋರಾಟ ಮಾಡುತ್ತದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂಬ ವಿಶ್ವಾಸವಿದೆ. ರಾಜ್ಯ ಸರ್ಕಾರದ ಮೇಲೆ ಭರವಸೆ ಇದೆ. ಭರವಸೆಯನ್ನು ರಾಜ್ಯ ಸರ್ಕಾರ ಉಳಿಸಿಕೊಳ್ಳುತ್ತದೆ ಎಂಬ ನಂಬಿಕೆಯೂ ಇದೆ. ನಮ್ಮ ಕಾನೂನಾತ್ಮಕ ಹೋರಾಟ ಮುಂದುವರಿಯುತ್ತದೆ.

-ದಿವ್ಯ ನಾಯಕ್‌
ಹೋರಾಟಗಾರರು.

ಪರಶುರಾಮ ಥೀಂ ಪಾರ್ಕ್‌ ನಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಜನಪ್ರತಿನಿಧಿ ವರದಿಗಳು :

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!